ಬೆಳ್ತಂಗಡಿ: ಧರ್ಮಸ್ಥಳ ಅರಣ್ಯದಲ್ಲಿ ಹಲವಾರು ಮೃತದೇಹ ಹೂತು ಹಾಕಿದ ಪ್ರಕರಣ ಸಂಬಂಧ ಜುಲೈ 29 ರಂದು ದೂರುದಾರನ ಸಮ್ಮುಖದಲ್ಲಿ ಎಸ್.ಐ.ಟಿ ಅಧಿಕಾರಿಗಳು ಮೊದಲ ಸ್ಥಳ ಅಗೆದಲ್ಲಿ ಯಾವುದೇ ಕಳೇಬರಹ ದೊರೆತಿಲ್ಲ ಎಂದು ತನಿಖಾಧಿಕಾರಿ ಅನುಚೇತ್ ಸ್ಪಷ್ಟಪಡಿಸಿದ್ದಾರೆ.
ಸಾಕ್ಷಿದಾರ ಗುರುತಿಸಿರುವ ಸ್ಥಳವನ್ನು ಕಾರ್ಮಿಕರ ಸಹಾಯದಿಂದ ತೆರವು ಕಾರ್ಯ ಮುಂಜಾನೆಯಿಂದ ಆರಂಭಗೊಂಡಿದ್ದು ಸತತ 3 ತಾಸು ಅಗೆಯುವ ಕೆಲಸ ನಡೆದಿದೆ. ಸ್ಥಳದಲ್ಲಿ ಯಾವುದೇ ಕುರುಹು ದೊರೆತಿಲ್ಲ.
ಸುಮಾರು ನಾಲ್ಕು ಅಡಿ ಆಳ, 6 ಅಡಿ ಉದ್ದ ಆಳ ಕೊರೆದಿದ್ದು, ಆದರೆ ಕಳೇಬರ ಸಿಗದೇ ಇರುವ ಕಾರಣ ಮತ್ತಷ್ಟು ಅಗೆಯುವ ಕಾರ್ಯ ನಡೆಯಿತು. ಆದರೆ ಕೆಳಭಾಗದಿಂದ ಒರತೆ ನೀರು ಹೆಚ್ಚುತ್ತಿರುವುದರಿಂದ ಜೆಸಿಬಿ ಮೂಲಕ ತೆರವಿಗೆ ತೀರ್ಮಾನಿಸಲಾಗಿದೆ.
ಮಂಗಳೂರು ಕೆಎಂಸಿ ಆಸ್ಪತ್ರೆಯ ಇಬ್ಬರು ನುರಿತ ವೈದ್ಯರಾದ ಡಾ.ಜಗದೀಶ್ ರಾವ್ ಮತ್ತು ಡಾ.ರಶ್ಮಿ ತಂಡ,
ಡಿಐಜಿ ಅನುಚೇತ್, ಎಸ್.ಐ.ಟಿ. ತನಿಖಾಧಿಕಾರಿ ಜಿತೇಂದ್ರ ದಯಾಮ, ಪುತ್ತೂರು ವಿಭಾಗ ಸಹಾಯಕ ಆಯುಕ್ತ ಸ್ಟೆಲ್ಲಾ ವರ್ಗೀಸ್, ಬೆಳ್ತಂಗಡಿ ತಹಶೀಲ್ದಾರ್ ಪೃಥ್ವಿ ಸಾನಿಕಮ್ ಸಹಿತ ಕಂದಾಯ, ಅರಣ್ಯ, ಎಫ್.ಎಸ್.ಎಲ್.ನ ಸೋಕೋ ವಿಭಾಗ, ಎ.ಎನ್.ಎಫ್., ಆಂತರಿಕ ಭದ್ರತಾ ದಳ, ಪೊಲೀಸ್ ತಂಡದ ನೇತೃತ್ವದಲ್ಲಿ ಕಾರ್ಯಾಚರಣೆ ಸಾಗಿದೆ.
ಸಧ್ಯ ಕಾರ್ಯಾಚರಣೆ ಸ್ಥಗಿತಗೊಂಡಿದ್ದು, ಮುಂದೆ ಅರಣ್ಯ ಇಲಾಖೆ ಅನುಮತಿಯೊಂದಿಗೆ ಜೆಸಿಬಿ ಮೂಲಕ ಸ್ಥಳ ಅಗೆಯುವ ಕಾರ್ಯ ನಡೆಯಲಿದೆ.