ಕೂಡುಕುಟುಂಬ ಎಲ್ಲರಿಗೂ ಆಕರ್ಷಕವೇ. ಎಲ್ಲಾ ಸದಸ್ಯರೂ ಒಂದೇ ಮನಸ್ಸಿನವರಾಗಿದ್ದರೆ ಇನ್ನೂ ಅಂದ. ಇದರ ಸುತ್ತ ಹೆಣೆದಿರುವ ಕಥೆಯೇ ಮಿಡ್ಲ್ ಕ್ಲಾಸ್ ಫ್ಯಾಮಿಲಿ.
ಶುಕ್ರವಾರ ತೆರೆ ಕಂಡಿರುವ ಮಿಡ್ಲ್ ಕ್ಲಾಸ್ ಫ್ಯಾಮಿಲಿ ತುಳು ಸಿನಿಮಾ, ಕೋಸ್ಟಲ್ ವುಡ್ ನಲ್ಲಿ ಹೊಸ ಅಲೆಯ ಸಿನಿಮಾವಾಗಿ ಭರವಸೆ ಮೂಡಿಸಿದೆ.
ಜಾಳು ಜಾಳಾಗಿರುವ ಕಥೆ, ಒಣ ಹಾಸ್ಯಕ್ಕೆ ಗಂಟು ಬಿದ್ದಿದ್ದ ಚಿತ್ರರಂಗಕ್ಕೆ ಭರವಸೆಯ ಧಿಕ್ಕು ತೋರಿಸುವಲ್ಲಿ ನಿರ್ದೇಶಕ ರಾಹುಲ್ ಅಮೀನ್ ಯಶಸ್ವಿಯಾಗಿದ್ದಾರೆ. ನಾಯಕ ನಟ ವಿನೀತ್ ಕುಮಾರ್ ಬರೆದಿರುವ ಕಥೆಯನ್ನು ಪ್ರತಿ ಫ್ರೇಮ್ ನಲ್ಲಿ ಅಚ್ಚುಕಟ್ಟಾಗಿ ಹಿಡಿದಿಡುವಲ್ಲಿ ತಾಂತ್ರಿಕ ವರ್ಗದ ಶ್ರಮ ಎದ್ದು ಕಾಣುತ್ತದೆ. ಇಡೀಯ ಸಿನಿಮಾದುದ್ದಕ್ಕೂ ಎಲ್ಲೂ ಬೋರ್ ಹೊಡೆಸದೇ, ಪ್ರೇಕ್ಷಕರನ್ನು ಹಿಡಿದಿಟ್ಟು ಸಂಪೂರ್ಣ ಮನರಂಜನೆ ನೀಡುವ ಸಿನಿಮಾವಾಗಿ ಮೂಡಿಬಂದಿದೆ.
ಅಪಾರ್ಟ್ ಮೆಂಟ್ ಇಂದಿನ ಸಂಸ್ಕೃತಿ. ಮಾತ್ರವಲ್ಲ, ಬದುಕು ಕೂಡ. ಚಿತ್ರದ ನಾಯಕ ನಟನಿಗೆ ಅಪಾರ್ಟ್ ಮೆಂಟ್ ನಿರ್ಮಿಸಬೇಕೆಂಬ ಕನಸು. ಈ ಕನಸಿನ ಬೆಂಬತ್ತುವ ಹುಡುಗನಿಗೆ, ಬ್ಯಾಂಕಿನಲ್ಲಿ ಹುಡುಗಿಯ ಪರಿಚಯ ಆಗುತ್ತದೆ. ಆಕೆಯ ಪರಿಚಯ ಪ್ರೀತಿಗೆ ತಿರುಗಿ ಅನಿರೀಕ್ಷಿತ ತಿರುವೊಂದನ್ನು ತಂದಿಡುತ್ತದೆ. ಆ ತಿರುವು ಸಿನಿಮಾದ ಗತಿಯನ್ನು ಹದವಾಗಿ ಹೆಚ್ಚಿಸುತ್ತದೆ. ಇದರೊಂದಿಗೆ ಶ್ರೀಮಂತಿಕೆಯ ಹಮ್ಮಿಲ್ಲದ ನಾಯಕಿ, ಮಧ್ಯಮ ವರ್ಗದ ಮನೆಯಲ್ಲಿ ಹೇಗೆ ಹೊಂದಿಕೊಳ್ಳುತ್ತಾಳೆ, ನಾಯಕನ ಕನಸಿಗೆ ನಾಯಕಿ ಹೇಗೆ ಜೀವ ತುಂಬುತ್ತಾಳೆ, ಸಂಬಂಧಗಳ ನಡುವಿನಲ್ಲಿ ಅನಿರೀಕ್ಷಿತವಾಗಿ ಎದುರಾಗುವ ಸಮಸ್ಯೆ, ಆ ಸಮಸ್ಯೆ ಪರಿಹಾರಕ್ಕೆ ಕೂಡುಕುಟುಂಬ ಸದಸ್ಯರ ಸಾಥ್, ವಿಲನ್ ಜೊತೆಗೆ ಹಿತಶತ್ರುಗಳು, ರಿಯಲ್ ಎಸ್ಟೇಟ್ ನ ರಾಜಕೀಯ, ಮಧ್ಯಮ ವರ್ಗದ ಮಕ್ಕಳು ಮಧ್ಯಮ ವರ್ಗದವರಾಗೇ ಉಳಿದುಕೊಳ್ಳಬೇಕೆಂಬ ಸಣ್ಣತನ… ಹೀಗೆ ಎಲ್ಲವನ್ನು ಹದವಾಗಿ ಮಿಳಿತ ಮಾಡಿ ಪ್ರೇಕ್ಷಕರ ಮುಂದೆ ಇಡಲಾಗಿದೆ. ಸುಖಾಂತ್ಯದ ಕ್ಲೈಮ್ಯಾಕ್ಸ್ ಆದರೂ ಮಾವನ ಪಾತ್ರದಲ್ಲಿ ಮಿಂಚುವ ನವೀನ್ ಡಿ ಪಡೀಲ್ ಸಿನಿಮಾದ ತೂಕ ಹೆಚ್ಚಿಸಿದ್ದಾರೆ.
ಹಾಸ್ಯದಲ್ಲಿ ಅರವಿಂದ್ ಬೋಳಾರ್ ಎಂದಿನಂತೆ ನವರಸಗಳನ್ನು ಉಣಬಡಿಸಿದ್ದಾರೆ. ಭೋಜರಾಜ್ ವಾಮಂಜೂರು ಜಾದೂಗಾರನ ಪಾತ್ರದಲ್ಲಿ ಭರಪೂರ ಮನರಂಜನೆ ನೀಡಿದ್ದಾರೆ. ಹಾಗಂತ ಎಲ್ಲೂ ಕೂಡ ‘ಬಪ್ಪರ್’ ಅನಿಸದ ಹಾಸ್ಯ, ಕುಟುಂಬ ಸಹಿತ ನೋಡಬಹುದಾದ ಸಿನಿಮಾ ಅನಿಸಿಕೊಳ್ಳುತ್ತದೆ.
ಮಂಗಳೂರು ಆಸುಪಾಸಿನಲ್ಲಿ ಚಿತ್ರೀಕರಣವಾಗಿದ್ದು, ಕ್ಯಾಮರಾ ವರ್ಕ್ ಕೂಡ ಭಿನ್ನವಾಗಿ ಮೂಡಿಬಂದಿದೆ.