ಸುಮಾರು ಒಂದು ಶತಮಾನದ ಹಿಂದೆ ತೆರೆಕಂಡ ಕನ್ನಡ ಚಿತ್ರರಂಗದ ಮೊಟ್ಟ ಮೊದಲ ಟಾಕಿ ಚಿತ್ರವಾದ ‘ಸತಿ ಸುಲೋಚನಾ’ ಪ್ರೇಕ್ಷಕರನ್ನು ಬೆರಗುಗೊಳಿಸಿತ್ತು. ಅಲ್ಲಿಯವರೆಗೂ ರಂಗ ನಾಟಕಗಳ ಪರಿಚಯ ಮಾಡಿಕೊಂಡಿದ್ದ ವೀಕ್ಷಕರು ಸಂಭಾಷಣೆ ಆಧಾರಿತ ಸಿನಿಮಾವನ್ನು ತೆರೆ ಮೇಲೆ ವೀಕ್ಷಿಸಿ ಮಾರುಹೋಗಿದ್ದರು. ಆ ಸಿನಿಮಾ ತೆರೆಕಂಡು ಇಲ್ಲಿಗೆ ಬರೋಬ್ಬರಿ 91 ವರ್ಷ ಕಳೆದಿದೆ. ಈ ಐತಿಹಾಸಿಕ ಚಲನಚಿತ್ರವನ್ನು ಮರುಸೃಷ್ಟಿಸಲು ತೀರ್ಮಾನಿಸಲಾಗಿದ್ದು, 2026ರ ಮಾರ್ಚ್ 3 ರಂದು ಬಿಡುಗಡೆ ಮಾಡಲು ಯೋಜನೆ ರೂಪಿಸಲಾಗಿದೆ.
ಚಿತ್ರಕ್ಕೆ ಪಿ ಶೇಷಾದ್ರಿ ಅವರು ನಿರ್ದೇಶನ ಮತ್ತು ಸೃಜನ್ ಲೋಕೇಶ್ ಅವರು ನಿರ್ಮಾಣದ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಮರುಸೃಷ್ಟಿಸಿದ ಚಿತ್ರವು ಅದರ ಐತಿಹಾಸಿಕ ಮಹತ್ವವನ್ನು ಉಳಿಸಿಕೊಂಡು, ಮೂಲ ಆವೃತ್ತಿ ಬಿಡುಗಡೆಯಾಗಿದ್ದ ದಿನಾಂಕದಂದೇ ಬಿಡುಗಡೆಯಾಗಲಿದೆ.
ಆರ್ ನಾಗೇಂದ್ರ ರಾವ್ ಅವರು ಚಿತ್ರದ ಕಲ್ಪನೆಯನ್ನು ನೀಡಿದ್ದರು. ಸತಿ ಸುಲೋಚನಾ ಚಿತ್ರವನ್ನು ರಾಜಸ್ಥಾನ ಮೂಲದ ಚಮನ್‌ಲಾಲ್ ದೂಂಗಾಜಿ ನಿರ್ಮಿಸಿದ್ದು, ವೈವಿ ರಾವ್ ನಿರ್ದೇಶಿಸಿದ್ದಾರೆ. ಚಿತ್ರದಲ್ಲಿ ಸೃಜನ್ ಲೋಕೇಶ್ ಅವರ ತಾತ ಸುಬ್ಬಯ್ಯ ನಾಯ್ಡು ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ತ್ರಿಪುರಾಂಬ ನಾಯಕಿಯಾಗಿ ನಟಿಸಿದ್ದಾರೆ. ರಾಮಾಯಣದ ಕಥೆಯನ್ನು ಆಧರಿಸಿದ ಬೆಳ್ಳಾವೆ ನರಹರಿ ಶಾಸ್ತ್ರಿಯವರ ನಾಟಕದಿಂದ ಅಳವಡಿಸಿಕೊಳ್ಳಲಾಗಿದೆ. ದುಃಖಕರ ವಿಚಾರವೆಂದರೆ, ಈ ಚಿತ್ರದ ಯಾವುದೇ ವಿಡಿಯೋ ಫೂಟೇಜ್ ಇದೀಗ ಉಳಿದಿಲ್ಲ, ಕೆಲವು ಫೋಟೊಗಳು ಮಾತ್ರ ಉಳಿದುಕೊಂಡಿವೆ.
