Gl
ಪ್ರಚಲಿತ

ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಉಪಾಧ್ಯಕ್ಷ ಪ್ರೊ. ಎಸ್. ಪ್ರಭಾಕರ್ ಅವರಿಗೆ ನುಡಿನಮನ | ಪ್ರೊ. ಎನ್ ವಜ್ರ ಕುಮಾರ್ ಮತ್ತು ಪ್ರೊ.ಎಸ್. ಪ್ರಭಾಕರ್ ನನ್ನೆರಡು ಕಣ್ಣುಗಳಿದ್ದಂತೆ: ಡಾ. ಡಿ. ವೀರೇಂದ್ರ ಹೆಗ್ಗಡೆ

GL

ಈ ಸುದ್ದಿಯನ್ನು ಶೇರ್ ಮಾಡಿ

ಉಜಿರೆ: ಪ್ರೊ.ಎಸ್. ಪ್ರಭಾಕರ್ ರವರು ಶ್ರೀ ಕ್ಷೇತ್ರ ಧರ್ಮಸ್ಥಳ ಮತ್ತು ಪೂಜ್ಯ ತಂದೆಯವರ ಮೇಲೆ ಅಪಾರ ಪ್ರೀತಿ ಮತ್ತು ಗೌರವವನ್ನು ಹೊಂದಿದ್ದವರು. ಈ ಕಾರಣಕ್ಕಾಗಿಯೇ ತಂದೆಯವರು ಆಗತಾನೆ ಆರಂಭವಾಗುತ್ತಿದ್ದ ಉಜಿರೆಯ ಕಾಲೇಜಿಗೆ ಬರಬೇಕು ಎಂದಾಗ ಸರ್ಕಾರಿ ಹುದ್ದೆಯನ್ನು ಬಿಟ್ಟು ಪ್ರೀತಿಯಿಂದ ಉಜಿರೆಗೆ ಬಂದರು. ಕಾಲೇಜಿನ ಸ್ಥಾಪಕ ಪ್ರಾಚಾರ್ಯರಾಗಿ ಸೇವೆಯನ್ನು ಆರಂಭಿಸಿ ಸುದೀರ್ಘ ವರ್ಷಗಳ ಕಾಲ ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿಯಾಗಿ, ಉಪಾಧ್ಯಕ್ಷರಾಗಿ ಸಂಸ್ಥೆಯ ಯಶಸ್ಸಿಗೆ ಕಾರಣೀಭೂತರಾಗಿದ್ದಾರೆ. ನನ್ನ ಪಟ್ಟದ ಆರಂಭದ ದಿನಗಳಲ್ಲಿ ಅನೇಕ ರೀತಿಯಲ್ಲಿ ಸಹಕಾರವನ್ನು ನೀಡಿದ್ದಾರೆ.  ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಯಶಸ್ಸಿನಲ್ಲಿ ಪ್ರೊ. ಎನ್. ವಜ್ರ ಕುಮಾರ್ ಮತ್ತು ಪ್ರೊ. ಎಸ್ ಪ್ರಭಾಕರ್ ನನ್ನೆರಡು ಕಣ್ಣುಗಳಿದ್ದಂತೆ. ಸಾವಿರಾರು ಉನ್ನತ ಮಟ್ಟದಲ್ಲಿರುವ ಶಿಷ್ಯವರ್ಗವನ್ನು ಹೊಂದಿದ್ದ ಪ್ರೊ. ಎಸ್. ಪ್ರಭಾಕರ್ ಇಂದು ಸಂಸ್ಥೆಯನ್ನು ಬಿಟ್ಟು ಅಗಲಿರುವುದು ತುಂಬಲಾರದ ನಷ್ಟವಾಗಿದೆ. ಇವರ ಆತ್ಮಕ್ಕೆ ನನ್ನ ಕುಟುಂಬ ಮತ್ತು ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ವತಿಯಿಂದ ಕೃತಜ್ಞತೆಯನ್ನು ತಿಳಿಸುತ್ತೇನೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಮತ್ತು ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ.ಡಿ. ವೀರೇಂದ್ರ ಹೆಗ್ಗಡೆ ಹೇಳಿದರು.

core technologies

ಇವರು ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ವತಿಯಿಂದ ಉಜಿರೆಯ‌ ಶ್ರೀ ಸಿದ್ಧವನ ಗುರುಕುಲದಲ್ಲಿ ನಡೆದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಗಳ ಉಪಾಧ್ಯಕ್ಷರು, ಉಜಿರೆಯ ಎಸ್.ಡಿ.ಎಂ ಕಾಲೇಜಿನ ಸ್ಥಾಪಕ ಪ್ರಾಚಾರ್ಯರಾಗಿದ್ದ ದಿವಂಗತ ಪ್ರೊ. ಎಸ್. ಪ್ರಭಾಕರವರಿಗೆ ಭಾವಪೂರ್ಣ ನುಡಿನಮನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ದಿವಂಗತ ಪ್ರೊ. ಎಸ್. ಪ್ರಭಾಕರವರಿಗೆ ಒಂದು ನಿಮಿಷದ ಮೌನ ಪ್ರಾರ್ಥನೆಯ ಮೂಲಕ ಸಂತಾಪ ಸೂಚಿಸಲಾಯಿತು. ಇದೇ ಸಂದರ್ಭದಲ್ಲಿ ಧರ್ಮಸ್ಥಳದ ಸುಪ್ರೀಯಾ ಹರ್ಷೇಂದ್ರ ಕುಮಾರ್ ಪ್ರೊ. ಎಸ್. ಪ್ರಭಾಕರವರ ಕುರಿತು ಬರೆದ ಅನಿಸಿಕೆಯ ಪತ್ರವನ್ನು ವೇದಿಕೆಯಲ್ಲಿ ಎಸ್.ಡಿ.ಎಂ ಪದವಿ ಕಾಲೇಜಿನ ರಿಜಿಸ್ಟ್ರಾರ್ ಹಾಗೂ ಸಂಸ್ಕೃತ ವಿಭಾಗದ ಮುಖ್ಯಸ್ಥ ಡಾ. ಶ್ರೀಧರ ಭಟ್‌ ವಾಚಿಸಿದರು.

ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್ ಮಾತನಾಡಿ, ಪೂಜ್ಯ ರತ್ನವರ್ಮ ಹೆಗಡೆಯವರ ಸಂಕಲ್ಪ ಮತ್ತು ಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಗ್ರಾಮೀಣ ಭಾಗದಲ್ಲಿ ಶಿಕ್ಷಣ ಸಂಸ್ಥೆಗಳ ಕನಸ್ಸನ್ನು ತನ್ನ ಶಿಕ್ಷಣ ಕ್ಷೇತ್ರದ ಅನುಭವ ಹಾಗು ವ್ಯಕ್ತಿತ್ವದ ಮೂಲಕ ಸಾಕರಗೊಳಿಸಿದವರು ಪ್ರೊ. ಎಸ್. ಪ್ರಭಾಕರ್ ರವರು. ಸಮಾಜದಲ್ಲಿ ಹಲವರಿಗೆ ಸ್ಥಾನಮಾನದ ಮೇಲೆ ಗೌರವ ಸನ್ಮಾನ ಲಭಿಸುತ್ತದೆ. ಆದರೆ ತನ್ನ ವ್ಯಕ್ತಿತ್ವದ ಮೇಲೆ ಈ ಸಮಾಜದಲ್ಲಿ ಗೌರವವಕ್ಕೆ ಪಾತ್ರರಾದವರು ಪ್ರೊ.ಎಸ್. ಪ್ರಭಾಕರ್. ವಿದ್ಯಾರ್ಥಿಗಳ ಶೈಕ್ಷಣಿಕ ಬೆಳವಣಿಗೆ ಮತ್ತು ವ್ಯಕ್ತಿತ್ವ ವಿಕಸನದ ಮೇಲೆ ಅಪಾರ ಕಾಳಜಿಯನ್ನು  ಹೊಂದಿದ್ದ ಪ್ರಾಭಾಕರ್ ರವರ ಅನುಪಸ್ಥಿತಿ ಇಂದು ಅತೀವ ದುಃಖ ತಂದಿದೆ ಎಂದರು.

