ಉಪ್ಪಿನಂಗಡಿ: ರಾಜಕಾರಣ ಒಂದೇ ನಮಗೆ ಮುಖ್ಯವಲ್ಲ. ಅದರೊಂದಿಗೆ ಸಮಾಜಸೇವೆಯ ಗುಣ, ಮಣ್ಣಿನ ಸಂಸ್ಕೃತಿ, ಕ್ರೀಡೆ, ಆಚಾರ ವಿಚಾರಗಳನ್ನು ಉಳಿಸಿ ಬೆಳೆಸುವ ಕೆಲಸವು ರಾಜಕಾರಣಿಗಳಿಂದ ಆಗಬೇಕು. ಆ ಕೆಲಸ ಶಾಸಕ ಅಶೋಕ್ ರೈ ಅವರಿಂದ ಆಗುತ್ತಿದೆ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದರು.
ಉಪ್ಪಿನಂಗಡಿಯ ವಿಜಯ- ವಿಕ್ರಮ ಜೋಡುಕರೆ ಕಂಬಳ ಸಮಿತಿಯಿಂದ ಆಯೋಜನೆಗೊಂಡಿರುವ ಉಬಾರ್ ಕಂಬಳೋತ್ಸವದ ಸಭಾಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಕಂಬಳ ಗ್ರಾಮೀಣ ಭಾಗದವರ ಕ್ರೀಡೆಯಾಗಿದ್ದು, ಅದನ್ನು ಉಳಿಸಿ ಬೆಳೆಸಿ ಮುಂದಿನ ಪೀಳಿಗೆಗೂ ಉಣಬಡಿಸುವ ಕೆಲಸ ಆಗಬೇಕು. ಹಾಗಾದಾಗ ಈ ಭೂಮಿ ಇರುವವರೆಗೂ ಕಂಬಳಕ್ಕೆ ಅಳಿವು ಬರಲು ಸಾಧ್ಯವಿಲ್ಲ. ನಮ್ಮ ಭಾಗದಲ್ಲಿಯೂ ಹಲವು ಗ್ರಾಮೀಣ ಕ್ರೀಡೆಗಳಿದ್ದು, ಅದಕ್ಕೂ ನಾನು ನಿರಂತರ ಪ್ರೋತ್ಸಾಹ ನೀಡುತ್ತಿರುತ್ತೇನೆ. ಕಂಬಳಕ್ಕೆ ಸರಕಾರವು ಅನುದಾನ ನೀಡಿದ್ದು, ಇದು ಕಂಬಳದ ಬೆಳವಣಿಗೆಗೆ ಇನ್ನಷ್ಟು ಸಹಕಾರಿಯಾಗಿದೆ. ಅಶೋಕ್ ಕುಮಾರ್ ರೈಯವರು ಶಾಸಕರಾದ ಬಳಿಕ ಹಲವು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದು, ಕೆಲವನ್ನು ನಾನು ಖುದ್ದಾಗಿ ಕಂಡಿದ್ದೇನೆ. ಇವರ ಅವಧಿಯಲ್ಲಿ ಪಕ್ಷ, ಧರ್ಮ, ಜಾತಿಯ ತಾರತಮ್ಯವಿಲ್ಲದೆ ಅಭಿವೃದ್ಧಿ ಕಾರ್ಯಗಳಾಗಿವೆ. ಪ್ರತಿಯೊಂದು ಕ್ಷೇತ್ರಕ್ಕೂ ಇಂತಹ ಶಾಸಕರ ಅಗತ್ಯವಿದ್ದು, ನೀವೆಲ್ಲರೂ ಅಶೋಕ್ ಕುಮಾರ್ ರೈಯವರಿಗೆ ರಾಜಕೀಯ ರಕ್ಷಣೆ ನೀಡಿದಾಗ ನಿಮ್ಮ ಕ್ಷೇತ್ರ ಇನ್ನಷ್ಟು ಅಭಿವೃದ್ಧಿ ಸಾಧಿಸಲು ಸಾಧ್ಯವಿದೆ. ಈಗಾಗಲೇ ನನ್ನನ್ನು ಖುದ್ದು ಸ್ಥಳಕ್ಕೆ ಕರೆದುಕೊಂಡು ಹೋಗಿ ಶಾಸಕ ಅಶೋಕ್ ಕುಮಾರ್ ರೈಯವರು ಅವರ ಕ್ಷೇತ್ರದಲ್ಲಿ ಸೇತುವೆ, ರಸ್ತೆಗಳಿಗೆ ಬೇಡಿಕೆಯಿಟ್ಟಿದ್ದು, ಆದಷ್ಟು ಬೇಗ ಅದಕ್ಕೆ ಅನುದಾನ ಮಂಜೂರು ಮಾಡುತ್ತೇನೆ ಎಂದರು.
ಚಲನಚಿತ್ರ ನಟ ಅರವಿಂದ ಬೋಳಾರ್ ಮಾತನಾಡಿ, ಕಂಬಳವೆನ್ನುವುದು ಊರಿನ ದೊಡ್ಡ ಹಬ್ಬವಾಗಿದ್ದು, ಎಲ್ಲರ ಸಹಕಾರದಿಂದ ಮಾತ್ರ ಇದನ್ನು ಉತ್ತಮವಾಗಿ ಆಯೋಜನೆ ಮಾಡಲು ಸಾಧ್ಯ. ಅಶೋಕ್ ಕುಮಾರ್ ರೈಯವರ ನೇತೃತ್ವದಲ್ಲಿ ಉಪ್ಪಿನಂಗಡಿ ಕಂಬಳವು ಉತ್ತಮವಾಗಿ ನಡೆದುಕೊಂಡು ಹೋಗುತ್ತಿದೆ. ಇಲ್ಲಿನ ಇನ್ನೊಂದು ಸಾಂಪ್ರದಾಯಿಕ ಕ್ರೀಡೆಯಾದ ಕೋಳಿ ಅಂಕಕ್ಕೂ ಅಡೆತಡೆಗಳು ಬಂದಾಗ ಮೊದಲಾಗಿ ಎದ್ದು ನಿಂತಿರುವುದು ಅಶೋಕ್ ಕುಮಾರ್ ರೈಯವರು. ತುಳು ಭಾಷೆ, ಸಂಸ್ಕೃತಿ, ಆಚರಣೆಗಳ ಉಳಿವಿಗಾಗಿ ಸದಾ ಹೋರಾಟ ನಡೆಸುತ್ತಿರುವ ಅಶೋಕ್ ಕುಮಾರ್ ರೈಯವರು ಶಾಸಕರಾಗಿದ್ದು ತುಳುನಾಡಿನ ಜನರ ಪುಣ್ಯ ಎಂದರು.
ಕೆ.ಪಿ.ಸಿ.ಸಿ. ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಮಾತನಾಡಿ, ಕಂಬಳಕ್ಕೆ ಹೊಸ ಮೆರುಗನ್ನು ಕೊಟ್ಟ ಕರೆ ವಿಜಯ- ವಿಕ್ರಮ ಕಂಬಳದ ಜೋಡುಕರೆ. ಕಂಬಳವು ತುಳುನಾಡಿನ ಚಿತ್ರಣ ತೋರಿಸುವ ಕ್ರೀಡೆಯಾಗಿದ್ದು, ಎಲ್ಲಾ ಧರ್ಮ, ಜಾತಿ, ಮತಗಳವರು ಇದರಲ್ಲಿ ಬೆರೆಯುವುದರಿಂದ ಪರಸ್ಪರ ಭ್ರಾತೃತ್ವವನ್ನು ಬೆಳೆಸುವ ಕ್ರೀಡೆ ಇದಾಗಿದೆ. ಕೋಳಿ ಅಂಕವೆನ್ನುವುದು ತುಳುನಾಡಿನ ಇತಿಹಾಸದಲ್ಲಿ ಸ್ಥಾನ ಪಡೆದಿದ್ದು, ಅಶೋಕ್ ಕುಮಾರ್ ರೈಯವರು ರಾಜ್ಯದ ಹೆಚ್ಚುವರಿ ಭಾಷೆಯಾಗಿ ತುಳುವನ್ನು ಅಂಗೀಕಾರ ಮಾಡಬೇಕೆಂದು ಸದನದಲ್ಲಿ ಧ್ವನಿಯೆತ್ತಿದ್ದರಿಂದ ಇಂದು ಸರಕಾರವು ಅದಕ್ಕಾಗಿ ಅಧ್ಯಯನ ಸಮಿತಿಯನ್ನು ರಚಿಸಿದೆ ಎಂದ ಅವರು, ಸಚಿವರಾದ ಸತೀಶ್ ಜಾರಕಿಹೊಳಿಯವರು ಸರಳ ಸಜ್ಜನಿಕೆಯ ರಾಜಕಾರಣಿಯಾಗಿದ್ದು, ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ಸಿಗಬೇಕೆಂದು ಬಯಸುವವರು. ಬೆಳ್ತಂಗಡಿ ತಾಲೂಕಿನ ಕುಪ್ಪೆಟ್ಟಿ ಮಸೀದಿ ಬಳಿ ತಡೆಗೋಡೆಗೆ ಅನುದಾನ ನೀಡಬೇಕೆಂದು ನಾನು ಮನವಿ ಮಾಡಿದಾಗ ಅದು ತನ್ನ ಇಲಾಖೆಯ ವ್ಯಾಪ್ತಿಗೆ ಬಾರದಿದ್ದರೂ ೫೦ ಲಕ್ಷ ರೂಪಾಯಿಯನ್ನು ಅವರು ಮಂಜೂರು ಮಾಡಿದ್ದಾರೆ ಎಂದರು.
