`ಕಾರ್ ಪತ್ತುನವು ತುಳು ನಾಡ್’ದ ಸಂಸ್ಕೃತಿ, ಕಾರ್ ವೊಯ್ಪುನವ್ವತ್’ (ಕಾಲು ಹಿಡಿಯುವುದು ತುಳು ನಾಡಿನ ಸಂಸ್ಕೃತಿ, ಕಾಲು ಎಳೆಯುವುದಲ್ಲ) ಎನ್ನುವ ಸುನಿಲ್ ಶೆಟ್ಟಿ ಡೈಲಾಗ್, ರಾಜಕೀಯ ವ್ಯಕ್ತಿಗಳು ಅವಲೋಕನ ಮಾಡಿಕೊಳ್ಳಬೇಕಾದ ಸಂದೇಶ.
ಬಾಲಿವುಡ್ ಸ್ಟಾರ್ ಸುನಿಲ್ ಶೆಟ್ಟಿ, ಜೈ ಸಿನಿಮಾಕ್ಕೆ ಒಂದು ತೂಕ.
ಅವರದ್ದು ಅತಿಥಿ ಪಾತ್ರ ನಿಜ. ಆದರೆ ಸಿನಿಮಾಕ್ಕೆ ವೇಗ ನೀಡುವಲ್ಲಿ ಸುನಿಲ್ ಶೆಟ್ಟಿ ಅವರದ್ದೇ ಮುಖ್ಯ ಪಾತ್ರ.
ನಾವಿಂದು ರಾಜಕೀಯ ವ್ಯಕ್ತಿಗಳ ಹಿಂದೆ ಬಿದ್ದಿದ್ದೇವೆ. ಸ್ಟಾರ್’ಗಳು, ರಾಜಕೀಯ ವ್ಯಕ್ತಿಗಳು ಆಹ್ವಾನಿಸುವ ಪ್ರಚಾರ ಸಭೆಗಳಿಗೆ ಬಂದು ತಾರಾ ಮೆರುಗು ನೀಡುತ್ತಾರೆ. ಇದರ ನಡುವೆ ಸಮಾಜದ ನೈಜ ವಿಚಾರಗಳು ಪ್ರಾಮುಖ್ಯತೆ ಕಳೆದುಕೊಳ್ಳುತ್ತವೆ. ಇದು ವಾಸ್ತವ. ಜೈ ಸಿನಿಮಾದಲ್ಲಿ ಇದಕ್ಕೊಂದು ಟ್ವಿಸ್ಟ್ ಇದೆ.
ಹಾಲಿ ಶಾಸಕನ ರಾಜಕೀಯ ದಾಳಕ್ಕೆ ಜನರು ಮರುಳಾಗುತ್ತಾರೆ. ಸ್ಟಾರ್ ಪ್ರಚಾರಕರಾಗಿ ಸುನಿಲ್ ಶೆಟ್ಟಿ ಆಗಮಿಸುತ್ತಾರೆ. ಅಲ್ಲಿ ಅವರಿಗೆ ವಾಸ್ತವ ಅರಿವಾಗುತ್ತದೆ. ಸ್ನೇಹಕ್ಕಾಗಿ, ಪ್ರಚಾರಕ್ಕಾಗಿ ತನ್ನನ್ನು ತಾನು ಮಾರಿಕೊಳ್ಳುವುದಿಲ್ಲ ಎನ್ನುವುದನ್ನು ಸ್ಪಷ್ಟಪಡಿಸುತ್ತಾರೆ. ಕರೆಯದೆಯೂ ನ್ಯಾಯದ ಪರ ನಿಲ್ಲುತ್ತಾರೆ. ಕಥೆಗೆ ಮಾತ್ರವಲ್ಲ ಸಿನಿಮಾಕ್ಕೆ ಹೊಸ ರೂಪು ನೀಡುತ್ತಾರೆ.
ಈ ನ್ಯಾಯದ ಪರ ನಿಲ್ಲುವ, ಹೋರಾಟದ ಕಥೆಯೇ – ಒಂದು ಸೇತುವೆಯ ಕಥೆ.
ಒಂದು ಸೇತುವೆಯ ಸುತ್ತ ರಾಜಕೀಯ, ಸಾಮಾಜಿಕ, ಕೌಟುಂಭಿಕ, ಕಾರ್ಪೊರೇಟ್ ಹಿತಾಸಕ್ತಿಗಳಿರುತ್ತವೆ. ಸೇತುವೆಗಾಗಿ ಶಾಸಕನ ಆಪ್ತನೇ ಶಾಸಕನಿಗೆ ತಿರುಗಿ ಬಿದ್ದು, ಸೇತುವೆ ನಿರ್ಮಾಣಕ್ಕಾಗಿ ನಡೆಸುವ ಬಡಿದಾಟ, ಹೋರಾಟ ಕೊನೆಗೂ ಆತನಿಗೆ ಯಶಸ್ಸು ನೀಡುತ್ತಾ ಎನ್ನುವುದನ್ನು ಸಿನಿಮಾ ನೋಡಿಯೇ ತಿಳಿದುಕೊಳ್ಳಬೇಕು.
ಅಂತು ತುಳುವಿನಲ್ಲಿ ಮತ್ತೊಂದು ಉತ್ತಮ ಸಿನಿಮಾ ಬಂದಿದೆ. ಪ್ರಾರಂಭದಿಂದಲೇ ಸಾಕಷ್ಟು ನಿರೀಕ್ಷೆ ಹುಟ್ಟಿಸಿದ ರಾಕ್ ಸ್ಟಾರ್ ರೂಪೇಶ್ ಶೆಟ್ಟಿ ನಿರ್ದೇಶಕ, ನಾಯಕನಾಗಿ ಅಭಿನಯಿಸಿರುವ ಜೈ ಸಿನಿಮಾ, ನಿರೀಕ್ಷೆಗಳನ್ನು ಹುಸಿಗೊಳಿಸಿಲ್ಲ. ಇನ್ನು ಗೆಲ್ಲಿಸಿಕೊಡಬೇಕಾದದ್ದು ಪ್ರೇಕ್ಷಕರ ಕೈಯಲ್ಲಿದೆ.
ತುಳು ಹಾಗೂ ಕನ್ನಡ ಎರಡೂ ಭಾಷೆಯಲ್ಲಿ ಶುಕ್ರವಾರ ಜೈ ಸಿನಿಮಾ ವಿಶ್ವಾದ್ಯಂತ ತೆರೆಕಂಡಿದೆ. ಪ್ರಮುಖ ವಿಲನ್ ಪಾತ್ರದಲ್ಲಿ ಬಹುಭಾಷಾ ನಟ ರಾಜ್ ದೀಪಕ್ ಶೆಟ್ಟಿ, 5 ಬಾರಿ ಸೋತು ಕೊನೆಗೂ ಗೆಲ್ಲುವ ರಾಜಕೀಯ ವ್ಯಕ್ತಿಯ ಪಾತ್ರದಲ್ಲಿ ದೇವದಾಸ್ ಕಾಪಿಕಾಡ್, ಮುಖ್ಯೋಪಾಧ್ಯಾಯರಾಗಿ, ತಂದೆಯ ಪಾತ್ರದಲ್ಲಿ ನವೀನ್ ಡಿ ಪಡೀಲ್, ಕಾಮಿಡಿಗೆ ಜೀವ ತುಂಬಿದ ತುಳುನಾಡ ಮಾಣಿಕ್ಯ ಅರವಿಂದ್ ಬೋಳಾರ್, ಕಾಂಟ್ರಾಕ್ಟರ್ ಪಾತ್ರದಲ್ಲಿ ಭೋಜರಾಜ ವಾಮಂಜೂರು ಚಿತ್ರಕ್ಕೆ ಜೀವ ತುಂಬಿದ್ದಾರೆ. ನಾಯಕಿಯಾಗಿ ಟಿವಿ ಆ್ಯಂಕರ್ ಪಾತ್ರದಲ್ಲಿ ಅದ್ವಿತಿ ಶೆಟ್ಟಿ ಮಿಂಚಿದ್ದಾರೆ. ಪ್ರಸನ್ನ ಶೆಟ್ಟಿ ಬೈಲೂರು, ಸಂದೀಪ್ ಶೆಟ್ಟಿ ಮಾಣಿಬೆಟ್ಟು, ಉಮೇಶ್ ಮಿಜಾರ್, ಮನೋಜ್, ಚೇತನ್ ಡಿಸೋಜ ಸಿನಿಮಾದಲ್ಲಿ ತಮಗೆ ನೀಡಿದ ಪಾತ್ರವನ್ನು ಗೆಲ್ಲಿಸಿ ಕೊಟ್ಟಿದ್ದಾರೆ.
ಪ್ರಸನ್ನ ಶೆಟ್ಟಿ ಬೈಲೂರು ಕತೆ, ಸಂಭಾಷಣೆ ಬರೆದಿದ್ದಾರೆ. ಚಿತ್ರಕತೆ ರೂಪೇಶ್ ಶೆಟ್ಟಿ ಮತ್ತು ವೇಣು ಹಸ್ರಳ್ಳಿ. ಕ್ಯಾಮರಾ ವಿನುತ್ ಕೆ, ಸಂಗೀತ ಲೊಯ್ ವೆಲೆಂಟಿನ್ ಸಲ್ದಾನ, ಸಂಕಲನ ರಾಹುಲ್ ವಸಿಷ್ಠ, ನೃತ್ಯ ಹಾಗೂ ಎಕ್ಸಿಕ್ಯೂಟಿವ್ ಪ್ರೊಡ್ಯುಸರ್ ನವೀನ್ ಶೆಟ್ಟಿ ಆರ್ಯನ್ಸ್ ಸಹಕರಿಸಿದ್ದಾರೆ.
ಒಂದೆಡೆ ಗಂಭೀರ ಕಥೆಯ ಎಳೆಯೊಂದನ್ನು ಸಿನಿಮಾ ಬಿಚ್ಚಿಡುತ್ತಾ ಸಾಗಿದರೆ, ಇನ್ನೊಂದೆಡೆ ಹಾಸ್ಯ ಕಚಗುಳಿ ಇಡುತ್ತದೆ. ಕೊಂಕಣಿ ಭಾಷೆಯಲ್ಲಿರುವ ಡೈಲಾಗ್’ಗಳು ಹಾಸ್ಯಕ್ಕೆ ಹೊಸ ಲುಕ್ಕು.


