ವೇದಿಕೆಯಲ್ಲಿ ಮಂಗಳೂರು ಮೆಸ್ಕಾಂ ವಿಭಾಗದ ಅಧ್ಯಕ್ಷ ಹರೀಶ್ ಕುಮಾರ್ ಮಾತನಾಡಿದರು. ಹಿರಿಯ ವಕೀಲ ಬಿ. ಕೆ ಧನಂಜಯ್ ರಾವ್ ಮಾತನಾಡಿ, ಈ ಸಮಾಜದ ಸಾವಿರಾರು ವಿದ್ಯಾರ್ಥಿಗಳನ್ನು ಶಿಕ್ಷಣದ ಮೂಲಕ ಬೆಳಗಿಸಿದ ಧೀಮಂತ ವ್ಯಕ್ತಿತ್ವ ಪ್ರೊ. ಎಸ್. ಪ್ರಭಾಕರವರದ್ದು. ಅವರ ಆದರ್ಶಗಳನ್ನು ನಮ್ಮ ಬದುಕಿನಲ್ಲಿ ಮೈಗೂಡಿಸಿಕೊಳ್ಳುವ ಮೂಲಕ ಅವರ ಆತ್ಮಕ್ಕೆ ಸಾರ್ಥಕತೆಯನ್ನು ತುಂಬೋಣ ಎಂದರು.

ಇದೇ ಸಂದರ್ಭದಲ್ಲಿ ಪ್ರೊ. ಎಸ್. ಪ್ರಭಾಕರ್ ರವರ ಅಳಿಯ, ಲಂಡನ್ ನ ಪ್ರತಿಷ್ಠಿತ ವೈದ್ಯ ಡಾ. ನರೇಂದ್ರ ಅಳದಂಗಡಿ ಮಾತನಾಡಿ, ಪ್ರಭಾಕರ್ ಅವರೊಂದಿಗಿನ ಒಡನಾಟದ ಭಾವಪೂರ್ಣ ನೆನಪುಗಳನ್ನು ಹಂಚಿಕೊಂಡರು. ಶಿಕ್ಷಣ ಕ್ಷೇತ್ರದಲ್ಲಿ ಅವರಿಗಿದ್ದ ಪರಿಣಿತಿಯನ್ನು ವಿವರಿಸಿ, ನುಡಿ ನಮನ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಸರ್ವ ಸದಸ್ಯರಿಗೂ ಕೃತಜ್ಞತೆಯನ್ನು ತಿಳಿಸಿದರು.

ಕಾರ್ಯಕ್ರಮದ ವೇದಿಕೆಯಲ್ಲಿ ಧರ್ಮಸ್ಥಳದ ಡಾ. ಹೇಮಾವತಿ ವಿ ಹೆಗ್ಗಡೆ, ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಉಪಾಧ್ಯಕ್ಷ ಡಿ. ಸುರೇಂದ್ರ ಕುಮಾರ್, ಕಾರ್ಯದರ್ಶಿ ಹರ್ಷೇಂದ್ರ ಕುಮಾರ್, ಡಾ. ಸತೀಶ್ಚಂದ್ರ ಎಸ್, ಉಜಿರೆಯ ಜನಾರ್ದನ ಸ್ವಾಮಿ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಶರತ್ ಕೃಷ್ಣ ಪಡುವೇಟ್ನಾಯರ್ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಸೋನಿಯಾ ಯಶೋವರ್ಮ, ಬೆಂಗಳೂರಿನ ಕ್ಷೇಮವನದ ಕಾರ್ಯನಿರ್ವಾಹಕ ನಿರ್ದೇಶಕಿ ಶ್ರದ್ಧಾ ಅಮಿತ್, ಎಸ್.ಡಿ.ಎಂ ಐಟಿ ಮತ್ತು ಹಾಸ್ಟೆಲ್ ಆಡಳಿತ ವಿಭಾಗದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ  ಪೂರನ್ ವರ್ಮ, ಮಂಗಳೂರಿನ ಎಸ್.ಡಿ.ಎಂ ( ಸಿ.ಬಿ.ಎಸಿ) ಶಾಲೆಯ ಸಂಚಾಲಕಿ ಶ್ರುತ ಜಿತೇಶ್, ನಂದೀಶ್ ಸೇರಿದಂತೆ ಕುಟುಂಬದ ಇತರೆ ಸದಸ್ಯರು ಪಾಲ್ಗೊಂಡಿದ್ದರು.

