ಕಾಂತಾರ ಸಿನಿಮಾದ ಯಶಸ್ಸಿನ ನಂತರ ಕಾಂತಾರಾ ಚಾಪ್ಟರ್ 1 ತೆರೆಗೆ ಬರಲು ಸಿದ್ಧವಾಗುತ್ತಿದೆ. ಅಷ್ಟರಲ್ಲೇ ಸೆಟ್ ನಲ್ಲಿ ಒಂದರ ಹಿಂದೆ ಒಂದರಂತೆ ಹಲವು ಅವಘಡಗಳು ನಡೆಯುತ್ತಲೇ ಇದೆ. ಈ ಹಿನ್ನೆಲೆಯಲ್ಲಿ ಮಾತನಾಡಿರುವ ನಿರ್ಮಾಪಕ ಚೆಲುವೇ ಗೌಡ ಅವರು, ಪಂಜುರ್ಲಿ ದೈವ ನೀಡಿದ ಎಚ್ಚರಿಕೆಯನ್ನು ನೆನಪು ಮಾಡಿಕೊಂಡಿದ್ದಾರೆ.
ಕಾಂತಾರ ಸೆಟ್ ನಲ್ಲಿ ಏನೇನೋ ಅವಘಡ ನಡೆಯುತ್ತಿವೆ. ಇದರ ಹಿಂದೆ ದೈವದ ಸಿಟ್ಟು ಇದೆಯೇ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಉದ್ಭವಿಸಿತ್ತು. ಇದಕ್ಕೆ ಉತ್ತರವೆಂಬಂತೆ ಚೆಲುವೇ ಗೌಡ ಮಾತನಾಡಿದ್ದಾರೆ.
‘ಈವರೆಗೆ ನಡೆದ ಅನಾಹುತಕಾರಿ ಘಟನೆಗಳು ಯಾವುವೂ ಸಹ ಸಿನಿಮಾದ ಸೆಟ್ನಲ್ಲಿ ನಡೆದಿಲ್ಲ. ಕೇವಲ ಒಂದು ಘಟನೆ ಮಾತ್ರ ಸಿನಿಮಾ ಸೆಟ್ನಲ್ಲಿ ನಡೆದಿದೆ. ಸಿನಿಮಾ ಸೆಟ್ನಲ್ಲಿಯೇ ಎಲ್ಲವೂ ನಡೆದಿದೆ ಎನ್ನುವುದು ಸುಳ್ಳು. ಅಲ್ಲದೆ ಸಿನಿಮಾ ಬೃಹತ್ ಆಗಿದ್ದು, ಇಂಥಹಾ ಬೃಹತ್ ಸಿನಿಮಾಗಳನ್ನು ನಿರ್ಮಾಣ ಮಾಡುವಾಗ ಸೆಟ್ನಲ್ಲಿ ಅವಘಡಗಳು ನಡೆಯುವುದು ಸಾಮಾನ್ಯ. ಆದರೂ ನಾವು ಸಕಲ ಮುನ್ನೆಚ್ಚರಿಕೆ ತೆಗೆದುಕೊಂಡಿದ್ದೇವೆ’ ಎಂದಿದ್ದಾರೆ.
‘ನಾವು ಸಿನಿಮಾ ಚಿತ್ರೀಕರಣ ಪ್ರಾರಂಭ ಮಾಡುವ ಮುಂಚೆಯೇ ದೈವದ ಬಳಿ ಹೋಗಿದ್ದೆವು – ಪಂಜುರ್ಲಿ ಆಗಲೇ ನಮಗೆ ಎಚ್ಚರಿಕೆ ಕೊಟ್ಟಿತ್ತು. “ಚಿತ್ರೀಕರಣ ಸಂದರ್ಭದಲ್ಲಿ ಸಾಕಷ್ಟು ಅಡೆ-ತಡೆಗಳು ಬರುತ್ತವೆ. ಆದರೆ ನೀವು ನಿಲ್ಲಬೇಡಿ. ಇದು ಯಶಸ್ವಿ ಆಗುತ್ತದೆ” ಎಂದಿತ್ತು. ಅದರಂತೆ ನಾವು ನಡೆದುಕೊಳ್ಳುತ್ತಿದ್ದೇವೆ. ನಾವು ದೇವರಲ್ಲಿ, ದೈವದಲ್ಲಿ ನಂಬಿಕೆ ಇಡುವ ಜನ. ಪ್ರತಿದಿನವೂ ಪೂಜೆ ಮಾಡಿಯೇ ಚಿತ್ರೀಕರಣ ಪ್ರಾರಂಭಿಸುತ್ತೇವೆ. ದೈವದ ಆಶೀರ್ವಾದ ಪಡೆಯುತ್ತೇವೆ ಎಂದಿದ್ದಾರೆ ಚೆಲುವೇ ಗೌಡ.
ಸಿನಿಮಾದ ಚಿತ್ರೀಕರಣವನ್ನು ನಾವು ಬಹಳ ಕಠಿಣವಾದ ಪರಿಸ್ಥಿತಿಗಳಲ್ಲಿ ಮಾಡುತ್ತಿದ್ದೇವೆ. ಸಿನಿಮಾದ 80% ಚಿತ್ರೀಕರಣ ಕರಾವಳಿಯ ಕಾಡುಗಳು, ಕಾಡಂಚಿನ ಹಳ್ಳಿಗಳಲ್ಲಿ ಚಿತ್ರೀಕರಣಗೊಂಡಿದೆ. ಸಿನಿಮಾದ ಎಲ್ಲ ತಂತ್ರಜ್ಞರು ನಟರುಗಳು ಬೆಳಿಗ್ಗೆ 4ಕ್ಕೆ ಎದ್ದು ಪ್ರಯಾಣ ಮಾಡಿ ಸೆಟ್ ತಲುಪಬೇಕು. ಸಾಕಷ್ಟು ಇಂಟೀರಿಯರ್ನಲ್ಲಿ ಚಿತ್ರೀಕರಣ ನಡೆಯುತ್ತಿರುವ ಕಾರಣದಿಂದ ಚಿತ್ರೀಕರಣದಲ್ಲಿ ಸಾಕಷ್ಟು ಸವಾಲುಗಳು ಇದ್ದೇ ಇರುತ್ತವೆ. ಇವು ಸಹ ಕೆಲವು ಅವಘಡಗಳಿಗೆ ಕಾರಣವಾಗಿವೆ’ ಎಂದಿದ್ದಾರೆ.
ಚಿತ್ರೀಕರಣ ಆರಂಭವಾದಾಗ ಕಲಾವಿದರಿದ್ದ ಬಸ್ಸು ಅಪಘಾತಕ್ಕೆ ಈಡಾಗಿತ್ತು. ಅದಾದ ಬಳಿಕ ಕೆಲವು ಜೂನಿಯರ್ ನಟರು ಸೆಟ್ನಲ್ಲಿ ಪ್ರತಿಭಟನೆ ನಡೆಸಿದರು. ಬಳಿಕ ಬೆಂಕಿ ಅವಘಡವೊಂದು ಸೆಟ್ನಲ್ಲಿ ನಡೆಯಿತು. ಆದರೆ ಯಾರಿಗೂ ಸಮಸ್ಯೆ ಆಗಲಿಲ್ಲ. ಬಳಿಕ ಸಿನಿಮಾಕ್ಕೆ ಸಂಬಂಧಿಸಿದ ವ್ಯಕ್ತಿಯೊಬ್ಬ ನೀರಲ್ಲಿ ಮುಳುಗಿ ನಿಧನ ಹೊಂದಿದರು. ಸಿನಿಮಾದಲ್ಲಿ ನಟಿಸಿದ್ದ ಹಾಸ್ಯ ಕಲಾವಿದರೊಬ್ಬರು ಹೃದಯಾಘಾತದಿಂದ ನಿಧನ ಹೊಂದಿದರು. ಬಳಿಕ ರಿಷಬ್ ಶೆಟ್ಟಿಯೂ ಇದ್ದ ಬೋಟು ಚಿತ್ರೀಕರಣದ ವೇಳೆ ಮುಳುಗಿತು. ಆದರೆ ಯಾರಿಗೂ ಹಾನಿ ಆಗಲಿಲ್ಲ. ಕ್ಯಾಮೆರಾ ಇನ್ನಿತರೆ ವಸ್ತುಗಳಿಗೆ ಹಾನಿಯಾಗಿತ್ತು.