ಪುತ್ತೂರು: ಜೈ ತುಳು – ಕನ್ನಡ ಸಿನಿಮಾ ಶುಕ್ರವಾರ ವಿಶ್ವಾದ್ಯಂತ ತೆರೆ ಕಂಡಿದ್ದು, ಪುತ್ತೂರು ಜಿಎಲ್ ವನ್ ಮಾಲ್ ನಲ್ಲಿರುವ ಭಾರತ್ ಸಿನಿಮಾಸ್ ನಲ್ಲಿ ದೀಪ ಬೆಳಗಿ ಉದ್ಘಾಟನೆ ಮಾಡಲಾಯಿತು.
ಉದ್ಘಾಟಿಸಿ ಮಾತನಾಡಿದ ಮಾಜಿ ಶಾಸಕ ಸಂಜೀವ ಮಠಂದೂರು, ಪ್ರತಿ ಸಿನಿಮಾ ಬಿಡುಗಡೆ ಆದಾಗಲೂ ಜನರಿಗೆ ನಿರೀಕ್ಷೆ ಇರುತ್ತದೆ. ಅದರೆ ಜೈ ಸಿನಿಮಾದ ಬಗ್ಗೆ ಹೆಚ್ಚೇ ನಿರೀಕ್ಷೆ ಹುಟ್ಟುಹಾಕಿದೆ. ರೂಪೇಶ್ ಶೆಟ್ಟಿ ಅವರು ಬಿಗ್ ಬಜೆಟಿನಲ್ಲಿ ತಯಾರಿಸಿದ ಸಿನಿಮಾ ಇದಾಗಿದ್ದು, ಈ ಸಿನಿಮಾ ಗೆಲ್ಲಬೇಕು ಎಂದು ಹಾರೈಸಿದರು.
ಸಿನಿಮಾ ಅಂದರೆ ಮನರಂಜನೆ. ಒಂದಷ್ಟು ಮಂದಿ ಇದರಿಂದಾಚೆಗೆ ಬಂದು, ಹೊಸತನದ ವಿಚಾರಗಳಿಗೂ ಹುಡುಕಾಟ ನಡೆಸುತ್ತಾರೆ. ಅದೇನೇ ಇದ್ದರೂ, ಕಲಾವಿದರು ಈ ಸಮಾಜದ ಆಸ್ತಿ. ಸಿನಿಮಾದ ಮೂಲಕ ಕಲಾವಿದರನ್ನು ಪೋಷಿಸುವ ಕೆಲಸ ಆಗಬೇಕು ಎಂದರು.
ಪುತ್ತೂರು ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ, ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯದರ್ಶಿ ಸಿದ್ದೀಕ್ ನೀರಾಜೆ ಮಾತನಾಡಿ, ಕನ್ನಡ ಸಿನಿಮಾ ಇಂದು ಹೆಸರು ಮಾಡುತ್ತಿದೆ. ಇದೇ ರೀತಿ ತುಳು ಸಿನಿಮಾವೂ ಹೆಸರು ಮಾಡುತ್ತಿರುವುದು ಸಂತೋಷದ ವಿಚಾರ. ಜೈ ಸಿನಿಮಾವನ್ನು ಗೆಲ್ಲಿಸಿ ಕೊಡಬೇಕು ಎಂದು ಕೇಳಿಕೊಂಡರು.
ತಮ್ಮ ಸಿನಿ ಪ್ರೀತಿಯ ಬಗ್ಗೆ ಮಾತನಾಡಿದ ಅವರು, ಮುಂಗಾರು ಪತ್ರಿಕೆಯಲ್ಲಿ ಕೆಲಸ ಮಾಡಿದ ಬಳಿಕ ಬೆಂಗಳೂರಿಗೆ ತೆರಳಿದೆ. ಅಲ್ಲಿ ಮನೋಹರ್ ವಿಟ್ಲ ಅವರ ಜೊತೆಗಿದ್ದೆ. ಮುಂದೊಂದು ದಿನ ಕಾಶೀನಾಥ್ ಅವರ ಒಂದು ಸಿನಿಮಾದಲ್ಲೂ ಅಭಿನಯಿಸಿದೆ. ಆದರೆ ಆ ಚಿತ್ರ ಬಿಡುಗಡೆಯಾಗಿಲ್ಲ ಎಂದರು.
ದ್ವಾರಕಾ ಕಾರ್ಪೋರೇಷನ್ ಪ್ರೈ ಲಿ. ಮಾಲಕ ಗೋಪಾಲಕೃಷ್ಣ ಭಟ್ ಮಾತನಾಡಿ, ಮನರಂಜನೆಯ ಜೊತೆಗೆ ವಿಷಯಗಳನ್ನು ಜನರಿಗೆ ತಲುಪಿಸುವ ಮಾಧ್ಯಮ ಸಿನಿಮಾ. ಇಂದು ವಿಷಯಾಧಾರಿತವಾಗಿ ಬೇರೆ ಬೇರೆ ಸಿನಿಮಾ ಬರುತ್ತಿರುವುದು ಸಂತೋಷದ ವಿಚಾರ. ಬೇರೆ ಬೇರೆ ನಾಡಿನ ಸಿನಿಮಾ ಕ್ಷೇತ್ರದಲ್ಲಿ ನಮ್ಮ ನಾಡಿನ ಜನರಿದ್ದಾರೆ ಎನ್ನುವುದು ಖುಷಿಯ ವಿಚಾರ. ಕಲೆ ಹಾಗೂ ಕಲಾವಿದರು ಬೆಳೆಯಲಿ ಎಂದು ಶುಭ ಹಾರೈಸಿದರು.
ದರ್ಬೆ ಅಶ್ವಿನಿ ಹೋಟೆಲ್ ಮಾಲಕ ಕರುಣಾಕರ್ ರೈ ದೇರ್ಲ ಮಾತನಾಡಿ, ದೇಶಾದ್ಯಂತ ಜೈ ಸಿನಿಮಾ ಬಿಡುಗಡೆ ಆಗ್ತಾ ಇದೆ. ಸಿನಿಮಾ 100 ದಿನ ನಡೆಯಲಿ. ಸಿನಿಮಾ ಕ್ಷೇತ್ರ ಉತ್ತರೋತ್ತರ ಅಭಿವೃದ್ಧಿ ಆಗಲಿ ಎಂದು ಹಾರೈಸಿದರು.
ಸಿನಿಮಾ ವಿತರಕ ಬಾಲಕೃಷ್ಣ ಶೆಟ್ಟಿ ಕುಕ್ಕಾಡಿ ಮಾತನಾಡಿ. ರೂಪೇಶ್ ಶೆಟ್ಟಿ ಅವರ ಗಿರಿಗಿಟ್, ಗಮ್ಜಾಲ್, ಸರ್ಕಸ್ ಈ ಸಿನಿಮಾಗಳು ಉತ್ತಮ ಪ್ರದರ್ಶನ ಕಂಡಿವೆ. ಈಗ ಜೈ ಸಿನಿಮಾ ದೇಶ ಮಾತ್ರವಲ್ಲ ವಿದೇಶದಲ್ಲೂ ಬಿಡುಗಡೆ ಆಗುತ್ತಿದೆ. ಈ ಸಿನಿಮಾವನ್ನು ಗೆಲ್ಲಿಸಿಕೊಟ್ಟರೆ ಇನ್ನಷ್ಟು ಉತ್ತಮ ಸಿನಿಮಾಗಳನ್ನು ನಿರ್ಮಿಸಲು ಸಾಧ್ಯ ಎಂದರು.
ಸುಳ್ಯ ಚಿತ್ರಮಂದಿರದ ಮಾಲಕ ಮಧುಸೂದನ್ ಶುಭಹಾರೈಸಿದರು.
ಲತಾ ಮಧುಸೂದನ್, ಭಾರತ್ ಸಿನಿಮಾಸ್ ಪುತ್ತೂರು ಮ್ಯಾನೇಜರ್ ಜಯರಾಮ್ ವಿಟ್ಲ, ಕಲಾವಿದರಾದ ಪವಿತ್ರ ಹೆಗ್ಡೆ, ಚಂದ್ರಶೇಖರ್ ಹೆಗ್ಡೆ ಉಪಸ್ಥಿತರಿದ್ದರು.
ಪದ್ಮರಾಜ್ ಪುತ್ತೂರು ಕಾರ್ಯಕ್ರಮ ನಿರೂಪಿಸಿದರು.
























