ಪುತ್ತೂರು: ತುಳು ಸಿನಿರಂಗದಲ್ಲಿ ಸದ್ದು ಮಾಡಿದ ಧರ್ಮ ದೈವ ಸಿನಿಮಾದ ಬಳಿಕ ಇದೀಗ ಧರ್ಮ ಚಾವಡಿ ತುಳು ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಜುಲೈ 11ರ ಶುಕ್ರವಾರ ದಕ್ಷಿಣ ಕನ್ನಡ ಹಾಗೂ ಉಡುಪಿ ಉಭಯ ಜಿಲ್ಲೆಗಳಲ್ಲಿ ಬಿಡುಗಡೆಯಾಗಲಿದೆ ಎಂದು ನಿರ್ದೇಶಕ ನಿತಿನ್ ರೈ ಕುಕ್ಕುವಳ್ಳಿ ನುಳಿಯಾಲು ಹೇಳಿದರು.
ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೃಷ್ಣವಾಣಿ ಪಿಚ್ಚರ್ಸ್ ಲಾಂಛನದಲ್ಲಿ ಸಿನಿಮಾ ತಯಾರಾಗಿದ್ದು, ಟೀಸರ್ ಈಗಾಗಲೇ ಪ್ರೇಕ್ಷಕರ ಮೆಚ್ಚುಗೆ ಗಳಿಸಿದೆ. ಮುಂಬೈಯಲ್ಲಿ ಸಿನಿಮಾದ ಪ್ರೀಮಿಯರ್ ಶೋ ವೀಕ್ಷಿಸಿದ ಪ್ರೇಕ್ಷಕರು ಸಿನಿಮಾವನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಸಿನಿಮಾ ಹೊಸ ನಿರೀಕ್ಷೆ ಹುಟ್ಟು ಹಾಕಿದೆ. ಸಾಕಷ್ಟು ಜನರು ಇದು ಧರ್ಮ ದೈವದ ಮುಂದುವರಿದ ಭಾಗ ಎಂದು ಭಾವಿಸಿದ್ದರು. ಆದರೆ ಇದು ಧರ್ಮ ದೈವಕ್ಕಿಂತ ಭಿನ್ನವಾದ ಸಿನಿಮಾ. ಟೀಸರ್ ಬೇರೆಯೇ ರೀತಿಯಲ್ಲಿದ್ದು ಬಹಳಷ್ಟು ಕುತೂಹಲ ಹುಟ್ಟುಹಾಕಿದೆ. ಹೊಸ ಕಲಾವಿದರು ಇಲ್ಲಿ ಅಭಿನಯಿಸಿದ್ದಾರೆ ಎಂದರು.
ಜಗದೀಶ್ ಅಮೀನ್ ನಡುಬೈಲು ಚಿತ್ರವನ್ನು ನಿರ್ಮಾಣ ಮಾಡಿದ್ದು, ಪ್ರಸಾದ್ ಕೆ. ಶೆಟ್ಟಿ ಸಂಗೀತ ನೀಡಿದ್ದಾರೆ. ಶ್ರೀನಾಥ್ ಪವಾರ್ ಸಂಕಲನ, ಅರುಣ್ ರೈ ಪುತ್ತೂರು ಛಾಯಾಗ್ರಹಣ ನೀಡಿದ್ದು, ರಜಾಕ್ ಪುತ್ತೂರು ಚಿತ್ರಕಥೆ ಬರೆದಿದ್ದಾರೆ ಎಂದರು.
ರಮೇಶ್ ರೈ ಕುಕ್ಕುವಳ್ಳಿ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದು, ರವಿ ಸ್ನೇಹಿತ್, ಚೇತನ್ ರೈ ಮಾಣಿ, ಸುರೇಶ್ ರೈ, ಪ್ರಕಾಶ್ ಧರ್ಮನಗರ, ದೀಪಕ್ ರೈ ಪಾಣಾಜೆ, ಸುಂದರ್ ರೈ ಮಂದಾರ, ರಂಜನ್ ಬೋಲೂರು, ಮನೀಶ್ ಶೆಟ್ಟಿ ಸಿದ್ಧಕಟ್ಟೆ, ರಕ್ಷಣ್ ಮಾಡೂರು, ರೂಪ ಡಿ. ಶೆಟ್ಟಿ, ಸವಿತಾ ಅಂಚನ್, ಧನ್ಯ ಪೂಜಾರಿ, ನೇಹಾ ಕೋಟ್ಯಾನ್, ನಿಶ್ಮಿತಾ ಶೆಟ್ಟಿ ಸೇರಿದಂತೆ ಅನೇಕ ಕಲಾವಿದರು ನಟಿಸಿದ್ದಾರೆ ಎಂದು ವಿವರಿಸಿದರು.
ದೇಲಂಪಾಡಿ, ಕರ್ನೂರು, ನೀಲೇಶ್ವರ ಮೊದಲಾದೆಡೆ ಚಿತ್ರೀಕರಣ ನಡೆದಿದ್ದು, 28 ದಿನದಲ್ಲಿ ಚಿತ್ರೀಕರಣ ಪೂರ್ಣಗೊಳಿಸಲಾಗಿದೆ. ಭಾಗವತ ಪಟ್ಲ ಸತೀಶ್ ಶೆಟ್ಟಿ ಅವರ ಹಾಡು ಸದಾ ಕಲಾ ನೆನಪುಳಿಯುವಂತೆ ಮಾಡುತ್ತದೆ ಎಂದರು.
ಚಿತ್ರದ ನಾಯಕಿ ನಟಿ ಧನ್ಯಾ ಪೂಜಾರಿ ಮಾತನಾಡಿ, ತಾನು ಪುತ್ತೂರಿನವಳೇ ಆಗಿದ್ದು, ಮೊದಲ ಬಾರಿಗೆ ತೆರೆ ಹಂಚಿಕೊಂಡಿದ್ದೇನೆ. ಧರ್ಮ ದೈವ ಸಿನಿಮಾ ನೋಡಿ ಅದರಿಂದ ಪ್ರೇರಿತಗೊಂಡು, ಸಿನಿಮಾದಲ್ಲಿ ಅಭಿನಯಿಸಬೇಕು ಎಂದು ಮುಂದೆ ಬಂದೆ. ಕಥೆ, ಸಿನಿಮಾ, ಧಾರ್ಮಿಕತೆ ಎಲ್ಲವನ್ನು ಒಳಗೊಂಡ ಫುಲ್ ಪ್ಯಾಕ್ ಸಿನಿಮಾ ಇದಾಗಿದ್ದು, ಬೆಂಬಲ ನೀಡುವಂತೆ ವಿನಂತಿಸಿಕೊಂಡರು.
ಪತ್ರಿಕಾಗೋಷ್ಠಿಯಲ್ಲಿ ರವಿ ಸ್ನೇಹಿತ್, ಅರುಣ್ ರೈ, ದಯಾನಂದ್ ರೈ ಬೆಟ್ಟಂಪಾಡಿ, ಬಾಲಕೃಷ್ಣ ಶೆಟ್ಟಿ ಕುಕ್ಕಾಡಿ ಉಪಸ್ಥಿತರಿದ್ದರು.