ಉಳ್ಳಾಲ:ಎರಡು ಕಾರುಗಳ ನಡುವೆ ಸಂಭವಿಸಿದ ಅಪಘಾತದ ವಿಚಾರವಾಗಿ ಚಾಲಕರಿಬ್ಬರ ಮಧ್ಯೆ ಹೊಯ್ ಕೈ ನಡೆದಿರುವ ಘಟನೆ ಬುಧವಾರ ರಾತ್ರಿ ತೊಕ್ಕೊಟ್ಟು ಮೇಲ್ಲೇತುವೆಯಲ್ಲಿ ಸಂಭವಿಸಿದೆ. ಈ ಪ್ರಕರಣವು ಉಳ್ಳಾಲ ಠಾಣಾ ಮೆಟ್ಟಿಲೇರಿದ್ದು, ಮಾತುಕತೆಗೆ ತೆರಳಿದ್ದ ಸಂಘ ಪರಿವಾರದ ಮುಖಂಡನಿಗೆ ಹಲ್ಲೆಗೈದ ಆರೋಪದಲ್ಲಿ ವ್ಯಕ್ತಿಯೋರ್ವನನ್ನು ಪೊಲೀಸರು ಬಂಧಿಸಿದ್ದಾರೆ.
ಅರ್ಜುನ್ ಮಾಡೂರು ಹಲ್ಲೆಗೊಳಗಾದವರು. ಕಾಸರಗೋಡು ಜಿಲ್ಲೆಯ ಹೊಸಂಗಡಿ, ಕಡಂಬಾರು ಸರಕಾರಿ ಶಾಲೆಯ ಬಳಿಯ ನಿವಾಸಿ ಮುಹಮ್ಮದ್ ಆಸಿಫ್(33) ಹಲ್ಲೆ ಆರೋಪಿ. ಈತನನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಘಟನೆ ವಿವರ: ತೊಕ್ಕೊಟ್ಟು ಮೇಲ್ಲೇತುವೆಯಲ್ಲಿ ಬುಧವಾರ ರಾತ್ರಿ 9:45ರ ವೇಳೆ ಕುಂಪಲದ ಶರತ್ ಮತ್ತು ಕೇರಳದ ಇಬ್ರಾಹೀಂ ಖಲೀಲ್ ಎಂಬವರ ಕಾರುಗಳ ಮಧ್ಯೆ ಅಪಘಾತ ಉಂಟಾಗಿತ್ತು. ಈ ವೇಳೆ ವಾಗ್ವಾದ ನಡೆದು ಖಲೀಲ್ ಮತ್ತು ಆತನ ಸಹೋದರ ಆಸಿಫ್ ಸೇರಿ ಶರತ್ ಗೆ ಕೈಯಲ್ಲಿ ಹಲ್ಲೆಗೈದಿದ್ದಾರೆಂದು ಆರೋಪಿಸಲಾಗಿದ್ದು, ಈ ಪ್ರಕರಣವು ಉಳ್ಳಾಲ ಪೊಲೀಸ್ ಠಾಣೆಯ ಮೆಟ್ಟಿಲೇರಿತ್ತು. ವಿಷಯ ತಿಳಿದು ತಡರಾತ್ರಿ ಶರತ್ ರ ಪರಿಚಯಸ್ಥ ಅರ್ಜುನ್ ಮಾಡೂರು ಉಳ್ಳಾಲ ಪೊಲೀಸ್ ಠಾಣೆಗೆ ತೆರಳಿದ್ದಾರೆ. ಅಲ್ಲಿ ಕಾರು ಚಾಲಕರಾದ ಶರತ್, ಖಲೀಲ್ ಜತೆ ಮಾತುಕತೆ ನಡೆಸುತ್ತಿದ್ದ ವೇಳೆ ಅರ್ಜುನ್ ಮೇಲೆ ಆರೋಪಿ ಆಸಿಫ್ ಹಲ್ಲೆ ನಡೆಸಿದ್ದಾಗಿ ಆರೋಪಿಸಲಾಗಿದೆ. ಈ ಸಂಬಂಧ ಆಸಿಫ್ ನನ್ನು ಪೊಲೀಸರು ಬಂಧಿಸಿದ್ದಾರೆ.
ಹಲ್ಲೆಗೊಳಗಾದ ಅರ್ಜುನ್ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು, ಆಸಿಫ್ ವಿರುದ್ಧ ಉಳ್ಳಾಲ ಠಾಣೆಯಲ್ಲಿ ದೂರು ದಾಖಲಾಗಿದೆ.
ವಿಚಾರ ತಿಳಿಯುತ್ತಿದ್ದಂತೆ ಮಧ್ಯರಾತ್ರಿ ಠಾಣೆಯ ಮುಂದೆ ಜಮಾಯಿಸಿದ ಸಂಘ ಪರಿವಾರದ ಕಾರ್ಯಕರ್ತರು ಆರೋಪಿಯನ್ನು ತಮ್ಮ ಕೈಗೆ ಒಪ್ಪಿಸುವಂತೆ ಒತ್ತಾಯಿಸಿದರು. ಸ್ಥಳಕ್ಕೆ ಭೇಟಿ ನೀಡಿದ ಡಿಸಿಪಿ ಸಿದ್ದಾರ್ಥ್ ಗೋಯಲ್, ಎಸಿಪಿ ಧನ್ಯಾ ನಾಯಕ್ ಬಿಗಿ ಬಂದೋಬಸ್ತ್ ಕಲ್ಪಿಸಿ ಪರಿಸ್ಥಿತಿ ನಿಯಂತ್ರಿಸಿದರು.