ಕುದ್ರೋಳಿ ಶ್ರೀ ಗೋಕರ್ಣ ದೇವಸ್ಥಾನದ ಕೋಶಾಧಿಕಾರಿ ಪದ್ಮರಾಜ್ ಪೂಜಾರಿ ಆರ್. ಮಾತನಾಡಿ, ಕಂಬಳವೆನ್ನು ಧಾರ್ಮಿಕ ಹಿನ್ನೆಲೆಯುಳ್ಳ ಜನಪದ ಕ್ರೀಡೆ. ಕಂಬಳದಲ್ಲಿ ನಾವೆಲ್ಲರೂ ಒಂದೇ ಅನ್ನುವ ಸಹೋದರತ್ವ ಇದೆ. ಇದನ್ನು ಉಳಿಸಿ ಬೆಳೆಸಿಕೊಂಡು ಹೋಗುವ ಮೂಲಕ ಈ ಪರಂಪರೆಯನ್ನು ಮುಂದಿನ ಪೀಳಿಗೆಗೂ ಪರಿಚಯಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರಲ್ಲದೆ, ಕರ್ನಾಟಕ ರಾಜ್ಯದಲ್ಲಿ ಕ್ಷೇತ್ರದ ಅಭಿವೃದ್ಧಿಯೇ ನನ್ನ ಕಾಯಕವೆಂದು ದುಡಿಯುವ ಶಾಸಕನಿದ್ದರೆ ಅದು ಅಶೋಕ್ ಕುಮಾರ್ ರೈಯವರು. ಅಭಿವೃದ್ದಿ ಬಿಟ್ಟು ಅವರಿಲ್ಲ. ಅವರ ಅಭಿವೃದ್ಧಿ ಕಾರ್ಯದಲ್ಲಿ ಯಾವುದೇ ರಾಜಕೀಯವಿಲ್ಲವೆಂದರು.
ಕೆ.ಪಿ.ಸಿ.ಸಿ. ಪ್ರಧಾನ ಕಾರ್ಯದರ್ಶಿ ಉದಯಕುಮಾರ್ ಶೆಟ್ಟಿ ಮುನಿಯಾಲು ಮಾತನಾಡಿ, ಕಂಬಳ ಕ್ರೀಡೆಗೆ ಯಾವುದೇ ಆಮಂತ್ರಣ ನೀಡಬೇಕೆಂದಿಲ್ಲ. ಅದನ್ನು ನೋಡಲೆಂದೇ ಸಾವಿರಾರು ಮಂದಿ ಸೇರುತ್ತಾರೆ. ಇದು ಕಂಬಳ ಕ್ರೀಡೆಯ ಗತ್ತು, ಗೈರತ್ತನ್ನು ತೋರಿಸುತ್ತದೆ ಎಂದರು.
ಕೆ.ಪಿ.ಸಿ.ಸಿ. ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ಮಾತನಾಡಿ, ಕಂಬಳವೆನ್ನುವುದು ತುಳುನಾಡ ಜನಪದ ಕ್ರೀಡೆ. ಇದರಲ್ಲಿ ಮಣ್ಣಿನ ಅಂತಃಸತ್ವ ಅಡಗಿದೆ. ತುಳುನಾಡ ಸಂಸ್ಕೃತಿ, ಆಚಾರ- ವಿಚಾರ, ಪರಂಪರೆಯನ್ನು ಉಳಿಸಿ ಬೆಳೆಸುವಲ್ಲಿ ನಾವೆಲ್ಲರೂ ಕಟಿಬದ್ಧರಾಗೋಣ ಎಂದರು.
