Gl harusha
ಸಿನೇಮಾ

ಮಲಯಾಳಂ – ತುಳುವಿನ ಸ್ಪರ್ಶವಿರುವ ಕೋಸ್ಟಲ್ ವುಡ್’ನ ‘ಮೀರಾ’ | ನಿರ್ಮಾಪಕ, ನಿರ್ದೇಶಕ, ನಾಯಕ, ನಾಯಕಿ ಎಲ್ಲರೂ ಹೊಸಬರೇ!!

ತುಳು ರಂಗ ಭೂಮಿಯ ಅಪ್ಪ - ತುಳು ಸಿನಿಮಾ ರಂಗದ ಮಗಳು. ಇವರೆರಡರ ನಡುವಿನ ಬಾಂಧವ್ಯ, ರಂಗಭೂಮಿ ಮೇಲಿನ ಪ್ರೀತಿ ಹಾಗೂ ಮೀರಾಳ ಬದುಕು... ಇವಿಷ್ಟು ಮೀರಾ ತುಳು ಸಿನಿಮಾದ ಒಟ್ಟಂದ.

ಈ ಸುದ್ದಿಯನ್ನು ಶೇರ್ ಮಾಡಿ

ನಾಟಕ ರಂಗದ ಹಿನ್ನೆಲೆ. ಸಿನಿಮಾ ರಂಗವೇ ಜೀವನ. ಇವೆರಡರ ನಡುವಿನ ಬದುಕೇ ಮೀರಾ.

srk ladders
Pashupathi
Muliya

ಶುಕ್ರವಾರ ಮೀರಾ ತುಳು ಸಿನಿಮಾ ತೆರೆ ಕಂಡಿದೆ. ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆಯೂ ವ್ಯಕ್ತವಾಗಿದೆ.

ತುಳು ರಂಗ ಭೂಮಿಯ ಅಪ್ಪ – ತುಳು ಸಿನಿಮಾ ರಂಗದ ಮಗಳು. ಇವರೆರಡರ ನಡುವಿನ ಬಾಂಧವ್ಯ, ರಂಗಭೂಮಿ ಮೇಲಿನ ಪ್ರೀತಿ ಹಾಗೂ ಮೀರಾಳ ಬದುಕು… ಇವಿಷ್ಟು ಮೀರಾ ತುಳು ಸಿನಿಮಾದ ಒಟ್ಟಂದ.

ಪ್ರಥಮಾರ್ಧದಲ್ಲಿ ಮಲಯಾಳಂ ಸಿನಿಮಾದ ಹೋಲಿಕೆ, ದ್ವಿತಿಯಾರ್ಧದಲ್ಲಿ ತುಳು ಸಿನಿಮಾದ ಸ್ಪರ್ಶ‌. ಇವೆರಡನ್ನೂ ಹದವಾಗಿ ಬೆರೆಸಿ ಸಿನಿಮಾ ಮಾಡಿರುವುದನ್ನು  ಇಲ್ಲಿ ಕಾಣಬಹುದು.

ನಿರ್ಮಾಪಕ, ನಿರ್ದೇಶಕರ ಮೊದಲ ಪ್ರಯತ್ನ ಮೀರಾ ಸಿನಿಮಾ. ಇಲ್ಲಿ ನಿರ್ದೇಶಕ ಅಶ್ವತ್ಥ್ ಅವರು ಸಿನಿಮಾದ ಹೀರೊ ಆಗಿಯೂ ಕಾಣಿಸಿಕೊಳ್ಳುತ್ತಾರೆ. ಇದು ನಿರ್ದೆಶಕನ ಚಾಕಚಕ್ಯತೆ ಎಂದು ಬಣ್ಣಿಸುವ ಬದಲು, ಎರಡು ದೋಣಿಗೆ ಕಾಲಿಟ್ಟ ಪ್ರಯತ್ನದಂತಿದೆ. ಮೊದಲ ಪ್ರಯತ್ನವಾದದ್ದರಿಂದ ನಿರ್ದೇಶನ ಅಥವಾ ಪಾತ್ರ ಎರಡರಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದರೆ ಉತ್ತಮವಿತ್ತು. ನಾಯಕ ನಟ ಹಾಗೂ ನಿರ್ದೇಶನ ಎರಡನ್ನೂ ಆಯ್ಕೆ ಮಾಡಿಕೊಂಡಿರುವುದರಿಂದ, ಸಿನಿಮಾ ಒಂದಷ್ಟು ಬಿಗು ಕಳೆದುಕೊಂಡಿದೆ ಎಂದು ಹೇಳಿದರೂ ತಪ್ಪಾಗದು.

ಉತ್ತಮ ಮತ್ತು ವಿಭಿನ್ನ ಕಥೆಯನ್ನು ಆಯ್ಕೆ ಮಾಡಿಕೊಂಡಿರುವುದು ಸಿನಿಮಾಕ್ಕೆ ಪ್ಲಸ್. ಚಿನ್ನದಂತಹ ನಿರ್ಮಾಪಕ, ತುಳು ಸಿನಿಮಾ ಕಲಾವಿದರ ಸಂಘದ ಅಧ್ಯಕ್ಷ ಲಂಚುಲಾಲ್ ಸಿನಿಮಾದಲ್ಲಿ ನಿರ್ಮಾಪಕನ ಪಾತ್ರವನ್ನೇ ನಿಭಾಯಿಸಿದ್ದಾರೆ. ಮಧ್ಯಂತರಕ್ಕೆ ಮೊದಲು ಪ್ರವೇಶ ಪಡೆಯುವ ಅರವಿಂದ್ ಬೋಳಾರ್ ಅವರು ನಿರ್ಮಾಪಕರೋರ್ವರಿಗೆ ಆವಾಜ್ ಹಾಕುವ ಸೀನ್‌ನಲ್ಲಿ ಬಂದು ಹೋಗುತ್ತಾರೆ.

