Gl
ಪ್ರಚಲಿತ

ಪುತ್ತೂರಿಗೆ ಆಗಮಿಸಿದ ಪರಮವೀರ ಚಕ್ರ ಪ್ರಶಸ್ತಿ ಪುರಸ್ಕೃತ ಲೆಫ್ಟಿನೆಂಟ್ ಸಂಜಯ್ ಕುಮಾರ್ | ಐತಿಹಾಸಿಕ ಕಾರ್ಯಕ್ರಮವಾಗಿ ಬದಲಾದ ಅಂಬಿಕಾ ರಜತ ಮಹೋತ್ಸವ | ಪುತ್ತೂರಿಗರ ಅದ್ಧೂರಿ ಮೆರವಣಿಗೆ, ಸಾರ್ವಜನಿಕ ಸನ್ಮಾನಗಳ ಮಹಾಪೂರಕ್ಕೆ ಸೋತ ಧೀರ ಯೋಧ

GL

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಭಾರತೀಯ ಸೇನೆಯಲ್ಲಿ ನಮ್ಮ ಜತೆಗಿರುವ ಸೈನಿಕರೇ ನಮ್ಮ ಧೈರ್ಯ. ಎಲ್ಲರೂ ಏಕಮನಸ್ಸಿನಿಂದ ದೇಶಕ್ಕಾಗಿ ತಮ್ಮನ್ನು ತಾವು ಸಮರ್ಪಿಸಿಕೊಳ್ಳುವುದರಿಂದಲೇ ಪ್ರತಿಯೊಬ್ಬರಿಗೂ ಹುಮ್ಮಸ್ಸು ಮೂಡುತ್ತದೆ. ಭಾರತೀಯ ಸೇನೆಯ ವಿಶೇಷವೇ ಒಗ್ಗಟ್ಟು. ಒಬ್ಬ ಸೋಲುವ ಸಂದರ್ಭ ಎದುರಾದರೆ ಎಲ್ಲರೂ ಒಂದಾಗಿ ಸಹಕರಿಸುತ್ತಾರೆ. ಬಿದ್ದವನನ್ನು ಬಿಟ್ಟು ಓಡುವುದಿಲ್ಲ. ಹಾಗಾಗಿಯೇ ಭಾರತೀಯ ಸೇನೆ ಪ್ರಪಂಚದಲ್ಲೇ ವಿಶಿಷ್ಟವಾಗಿ ರೂಪುಗೊಂಡಿದೆ ಎಂದು ಕಾರ್ಗಿಲ್ ಯುದ್ಧದಲ್ಲಿ ಭಾಗಿಯಾಗಿ ಅಪ್ರತಿಮ ಶೌರ್ಯ ಪ್ರದಶಿಸಿ ಪರಮವೀರ ಚಕ್ರ ಪ್ರಶಸ್ತಿಗೆ ಭಾಜನರಾದ ಲೆಫ್ಟಿನೆಂಟ್ ಸಂಜಯ್ ಕುಮಾರ್ ಹೇಳಿದರು.

core technologies

ambika

ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ರಜತಮಹೋತ್ಸವ ಆಚರಣೆಯ ಅಂಗವಾಗಿ ಬಪ್ಪಳಿಗೆಯ ಶ್ರೀ ಶಂಕರ ಸಭಾಭವನದಲ್ಲಿ ನಡೆದ ವಿಶೇಷ ಕಾರ್ಯಕ್ರಮದಲ್ಲಿ ಭಾಗವಹಿಸಿ, ಸಾರ್ವಜನಿಕ ಸನ್ಮಾನ – ಗೌರವಗಳನ್ನು ಸ್ವೀಕರಿಸಿ ಶನಿವಾರ ಮಾತನಾಡಿದರು.