ಕೆ.ಪಿ.ಸಿ.ಸಿ. ಪ್ರಧಾನ ಕಾರ್ಯದರ್ಶಿ ಎಂ.ಎಸ್. ಮಹಮ್ಮದ್, ಚಿತ್ರನಟರಾದ ಸನಿಲ್ ಗುರು, ಪುಷ್ಪರಾಜ್ ಬೊಳ್ಳಾರ್ ಶುಭ ಹಾರೈಸಿದರು. ಈ ಸಂದರ್ಭ ಸಚಿವ ಸತೀಶ್ ಜಾರಕಿಹೊಳಿ, ಉದ್ಯಮ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಮಾಸ್ಟರ್ ಪ್ಲಾನರಿಯ ಎಸ್.ಕೆ. ಆನಂದ್, ಕಂಬಳ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಸದಾಶಿವ ಸಾಮಾನಿ ಸಂಪಿಗೆದಡಿ, ಕಂಬಳ ಮತ್ತು ಶಿಲ್ಪಶಾಸ್ತçದಲ್ಲಿ ಸೇವೆ ಸಲ್ಲಿಸಿದ ಬೆಳ್ಳಿಪ್ಪಾಡಿ ಕೊಡಪೊಟ್ಯ ಸುರೇಶ್ ಕೃಷ್ಣಯ್ಯ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ರಾಷ್ಟಿçÃಯ ಜ್ಯೂನಿಯರ್ ಕಬಡ್ಡಿ ಚಾಂಪಿಯನ್ ಶಿಪ್ ಆಟಗಾರ ಆಧೀಶ್ ಶೆಟ್ಟಿ ಬರೆಮೇಲು ಅವರನ್ನು ಅಭಿನಂದಿಸಲಾಯಿತು.
ವೇದಿಕೆಯಲ್ಲಿ ಚಿತ್ರದುರ್ಗದ ಮಾಜಿ ಸಂಸದ ಚಂದ್ರಪ್ಪ, ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ಕೆ.ಪಿ.ಸಿ.ಸಿ. ಪ್ರಧಾನ ಕಾರ್ಯದರ್ಶಿ ನವೀನ್ ಭಂಡಾರಿ, ಕೆ.ಪಿ.ಸಿ.ಸಿ. ಸದಸ್ಯ ಪ್ರಸಾದ್ ಕೌಶಲ್ ಶೆಟ್ಟಿ, ಉದ್ಯಮಿ ರವಿ ಶೆಟ್ಟಿ ಮೂಡಂಬೈಲು, ಕಂಬಳದ ತೀರ್ಪುಗಾರ ಗುಣಪಾಲ ಕಡಂಬ, ಪುತ್ತೂರು ವಕೀಲರ ಸಂಘದ ಅಧ್ಯಕ್ಷ ಜಗನ್ನಾಥ ರೈ, ಪಂಚ ಗ್ಯಾರಂಟಿ ಯೋಜನೆಯ ಅನುಷ್ಠಾನ ಸಮಿತಿಯ ಪುತ್ತೂರು ತಾಲೂಕು ಅಧ್ಯಕ್ಷ ಉಮಾನಾಥ ಶೆಟ್ಟಿ, ದ.ಕ. ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ಭರತ್ ಮುಂಡೋಡಿ, ಪುತ್ತೂರು ನಗರ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವ, ಉಪ್ಪಿನಂಗಡಿ ಬ್ಲಾಕ್ ಕಾಂಗೇಸ್ ಅಧ್ಯಕ್ಷ ತೌಸೀಫ್ ಯು.ಟಿ., ಜಿ.ಪಂ. ಮಾಜಿ ಸದಸ್ಯ ಸರ್ವೋತ್ತಮ ಗೌಡ, ದ.