ಪುತ್ತೂರಿನ ನಡೆದಿದ್ದ ಲವ್ – ಸೆಕ್ಸ್ – ದೋಖಾ ಪ್ರಕರಣ ರಾಜ್ಯದಲ್ಲೇ ಸಂಚಲನ ಮೂಡಿಸಿದ್ದು, ಇದೀಗ ಅದೇ ರೀತಿಯ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ಅದು ಕೂಡ ಬಿಜೆಪಿ ಮುಖಂಡನ ಪುತ್ರ ಎನ್ನುವುದು ವಿಶೇಷ.
ಬಿಜೆಪಿ ಮುಖಂಡ, ಮಾಜಿ ಸಚಿವ ಪ್ರಭು ಚೌಹಾಣ್ ಅವರ ಪುತ್ರನ ವಿರುದ್ಧ ಯುವತಿ ದೂರು ನೀಡಿದ್ದು, ಮದುವೆ ಆಗುವುದಾಗಿ ನಂಬಿಸಿ ದೈಹಿಕವಾಗಿ ಬಳಸಿ ವಂಚನೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.
ಇತ್ತೀಚೆಗಷ್ಟೇ ಪುತ್ತೂರು ಬಿಜೆಪಿ ಮುಖಂಡ, ನಗರಸಭೆ ಸದಸ್ಯರ ಪುತ್ರ ಕೃಷ್ಣ ಜೆ. ರಾವ್ ವಿರುದ್ಧ ದೂರು ದಾಖಲಾಗಿತ್ತು. ಯುವತಿ ಗರ್ಭವತಿ ಎಂದು ತಿಳಿದ ಬಳಿಕ ಮದುವೆ ಮಾತುಕತೆ ನಡೆದಿದ್ದು, ಮದುವೆಗೆ ಒಪ್ಪಿಕೊಂಡಿದ್ದರೂ ಕೂಡ. ಆದರೆ ನಂತರದ ಬೆಳವಣಿಗೆಯಲ್ಲಿ ಆರೋಪಿ ಮದುವೆಗೆ ನಿರಾಕರಿಸಿದ್ದ. ಇದೀಗ ಆರೋಪಿ ನ್ಯಾಯಾಂಗ ಬಂಧನದಲ್ಲಿದ್ದು, ವಿಚಾರಣೆ ನಡೆಯುತ್ತಿದೆ. ಇಂತಹದ್ದೇ ಪ್ರಕರಣ ಬೀದರ್ ನಲ್ಲಿಯೂ ನಡೆದಿದೆ.
ಪ್ರತೀಕ್ ಚೌಹಾಣ್ ವಿರುದ್ಧ ಮಹಿಳಾ ಆಯೋಗಕ್ಕೆ ದೂರು ನೀಡಿರುವ ಯುವತಿ, ಮದುವೆಯಾಗೋದಾಗಿ ನಂಬಿಸಿ ತನ್ನನ್ನು ದೈಹಿಕವಾಗಿ ಬಳಸಿ ಆ ನಂತರ ಮದುವೆಯಾಗದೆ ಮೋಸ ಮಾಡಿದ್ದಾನೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಪ್ರತೀಕ್ ಚೌಹಾಣ್ ಹಾಗೂ ಯುವತಿ ಹೋಟೆಲ್ ನಲ್ಲಿ ತಂಗಿದ್ದ ದಿನಾಂಕವನ್ನು ದೂರಿನಲ್ಲಿ ನಮೂದಿಸಿದ್ದಾರೆ. ಪ್ರತೀಕ್ ಚೌಹಾಣ್ ಹಲವಾರು ಬಾರಿ ತನ್ನ ಜೊತೆ ದೈಹಿಕ ಸಂಪರ್ಕ ಬೆಳೆಸಿದ್ದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಈ ಸಂಬಂಧ ಬೀದರ್ ಎಸ್‌ಪಿ ಪ್ರದೀಪ್ ಗುಂಟಿ ಅವರಿಗೆ ಮಹಿಳಾ ಆಯೋಗ ಪತ್ರ ಬರೆದಿದ್ದು, ಅರ್ಜಿ ಪರಿಶೀಲಿಸಿ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ನಿರ್ದೇಶನ ನೀಡಿದೆ. ಜೊತೆಗೆ 15 ದಿನಗಳ ಒಳಗಾಗಿ ಆಯೋಗಕ್ಕೆ ವರದಿ ಸಲ್ಲಿಸುವಂತೆ ತಿಳಿಸಲಾಗಿದೆ.