ಭಾರತೀಯ ಸೇನೆ ಎಂಬುದು ಪರಮಾಕರ್ಷಕ ತಾಣ. ಒಮ್ಮೆ ಅದರೊಳಗೆ ಹೊಕ್ಕವನಿಗೆ ಮರಳಿ ಬರುವುದಕ್ಕೆ ಮನಸ್ಸೊಪ್ಪದು. ಉಸಿರು ಇರುವವರೆಗೆ ಸೇನೆಯಲ್ಲಿರಬೇಕೆಂಬ ಭಾವ ಒಡಮೂಡಲಾರಮಭಿಸುತ್ತದೆ. ಮನೆಯಲ್ಲಿ ಹೆತ್ತವರು ಹೇಳಿದ್ದನ್ನು ಕೇಳದ ಹಲವರು ಸೈನ್ಯ ಸೇರಿದ ನಂತರ ಸೇನೆಯಲ್ಲಿ ತರಬೇತಿ ಕೊಟ್ಟವರ ಮಾತನ್ನು ಚಾಚೂ ತಪ್ಪದೆ ಪಾಲಿಸುತ್ತಾರೆ. ಇದು ಸೇನೆಯ ವಿಶಿಷ್ಟ ಗುಣ ಎಂದು ನುಡಿದರು.

ambika

ದೇಶ ಸೇವೆ ಮಾಡುವುದಕ್ಕೆ ಸೈನಿಕನೇ ಆಗಬೇಕೆಂದಿಲ್ಲ. ಸಾಮಾನ್ಯ ವ್ಯಕ್ತಿಯೂ ದೇಶಸೇವೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಳ್ಳಬಹುದು. ಒಳ್ಳಯ ವ್ಯಕ್ತಿಯಾಗಿ ಬದುಕುವುದೇ ಒಂದು ದೇಶಸೇವೆ. ಸೈನಿಕರು ಗಡಿಯಲ್ಲಿ ದೇಶಭಕ್ತಿ ತೋರಿದರೆ ಸಾಮಾನ್ಯರು ತಾವಿರುವ ಜಾಗದಲ್ಲೇ ಆ ಕೆಲಸ ಮಾಡಬಹುದು ಎಂದರಲ್ಲದೆ ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳ ಬದುಕನ್ನು ರೂಪಿಸುತ್ತವೆ. ಇಲ್ಲಿ ರಾಷ್ಟçಭಕ್ತಿ ಮೂಡಿಸಿದರೆ ಅದು ಮಕ್ಕಳ ಅಂತರAಗದಲ್ಲಿ ಸ್ಥಾಯಿಯಾಗುತ್ತದೆ ಎಂದು ನುಡಿದರು.

ವಿಧಾನ ಪರಿಷತ್ ಸದಸ್ಯ ಎಂ.ಎನ್. ಭೋಜೇಗೌಡ ಮಾತನಾಡಿ ಇಂದು ನಾವು ಚಿತ್ರಿಸುತ್ತಿರುವ ಭಾರತದ ಭೂಪಡದಲ್ಲಿರುವಷ್ಟು ಪ್ರದೇಶ ವಾಸ್ತವದಲ್ಲಿ ಭಾರತದ ಕೈಯಲ್ಲಿಲ್ಲ. ಒಂದಷ್ಟು ಭಾಗ ಪಾಕಿಸ್ಥಾನದ ವಶದಲ್ಲಿದ್ದರೆ ಮತ್ತೊಂದಷ್ಟು ಭಾಗ ಚೀನಾದ ಕೈಯಲ್ಲಿರುವುದು ದುರಂತ. ಕಾಶ್ಮೀರಪುರವಾಸಿನಿ ಶಾರದೆ ಎಂದು ಹೇಳುತ್ತೇವೆಯಾದರೂ ಕಾಶ್ಮೀರದಲ್ಲಿನ ಶಾರದೆಯ ಆವಾಸಸ್ಥಾನವನ್ನು ನಾವು ಮರಳಿ ಪಡೆಯಬೇಕಿದೆ. ಈ ಹಿನ್ನೆಲೆಯಲ್ಲಿ ದೇಶಪ್ರೇಮ ಸಹಿತವಾದ ಶಿಕ್ಷಣವನ್ನು ಒದಗಿಸಿಕೊಡುವ ಅಗತ್ಯವಿದೆ ಎಂದರು.

ನಮ್ಮನ್ನು ರಕ್ಷಿಸಿದ ಯೋಧರು ತಮ್ಮ ಕೆಲಸಕ್ಕಾಗಿ ಶಾಸಕರನ್ನು, ಮಂತ್ರಿಗಳನ್ನು ಕಾಯುವ ಪರಿಸ್ಥಿತಿ ಬರಬಾರದು. ಸೈನಿಕರಿಗೆ ಭದ್ರ ಬದುಕನ್ನು ಕಟ್ಟಿಕೊಡುವ ಕಾರ್ಯ ಸರ್ಕಾರಗಳಿಂದ ನಡೆಯಬೇಕು. ಸ್ವಸ್ಥ ಸಮಾಜದ ನಿರ್ಮಾಣ ವಿದ್ಯಾರ್ಥಿಗಳಿಂದ ಹಾಗೂ ಸೈನಿಕರಿಂದ ಸಾಧ್ಯ. ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸೈನ್ಯ ಸೇರುವ ಹುಮ್ಮಸ್ಸು ಬೆಳೆಸಿಕೊಳ್ಳಬೇಕು ಎಂದು ಕರೆನೀಡಿದರು.

ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಬ್ರಮಣ್ಯ ನಟ್ಟೋಜ ಮಾತನಾಡಿ ದೇಶದ ಸಕಲ ಅನಾಹುತಗಳಿಗೆ ಶಿಕ್ಷಣಸಂಸ್ಥೆಗಳೇ ಕಾರಣ. ಕೊಡಬೇಕಾದ ಕಾಲದಲ್ಲಿ ದೇಶಭಕ್ತಿಯನ್ನು, ಸಂಸ್ಕಾರವನ್ನು ಕೊಡದಿರುವುದೇ ಸಮಸ್ಯೆಗಳ ಮೂಲಕೇಂದ್ರ. ಈ ಹಿನ್ನೆಲೆಯಲ್ಲಿ ನಿರಂತರ ದೇಶಪ್ರೇಮ ಸಹಿತ ಶಿಕ್ಷಣವನ್ನು ಅಂಬಿಕಾದಲ್ಲಿ ಅಳವಡಿಸಿಕೊಳ್ಳಲಾಗಿದೆ ಎಂದು ನುಡಿದರು.

ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ವತಿಯಿಂದ ಲೆಫ್ಟಿನೆಂಟ್ ಸಂಜಯ್ ಕುಮಾರ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಬ್ರಮಣ್ಯ ನಟ್ಟೋಜ ವೈಯಕ್ತಿಕ ನೆಲೆಯಿಂದ ಲೆಫ್ಟಿನೆಂಟ್ ಸಂಜಯ್ ಕುಮಾರ್ ಅವರಿಗೆ ಮಿಲಿಟರಿ ಪಡೆಗಳ ಸಂಯುಕ್ತ ಚಿಹ್ನೆಯ ಬಂಗಾರದ ಪ್ರತಿಕೃತಿ ನೀಡಿ ಗೌರವಿಸಿದರು. ಈ ಸಂದರ್ಭದಲ್ಲಿ ವಿವಿಧ ಸಂಘಟನೆಗಳು ಹಾಗೂ ವ್ಯಕ್ತಿಗಳಿಂದ ಸನ್ಮಾನ ಕಾರ್ಯಕ್ರಮ ನಡೆಯಿತು. ಅಂಬಿಕಾ ಸಂಸ್ಥೆಗಳ ವಿದ್ಯಾರ್ಥಿಗಳು ಸಂಜಯ್ ಕುಮಾರ್ ಅವರಿಗೆ ನೆನಪಿನ ಕಾಣಿಕೆಗಳನ್ನು ನೀಡಿ ಕೃತಜ್ಞತೆಯನ್ನು ತೋರಿದರು.

ವೇದಿಕೆಯಲ್ಲಿ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ರಾಜಶ್ರೀ ಎಸ್. ನಟ್ಟೋಜ, ಮೇಜರ್ ಜನರಲ್ ಎಂ.ವಿ.ಭಟ್, ಕರ್ನಲ್ ಶರತ್ ಚಂದ್ರ ಭಂಡಾರಿ, ಕೊಡಗು ಜಿಲ್ಲೆ ಮಾಜಿ ಸೈನಿಕ ಸಂಘದ ಅಧ್ಯಕ್ಷ ಕ್ಯಾಪ್ಟನ್ ದಯಾನಂದ್, ಪುತ್ತೂರಿನ ಮಾಜಿ ಸೈನಿಕರ ಸಂಘದ ಅಧ್ಯಕ್ಷ ಸಾರ್ಜೆಂಟ್ ವಸಂತ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ವಿವಿಧ ಯುದ್ಧಗಳಲ್ಲಿ ಭಾಗವಹಿಸಿ ನಿವೃತ್ತಿ ಹೊಂದಿರುವ ಮಾಜಿ ಸೈನಿಕರಿಗೆ ಮತ್ತು ಅವರ ಕುಟುಂಬಸ್ಥರಿಗೆ ಅಭಿನಂದನಾ ಕಾರ್ಯಕ್ರಮ ನಡೆಯಿತು.

