ಕಲ್ಲೇಗ ಟೈಗರ್ಸ್ ತಂಡದ ನಾಯಕ ಅಕ್ಷಯ್ ಕಲ್ಲೇಗ ಅವರ ಕೊಲೆ ಪ್ರಕರಣದ ನಾಲ್ವರು ಆರೋಪಿಗಳಿಗೆ ಹೈಕೋರ್ಟ್ ಮತ್ತೆ ಜಾಮೀನು ನಿರಾಕರಿಸಿದೆ.
ಆರೋಪಿಗಳು ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಎರಡನೇ ಬಾರಿಯೂ ವಜಾಗೊಳಿಸಿರುವ ನ್ಯಾಯಾಲಯ, ವಿಚಾರಣೆಯನ್ನು ನಾಲ್ಕು ತಿಂಗಳೊಳಗೆ ಪೂರ್ಣಗೊಳಿಸುವಂತೆ ವಿಚಾರಣಾ ನ್ಯಾಯಾಲಯಕ್ಕೆ ಕಟ್ಟುನಿಟ್ಟಿನ ಗಡುವು ವಿಧಿಸಿ ಮಹತ್ವದ ಆದೇಶ ನೀಡಿದೆ
ಪ್ರಕರಣದ ಆರೋಪಿಗಳಾದ ಚೇತನ್, ಮನಿಷ್, ಕೇಶವ ಮತ್ತು ಮಂಜುನಾಥ್ ಅವರು ಸಲ್ಲಿಸಿದ್ದ ಎರಡನೇ ಜಾಮೀನು ಅರ್ಜಿಯ ವಿಚಾರಣೆಯನ್ನು ನಡೆಸಿದ ನ್ಯಾಯಮೂರ್ತಿ ವಿಶ್ವಜಿತ್ ಶೆಟ್ಟಿ ಅವರ ಏಕಸದಸ್ಯ ಪೀಠ, ಈ ಆದೇಶವನ್ನು ಹೊರಡಿಸಿದೆ
ಹೈಕೋರ್ಟ್ ಆದೇಶದಲ್ಲಿ ಏನಿದೆ?
ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ, ನಾಲ್ವರು ಆರೋಪಿಗಳ ಜಾಮೀನು ಅರ್ಜಿಯನ್ನು ಸಂಪೂರ್ಣವಾಗಿ ವಜಾಗೊಳಿಸಲಾಗಿದೆ.
ಮುಂದಿನ ನಾಲ್ಕು ತಿಂಗಳೊಳಗೆ ವಿಚಾರಣಾ ನ್ಯಾಯಾಲಯವು (ಟ್ರಯಲ್ ಕೋರ್ಟ್) ಪ್ರಕರಣದ ಪ್ರಮುಖ ಸಾಕ್ಷಿಗಳ ವಿಚಾರಣೆಯನ್ನು ಪೂರ್ಣಗೊಳಿಸಬೇಕು.
ಆ ಅಲ್ಲಿಯವರೆಗೆ ಆರೋಪಿಗಳು ಯಾವುದೇ ನ್ಯಾಯಾಲಯದಲ್ಲಿ ಹೊಸದಾಗಿ ಜಾಮೀನು ಕೋರಿ ಅರ್ಜಿ ಸಲ್ಲಿಸುವಂತಿಲ್ಲ.
ಸಮರ್ಥ ಸರ್ಕಾರಿ ವಾದ:
ಮೃತನ ಕುಟುಂಬದ ಪರವಾಗಿ ನೇಮಕಗೊಂಡಿದ್ದ ವಿಶೇಷ ಸರ್ಕಾರಿ ಅಭಿಯೋಜಕ (SPP) ಹಾಗೂ ಖ್ಯಾತ ನ್ಯಾಯವಾದಿ ರಾಜಶೇಖರ್ ಹಿಲ್ಯಾರ್ ಅವರು, “ಆರೋಪಿಗಳು ಪ್ರಭಾವಿಗಳಾಗಿದ್ದು, ಅವರಿಗೆ ಜಾಮೀನು ನೀಡಿದರೆ ಸಾಕ್ಷ್ಯ ನಾಶಪಡಿಸುವ ಹಾಗೂ ಸಾಕ್ಷಿಗಳ ಮೇಲೆ ಒತ್ತಡ ಹೇರುವ ಎಲ್ಲ ಸಾಧ್ಯತೆಗಳಿವೆ” ಎಂದು ನ್ಯಾಯಪೀಠಕ್ಕೆ ಮನವರಿಕೆ ಮಾಡಿಕೊಟ್ಟು, ಸಮರ್ಥವಾಗಿ ವಾದ ಮಂಡಿಸಿದ್ದರು. ಈ ವಾದವನ್ನು ನ್ಯಾಯಾಲಯ ಪುರಸ್ಕರಿಸಿದೆ.
ಏನಿದು ಪ್ರಕರಣ
2023ರ ನ 7 ರಂದು ರಾತ್ರಿ ಪುತ್ತೂರಿನ ಹೊರ ವಲಯ ನೆಹರೂ ನಗರದಲ್ಲಿ ನಾಲ್ವರು ಹಂತಕರು ಅಕ್ಷಯ್ ಕಲ್ಲೇಗರವರನ್ನು ಅಟ್ಟಾಡಿಸಿ ಮಾರಾಕಾಸ್ತ್ರಗಳಿಂದ ಕಡಿದು ಕೊಲೆ ಮಾಡಿದ್ದರು. ಅಕ್ಷಯ ಕಲ್ಲೇಗರವರು ಕಲ್ಲೇಗ ಟೈಗರ್ಸ್ ಎಂಬ ಹುಲಿ ಕುಣಿತದ ತಂಡದ ಸಾರಥ್ಯ ವಹಿಸಿದ್ದು, ಈ ಹುಲಿ ಕುಣಿತ ತಂಡ ಜಿಲ್ಲೆಯ ಪ್ರಸಿದ್ದ ತಂಡಗಳಲ್ಲಿ ಒಂದಾಗಿತ್ತು. ಕ್ಷುಲ್ಲಕ ಕಾರಣವೊಂದಕ್ಕೇ ಅಕ್ಷಯನ ಸ್ನೇಹೀತರೇ ಈ ಕೊಲೆ ಮಾಡಿದ್ದರು