ವಾಟ್ಸಪ್ ಗ್ರೂಪ್ ನೋಡಿಕೊಂಡು ದಂಪತಿಗಳು ಮನೆಯಲ್ಲಿಯೇ ಹೆರಿಗೆ ನಡೆಸಿರುವಂತಹ ಶಾಕಿಂಗ್ ಘಟನೆಯೊಂದು ತಮಿಳುನಾಡಿನಲ್ಲಿ ಬೆಳಕಿಗೆ ಬಂದಿದೆ.
ಕುಂದ್ರತ್ತೂರಿನಲ್ಲಿ ಇಂತಹ ಒಂದು ವಿಲಕ್ಷಣ ಘಟನೆ ನಡೆದಿದೆ. ಈ ಆಘಾತಕಾರಿ ಘಟನೆ ನವೆಂಬರ್ 17 ರಂದು ನಡೆದಿದ್ದು ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಪ್ರಾರಂಭಿಸಿದ್ದಾರೆ.
ಗರ್ಭಾವಸ್ಥೆಯಲ್ಲಿದ್ದ 32 ವರ್ಷದ ಮಹಿಳೆ ಸುಕನ್ಯಾ ವೈದ್ಯಕೀಯ ತಪಾಸಣೆಗಳನ್ನು ಸಂಪೂರ್ಣವಾಗಿ ತ್ಯಜಿಸಲು ನಿರ್ಧರಿಸಿದ್ದಳು. ನವೆಂಬರ್ 17 ರಂದು ಸುಕನ್ಯಾಗೆ ಮನೆಯಲ್ಲಿ ಅನಿರೀಕ್ಷಿತವಾಗಿ ಹೆರಿಗೆ ನೋವು ಕಾಣಿಸಿಕೊಂಡಿದೆ. ಹೀಗಾಗಿ ಆಕೆ ತನ್ನ ಪತಿ 36 ವರ್ಷ ವಯಸ್ಸಿನ ಅರ್ಥ್‌ಮೂವರ್ ಸಹಾಯದಿಂದ ಯಾವುದೇ ವೈದ್ಯಕೀಯ ಸಿಬ್ಬಂದಿಯ ನೆರವಿಲ್ಲದೇ ವಾಟ್ಸಪ್‌ನ “ಹೋಮ್ ಬರ್ತ್ ಎಕ್ಸ್‌ಪೀರಿಯನ್ಸ್” ಎಂಬ ಗುಂಪಿನಲ್ಲಿ ಹಂಚಿಕೊಂಡ ಸಲಹೆಯನ್ನು ಅವಲಂಬಿಸಿ ಹೆರಿಗೆಯನ್ನು ನಡೆಸಿದ್ದಾರೆ.
ಅವರು ವಾಟ್ಸಪ್ ಗ್ರೂಪ್‌ನಲ್ಲಿ ಬಂದ ಹಂತ-ಹಂತದ ಮಾರ್ಗದರ್ಶನವನ್ನು ಅನುಸರಿಸಿದ್ದಾರೆ. ಹೆರಿಗೆ ಪ್ರಕ್ರಿಯೆಯಲ್ಲಿ ಅವರ ಪತ್ನಿಗೆ ಸಹಾಯ ಮಾಡಲು ಗುಂಪಿನ ಸದಸ್ಯರು ಒದಗಿಸಿದ ಸೂಚನೆಗಳು ಮತ್ತು ವಿವರಣೆಗಳನ್ನು ಬಳಸಿದ್ದಾರೆ ಎಂದು ವರದಿಯಾಗಿದೆ. ಮಗುವಿನ ಜನನದ ಬಳಿಕ ದಂಪತಿಗಳು ನವಜಾತ ಶಿಶುವಿನೊಂದಿಗೆ ತಮ್ಮ ಚಿತ್ರವನ್ನು ಹಂಚಿಕೊಂಡಿದ್ದಾರೆ. ಬಳಿಕ ಈ ವಿಚಾರ ಬೆಳಕಿಗೆ ಬಂದಿದ್ದು, ಇದು ಸ್ಥಳೀಯ ಆರೋಗ್ಯ ಅಧಿಕಾರಿಗಳ ಗಮನ ಸೆಳೆಯಿತು. ನಂತರ ಅವರು ತನಿಖೆ ನಡೆಸುವಂತೆ ಸೂಚನೆ ನೀಡಿದ್ದಾರೆ.
ಯಾವುದೇ ವೈದ್ಯಕೀಯ ಪರಿಶೀಲನೆ ಇಲ್ಲದೇ ಅಪಾಯಕಾರಿಯಾಗಿ ಹೆರಿಗೆ ನಡೆಸಿರುವ ಬಗ್ಗೆ ಅಧಿಕಾರಿಗಳು ಈಗ ಗಂಭೀರ ಕಳವಳ ವ್ಯಕ್ತಪಡಿಸಿದ್ದಾರೆ. ಹೆರಿಗೆಯ ನಂತರ, ಸುರಕ್ಷತೆಯ ಉಲ್ಲಂಘನೆಯನ್ನು ಉಲ್ಲೇಖಿಸಿ ಸ್ಥಳೀಯ ಸಾರ್ವಜನಿಕ ಆರೋಗ್ಯ ಅಧಿಕಾರಿಯಿಂದ ದೂರು ದಾಖಲಿಸಲಾಗಿದೆ. ಈ ಘಟನೆಗೆ ವಾಟ್ಸಪ್ ಗ್ರೂಪ್ ಪ್ರಮುಖ ಪಾತ್ರ ವಹಿಸಿದೆ ಎಂದು ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ.