ಪರಶುರಾಮ ಥೀಮ್ ಪಾರ್ಕ್ ವಿವಾದಕ್ಕೆ ಸಂಬಂಧಿಸಿ ಪೊಲೀಸರು ತನಿಖೆ ಪೂರ್ಣಗೊಳಿಸಿ ನ್ಯಾಯಾಲಯಕ್ಕೆ ದೋಷರೋಪ ಪಟ್ಟಿ ಸಲ್ಲಿಸಿದ್ದು, ತನಿಖೆಯಲ್ಲಿ ಮೂರ್ತಿಯನ್ನು ಹಿತ್ತಾಳೆಯಿಂದ ಮಾಡಲಾಗಿದೆ ಎಂದು ಬಹಿರಂಗ ಪಡಿಸಿದ್ದಾರೆ.
ಪರಶುರಾಮ ಮೂರ್ತಿ ವಿವಾದ ಪ್ರಕರಣ ಸಂಬಂಧಿಸಿದಂತೆ ಶಿಲ್ಪಿ ಕೃಷ್ಣ ನಾಯ್, ಉಡುಪಿ ನಿರ್ಮಿತಿ ಕೇಂದ್ರದ ಪ್ರಾಜೆಕ್ಟ್ ಡೈರೆಕ್ಟರ್ ಅರುಣ್ ಕುಮಾರ್ ಮತ್ತು ಇಂಜಿನಿಯರ್ ಸಚಿನ್ ವೈ. ಕುಮಾರ್ ಅವರ ವಿರುದ್ಧ ಕಾರ್ಕಳ ನಗರ ಠಾಣಾ ಪೊಲೀಸರು 1231 ಪುಟಗಳ ದೋಷಾರೋಪ ಪಟ್ಟಿಯನ್ನು ಕಾರ್ಕಳ ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ.
ಕೃಷ್ಣ ನಾಯ್ಕ ಅವರ ‘ಕ್ರಿಶ್ ಆರ್ಟ್ ವರ್ಲ್ಡ್’ ಸಂಸ್ಥೆಯು ಕಂಚಿನ ಪರಶುರಾಮ ಮೂರ್ತಿ ಸ್ಥಾಪಿಸಲು ಉಡುಪಿ ನಿರ್ಮಿತಿ ಕೇಂದ್ರದಿಂದ ಹಣ ಪಡೆದಿತ್ತು. ಆದರೆ, ಕಂಚಿನ ಬದಲು ನಕಲಿ ಹಿತ್ತಾಳೆ ಮೂರ್ತಿ ನಿರ್ಮಿಸಿ ಸರ್ಕಾರಕ್ಕೆ ವಂಚನೆ ಮಾಡಿದ್ದಾರೆ ಎಂದು ಆರೋಪಿಸಿ ಕೃಷ್ಣ ಶೆಟ್ಟಿ ಎಂಬವರು 2024 ಜೂ.21 ರಂದು ನೀಡಿದ ದೂರಿನನ್ವಯ ಈ ಪ್ರಕರಣ ದಾಖಲಾಗಿತ್ತು.
ತನಿಖಾ ಸಮಯದಲ್ಲಿ ತಜ್ಞರ ಪರಿಶೀಲನಾ ವರದಿ ಮತ್ತು ತನಿಖೆಯಿಂದ ಶಿಲ್ಪಿ ಕೃಷ್ಣ ನಾಯ್ಕ ಅವರು ಕಂಚಿನ ಬದಲು ಹಿತ್ತಾಳೆ ಲೋಹದಿಂದ ಮೂರ್ತಿ ನಿರ್ಮಿಸಿರುವುದು ಸಾಬೀತಾಗಿದೆ. ಅಲ್ಲದೆ, ಪ್ರಾಜೆಕ್ಟ್ ಡೈರೆಕ್ಟರ್ ಅರುಣ್ ಕುಮಾರ್ ಮತ್ತು ಇಂಜಿನಿಯರ್ ಸಚಿನ್ ವೈ. ಕುಮಾರ್ ಅವರು ವರ್ಕ್ ಆರ್ಡರ್ ನಲ್ಲಿದ್ದ ಷರತ್ತು ಪಾಲಿಸಿಲ್ಲ. ದಿನಾಂಕ 12.10.2023 ರಂದು ಪರಶುರಾಮ ಮೂರ್ತಿಯ ಸೊಂಟದಿಂದ ಮೇಲ್ಬಾಗವನ್ನು ಉಮ್ಮಿಕಲ್ ಬೆಟ್ಟದಿಂದ ತೆಗೆದುಕೊಂಡು ಹೋಗಿ ಉಡುಪಿ ತಾಲೂಕಿನ ಅಲೆವೂರು ಗ್ರಾಮದ ಪ್ರಗತಿ ನಗರದಲ್ಲಿರುವ ನಿರ್ಮಿತಿ ಕೇಂದ್ರಕ್ಕೆ ಸಂಬಂಧಿಸಿದ ಶೆಡ್‌ನಲ್ಲಿ ದಿನಾಂಕ 25.02.2024 ರವರೆಗೆ ಇರಿಸಿಕೊಂಡಿದ್ದರು. ಆದರೆ, ಮೂರ್ತಿಯ ಈ ಭಾಗವನ್ನು ಶಿಲ್ಪಿ ಕೃಷ್ಣ ನಾಯ್ಕ ಅವರಿಗೆ ಹಸ್ತಾಂತರಿಸಿದಾಗ, ಅವರು ಅದನ್ನು ಬೆಂಗಳೂರಿಗೆ ಸಾಗಾಟ ಮಾಡಿರುವುದಾಗಿ ತಪ್ಪು ಮಾಹಿತಿ ನೀಡಿದ್ದರು ಎಂದು ತನಿಖೆಯಿಂದ ತಿಳಿದು ಬಂದಿದೆ.
ಆರೋಪಿಗಳಾದ ಶಿಲ್ಪಿ ಕೃಷ್ಣ ನಾಯ್ಕ ಪ್ರೊಜೆಕ್ಟ್ ಡೈರೆಕ್ಟರ್ ಅರುಣ್ ಕುಮಾರ್ ಮತ್ತು ಇಂಜಿನಿಯರ್ ಸಚಿನ್ ವೈ. ಕುಮಾರ್ ಅವರು ಅಪರಾಧಿಕ ಒಳಸಂಚು, ನಂಬಿಕೆ ದ್ರೋಹ, ವಂಚನೆ ಎಸಗಿ, ಸಾಕ್ಷ್ಯನಾಶ ಮಾಡಿದ್ದಾರೆ ಎಂದು ಪೊಲೀಸರು ಆರೋಪ ಪಟ್ಟಿಯಲ್ಲಿ ಉಲ್ಲೇಖಿಸಿದ್ದಾರೆ. ಇವರ ವಿರುದ್ದ ಕಲಂ 420, 409, 201, 120 (2) 31 34 ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.