ಪುತ್ತೂರಿನ ಮಾಜಿ ಸೈನಿಕರ ಸಂಘದ ಸುಬೇದಾರ್ ಸುಂದರ ಗೌಡ ಸ್ವಾಗತಿಸಿದರು. ನೆಲ್ಲಿಕಟ್ಟೆ ಅಂಬಿಕಾ ಪದವಿಪೂರ್ವ ವಿದ್ಯಾಲಯದ ಪ್ರಾಚಾರ್ಯ ಸತ್ಯಜಿತ್ ಉಪಾಧ್ಯಾಯ ವಂದಿಸಿದರು. ಉಪನ್ಯಾಸಕಿ ಸುಚಿತ್ರಾ ಪ್ರಭು ಸನ್ಮಾನ ಪತ್ರ ವಾಚಿಸಿದರು. ಅಂಬಿಕಾ ಪದವಿಪೂರ್ವ ವಿದ್ಯಾಲಯದ ಉಪನ್ಯಾಸಕ ಆದರ್ಶ ಗೋಖಲೆ ಕಾರ್ಯಕ್ರಮ ನಿರ್ವಹಿಸಿದರು. ಮಡಿಕೇರಿ ಮಾಜಿ ಸೈನಿಕ ಸಂಘದ ಅಧ್ಯಕ್ಷ ಪೆಮ್ಮಯ್ಯ ಅನಿಸಿಕೆ ವ್ಯಕ್ತಪಡಿಸಿದರು. ಅಂಬಿಕಾ ವಿದ್ಯಾರ್ಥಿನಿಯರು ಲೆಫ್ಟಿನೆಂಟ್ ಸಂಜಯ್ ಕುಮಾರ್ ಅವರ ಬಗೆಗೆ ರಚಿಸಿದ ಕವನ ವಾಚಿಸಿದರು. ಆಗಮಿಸಿದ ಸರ್ವರಿಗೂ ಭೋಜನದ ವ್ಯವಸ್ಥೆಯನ್ನು ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ವತಿಯಿಂದ ಆಯೋಜಿಸಲಾಯಿತು.

ಮೆರವಣಿಗೆ:

ಸಭಾ ಕಾರ್ಯಕ್ರಮಕ್ಕೂ ಪೂರ್ವದಲ್ಲಿ ದರ್ಬೆ ಸರ್ಕಲ್ ಬಳಿ ಐತಿಹಾಸಿಕ ಮೆರವಣಿಗೆಯನ್ನು ಶ್ರೀ ಮಹಾವೀರ ಆಸ್ಪತ್ರೆಯ ವೈದ್ಯ ಡಾ.ಸುರೇಶ್ ಪುತ್ತೂರಾಯ ಉದ್ಘಾಟಿಸಿದರು. ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ, ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್, ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಗೌರವಾಧ್ಯಕ್ಷ ಲಕ್ಷಿö್ಮÃಶ ತೋಳ್ಪಾಡಿ, ಆಡಳಿತ ಮಂಡಳಿ ಸದಸ್ಯ ಬಾಲಕೃಷ್ಣ ಬೋರ್ಕರ್, ಹಿರಿಯ ನ್ಯಾಯವಾದಿ ಮಹೇಶ್ ಕಜೆ, ಂಬಿಕಾ ಸಂಸ್ಥೆಗಳ ಅಧ್ಯಕ್ಷ ಸುಬ್ರಮಣ್ಯ ನಟ್ಟೋಜ, ಕಾರ್ಯದರ್ಶಿ ರಾಜಶ್ರೀ ಎಸ್. ನಟ್ಟೋಜ, ರಾಜಕೀಯ ನೇತಾರರಾದ ಸಾಜ ರಾಧಾಕರಷ್ಣ ಆಳ್ವ, ಶಿವರಾಮ ಆಳ್ವ ಮೊದಲಾದ ಗಣ್ಯರು ಹಾಜರಿದ್ದರು. ಅಂಬಿಕಾ ಶಿಕ್ಷಣ ಸಂಸ್ಥೆಗಳನ್ನೊಳಗೊAಡAತೆ ಪುತ್ತೂರಿನ ವಿವಿಧ ಶಿಕ್ಷಣ ಸಂಸ್ಥೆಯ ಉದ್ಯೋಗಿಗಳು, ವಿದ್ಯಾರ್ಥಿಗಳು, ಮಾಜಿ ಸೈನಿಕರ ಸಂಘದ ಸದಸ್ಯರು, ಅನ್ಯಾನ್ಯ ಸಂಘಟನೆಗಳ ಸದಸ್ಯರು ಪರಮವೀರ ಚಕ್ರ ಪುರಸ್ಕೃತ ಲೆಫ್ಟಿನೆಂಟ್ ಸಂಜಯ್ ಕುಮಾರ್ ಅವರನ್ನು ವಿಶಿಷ್ಟವಾಗಿ ರೂಪಿಸಲಾಗಿದ್ದ ರಥದಲ್ಲಿ ಕುಳ್ಳಿರಿಸಿ ವೈಭವೋಪೇತವಾಗಿ ಕಿಲ್ಲೆ ಮೈದಾನದ ಬಳಿಯ ಅಮರ್ ಜವಾನ್ ಜ್ಯೋತಿ ಸ್ಮಾರಕದೆಡೆಗೆ ಮೆರವಣಿಗೆ ನಡೆಸಿದರು. ಸ್ಮಾರಕದಲ್ಲಿ ಈ ದೇಶಕ್ಕಾಗಿ ಪ್ರಾಣಾರ್ಪಣೆಗೈದ ವೀರ ಯೋಧರಿಗೆ ಲೆಫ್ಟಿನೆಂಟ್ ಸಂಜಯ್ ಕುಮಾರ್ ರೀತ್ ಸಮರ್ಪಿಸಿ ಗೌರವ ಸಲ್ಲಿಸಿದರು.

