ಬಂಟ್ವಾಳ ತಾಲೂಕಿನಲ್ಲಿ ಕಳೆದ ಮೂರು ದಶಕಗಳಿಂದ ಅಡಿಕೆ ವ್ಯಾಪಾರ ನಡೆಸುತ್ತಾ ಕೃಷಿಕರ ಅಪಾರ ವಿಶ್ವಾಸ ಗಳಿಸಿದ್ದ ವ್ಯಾಪಾರಿಯೊಬ್ಬ, ಸುಮಾರು 50ಕ್ಕೂ ಹೆಚ್ಚು ಕೃಷಿಕರಿಗೆ 10 ಕೋಟಿ ರೂಪಾಯಿಗೂ ಅಧಿಕ ಹಣವನ್ನು ವಂಚಿಸಿ ಕುಟುಂಬ ಸಮೇತ ಪರಾರಿಯಾಗಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಈ ಸಂಬಂಧ ಸಂತ್ರಸ್ತ ಕೃಷಿಕರು ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಘಟನೆ ಬೆಳಕಿಗೆ ಬಂದಿದ್ದು ಹೇಗೆ?
ನಾವೂರ ಗ್ರಾಮದ ಮೈಂದಾಳ ನಿವಾಸಿ ನೌಫಲ್ ಮಹಮ್ಮದ್ ಎಂಬಾತನೇ ಈ ವಂಚನೆ ಮಾಡಿದ ಈತ ಬಂಟ್ವಾಳದ ಬಡ್ಡಕಟ್ಟೆಯಲ್ಲಿ “ಎ.ಬಿ. ಸುಪಾರಿ” ಎಂಬ ಅಂಗಡಿ ಇಟ್ಟುಕೊಂಡು ದಶಕಗಳಿಂದ ಕೃಷಿಕರಿಂದ ಅಡಿಕೆ ಮತ್ತು ಕರಿಮೆಣಸು ಖರೀದಿಸುತ್ತಿದ್ದ.
ಕೃಷಿಕರಿಂದ ಉತ್ಪನ್ನ ಪಡೆದು, ಕೆಲ ದಿನಗಳ ನಂತರ ಹಣ ಪಾವತಿಸುವ ಮೂಲಕ ನಂಬಿಕೆ ಉಳಿಸಿಕೊಂಡಿದ್ದ. ಆದರೆ, ದಿನಾಂಕ 09-06-2025 ರಂದು ರಾತ್ರಿ, ಆರೋಪಿ ನೌಫಲ್ ತಾನು ವ್ಯಾಪಾರದಲ್ಲಿ ನಷ್ಟ ಅನುಭವಿಸಿದ್ದು. ಬಾಕಿ ಹಣವನ್ನು ಕಂತುಗಳಲ್ಲಿ ನೀಡುವುದಾಗಿ ಹಲವು ಕೃಷಿಕರಿಗೆ ಮೊಬೈಲ್ ಸಂದೇಶ ಕಳುಹಿಸಿದ್ದಾನೆ. ಇದರಿಂದ ಗಾಬರಿಗೊಂಡ ಕೃಷಿಕರು, ಜೂನ್ 10ರಂದು ಬೆಳಿಗ್ಗೆ ಆತನ ಅಂಗಡಿ ಹಾಗೂ ಮನೆಗೆ ತೆರಳಿದಾಗ, ಎರಡಕ್ಕೂ ಬೀಗ ಹಾಕಿರುವುದು ಕಂಡುಬಂದಿದೆ.
ಆತನ ಮೊಬೈಲ್ ಕೂಡ ಸ್ವಿಚ್ ಆಫ್ ಆಗಿದ್ದು. ಆತ ಪರಾರಿಯಾಗಿರುವುದು ಖಚಿತವಾಗಿದೆ.