ಈ ಸಿನಿಮಾದ ಸಂಪತ್ತನ್ನು ಮರುಸ್ಥಾಪಿಸುವ ಸಲುವಾಗಿ ಸೃಜನ್ ಲೋಕೇಶ್ ಅವರು ಸತಿ ಸುಲೋಚನಾ ಚಿತ್ರವನ್ನು ಮರುಸೃಷ್ಟಿಸುವ ಕೆಲಸವನ್ನು ಕೈಗೆತ್ತಿಕೊಂಡಿದ್ದಾರೆ. ‘ಇದು ಕೇವಲ ಸಿನಿಮಾವಲ್ಲ; ಇದು ಒಂದು ಕನಸು’ ಎಂದು ಸೃಜನ್ ಹೇಳುತ್ತಾರೆ.
ಈ ಚಿತ್ರ ನನ್ನ ಕುಟುಂಬದ ಸಿನಿಮಾ ಪಯಣದಲ್ಲಿ ಒಂದು ಮೈಲಿಗಲ್ಲಾಗಿದೆ. ನನ್ನ ತಾತ ನನ್ನ ತಂದೆಯನ್ನು (ಲೋಕೇಶ್) ಭಕ್ತ ಪ್ರಹ್ಲಾದ ಚಿತ್ರದ ಮೂಲಕ ಬಾಲ ಕಲಾವಿದನಾಗಿ ಚಿತ್ರರಂಗಕ್ಕೆ ಪರಿಚಯಿಸಿದರು. ನನ್ನ ತಂದೆ ನನ್ನನ್ನು ಬುಜಂಗಯ್ಯನ ದಶಾವತಾರದ ಮೂಲಕ ಪರಿಚಯಿಸಿದರು ಮತ್ತು ಈಗ ನಾನು ನನ್ನ ಮಗ ಸುಕೃತ್‌ನನ್ನು ಜಿಎಸ್‌ಟಿ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಪರಿಚಯಿಸುತ್ತಿದ್ದೇನೆ. ಈ ಪರಂಪರೆ ಭಾರತೀಯ ಚಲನಚಿತ್ರೋದ್ಯಮದಲ್ಲಿ ಅನನ್ಯವಾಗಿದೆ’ ಎಂದು ತಿಳಿಸಿದರು.
ಸುಬ್ಬಯ್ಯ ನಾಯ್ಡು ಅವರು ನಿರ್ವಹಿಸಿದ್ದ ಪಾತ್ರದಲ್ಲಿ ಸೃಜನ್ ಲೋಕೇಶ್ ನಟಿಸಲಿದ್ದು, ಚಿತ್ರದ ಉಳಿದ ತಾರಾಗಣ ಇನ್ನೂ ಅಂತಿಮ ಹಂತದಲ್ಲಿದೆ.
ಈ ಚಿತ್ರ ಘೋಷಣೆ ಸಮಾರಂಭದಲ್ಲಿ ಪ್ರಮುಖರಾದ ಎಸ್‌ವಿ ರಾಜೇಂದ್ರ ಸಿಂಗ್ ಬಾಬು, ಗಿರೀಶ್ ಕಾಸರವಳ್ಳಿ, ಯೋಗರಾಜ್ ಭಟ್, ನಟಿ ಜಯಮಾಲಾ ಭಾಗವಹಿಸಿದ್ದರು. ಪಿ ಶೇಷಾದ್ರಿ ಮತ್ತು ಸೃಜನ್ ಲೋಕೇಶ್ ಅವರ ಪ್ರಯತ್ನಕ್ಕೆ ಯಶಸ್ಸು ಸಿಗಲಿ ಎಂದು ಹಾರೈಸಿದರು.