ನುಡಿ ನಮನ ಕಾರ್ಯಕ್ರಮದಲ್ಲಿ ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ವಿವಿಧ ಶಾಲಾ ಕಾಲೇಜುಗಳ ಮುಖ್ಯಸ್ಥರು, ಉಪನ್ಯಾಸಕರು, ಸಿಬ್ಬಂದಿವರ್ಗದವರು, ಎಸ್.ಡಿ.ಎಂ ಎಜುಕೇಷನಲ್ ಟ್ರಸ್ಟ್ ಸದಸ್ಯರು, ಊರಿನ ಗಣ್ಯರು ಭಾಗಿಯಾಗಿದ್ದರು. ಕಾರ್ಯಕ್ರಮವನ್ನು ಎಸ್.ಡಿ.ಎಂ ಪದವಿ ಕಾಲೇಜಿನ ಉಪನ್ಯಾಸಕ ಡಾ. ದಿವಾಕರ್ ಕೊಕ್ಕಡ ನಿರೂಪಿಸಿ ವಂದಿಸಿದರು. ನುಡಿನಮನದ ಬಳಿಕ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಸರ್ವಸದಸ್ಯರು ಭಾವ ಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿದರು.

ಪ್ರೊ.  ಎಸ್. ಪ್ರಭಾಕರ ಕೊಡುಗೆ ಅಪಾರ

‘ ಉಜಿರೆಯ ಎಸ್.ಡಿ.ಎಂ ಶಿಕ್ಷಣಗಳ ಬೆಳವಣಿಗೆಗೆ  ಪ್ರೊ.  ಎಸ್. ಪ್ರಭಾಕರ ಅವರ ಕೊಡುಗೆ ಅಪಾರ. ಅವರ ಮನೆಯಲ್ಲಿ ಇದ್ದುಕ್ಕೊಂಡು ಉಜಿರೆಯಲ್ಲಿ ಶಿಕ್ಷಣವನ್ನು ಪಡೆದುಕೊಂಡವಳು ನಾನು. ಅವರ ಮನೆ ಹಲವಾರು ಕುಟುಂಬ ಸದಸ್ಯರಿಂದ ಸದಾ ತುಂಬಿರುತಿತ್ತು. ತನ್ನ ಬದುಕಿನುದ್ದಕ್ಕೂ ಅತ್ಯಂತ ಸರಳವಾಗಿ ಮತ್ತು ಮೌಲ್ಯಯುತವಾಗಿ, ನಮ್ಮೆಲ್ಲರಿಗೂ ಮಾರ್ಗದರ್ಶಕರಾಗಿ ಬದುಕಿದ ಜೀವ ಮತ್ತು ಜೀವನ. ಸಾದಾ ಎಲ್ಲರನ್ನು ವಿದ್ಯೆಯತ್ತ ಪ್ರೋತ್ಸಾಹಿಸುತ್ತಿದ್ದರು. ವೃತ್ತಿಯ ಜೊತೆಗೆ ಹವ್ಯಾಸವಾಗಿ ಕೃಷಿಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದರು. ಅವರ ಬದುಕು ನಮಗೆಲ್ಲರಿಗೂ ಮಾದರಿಯಾಗಬೇಕು.’

– ಡಾ. ಹೇಮಾವತಿ ವಿ ಹೆಗ್ಗಡೆ, ಧರ್ಮಸ್ಥಳ


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts