All Newsರಾಜ್ಯ ವಾರ್ತೆಸ್ಥಳೀಯ

ವಿಷದ ಬಾಟಲಿ ಜತೆ ಬ್ಯಾಂಕಿಗೆ ಬಂದ ರೈತ..! ಬರ ಪರಿಹಾರ ಮೊತ್ತ ಸಾಲಕ್ಕೆ ಜಮೆ!

ಈ ಸುದ್ದಿಯನ್ನು ಶೇರ್ ಮಾಡಿ

ಕೆನರಾ ಬ್ಯಾಂಕ್ ಮ್ಯಾನೇಜರ್ ಬರ ಪರಿಹಾರದ ಹಣವನ್ನು ಸಾಲದ ಖಾತೆಗೆ ಜಮೆ ಮಾಡಿಕೊಳ್ಳಲು ಮುಂದಾಗಿದ್ದರಿಂದ ರೊಚ್ಚಿಗೆದ್ದ ರೈತ ಯಲ್ಲಪ್ಪ ಅಡರಕಟ್ಟಿ (67) ವಿಷದ ಬಾಟಲಿ ಹಿಡಿದು ಕೆನರಾ ಬ್ಯಾಂಕ್ ಶಾಖೆಗೆ ಆಗಮಿಸಿ ವಿಷ ಸೇವನೆಗೆ ಮುಂದಾದ ಘಟನೆ ಬುಧವಾರ ಮಧ್ಯಾಹ್ನ ನಡೆಯಿತು.

ಗದಗದ ರೈತ ಯಲ್ಲಪ್ಪ ಅಡರಕಟ್ಟಿ ಖಾತೆಗೆ ಬರ ಪರಿಹಾರದ ಹಣ ₹15 ಸಾವಿರ ಜಮಾ ಆಗಿದೆ. ಆದರೆ ಯಲ್ಲಪ್ಪ ಪಟ್ಟಣದ ಕೆನರಾ ಬ್ಯಾಂಕ್‌ಗೆ ಹೋಗಿ ತನ್ನ ಖಾತೆಯಲ್ಲಿ ಜಮೆಯಾದ ಬೆಳೆ ಪರಿಹಾರದ ಹಣ ತೆಗೆಯಲು ಹೋದರೆ ಬ್ಯಾಂಕಿನ ಮ್ಯಾನೇಜರ್‌ ನಿರಾಕರಿಸುತ್ತಿದ್ದಾರಲ್ಲದೇ ನಿಮ್ಮ ಸಾಲದ ಹಣಕ್ಕೆ ಬರ ಪರಿಹಾರ ಜಮೆ ಮಾಡಿಕೊಳ್ಳುತ್ತೇವೆ, ನಿಮಗೆ ಹಣ ನೀಡುವುದಿಲ್ಲವೆಂದು ಹೇಳಿ ಕಳಿಸಿದ್ದಾರೆ.

SRK Ladders

ಮುಂಗಾರು ಹಂಗಾಮಿಗೆ ಬೀಜ, ಗೊಬ್ಬರ ಖರೀದಿಗೆ ಹಣದ ಅಗತ್ಯವಿದೆ. ಅದನ್ನು ಸಾಲಕ್ಕೆ ಜಮೆ ಮಾಡಿಕೊಳ್ಳಬಾರದು. ಸರ್ಕಾರವೂ ಬರ ಪರಿಹಾರದ ಹಣ ಸಾಲಕ್ಕೆ ಜಮಾ ಮಾಡಿಕೊಳ್ಳಬಾರದು ಎಂದು ಸೂಚಿಸಿದೆ ಎಂದು ಹೇಳಿದರೂ ಮ್ಯಾನೇಜರ್‌ ಕೇಳುತ್ತಿರಲಿಲ್ಲ. ನಾಲ್ಕಾರು ಬಾರಿ ಬ್ಯಾಂಕಿಗೆ ರೈತ ಯಲ್ಲಪ್ಪ ಅಡರಕಟ್ಟಿ ಅಲೆದಾಡಿದ್ದಾರೆ. ಇದರಿಂದ ಬೇಸತ್ತ ರೈತ ಯಲ್ಲಪ್ಪ ಇವತ್ತು ಪರಿಹಾರದ ಹಣ ನೀಡದಿದ್ದಲ್ಲಿ ಬ್ಯಾಂಕಿನಲ್ಲಿಯೇ ವಿಷ ಸೇವಿಸುತ್ತೇನೆ ಎಂದು ವಿಷದ ಬಾಟಲಿಯೊಂದಿಗೆ ಬ್ಯಾಂಕಿಗೆ ತೆರಳಿದ್ದಾರೆ. ವಿಷಯ ತಿಳಿದು ಬ್ಯಾಂಕಿಗೆ ತೆರಳಿದ ಪತ್ರಕರ್ತರ ಎದುರೂ ಸಹ ಕಣ್ಣೀರು ಸುರಿಸಿ ತನ್ನ ಗೋ‍ಳು ಹೇಳಿಕೊಂಡಿದ್ದಾರೆ. ಬ್ಯಾಂಕ್‌ ಅಧಿಕಾರಿಗಳು ರೈತರನ್ನು ಕಂಡರೆ ವೈರಿಗಳಂತೆ ನೋಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಹಶೀಲ್ದಾರ ವಾಸುದೇವ ಸ್ವಾಮಿ ಅವರು ಗ್ರಾಮ ಲೆಕ್ಕಿಗರನ್ನು ಬ್ಯಾಂಕ್‌ಗೆ ಕಳುಹಿಸಿ ಮ್ಯಾನೇಜರ್‌ ಜೊತೆ ಚರ್ಚಿಸಿದರು. ಹಾಗೂ ಮುಖ್ಯಮಂತ್ರಿಗಳ ಆದೇಶದ ಬಗ್ಗೆಯೂ ಗಮನ ಸೆಳೆದರು. ಬಳಿಕ ಮ್ಯಾನೇಜರ್‌ ರೈತನ ಬಳಿ ಮುಚ್ಚಳಿಕೆ ಬರೆಯಿಸಿಕೊಂಡು ಹಣ ನೀಡಲು ಮುಂದಾದರು.

ಎರಡು ವರ್ಷಗಳಿಂದ ಅತಿವೃಷ್ಟಿ ಹಾಗೂ ಅನಾವೃಷ್ಟಿಯಿಂದ ರೈತ ಯಲ್ಲಪ್ಪ ನೊಂದಿದ್ದಾನೆ. ಸಾಲವನ್ನು ಆದಷ್ಟು ಬೇಗನೆ ಮರುಪಾವತಿ ಮಾಡುತ್ತೇನೆ. ಈಗ ನೀವು ಬರ ಪರಿಹಾರದ ಮೊತ್ತ ನೀಡದಿದ್ದರೆ ಬೀಜ, ಗೊಬ್ಬರ ಖರೀದಿಸಲು ಸಾಧ್ಯವಾಗದೇ ಈ ಬಾರಿಯೂ ಕೃಷಿ ಚಟುವಟಿಕೆಯಿಂದ ವಿಮುಖನಾಗಬೇಕಾಗುತ್ತದೆ ಎಂದು ತಿಳಿ ಹೇಳಿದರೂ ಬ್ಯಾಂಕ್‌ ಮ್ಯಾನೇಜರ್‌ ಕೇಳಲು ಸಿದ್ಧರಿಲ್ಲ ಎಂದು ಯಲ್ಲಪ್ಪ ವಿವರಿಸಿದರು.

ಕನ್ನಡ ಬಾರದ ಬ್ಯಾಂಕ್ ಮ್ಯಾನೇಜರ್:

ಪಟ್ಟಣದ ಕೆನರಾ ಬ್ಯಾಂಕ್ ಮ್ಯಾನೇಜರ್ ಅವರು ಗ್ರಾಹಕರೊಂದಿಗೆ ಸೌಜನ್ಯದಿಂದ ವರ್ತಿಸುವುದಿಲ್ಲ ಹಾಗೂ ರೈತರೆಂದರೆ ಕಾಲ ಕೆಲಸವಾಗಿ ಕಾಣುತ್ತಾರೆ. ಮ್ಯಾನೇಜರ್ ಅವರಿಗೆ ಕನ್ನಡ ಮಾತನಾಡಲು ಬರುವುದಿಲ್ಲ. ಇದರಿಂದ ರೈತರೊಂದಿಗೆ ಸರಿಯಾಗಿ ಸಂವಾದ ಮಾಡಲು ಆಗುತ್ತಿಲ್ಲ ಎಂದು ರೈತ ಯಲ್ಲಪ್ಪ ಅಸಹಾಯಕತೆ ತೋಡಿಕೊಂಡರು.


ಈ ಸುದ್ದಿಯನ್ನು ಶೇರ್ ಮಾಡಿ

Related Posts

ವಿವಿ ಪ್ರಾಧ್ಯಾಪಕಿಯಾದ ಮಂಗಳಮುಖಿ; ಉನ್ನತ ಶಿಕ್ಷಣದ ಪ್ರಾಧ್ಯಾಪಕಿಯಾದದ್ದು ಇದೇ ಮೊದಲು!!

ತೃತೀಯ ಲಿಂಗಿಯೊಬ್ಬರು ವಿಶ್ವವಿದ್ಯಾಲಯವೊಂದರ ಅರೆಕಾಲಿಕ ಪ್ರಾಧ್ಯಾಪಕಿಯಾಗಿ ನೇಮಕಗೊಳ್ಳುವ ಮೂಲಕ…

1 of 4