ಇನ್ನು, ಮೀರಾ ಪಾತ್ರಧಾರಿಯಾಗಿ ಕಾಣಿಸಿಕೊಳ್ಳುವ ಬಾಲ ಪ್ರತಿಭೆ ಹಾಗೂ ಹೀರೊಯಿನ್ ಇಬ್ಬರದ್ದು ಮನೋಜ್ಞ ಅಭಿನಯ.

ನಾಟಕವೇ ಜೀವನ ಎಂದು ಬದುಕುತ್ತಿರುವ ತಂದೆ ಅಪಘಾತದಲ್ಲಿ ದುರ್ಮರಣಕ್ಕೀಡಾಗುತ್ತಾರೆ. ತಂದೆಯನ್ನೇ ಅತೀವ ಪ್ರೀತಿಸುವ ಮಗಳು ಮೀರಾ, ಮುಂದೆ ರಂಗಭೂಮಿಯೇ ಜೀವನ ಎಂದು ಮನೆ ತೊರೆಯುತ್ತಾಳೆ. ಕೆಲಸದ ಕಿರಿಕಿರಿಯಿಂದಾಗಿ ಅದನ್ನೂ ಕೈಬಿಡುತ್ತಾಳೆ. ಧೈರ್ಯಗೆಡದ ಆಕೆ, ಸಿನಿಮಾ ರಂಗದಲ್ಲಿ ಅವಕಾಶಕ್ಕಾಗಿ ಓಡಾಡುತ್ತಾಳೆ. ನಿರ್ಮಾಪಕರಿಂದ “ಸಿನಿಮಾ ರಂಗದ ಅಡ್ಜಸ್ಮೆಂಟ್”, “ಹಣಕ್ಕಷ್ಟೇ ಬೆಲೆ” ಎಂಬ ನೀತಿ ಆಕೆಯ ಮುಂದೆಯೂ ಬರುತ್ತದೆ. ಅದನ್ನು ತಿರಸ್ಕರಿಸಿ ಮುಂದೆ ಹೋಗುವಾಗ ಎದುರಾಗುವ ಸವಾಲುಗಳನ್ನು ಆಕೆ ಹೇಗೆ ಎದುರಿಸುತ್ತಾಳೆ? ಹೇಗೆ ಜೀವನದಲ್ಲಿ ಯಶ ಕಾಣುತ್ತಾಳೆ ಎನ್ನುವುದೇ ಸಿನಿಮಾದ ತಿರುಳು. ಇದರ ನಡುವಿನಲ್ಲಿ ಇನ್‌ಸ್ಟಾಗ್ರಾಂನಿಂದ ಯುವಜನತೆ ಮೇಲಾಗುವ ದೌರ್ಜನ್ಯ ಎಂಬ ವಿಷಯ ಪ್ರೇಕ್ಷಕರಿಗೆ ಸಂದೇಶವಾಗಿ ನೀಡಲಾಗಿದೆ.

ಒಟ್ಟಿನಲ್ಲಿ ಕಥೆಯ ಬಗ್ಗೆ ತಕರಾರಿಲ್ಲ. ನಡುವಿನಲ್ಲಿ ಒಂದಷ್ಟು ಪ್ರಶ್ನೆಗಳನ್ನು ನಿರ್ದೇಶಕರು ಹಾಗೆಯೇ ಬಿಟ್ಟು ಹೋಗಿದ್ದಾರೆ. ಮೀರಾ ಮನೆ ಬಿಟ್ಟು ಹೋದ ಬಳಿಕ ಆಕೆಯನ್ನು ಹುಡುಕುವ ಪ್ರಯತ್ನವನ್ನು ತಾಯಿ ಹಾಗೂ ಮೀರಾಳ ಬಾವ (ಸೋದರ ಮಾವನ ಮಗ) ಮಾಡದೇ ಇರುವುದು ವಿಪರ್ಯಾಸ. ಯುವತಿಯೋರ್ವಳನ್ನು ದೌಹಿಕವಾಗಿ ಬಳಸಿಕೊಂಡು, ಬ್ಲ್ಯಾಕ್ ಮೇಲ್ ಮಾಡುವ ಸಂದರ್ಭ, ಮೀರಾಳೇ ಆ ಹಣವನ್ನು ಹಿಡಿದುಕೊಂಡು ಹೋಗುವುದು ಬಾಲಿಶ ಎನಿಸುತ್ತದೆ. ನಡುನಡುವಿನಲ್ಲಿ ಸಿನಿಮಾ ಒಂದಷ್ಟು ಎಳೆದಂತೆ ಭಾಸವಾಗುತ್ತದೆ. ಪ್ರಮುಖವಾಗಿ, ಇಡೀಯ ಸಿನಿಮಾದ ತಿರುಳೇ ಮೀರಾಳ ಬದುಕು. ಆದರೆ ಮೀರಾಳ ಬದುಕನ್ನು ಫೋಕಸ್ ಮಾಡುವ ಕೆಲಸದಲ್ಲಿ ಎಡವಿದ್ದಾರೆ ಎನ್ನುವುದು ಸ್ಪಷ್ಟ. ಬದಲಾಗಿ, ಸಿನಿಮಾ ಪ್ರೊಡ್ಯೂಸರ್‌ಗಳು ನಡೆಸುವ ದೌರ್ಜನ್ಯ ಅಥವಾ ಸಿನಿಮಾ ರಂಗದ ಜಾಢ್ಯಗಳೇ ಹೈಲೈಟ್ ಆಗುತ್ತವೆ.


ಈ ಸುದ್ದಿಯನ್ನು ಶೇರ್ ಮಾಡಿ

Related Posts