ಕ. ಜಿಲ್ಲಾ ಸಹಕಾರಿ ಯೂನಿಯನ್‌ನ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟುಗುತ್ತು, ಉದ್ಯಮಿಗಳಾದ ಉಮೇಶ್ ನಾಡಾಜೆ, ರಿತೇಶ್ ಶೆಟ್ಟಿ , ಯಮುನಾ ಡೆವಲಪ್ರ‍್ಸ್ನ ಪುರುಷೋತ್ತಮ ಶೆಟ್ಟಿ ನುಳಿಯಾಳು, ದಿವ್ಯಾ ಕೆ. ಶೆಟ್ಟಿ, ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಾಲಯದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ, ಸದಸ್ಯರಾದ ನಳಿನಿ ಪಿ. ಶೆಟ್ಟಿ, ಮಹಾಬಲ ಶೆಟ್ಟಿ, ವಿನಯ ಸುವರ್ಣ, ಕರಾಯ ಶ್ರೀ ಮಹಾಲಿಂಗೇಶ್ವರ ದೇವಾಲಯದ ವ್ಯವಸ್ಥಾಪನಾ ಸಮಿತಿಯ ಸದಸ್ಯ ಜಯವಿಕ್ರಮ್ ಕಲ್ಲಾಪು, ರೈ ಎಸ್ಟೇಟ್ಸ್ ಆ್ಯಂಡ್ ಎಜುಕೇಷನಲ್ ಟ್ರಸ್ಟ್ನ ಅಧ್ಯಕ್ಷ ಸುದೇಶ್ ಶೆಟ್ಟಿ, ರಬ್ಬರ್ ಬೆಳೆಗಾರರ ಸಹಕಾರ ಸಂಘದ ಅಧ್ಯಕ್ಷ ಪ್ರಸಾದ್ ಕೌಶಲ್ ಶೆಟ್ಟಿ ಬೆಳ್ಳಿಪ್ಪಾಡಿ, ಉದ್ಯಮಿ ಶಿವರಾಮ ಆಳ್ವ, ಪುಡಾ ಸದಸ್ಯ ನಿಹಾಲ್ ಶೆಟ್ಟಿ, ಯಂಗ್ ಬ್ರಿಗೇಡ್‌ನ ಜಿಲ್ಲಾಧ್ಯಕ್ಷ ರಂಜಿತ್ ಬಂಗೇರ, ಉಪ್ಪಿನಂಗಡಿ ರೋಟರಿ ಕ್ಲಬ್ ಅಧ್ಯಕ್ಷ ಜಾನ್ ಕೆನ್ಯೂಟ್, ಪ್ರಮುಖರಾದ ಸುಮಾ ಅಶೋಕ್ ರೈ, ಹುಸೇನ್ ಕೆ.ಬಿ.ಕೆ., ಮೋರ್ಲ ಗಿರೀಶ್ ಆಳ್ವ, ಫೈಝಲ್ ಕಡಬ, ರಾಜಾರಾಮ್ ಶೆಟ್ಟಿ ಕೋಲ್ಪೆಗುತ್ತು, ಫಾರೂಕ್ ಪೆರ್ನೆ, ಡಾ. ರಾಜಾರಾಮ್ ಕೆ.ಬಿ., ಜಯಪ್ರಕಾಶ್ ಬದಿನಾರು, ಕೃಷ್ಣ ಪ್ರಸಾದ್ ಭಟ್, ಮೋನಪ್ಪ ಅಳಿಕೆ, ವೆಂಕಪ್ಪ ಪೂಜಾರಿ, ರಮೇಶ್ ಕಜೆ, ವಿಜಯ ಕುಮಾರ್ ಸೊರಕೆ, ಜೋಕಿಂ ಡಿಸೋಜ, ದಿನೇಶ್ ಮೂಳೂರು, ವಿಕ್ರಂ ಶೆಟ್ಟಿ ಅಂತರ, ಸಂತೋಷ್ ಭಂಡಾರಿ ಚಿಲ್ಮೆತ್ತಾರು, ಸಮಿತಿಯ ಗೌರವಾಧ್ಯಕ್ಷ ಉಮೇಶ್ ಶೆಣೈ ಎನ್., ಕಾರ್ಯಾಧ್ಯಕ್ಷ ಅಶೋಕ್ ಕುಮಾರ್ ರೈ ಅರ್ಪಿಣಿಗುತ್ತು, ಪ್ರಧಾನ ಕಾರ್ಯದರ್ಶಿ ಕೇಶವ ಭಂಡಾರಿ ಬೆಳ್ಳಿಪ್ಪಾಡಿ ಕೈಪ, ಕೋಶಾಧಿಕಾರಿ ಸೀತಾರಾಮ ಶೆಟ್ಟಿ ಹೆಗ್ಡೆಹಿತ್ಲು, ಉಪಾಧ್ಯಕ್ಷರಾದ ವಿದ್ಯಾಧರ ಜೈನ್, ರಾಮಚಂದ್ರ ಮಣಿಯಾಣಿ, ಸಂಘಟನಾ ಕಾರ್ಯದರ್ಶಿಗಳಾದ ಯೋಗೀಶ್ ಎಸ್. ಸಾಮಾನಿ, ದಿಲೀಪ್ ಶೆಟ್ಟಿ ಕರಾಯ ಮತ್ತಿತರರು ಉಪಸ್ಥಿತರಿದ್ದರು.
