ಚಲಿಸುತ್ತಿದ್ದ ಬಸ್ಸಿನಲ್ಲಿಯೇ ಮಹಿಳೆಯೊಬ್ಬಳು ಮಗುವಿಗೆ ಜನ್ಮ ನೀಡಿ, ಬಳಿಕ ಮಗುವನ್ನು ಕಿಟಕಿಯಿಂದ ಹೊರಗೆ ಮಗುವನ್ನು ಎಸೆದಿದ್ದು, ಮಗು ಸಾವನ್ನಪ್ಪಿದೆ ಎಂದು ತಿಳಿದು ಬಂದಿದೆ.
ಪಾಪಿ ತಾಯಿಯನ್ನು ಋತಿಕಾ ಧೇರೆ (19) ಎಂದು ಗುರುತಿಸಲಾಗಿದ್ದು, ಆಕೆಯ ಪತಿ ಎಂದು ಹೇಳಿಕೊಂಡಿದ್ದವನನ್ನು ಅಲ್ತಾಫ್ ಶೇಖ್ ಎನ್ನಲಾಗಿದೆ.
ಏನಿದು ಘಟನೆ?
ಗರ್ಭಿಣಿ, ತನ್ನ ಪತಿ ಎಂದು ಹೇಳಿಕೊಂಡು ಓರ್ವ ವ್ಯಕ್ತಿಯ ಜೊತೆಗೆ ಖಾಸಗಿ ಟ್ರ್ಯಾವೆಲ್ಸ್‌ನ ಕ್ಲೀಪರ್ ಕೋಚ್‌ನಲ್ಲಿ ಪುಣೆಯಿಂದ ಪರ್ಭಾನಿಗೆ ಪ್ರಯಾಣಿಸುತ್ತಿದ್ದಳು. ಮಂಗಳವಾರ (ಜು.15) ಬೆಳಿಗ್ಗೆ 6:30ರ ಸುಮಾರಿಗೆ ಮಹಿಳೆಗೆ ಹೆರಿಗೆ ನೋವು ಶುರುವಾಗಿದ್ದು, ಚಲಿಸುತ್ತಿದ್ದ ಬಸ್ಸಿನಲ್ಲಿಯೇ ಗಂಡು ಮಗುವಿಗೆ ಜನ್ಮನೀಡಿದಳು. ಬಳಿಕ ಆ ಇಬ್ಬರು ನವಜಾತ ಶಿಶುವನ್ನು ಬಟ್ಟೆಯಲ್ಲಿ ಸುತ್ತಿ, ಕಿಟಕಿಯಿಂದ ಹೊರಗೆ ಎಸೆದಿದ್ದಾರೆ.
ವಾಹನ ಚಲಾಯಿಸುತ್ತಿರುವಾಗ ಚಾಲಕನಿಗೆ ಕಿಟಿಕಿಯಿಂದ ಹೊರಗೆ ಎಸೆದರು ಎಂದು ಗಮನಕ್ಕೆ ಬಂದಿದೆ. ಚಾಲಕ ಈ ಬಗ್ಗೆ ವಿಚಾರಿಸಿದಾಗ ಆಕೆಯ ಪತಿ, ಬಸ್ಸಿನಲ್ಲಿ ಪ್ರಯಾಣಿಸುತ್ತಿರುವ ಕಾರಣ ನನ್ನ ಹೆಂಡತಿ ವಾಂತಿ ಮಾಡಿಕೊಂಡಿದ್ದಾಳೆ ಎಂದು ತಿಳಿಸಿದ್ದಾನೆ. ಇದೇ ಸಮಯದಲ್ಲಿ ವ್ಯಕ್ತಿಯೊಬ್ಬ ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗ ಬಸ್‌ನಿಂದ ಏನೋ ಹೊರಗೆ ಬಿದ್ದದ್ದನ್ನು ಗಮನಿಸಿದರು. ಬಳಿಕ ಸ್ಥಳಕ್ಕೆ ಹೋಗಿ ನೋಡಿದಾಗ ಗಂಡು ಮಗುವೊಂದು ಪತ್ತೆಯಾಗಿದೆ.
ಕೂಡಲೇ ವ್ಯಕ್ತಿ 112 ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿ ಪೊಲೀಸರಿಗೆ ಮಾಹಿತಿ ನೀಡಿದರು. ಸ್ಥಳೀಯ ಪೊಲೀಸರ ತಂಡವೊಂದು ಬಸ್ ಅನ್ನು ತಡೆದರು. ವಾಹನವನ್ನು ಪರಿಶೀಲಿಸಿದ ಪೊಲೀಸರು ಪ್ರಾಥಮಿಕ ತನಿಖೆ ನಡೆಸಿ ಮಹಿಳೆ ಹಾಗೂ ಶೇಖ್‌ನನ್ನು ವಶಕ್ಕೆ ಪಡೆದಿದ್ದಾರೆ. ಪೊಲೀಸರ ವಿಚಾರಣೆ ವೇಳೆ, ನಮಗೆ ಮಗುವನ್ನು ಬೆಳೆಸಲು ಸಾಧ್ಯವಾಗುವುದಿಲ್ಲ, ಹೀಗಾಗಿ ಎಸೆದಿದ್ದೇವೆ. ರಸ್ತೆಗೆ ಎಸೆದ ಬಳಿಕ ಅದು ಸಾವನ್ನಪ್ಪಿದೆ ಎಂದು ತಪ್ಪೋಪ್ಪಿಕೊಂಡಿದ್ದಾರೆ.