ಬಾಲಿವುಡ್‌ನ ನವಾಬ ಸೈಫ್ ಅಲಿ ಖಾನ್ ಮೇಲಿನ ಭೀಕರ ಹಲ್ಲೆ ಪ್ರಕರಣ ಇದೀಗ ಮತ್ತೊಂದು ರೋಚಕ ತಿರುವು ಪಡೆದುಕೊಂಡಿದೆ! ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿರುವ ದೋಷಾರೋಪ ಪಟ್ಟಿಯಲ್ಲಿಯೇ ಬೆಚ್ಚಿಬೀಳಿಸುವ ಸತ್ಯವೊಂದು ಅಡಗಿದೆ. ಹಲ್ಲೆ ನಡೆಸಿದ ಆರೋಪಿ ಶರಿಫುಲ್ ಇಸ್ಲಾಂನ ಬೆರಳಚ್ಚುಗಳು ಘಟನಾ ಸ್ಥಳದ ಪ್ರಮುಖ ಸಾಕ್ಷ್ಯಗಳೊಂದಿಗೆ ತಾಳೆಯಾಗುತ್ತಿಲ್ಲ!
ಬಾಂದ್ರಾ ಪೊಲೀಸರು ಸೈಫ್ ಮನೆಯಿಂದ ಸಂಗ್ರಹಿಸಿದ 20 ಬೆರಳಚ್ಚುಗಳ ಪೈಕಿ ಬರೋಬ್ಬರಿ 19 ಮುದ್ರೆಗಳು ಆರೋಪಿ ಶರಿಫುಲ್‌ನದ್ದಲ್ಲ! ಸ್ನಾನದ ಕೋಣೆ, ಮಲಗುವ ಕೋಣೆಯ ಬಾಗಿಲು, ಕಪಾಟು – ಹೀಗೆ ಎಲ್ಲೆಲ್ಲೂ ಸಿಕ್ಕ ಬೆರಳಚ್ಚುಗಳು ಬೇರೆಯಾರದ್ದೋ ಕೈವಾಡದ ಶಂಕೆ ಮೂಡಿಸುತ್ತಿವೆ. ಕೇವಲ ಒಂದೇ ಒಂದು ಬೆರಳಚ್ಚು (ಅದೂ 8ನೇ ಮಹಡಿಯಲ್ಲಿ ಸಿಕ್ಕಿದ್ದು) ಮಾತ್ರ ಅಸ್ಪಷ್ಟವಾಗಿ ತಾಳೆಯಾಗುತ್ತಿದೆ.
ಹಾಗಾದರೆ, ಸೈಫ್ ಮೇಲೆ ಚಾಕು ಬೀಸಿದ ಆ ಕರಾಳ ರಾತ್ರಿಯ ಅಸಲಿ ಖಳನಾಯಕ ಯಾರು? ಈ ಬೆರಳಚ್ಚುಗಳ ಗೊಂದಲ ಒಂದೆಡೆಯಾದರೆ, ಶರಿಫುಲ್ ಬಾಂಗ್ಲಾದೇಶಕ್ಕೆ ಅಕ್ರಮವಾಗಿ ಹಣ ಕಳುಹಿಸುತ್ತಿದ್ದ ಜಾಲವೂ ಬಯಲಾಗಿದೆ. ಇದು ಪ್ರಕರಣವನ್ನು ಮತ್ತಷ್ಟು ಸಂಕೀರ್ಣಗೊಳಿಸಿದೆ.
ಆದರೆ, ಪೊಲೀಸರು ಚಾಕುವಿನ ತುಣುಕುಗಳು (ಸೈಫ್ ದೇಹದಲ್ಲಿದ್ದದ್ದು ಮತ್ತು ಸ್ಥಳದಲ್ಲಿ ಸಿಕ್ಕಿದ್ದು) ತಾಳೆಯಾಗಿವೆ ಎಂದು ಹೇಳುತ್ತಿದ್ದಾರೆ. ಸಾವಿರ ಪುಟಗಳ ಚಾರ್ಜ್‌ಶೀಟ್ ಸಿದ್ಧವಾಗಿದ್ದರೂ, ಈ ಬೆರಳಚ್ಚಿನ ಮಿಸ್‌ಮ್ಯಾಚ್ ಪ್ರಕರಣದ ದಿಕ್ಕನ್ನೇ ಬದಲಿಸುತ್ತಾ? ಸತ್ಯಾಸತ್ಯತೆ ತನಿಖೆಯಿಂದಷ್ಟೇ ಹೊರಬರಬೇಕಿದೆ.