248 ಕೋ.ರೂ. ಅನುದಾನ: ಅಶೋಕ್ ಕುಮಾರ್ ರೈ
ಅಧ್ಯಕ್ಷತೆ ವಹಿಸಿ ಮಾತನಾಡಿದ ಕಂಬಳ ಸಮಿತಿಯ ಅಧ್ಯಕ್ಷ, ಶಾಸಕ ಅಶೋಕ್ ಕುಮಾರ್ ರೈಯವರು, ಸಚಿವರಾದ ಸತೀಶ್ ಜಾರಕಿಹೊಳಿಯವರು ಸರಳ ಸಜ್ಜನಿಕೆಯ ರಾಜಕಾರಣಿಯಾಗಿದ್ದು, ನುಡಿದಂತೆ ನಡೆಯುವ ಮಂತ್ರಿಯಾಗಿದ್ದಾರೆ. ಲೋಕೋಪಯೋಗಿ ಇಲಾಖೆಯ ಸಚಿವರಾಗಿ ರಾಜ್ಯದ 224 ಶಾಸಕರಿಗೂ ಸಮಾನ ನ್ಯಾಯ ಕೊಡುವ ಸಚಿವರಾಗಿದ್ದಾರೆ. ಕಾಂಗ್ರೆಸ್ ಸರಕಾರ ರಾಜ್ಯದಲ್ಲಿ ಆಡಳಿತಕ್ಕೆ ಬಂದ ಎರಡೂವರೆ ವರ್ಷದಲ್ಲೇ ಲೋಕೋಪಯೋಗಿ ಇಲಾಖೆಯಿಂದ ಪುತ್ತೂರು ವಿಧಾನ ಸಭಾ ಕ್ಷೇತ್ರಕ್ಕೆ 248 ಕೋ.ರೂ. ಅನುದಾನ ಬಂದಿದೆ. ಕಬಕ- ವಿಟ್ಲ ಚತುಷ್ಪಥ ಕಾಂಕ್ರೀಟ್ ರಸ್ತೆಗೆ 22 ಕೋ. ರೂ. ಅನುದಾನ ಮಂಜೂರಾಗಿದೆ. ತಾನು ಶಾಸಕನಾದ ಬಳಿಕ ಪುತ್ತೂರು ಅಭಿವೃದ್ಧಿಯ ಪಥದಲ್ಲಿ ಸಾಗುತ್ತಿದ್ದು, 9 ಕೋ.ರೂ.ನ ಕ್ರೀಡಾಂಗಣ, ಸರಕಾರಿ ಮೆಡಿಕಲ್ ಕಾಲೇಜು, 1006 ಕೋ.ರೂ.ನ ಕುಡಿಯುವ ನೀರಿನ ಯೋಜನೆ, ಪುತ್ತೂರು – ಉಪ್ಪಿನಂಗಡಿ ರಸ್ತೆಗೆ 55 ಕೋ.ರೂ. ಅನುದಾನ ಸೇರಿದಂತೆ ಹತ್ತು ಹಲವು ಅಭಿವೃದ್ಧಿ ಕೆಲಸಗಳಿಗೆ ಅನುದಾನ ಮಂಜೂರಾಗಿದೆ ಎಂದರಲ್ಲದೆ, ಕಂಬಳವೆನ್ನುವುದು ತುಳುನಾಡಿನ ವೀರ ಕ್ರೀಡೆಯಾಗಿದ್ದು, ಇದನ್ನು ಒಬ್ಬನಿಂದ ಆಯೋಜನೆ ಮಾಡಲು ಸಾಧ್ಯವಿಲ್ಲ. ಹಗಲು ರಾತ್ರಿ ದುಡಿಯವ ಸಮಿತಿಯವರು, ನಿರ್ವಹಣೆ ಮಾಡುವವರು, ಕಂಬಳ ಕೋಣಗಳ ಯಜಮಾನರು, ಕಂಬಳ ಕೋಣಗಳನ್ನು ಕಟ್ಟುವವರು, ಓಡಿಸುವವರು, ಕಂಬಳಾಭಿಮಾನಿಗಳು ಹೀಗೆ ನೂರಾರು ಮಂದಿಯ ಶ್ರಮ, ಸಹಕಾರವಿದ್ದಾಗ ಮಾತ್ರ ಯಶಸ್ವಿಯಾಗಿ ಕಂಬಳ ನಡೆಸಲು ಸಾಧ್ಯ. ನಮ್ಮಿಂದ ಕಂಬಳಕ್ಕೆ ಕೀರ್ತಿ ಬರಲು ಸಾಧ್ಯವಿಲ್ಲ. ಕಂಬಳದಿAದ ನಮಗೆ ಕೀರ್ತಿ ಬಂದಿರುವುದು. ಕಂಬಳ ಕ್ರೀಡೆಯ ನಿಷೇಧಕ್ಕೆ ಪೇಟಾದವರು ಬಹಳಷ್ಟು ಪ್ರಯತ್ನಪಟ್ಟರು. ಆದರೆ ಪಕ್ಷಾತೀತವಾಗಿ ಕಂಬಳ ಉಳಿಸಲು ಹೋರಾಟ ನಡೆಸಿದ್ದರಿಂದ ಇದರ ನಿಷೇಧ ಸಾಧ್ಯವಾಗಲಿಲ್ಲ. ಈಗಿನ ಕರ್ನಾಟಕ ಸರಕಾರವು ಕಂಬಳಕ್ಕೆ 1.15 ಕೋ.ರೂ. ಅನುದಾನ ಮಂಜೂರು ಮಾಡಿದೆ. ಕಂಬಳವೆನ್ನುವುದು ನಮ್ಮ ಆಸ್ತಿಯಾಗಿದ್ದು, ಇದನ್ನು ಇನ್ನಷ್ಟು ಬೆಳೆಸಬೇಕು ಎಂದರು.
ಕೋಳಿ ಅಂಕವೂ ತುಳುನಾಡಿನ ಸಾಂಪ್ರದಾಯಿಕ ಕ್ರೀಡೆ. ಜೂಜಿನ ಕೋಳಿ ಅಂಕಕ್ಕೆ ಅನುಮತಿ ಬೇಡ. ಆದರೆ ಸಾಂಪ್ರದಾಯಿಕವಾಗಿ ನಡೆಯುವ ಕೋಳಿ ಅಂಕಕ್ಕೆ ಅನುಮತಿ ನೀಡಬೇಕೆಂದು ಹೋರಾಟ ನಡೆಸುತ್ತೇನೆ. ತುಳು ಭಾಷೆ, ಕಂಬಳಕ್ಕೆ ಸರಕಾರದಿಂದ ಏನೇನು ಸಿಗಬೇಕೋ ಅದನ್ನು ಕೊಡಿಸುವ ಕೆಲಸ ಮಾಡುತ್ತೇನೆ. ತುಳು ಭಾಷೆಯನ್ನು ರಾಜ್ಯದ ಹೆಚ್ಚುವರಿ ಭಾಷೆಯನ್ನಾಗಿ ಮಾಡಬೇಕೆಂದು ಅಂದು ಸದನದಲ್ಲಿ ಧ್ವನಿಯೆತ್ತಿದೆ. ಅದರ ಪ್ರಕ್ರಿಯು ಚಾಲನೆಯಲ್ಲಿದ್ದು, ತುಳು ಭಾಷೆಯನ್ನು ಸರಕಾರ ರಾಜ್ಯದ ಎರಡನೇ ಹೆಚ್ಚುವರಿ ಭಾಷೆಯನ್ನಾಗಿ ಮಾಡುತ್ತದೆ ಎಂಬ ವಿಶ್ವಾಸವಿದೆ ಎಂದರು.




