ದೂರಿನ ವಿವರಗಳು:
ನಾವೂರ ಗ್ರಾಮದ ಕೃಷಿಕ ಪ್ರವೀಣ್ ಡಿ ಸೋಜಾ (45) ಅವರು ಈ ಪ್ರಕರಣದ ಪ್ರಮುಖ ದೂರುದಾರರಾಗಿದ್ದಾರೆ. ಅವರು ಮಾರ್ಚ್ 8, 2025 ರಂದು ಆರೋಪಿಗೆ ಮಾರಾಟ ಮಾಡಿದ್ದ 6.5 ಕ್ವಿಂಟಾಲ್ ಅಡಿಕೆಯ ಅಂದಾಜು ಮೌಲ್ಯ ₹3,50,000 ಹಣವನ್ನು ಪಡೆಯಬೇಕಿತ್ತು. ಆರೋಪಿಯು ಪರಾರಿಯಾಗಿರುವುದು ತಿಳಿಯುತ್ತಿದ್ದಂತೆ, ಪ್ರವೀಣ್ ಅವರಂತೆ ಹಣ ಕಳೆದುಕೊಂಡಿದ್ದ ಇತರ 24 ಕೃಷಿಕರು ಕೂಡ ಸ್ಥಳದಲ್ಲಿ ಜಮಾಯಿಸಿದರು.
ಪ್ರಾಥಮಿಕವಾಗಿ, ಈ 25 ಜನರಿಗೆ ಸೇರಿ ಆರೋಪಿಯು ಒಟ್ಟು ₹94,77,810 ಪಾವತಿಸದೆ ವಂಚಿಸಿರುವುದು ದೂರಿನಲ್ಲಿ ಉಲ್ಲೇಖವಾಗಿದೆ. ಆದರೆ, ವಂಚನೆಗೊಳಗಾದ ಕೃಷಿಕರ ಸಂಖ್ಯೆ 50ಕ್ಕೂ ಹೆಚ್ಚಿದ್ದು, ಒಟ್ಟು ವಂಚನೆಯ ಮೊತ್ತವು ₹10 ಕೋಟಿ ದಾಟಬಹುದು ಎಂದು ಅಂದಾಜಿಸಲಾಗಿದೆ.
ದೂರು ದಾಖಲು:
ಪ್ರವೀಣ್ ಡಿ ಸೋಜಾ ಅವರು ನೀಡಿದ ದೂರಿನ ಅನ್ವಯ, ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಆರೋಪಿ ನೌಫಲ್ ಮಹಮ್ಮದ್ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS-2023) ಕಲಂ 316(2) (ಅಪರಾಧಿಕ ನಂಬಿಕೆ ದ್ರೋಹ) ಮತ್ತು 318(4) (ವಂಚನೆ) ಅಡಿಯಲ್ಲಿ ಪ್ರಕರಣ (ಅ.ಕ್ರ. 64/2025) ದಾಖಲಾಗಿದೆ. ಪೊಲೀಸರು ಆರೋಪಿಗಾಗಿ ಶೋಧ ಕಾರ್ಯ ಆರಂಭಿಸಿದ್ದು, ತನಿಖೆ ಚುರುಕುಗೊಳಿಸಿದ್ದಾರೆ.
ದಶಕಗಳ ಕಾಲ ನಂಬಿಕೆಯಿಂದ ವ್ಯವಹರಿಸುತ್ತಿದ್ದ ವ್ಯಾಪಾರಿಯೇ ಹೀಗೆ ಏಕಾಏಕಿ ವಂಚಿಸಿ ಪರಾರಿಯಾಗಿರುವುದು ಸ್ಥಳೀಯ ಕೃಷಿಕರನ್ನು ಆರ್ಥಿಕ ಸಂಕಷ್ಟಕ್ಕೆ ದೂಡಿದೆ. ಬ್ಯಾಂಕ್ ಸಾಲ ತೀರಿಸಲು, ಮಕ್ಕಳ ವಿದ್ಯಾಭ್ಯಾಸಕ್ಕೆ ಮತ್ತು ಇತರ ಅಗತ್ಯಗಳಿಗಾಗಿ ಈ ಹಣವನ್ನು ನಂಬಿಕೊಂಡಿದ್ದ ರೈತರು ಇದೀಗ ಕಂಗಾಲಾಗಿದ್ದಾರೆ.