Friday, November 22
Share News

ಬೆಳ್ತಂಗಡಿಯ ಐದು ಬಾರಿಯ ಶಾಸಕ ಕೆ.ವಸಂತ ಬಂಗೇರ (79ವ) ಮೇ 8ರಂದು ಸಂಜೆ 4 ಗಂಟೆಗೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು.

ಕೇದೆ ಸುಬ್ಬ ಪೂಜಾರಿ – ದೇವಕಿ ದಂಪತಿಯ ಪ್ರಥಮ ಪುತ್ರನಾಗಿ 1946ರ ಜನವರಿ 15ರಂದು ಜನಿಸಿದ್ದ ಅವರ ಆರೋಗ್ಯ ಇತ್ತೀಚೆಗೆ ತೀವ್ರವಾಗಿ ಹದಗೆಟ್ಟಿದ್ದು, ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಇದೀಗ ಅವರು ಕೊನೆಯುಸಿರೆಳೆದಿದ್ದು, ಮೇ 9ರಂದು ಮುಂಜಾನೆ ಪಾರ್ಥಿವ ಶರೀರ ಬೆಳ್ತಂಗಡಿಗೆ ಆಗಮಿಸುವ ನಿರೀಕ್ಷೆ ಇದೆ. ನಂತರ ಸಾರ್ವಜನಿಕರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.

1972 ರಲ್ಲಿ ಕುವೆಟ್ಟು ಗ್ರಾಮ ಪಂಚಾಯತ್‌ನ ಚುನಾವಣೆಯಲ್ಲಿ ಅವಿರೋಧವಾಗಿ ಸದಸ್ಯರಾಗಿ ಆಯ್ಕೆಯಾಗಿ ನಂತರ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. 1983 ರಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಚುನಾಯಿತರಾಗಿ ಪ್ರಥಮ ಬಾರಿಗೆ ವಿಧಾನ ಸಭೆಯನ್ನು ಪ್ರವೇಶಿಸಿದ್ದರು. ಬಿಜೆಪಿಯ ಯಡಿಯೂರಪ್ಪ ಮತ್ತು ವಸಂತ ಬಂಗೇರ ಮಾತ್ರ ಬಿಜೆಪಿಯಿಂದ 1983ರಲ್ಲಿ ಆಯ್ಕೆಯಾಗಿದ್ದರು.

ಬಂಗೇರರು ದಕ್ಷಿಣ ಕನ್ನಡದಲ್ಲಿ ಬಿಜೆಪಿ , ಜೆಡಿಎಸ್, ಕಾಂಗ್ರೇಸ್ ಮೂರು ಪಕ್ಷದಿಂದ ಶಾಸಕರಾದ ಏಕೈಕ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ನೇರ ನಡೆ ನುಡಿಯ ಬಂಗೇರರು ದಕ್ಷಿಣ ಕನ್ನಡ ಕಂಡಂತಹ ಅಪರೂಪದ ರಾಜಕಾರಣಿ.


Share News

Comments are closed.

Exit mobile version