ಸತ್ತು ಹೋಗಿದ್ದಾಳೆ ಎಂದು ಗುರುತಿಸಲಾದ ಮಹಿಳೆಯೊಬ್ಬಳು 18 ತಿಂಗಳ ಬಳಿಕ ಪ್ರತ್ಯಕ್ಷವಾದ ವಿಲಕ್ಷಣ ಘಟನೆ ಇತ್ತೀಚೆಗೆ ಮಧ್ಯಪ್ರದೇಶದ ಮಂರ್ ಜಿಲ್ಲೆಯಲ್ಲಿ ನಡೆದಿದೆ.
ಮಹಿಳೆಯ ಮನೆಯವರು ಆಕೆಯ ಅಂತಿಮ ಕ್ರಿಯೆಗಳನ್ನೂ ನಡೆಸಿದ್ದಾರೆ. ವಿಚಿತ್ರ ಏನೆಂದರೆ, ಆಕೆಯ ಕೊಲೆ ಪ್ರಕರಣದಲ್ಲಿ ನಾಲ್ಕು ಮಂದಿ ಜೈಲು ಸೇರಿದ್ದಾರೆ.
ಮಹಿಳೆಯನ್ನು ಲಲಿತಾ ಬಾಯಿ ಎಂದು ಗುರುತಿಸಲಾಗಿದೆ. ಪೊಲೀಸ್ ಠಾಣೆಗೆ ಭೇಟಿ ನೀಡಿರುವ ಆಕೆ ತನ್ನ ಗುರುತನ್ನು ಹೇಳಿದ್ದಾಳೆ. ಆಕೆಯ ಕೊಲೆ ಆರೋಪದಲ್ಲಿ ನಾಲ್ವರು ಜನರು ಶಿಕ್ಷೆಗೊಳಗಾಗಿರುವುದರಿಂದ ಆಕೆ ಮತ್ತೆ ಬಂದಿರುವುದು ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಲಲಿತಾ ಅವರ ತಂದೆ ರಮೇಶ್ ನಾನುರಾಮ್ ಬಂಚಡಾ ಅವರ ಪ್ರಕಾರ, 18 ತಿಂಗಳ ಹಿಂದೆ ಕೈಯಲ್ಲಿ ಹಚ್ಚೆ ಮತ್ತು ಕಾಲಿಗೆ ಕಟ್ಟಿದ್ದ ಕಪ್ಪು ದಾರ ಸೇರಿದಂತೆ ದೈಹಿಕ ಗುರುತುಗಳ ಆಧಾರದ ಮೇಲೆ ಕುಟುಂಬವು ವಿರೂಪಗೊಂಡ ದೇಹವನ್ನು ಗುರುತಿಸಿತ್ತು. ಅದು ಲಲಿತಾ ಎಂದು ಮನವರಿಕೆಯಾದ ನಂತರ, ಕುಟುಂಬವು ಅಂತಿಮ ವಿಧಿಗಳನ್ನು ನಡೆಸಿತ್ತು.
ಪೊಲೀಸರು ಕೊಲೆ ಪ್ರಕರಣ ದಾಖಲಿಸಿದ್ದು, ಇಮ್ರಾನ್, ಶಾರುಖ್, ಸೋನು ಮತ್ತು ಇಜಾಜ್ ಎಂಬ ನಾಲ್ವರನ್ನು ಬಂಧಿಸಲಾಗಿತ್ತು.
ಆದರೆ 18 ತಿಂಗಳ ಬಳಿಕ ಲಲಿತಾ ಊರಿಗೆ ಮರಳಿದ್ದು, ಮಗಳನ್ನು ಕಂಡ ತಂದೆ ಗಾಬರಿಯಾಗಿದ್ದಾರೆ. ಕೂಡಲೇ ಠಾಣೆಗೆ ಆಕೆಯನ್ನು ಕರೆದುಕೊಂಡು ಹೋದ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ತನ್ನ ನಾಪತ್ತೆಯ ಬಗ್ಗೆ ಮಾತನಾಡಿದ ಲಲಿತಾ, ತಾನು ಶಾರುಖ್ ಜೊತೆ ಭಾನುಪಾರಕ್ಕೆ ಹೋಗಿದ್ದೆ. ಎರಡು ದಿನಗಳ ಕಾಲ ಅಲ್ಲಿ ತಂಗಿದ್ದ ನಂತರ, ಶಾರುಖ್ ಇನ್ನೊಬ್ಬ ವ್ಯಕ್ತಿಗೆ 5 ಲಕ್ಷ ರೂ.ಗೆ ಮಾರಾಟ ಮಾಡಿದ್ದ. ಒಂದೂವರೆ ವರ್ಷಗಳ ಕಾಲ ಕೋಟಾದಲ್ಲಿ ವಾಸಿಸುತ್ತಿದ್ದೆ ಎಂದು ಅವಳು ಹೇಳಿಕೊಂಡಿದ್ದಾಳೆ. ಸಮಯ ನೋಡಿಕೊಂಡು ತಾನು ಅಲ್ಲಿಂದ ತಪ್ಪಿಸಿಕೊಂಡು ತನ್ನ ಹಳ್ಳಿಗೆ ಮರಳಿದ್ದೇನೆ ಎಂದು ಲಲಿತಾ ಹೇಳಿದ್ದಾಳೆ. ತನ್ನ ಗುರುತನ್ನು ದೃಢೀಕರಿಸಲು ತನ್ನ ಆಧಾರ್ ಮತ್ತು ಮತದಾರರ ಗುರುತಿನ ಚೀಟಿಯಂತಹ ದಾಖಲೆಗಳನ್ನು ಸಹ ಅವಳು ಒದಗಿಸಿದಳು.
ಲಲಿತಾಗೆ ಇಬ್ಬರು ಮಕ್ಕಳಿದ್ದು, ತಾಯಿಯನ್ನು ಜೀವಂತ ನೋಡಿ ಸಂತಸಪಟ್ಟಿದ್ದಾರೆ.
ಗಾಂಧಿ ಸಾಗರ್ ಪೊಲೀಸ್ ಠಾಣಾಧಿಕಾರಿ ತರುಣ ಭಾರದ್ವಾಜ್ ಅವರು ಲಲಿತಾ ಕೆಲವು ದಿನಗಳ ಹಿಂದೆ ಠಾಣೆಗೆ ಭೇಟಿ ನೀಡಿ ತಾನು ಜೀವಂತವಾಗಿದ್ದೇನೆ ಎಂದು ವರದಿ ಮಾಡಿದ್ದಾಳೆ ಎಂದು ದೃಢಪಡಿಸಿದರು.
ನೆರೆಹೊರೆಯವರು ಮತ್ತು ಕುಟುಂಬ ಸದಸ್ಯರ ಮೂಲಕ ಪೊಲೀಸರು ಆಕೆಯ ಗುರುತನ್ನು ಪರಿಶೀಲಿಸಿದ್ದಾರೆ.
ಅವರು ನಿಜಕ್ಕೂ ಆಕೆ ಅದೇ ಲಲಿತಾ ಎಂದು ದೃಢಪಡಿಸಿದರು. ಅಧಿಕಾರಿಗಳು ಈ ಬೆಳವಣಿಗೆಯ ಬಗ್ಗೆ ಹಿರಿಯ ಅಧಿಕಾರಿಗಳು ಮತ್ತು ಥಂಡ್ಲಾ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ.