ಪುತ್ತೂರು: ತನ್ನ ಮಗಳಿಗೆ ನ್ಯಾಯ ನೀಡಲು ಪ್ರಯತ್ನಿಸದ ಪಿ.ಜಿ. ಜಗನ್ನಿವಾಸ್ ರಾವ್ ಅವರು ಮಗನನ್ನೇ ರಕ್ಷಿಸುವ ಕೆಲಸದಲ್ಲಿ ತೊಡಗಿದ್ದಾರೆ. ಈಗ ನೋಡಿದರೆ ಪುತ್ತೂರು ದೇವಸ್ಥಾನದಲ್ಲಿ ಧಾರ್ಮಿಕ ಚಟುವಟಿಕೆಯಲ್ಲಿ ಸಕ್ರೀಯರಾಗಿದ್ದಾರೆ. ಜಾತ್ರಾ ಸಂದರ್ಭವೂ ಇದೇ ರೀತಿ ಮುಂದುವರಿದರೆ ಧ್ವಜಸ್ತಂಭದ ಮುಂದೆ ಕುಳಿತು ನ್ಯಾಯಕ್ಕೆ ಆಗ್ರಹಿಸುತ್ತೇನೆ ಎಂದು ಪುತ್ತೂರಿನ ಲವ್ – ಸೆಕ್ಸ್- ದೋಖಾ ಪ್ರಕರಣದ ಸಂತ್ರಸ್ತೆಯ ತಾಯಿ ನಮಿತಾ ಎಚ್ಚರಿಕೆ ನೀಡಿದ್ದಾರೆ.
ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೃಷ್ಣ ಜೆ. ರಾವ್ ಹಾಗೂ ತನ್ನ ಮಗಳಿಗೆ ಮದುವೆ ಮಾಡಿಸುವುದಾಗಿ ಪಿ.ಜಿ. ಜಗನ್ನಿವಾಸ್ ರಾವ್ ಅವರು ಹೇಳಿದ್ದರು. ಮನೆಯಲ್ಲಿ ನನ್ನ ತೀರ್ಮಾನವೇ ಅಂತಿಮ. ಮದುವೆ ಮಾಡಿಸುವ ಜವಾಬ್ದಾರಿ ನನ್ನದು ಎಂದಿದ್ದರು. 9 ತಿಂಗಳವರೆಗೆ ಹೀಗೆ ದಾರಿ ತಪ್ಪಿಸಿದರು. ಈಗ ಮಗುವಿಗೆ 10 ತಿಂಗಳು ಕಳೆದಿದೆ. ಆದರೂ ಪಿ.ಜಿ. ಜಗನ್ನಿವಾಸ್ ರಾವ್ ಅವರಿಂದ ನ್ಯಾಯ ಕೊಡಿಸಲು ಸಾಧ್ಯವಾಗಿಲ್ಲ. ಇದರ ನಡುವೆ ಪುತ್ತೂರು ದೇವಸ್ಥಾನದ ಧಾರ್ಮಿಕ ಚಟುವಟಿಕೆಯಲ್ಲಿ ಸಕ್ರೀಯರಾಗಿ ಗುರುತಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎಂದು ಆಪಾದಿಸಿದರು.
ಧಾರ್ಮಿಕ ಕ್ಷೇತ್ರದಲ್ಲಿ ಕೆಲಸ ನಿರ್ವಹಿಸುವ ಬಗ್ಗೆ ತಾನು ಇದುವರೆಗೆ ಮಾತನಾಡಿಲ್ಲ. ಆದರೆ ಇನ್ನು ಮುಂದೆ ದೇವಸ್ಥಾನದ ಧಾರ್ಮಿಕ ಚಟುವಟಿಕೆಯಲ್ಲಿ ಅವರನ್ನು ಸೇರಿಸಿಕೊಳ್ಳಬಾರದು ಎಂದು ಆಗ್ರಹಿಸಿದರು. ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರೋತ್ಸವದ ಗೊನೆ ಮುಹೂರ್ತ ಸಂದರ್ಭ ಸಕ್ರೀಯರಾಗಿ ಗುರುತಿಸಿಕೊಂಡಿದ್ದರು. ಇದರೊಂದಿಗೆ ವಾಸ್ತು ಶಾಸ್ತ್ರ, ಚಾಕರಿ ಕೆಲಸಗಳಲ್ಲಿ ಮುಂಚೂಣಿಯಲ್ಲಿ ತೊಡಗಿಸಿಕೊಳ್ಳುತ್ತಾರೆ. ಆದ್ದರಿಂದ ಏ. 10ರಂದು ಜಾತ್ರೆಯ ಧ್ವಜಾರೋಹಣ ಸಂದರ್ಭ ಧ್ವಜಸ್ತಂಭದ ಮುಂದೆಯೇ ಕುಳಿತುಕೊಳ್ಳುತ್ತೇನೆ. ನ್ಯಾಯಕ್ಕಾಗಿ ತಂತ್ರಿಗಳಲ್ಲಿ ಕೇಳಿಕೊಳ್ಳುತ್ತೇನೆ. ದೇವರಲ್ಲದೇ ಯಾರೂ ಕೂಡ ನ್ಯಾಯ ಕೊಡಿಸಲು ಸಾಧ್ಯವಿಲ್ಲ ಎಂದರು.
ತಪ್ಪತಸ್ಥ ಮಗನಿಗೆ ಬೆಂಬಲ:
ಮದುವೆ ಮಾಡಿಸುತ್ತೇನೆ ಎಂದಿದ್ದ ಪಿ.ಜಿ. ಜಗನ್ನಿವಾಸ್ ರಾವ್ ಅವರು ಈಗ ತಮ್ಮ ಮಗನನ್ನು ರಕ್ಷಿಸುತ್ತಿದ್ದಾರೆ. ಮಗ ತಪ್ಪು ಮಾಡಿದ್ದಾನೆ ಎಂಬ ಅರಿವಿದ್ದರೂ, ತಪ್ಪು ಕೆಲಸಗಳಿಗೆ ಬೆಂಬಲ ನೀಡುತ್ತಿದ್ದಾರೆ. ಹಾಗಾಗಿ ದೇವರ ಮುಂದೆಯೇ ನ್ಯಾಯಕ್ಕೆ ಮೊರೆ ಇಡುತ್ತೇನೆ. ಇದುವರೆಗೆ ಎಲ್ಲರ ಕೈ ಕಾಲು ಹಿಡಿದು – ಮದುವೆ ಮಾಡಿಸಿಕೊಡಿ ಎಂದು ಕೇಳಿಕೊಂಡಿದ್ದೇನೆ. ಆದರೆ ಯಾರ ಮನಸ್ಸು ಕೂಡ ಕರಗಿಲ್ಲ ಎಂದರು.
ಭಕ್ತರಾಗಿ ಬರುವುದಕ್ಕೆ ಆಕ್ಷೇಪವಿಲ್ಲ:
ರಾಜ್ಯ ವಿಶ್ವಕರ್ಮ ಯುವ ಮಿಲನ್ ಸ್ಥಾಪಕಾಧ್ಯಕ್ಷ ವಿಕ್ರಂ ಆಚಾರ್ಯ ಮಾತನಾಡಿ, ಪಿ.ಜಿ. ಜಗನ್ನಿವಾಸ್ ರಾವ್ ಅವರು ಪುತ್ತೂರು ದೇವಳದ ಧಾರ್ಮಿಕ ಕಾರ್ಯದಲ್ಲಿ ಮುಂಚೂಣಿಗೆ ಬರಲು ಪ್ರಯತ್ನಿಸುತ್ತಿದ್ದಾರೆ. ಈ ಬಗ್ಗೆ ವಾಸ್ತುತಜ್ಞರಿಗೆ, ದೇವಳದ ತಂತ್ರಿಗಳಿಗೆ, ಅಧ್ಯಕ್ಷರಿಗೆ ಮನವಿ ನೀಡಿದ್ದೇವೆ. ದೇವಳಕ್ಕೆ ಭಕ್ತರಾಗಿ ಅವರು ಹೋಗುವುದಕ್ಕೆ ನಮ್ಮದೇನು ಆಕ್ಷೇಪವಿಲ್ಲ. ಆದರೆ ದೇವಳದ ಚಾಕರಿ ಕೆಲಸಗಳಿಗೆ ಅವರನ್ನು ನೇಮಿಸಿಕೊಳ್ಳಬಾರದು. ಏ. 5ರೊಳಗೆ ಕಳಂಕಿತ ಈ ವ್ಯಕ್ತಿ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ನಾವು ಬೇರೆ ತೀರ್ಮಾನ ಕೈಗೊಳ್ಳುವುದಾಗಿ ತಿಳಿಸಿದ ಅವರು, ಸಂತ್ರಸ್ತೆಯ ತಾಯಿ ಕೊಡಿಮರದಡಿ ಕುಳಿತು ನ್ಯಾಯ ಬೇಡುವ ಪ್ರಕ್ರಿಯೆಗೆ ನಮ್ಮ ಸಂಘಟನೆ ಸಂಪೂರ್ಣ ಬೆಂಬಲ ನೀಡಲಿದೆ ಎಂದರು.
ಸುದ್ದಿಗೋಷ್ಟಿಯಲ್ಲಿ ವಿಶ್ವಕರ್ಮ ಯುವ ಮಿಲನ್ ಪುತ್ತೂರು ತಾಲೂಕು ಅಧ್ಯಕ್ಷ ಹರೀಶ್ ಆಚಾರ್ಯ, ಪ್ರಧಾನ ಕಾರ್ಯದರ್ಶಿ ದಿವಾಕರ ಆಚಾರ್ಯ ಪಾಲ್ತಾಡಿ, ಜಗದೀಶ್ ಆಚಾರ್ಯ, ಕೋಶಾಧಿಕಾರಿ ಜಗದೀಶ್ ಆಚಾರ್ಯ ಉಪಸ್ಥಿತರಿದ್ದರು.