ಹಾದಿಯುದ್ದಕ್ಕೂ ಸಾರ್ವಜನಿಕರು, ವರ್ತಕರು, ದೇಶಾಭಿಮಾನಿ ಬಂಧುಗಳು ವೀರ ಯೋಧನಿಗೆ ಮಾಲಾರ್ಪಣೆ ಮಾಡಿ ಗೌರವಿಸಿದರು. ಮೆರವಣಿಗೆಯಲ್ಲಿ ರಾಷ್ಟçಧ್ವಜ, ಡೊಳ್ಳುಕುಣಿತ, ಚೆಂಡೆ, ಗೊಂಬೆ, ಸ್ಥಬ್ಧಚಿತ್ರಗಳು, ಗೌರವ ಸೂಚಕ ಬೃಹತ್ ಕೊಡೆಗಳು, ಜತೆಸೇರಿ ಮೆರವಣಿಗೆಯ ಸೌಂದರ್ಯವನ್ನು ಹೆಚ್ಚಿಸಿದವು. ಜತೆಗೆ ಎನ್‌ಸಿಸಿ, ಸ್ಕೌಟ್ ಅಂಡ್ ಗೈಡ್ಸ್ ವಿದ್ಯಾರ್ಥಿಗಳು ಮೆರವಣಿಗೆಯಲ್ಲಿ ಭಾಗಿಯಾಗಿ ಶಿಸ್ತಿನ ಸಂಚಲನವನ್ನು ನಡೆಸಿಕೊಟ್ಟರು. ಮೆರವಣಿಗೆಯ ಮಧ್ಯೆ ಭಾರತಾಂಬೆಯ ವೇಷ ಧರಿಸಿದ ಅಂಬಿಕಾ ವಿದ್ಯಾರ್ಥಿನಿ ಹಾಗೂ ಅದಕ್ಕೆ ಪೂರಕವಾಗಿ ಮೂಡಿಬಂದ ದೇಶಭಕ್ತಿ ಗೀತೆ ಎಲ್ಲರ ಗಮನ ಸೆಳೆಯಿತು.

ಎಲ್ಲರಿಂದ ವಂದೇ ಮಾತರಂ ಗೀತೆ: ಸಭಾ ಕಾರ್ಯಕ್ರಮದ ಆರಂಭದಲ್ಲಿ ಪ್ರಾರ್ಥನೆಯ ವೇಳೆಗೆ ಇಡಿಯ ಸಭಾಂಗಣದಲ್ಲಿದ್ದವರೆಲ್ಲರೂ ಪ್ರಾರ್ಥಿಸುವವರೊಂದಿಗೆ ವಂದೇ ಮಾತರಂ ಗೀತೆಗೆ ಧ್ವನಿ ಸೇರಿಸಿದ್ದು ವಿಶೇಷವಾಗಿ ಮೂಡಿಬಂತು.

ವಿಶಿಷ್ಟ ಉದ್ಘಾಟನೆ:

ಪರಮವೀರ ಚಕ್ರ ಪ್ರಶಸ್ತಿ ಪುರಸ್ಕೃತ ಲೆಫ್ಟಿನೆಂಟ್ ಸಂಜಯ್ ಕುಮಾರ್ ಅವರು ಗುಂಡಿ ಅದುಮಿದಾಗ ರೆಫೇಲ್ ಮಾದರಿಯ ವಿಮಾನ ಮೇಲೆ ಹಾರುವ ವಿಶಿಷ್ಟ ವ್ಯವಸ್ಥೆಯನ್ನು ಅಂಬಿಕಾದಲ್ಲಿ ರೂಪಿಸಲಾಗಿತ್ತು. ಆ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು.

ನಾನಾ ಭಾಗಗಳಿಂದ ಮಾಜಿ ಸೈನಿಕರ ದಂಡು :

ಈ ಐತಿಹಾಸಿಕ ಕಾರ್ಯಕ್ರಮಕ್ಕೆ ವಿವಿಧ ಜಿಲ್ಲೆಗಳ ನಾನಾ ಭಾಗಗಳಿಂದ ವಿಶ್ರಾಂತ ಸೈನಿಕರ ದಂಡೇ ಹರಿದುಬಂದಿತ್ತು. ಆಗಮಿಸಿದ ಪ್ರತಿಯೊಬ್ಬರನ್ನೂ ಅಂಬಿಕಾ ಸಂಸ್ಥೆಗಳ ಅಧ್ಯಕ್ಷ ಶಾಲು ಹೊದೆಸಿ ಗೌರವಿಸಿದ್ದು ಭಾವನಾತ್ಮಕ ಎನಿಸಿತು.

ಕಾರ್ಗಿಲ್ ನೆನಪು ಮಾಡಿದ ಲೆಫ್ಟಿನೆಂಟ್ ಸಂಜಯ್ ಕುಮಾರ್:

ಕಾರ್ಗಿಲ್ ಯುದ್ಧದಲ್ಲಿ ನಾನು ಬದುಕಿದ್ದೇ ಪವಾಡ. ನಾವು ಪಾಕಿಸ್ಥಾನದ ವಿರುದ್ಧ ಮುಂದೊತ್ತಿ ಹೋಗುತ್ತಿದ್ದೆವು. ಇದ್ದಕ್ಕಿದ್ದಂತೆ ನಮ್ಮ ಸ್ನೇಹಿತ ಯೋಧನೊಬ್ಬ ನನ್ನನ್ನು ಹಿಂದಕ್ಕೆ ಎಳೆದ. ಆ ಕ್ಷಣ ನನಗೆ ಅತೀವ ಸಿಟ್ಟು ಬಂತು. ಆದರೆ ಕೆಲವೇ ಕ್ಷಣಗಳಲ್ಲಿ ನಾನು ಹಿಂದೆ ಇದ್ದ ಜಾಗಕ್ಕೆ ಪಾಕಿಸ್ಥಾನದ ಸೈನಿಕರು ಎಸೆದ ಗ್ರೇನೇಡ್ ಒಂದು ಬಂದು ಆ ಜಾಗವನ್ನು ಧ್ವಂಸಗೊಳಿಸಿತು. ನನಗೆ ಸಾಕಷ್ಟು ಗಾಯವಾಯಿತು. ಅಕಸ್ಮಾತ್ ನನ್ನ ಸ್ನೇಹಿತ ನನ್ನನ್ನು ಹಿಂದಕ್ಕೆ ಎಳೆಯದಿರುತ್ತಿದ್ದರೆ ನಾನಿಂದು ಬದುಕಿ ಇರುತ್ತಿರಲಿಲ್ಲ. ಯುದ್ಧದಲ್ಲಿ ವೈರಿಗಳನ್ನು ಬೆನ್ನಟ್ಟುತ್ತಾ ಅವರದೇ ಮೆಷಿನ್ ಗನ್‌ನಿಂದ ಅವರನ್ನೇ ಹೊಡೆದುಹಾಕಿದೆ.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts