ಮಧ್ಯಪ್ರದೇಶದ ಸಿಧಿ ಜಿಲ್ಲೆಯಲ್ಲಿ ವ್ಯಕ್ತಿಯೋರ್ವ ತನ್ನ ಪತ್ನಿಯನ್ನು ಕೊಂದು ತಾನೂ ಆತ್ಮಹತ್ಯೆಗೆ ಶರಣಾಗಿದ್ದಾನೆ. ನಂತರ ಆ ವ್ಯಕ್ತಿಯ ಅಂತ್ಯಸಂಸ್ಕಾರ ಸಮಯದಲ್ಲಿ ಅಜ್ಜ ತನ್ನ ಮೊಮ್ಮಗನ ಚಿತೆಗೆ ಹಾರಿ ಆತ್ಮಹತ್ಯೆಗೆ ಶರಣಾಗಿರುವ ಭೀಕರ ಘಟನೆ ಬಹಿ ಪೊಲೀಸ್ ಠಾಣೆ ವ್ಯಾಪ್ತಿಯ ಸಿಹೋಲಿಯಾ ಗ್ರಾಮದಲ್ಲಿ ನಡೆದಿದೆ.
ಅಭಯ್ ರಾಜ್ ಯಾದವ್ ಎಂಬಾತ ತನ್ನ ಪತ್ನಿ ಸವಿತಾ ಯಾದವ್ ಎಂಬಾಕೆಯನ್ನು ಶುಕ್ರವಾರ ಕೊಡಲಿಯಿಂದ ಕೊಂದಿದ್ದು, ನಂತರ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸಂಜೆ ಅಂತ್ಯಕ್ರಿಯೆ ಮಾಡಲಾಗಿದೆ. ಆ ಸಮಯದಲ್ಲಿ ಅಜ್ಜ ರಾಮಾವತಾರ್ ಯಾದವ್ ಮನೆಯಲ್ಲಿದ್ದವರು ತಡರಾತ್ರಿ ಕಾಣೆಯಾಗಿದ್ದಾರೆ. ಮನೆ ಮಂದಿ ಎಷ್ಟೇ ಹುಡುಕಾಡಿದರೂ ಸಿಗದೇ ಹೋದಾಗ, ಅಂತ್ಯಕ್ರಿಯೆ ಮಾಡಿದ ಸ್ಥಳಕ್ಕೆ ಬಂದಿದ್ದಾರೆ. ಅಲ್ಲಿ ಅರೆಬೆಂದ ಶವ ಇತ್ತು. ಪೊಲೀಸರು ಬರುವಷ್ಟರಲ್ಲಿ ದೇಹ ಸಂಪೂರ್ಣ ಸುಟ್ಟು ಹೋಗಿದೆ ಎಂದು ಪೊಲೀಸರು ಹೇಳಿದ್ದಾರೆ.ಪೊಲೀಸರು ತನಿಖೆ ಮುಂದುವರಿಸಿದ್ದಾರೆ.