ಕೈರೋ: ಗಾಜಾದ ಕೆಫೆಯ ಮೇಲೆ ಇಸ್ರೇಲ್ ಪಡೆಗಳು ವೈಮಾನಿಕ ದಾಳಿ ನಡೆಸಿದ್ದು, ವಿವಿಧೆಡೆ 74 ಜನರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗಾಜಾ ನಗರದ ಅಲ್-ಬಕಾ ಕೆಫೆಯ ಮೇಲೆ ವೈಮಾನಿಕ ದಾಳಿ ನಡೆಸುವ ವೇಳೆ ಮಹಿಳೆಯರು ಮತ್ತು ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಇದ್ದರು.
ಯಾವುದೇ ಎಚ್ಚರಿಕೆ ನೀಡದೆ, ಇಸ್ರೇಲ್ ಪಡೆಗಳು ದಾಳಿ ನಡೆಸಿದ್ದರಿಂದ ಭೂಕಂಪದ ಅನುಭವವಾಯಿತು ಎಂದು ಪ್ರತ್ಯಕ್ಷದರ್ಶಿಯೊಬ್ಬರು ಆತಂಕ ವ್ಯಕ್ತಪಡಿಸಿದರು.
ಗಾಜಾದ ವಿವಿಧೆಡೆ ದಾಳಿ ನಡೆದಿದ್ದು, 44 ಮಂದಿ ಸಾವಿಗೀಡಾಗಿದ್ದಾರೆ ಎಂದು ವರದಿಯಾಗಿದೆ. ದಾಳಿಯ ಭೀಕರತೆಯ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ರಕ್ತಸಿಕ್ತ ಮೃತದೇಹಗಳು ಬಿದ್ದಿರುವುದು, ಗಾಯಾಳುಗಳ ಚಿರಾಟದ ದೃಶ್ಯಗಳು ವಿಡಿಯೊದಲ್ಲಿದೆ.
‘ಅವರು ನಮ್ಮ ಮೇಲೆ ಮನಬಂದಂತೆ ಗುಂಡು ಹಾರಿಸಿದರು. ನನ್ನ ಕಾಲಿಗೆ ಗುಂಡು ಹಾರಿಸಿದರು. ನನ್ನನ್ನು ರಕ್ಷಿಸಲು ಪ್ರಯತ್ನಿಸುತ್ತಿದ್ದ ವ್ಯಕ್ತಿಯೊಬ್ಬರಿಗೆ ಗುಂಡು ಹಾರಿಸಿದರು ಎಂದು ಮತ್ತೊಬ್ಬ ಪ್ರತ್ಯಕ್ಷದರ್ಶಿಯೊಬ್ಬರು ದಾಳಿಯ ಭೀಕರತೆಯನ್ನು ವಿವರಿಸಿದರು.
ಇಸ್ರೇಲ್ ಯುದ್ಧದಲ್ಲಿ 56 ಸಾವಿರಕ್ಕೂ ಹೆಚ್ಚು ಪ್ಯಾಲೆಸ್ಟೀನಿಯನ್ನರು ಮೃತಪಟ್ಟಿದ್ದಾರೆ ಎಂದು ಗಾಜಾದ ಆರೋಗ್ಯ ಸಚಿವಾಲಯ ತಿಳಿಸಿದೆ.