ಪುತ್ತೂರು: ಬಹುನಿರೀಕ್ಷಿತ ಸ್ಕೂಲ್ ಲೀಡರ್ ಸಿನಿಮಾ ಶುಕ್ರವಾರ ಪುತ್ತೂರು ಜಿಎಲ್ ವನ್ ಮಾಲ್’ನಲ್ಲಿರುವ ಭಾರತ್ ಟಾಕೀಸ್’ನಲ್ಲಿ ಬಿಡುಗಡೆಗೊಂಡಿತು.
ಕೆ. ಸತ್ಯೇಂದ್ರ ಪೈ ನಿರ್ಮಾಣದಲ್ಲಿ ಸನ್ ಮ್ಯಾಟ್ರಿಕ್ಸ್ ಬ್ಯಾನರ್‌ನಡಿ ತಯಾರಾಗಿರುವ `ಸ್ಕೂಲ್ ಲೀಡರ್’ ಕನ್ನಡ ಚಲನಚಿತ್ರ ಕರಾವಳಿಯಾದ್ಯಂತ ತೆರೆಕಂಡಿದ್ದು, ಮೊದಲ ದಿನವೇ ಪ್ರೇಕ್ಷಕರಿಂದ ಭಾರೀ ಪ್ರಶಂಸೆ ಗಿಟ್ಟಿಸಿಕೊಂಡಿತು.
ದೀಪ ಬೆಳಗಿಸಿ ಸಿನಿಮಾಕ್ಕೆ ಚಾಲನೆ ನೀಡಿ ಮಾತನಾಡಿದ ನಿವೃತ್ತ ಶಿಕ್ಷಕ, ಸಾಹಿತಿ ನಾರಾಯಣ ರೈ ಕುಕ್ಕುವಳ್ಳಿ, ಹೊಸ ಕಲ್ಪನೆಯ ಸಿನಿಮಾ ಸ್ಕೂಲ್ ಲೀಡರ್. ಇಲ್ಲಿ ಶಿಕ್ಷಣ ವ್ಯವಸ್ಥೆ ಹಾಗೂ ಮಕ್ಕಳ ನಾಯಕತ್ವ ವಿಷಯವನ್ನಿಟ್ಟುಕೊಂಡು ಸಿನಿಮಾ ಹೆಣೆಯಲಾಗಿದೆ. ಈ ಸಿನಿಮಾಕ್ಕೆ ಎಲ್ಲರ ಸಹಕಾರ ಅಗತ್ಯವಿದ್ದು, ಸ್ಕೂಲ್ ಲೀಡರ್ ಬೆಳಗಬೇಕು ಎಂದು ಹಾರೈಸಿದರು.
ಆರ್ಯಾಪು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಹೆಚ್ ಮಹಮ್ಮದ್ ಆಲಿ ಮಾತನಾಡಿ, ಪೆನ್ಸಿಲ್ ಬಾಕ್ಸ್ ಸಿನಿಮಾದ ನಿರ್ದೇಶಕ ರಝಾಕ್ ಪುತ್ತೂರು ಹಾಗೂ ನಟಿ ದೀಕ್ಷಾ ರೈ ಅವರು ಸ್ಕೂಲ್ ಲೀಡರ್ ಸಿನಿಮಾ ಕಟ್ಟಿದ್ದಾರೆ. ನಾಯಕತ್ವದ ಗುಣ ಎಷ್ಟು ಅಗತ್ಯ ಎನ್ನುವುದನ್ನು ಸಾಮಾಜಿಕ ಜೀವನದಲ್ಲಿ ಇರುವ ನಾನು ಅರಿತುಕೊಂಡಿದ್ದೇನೆ. ಇದರೊಂದಿಗೆ ಶೈಕ್ಷಣಿಕ ಬದುಕು, ಮಕ್ಕಳ ಮನೋವಿಕಾಸದ ಕುರಿತಾದ ಈ ಸಿನಿಮಾ ಯಶಸ್ವಿಯಾಗಲಿ ಎಂದರು.
ಸುದಾನ ವಸತಿಯುತ ಶಾಲಾ ಸಂಚಾಲಕ ರೆ. ವಿಜಯ ಹಾರ್ವಿನ್ ಮಾತನಾಡಿ, ಶಿಕ್ಷಣ ವ್ಯವಸ್ಥೆಯ ಲೋಪ, ಕುಂದುಕೊರತೆ ಹಾಗೂ ಅದನ್ನು ಸರಿಪಡಿಸುವ ವಿಚಾರ ಇಂದಿನ ಬಹುದೊಡ್ಡ ಸವಾಲು. ಅದಕ್ಕೆ ಉತ್ತರವಾಗಿ ಸ್ಕೂಲ್ ಲೀಡರ್ ನಿಲ್ಲುತ್ತಾನೆ. ವಿದ್ಯಾರ್ಥಿಗಳ, ಶಿಕ್ಷಕರು, ಪೋಷಕರು, ಸಮಾಜ ಎಲ್ಲರೂ ಶೈಕ್ಷಣಿಕ ವ್ಯವಸ್ಥೆಯನ್ನು ಮುಂದಿನ ಜನಾಂಗಕ್ಕೆ ಕೊಂಡೊಯ್ಯುವ ಬಗೆಯನ್ನು ಈ ಚಿತ್ರ ತೋರಿಸಿಕೊಟ್ಟಿದೆ. ಸಿನಿಮಾ ಯಶಸ್ವಿಯಾಗಲಿ ಎಂದು ಹಾರೈಸಿದರು.
ದೈಹಿಕ ಶಿಕ್ಷಣ ಶಿಕ್ಷಕ ಮಾಮಚ್ಚನ್ ಮಾತನಾಡಿ, ಶೈಕ್ಷಣಿಕ ಕ್ರಾಂತಿ ಮಾಡುವ ಉತ್ತಮ ಚಲನಚಿತ್ರವಾಗಿ ಸ್ಕೂಲ್ ಲೀಡರ್ ಮೂಡಿ ಬರಲಿ. ಕಾಲೇಜು, ಪ್ರಾಥಮಿಕ, ಪ್ರೌಢಶಾಲೆಗಳ ವಿದ್ಯಾರ್ಥಿಗಳು ಈ ಚಲನ ಚಿತ್ರವನ್ನು ನೋಡುವಂತಾಗಲಿ ಎಂದು ಹಾರೈಸಿದರು.
ಚಲನಚಿತ್ರ ನಟಿ ಡಾ. ಅನನ್ಯಲಕ್ಷ್ಮೀ ಮಾತನಾಡಿ, ಸ್ಕೂಲ್ ಲೀಡರ್ ನಮ್ಮ ಬದುಕಿಗೆ ಹತ್ತಿರವಾದ ಚಿತ್ರ. ಮಕ್ಕಳು, ಹೆತ್ತವರು ಮಾತ್ರವಲ್ಲದೆ ಶಿಕ್ಷಣ ಅಧಿಕಾರಿಗಳು, ಪ್ರತಿ ರಾಜಕಾರಣಿಗಳು ಈ ಚಿತ್ರವನ್ನು ನೋಡಬೇಕು. ಚಿತ್ರದ ಮೂಲಕ ಮಕ್ಕಳ ವ್ಯವಸ್ಥಿತ ಜೀವನ ಬದಲಾಯಿಸುವ ಒಂದು ಗುರಿಯನ್ನು ಇಟ್ಟುಕೊಂಡು ಈ ಚಿತ್ರ ಮಾಡಲಾಗಿದೆ ಎಂದರು.
ಉದ್ಯಮಿ ದಯಾನಂದ ರೈ ಬೆಟ್ಟಂಪಾಡಿ ಮಾತನಾಡಿ, ಪೆನ್ಸಿಲ್ ಬಾಕ್ಸ್ ಚಲನಚಿತ್ರವನ್ನು ಮೀರಿಸುವಂತಹ ಪ್ರೊಡಕ್ಷನ್ ಸ್ಕೂಲ್ ಲೀಡರ್’ನಲ್ಲಿದೆ ಎಂದರು.
ಚಿತ್ರದ ನಾಯಕಿ ನಟಿ ದೀಕ್ಷಾ ಡಿ ರೈ, ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಪದ್ಮನಾಭ ರೈ, ಸಂಗೀತ ನಿರ್ದೇಶಕ ಪ್ರಸಾದ್ ಎ. ಶೆಟ್ಟಿ, ಭಾರತ್ ಸಿನೇಮಾಸ್‌ನ ಮ್ಯಾನೇಜರ್ ಜಯರಾಮ್, ಆಮಂತ್ರಣ ಪರಿವಾಳ ಅಳದಂಗಡಿಯ ವಿಜಯ ಕುಮಾರ್ ಜೈನ್, ಉದ್ಯಮಿ ನಾಗೇಶ್ ರೈ ಬೆಟ್ಟಂಪಾಡಿ, ಧರ್ಮಚಾವಡಿ ಇದರ ನಾಯಕ ನಟ ರವಿ ಸಾಲಿಯಾನ್, ಧರ್ಮದೈವ ಚಿತ್ರದ ನಿರ್ದೇಶಕ ನಿತಿನ್ ರೈ ಕುಕ್ಕುವಳ್ಳಿ, ಸಚಿನ್ ಉಪಸ್ಥಿತರಿದ್ದರು.
ಪುತ್ತೂರಿನ ಪದ್ಮರಾಜ್ ಕಾರ್ಯಕ್ರಮ ನಿರೂಪಿಸಿದರು. ಚಿತ್ರದ ಹಂಚಿಕೆದಾರ ಬಾಲಕೃಷ್ಣ ಶೆಟ್ಟಿ ಕುಕ್ಕಾಡಿ ಸಹಕರಿಸಿದರು.