ಮಂಗಳೂರಿನಲ್ಲಿ ಸೈಬರ್ ವಂಚನೆ ನಡೆದಿದ್ದು, ಆನ್‌ಲೈನ್ ಹೂಡಿಕೆ ವಂಚನೆ ಹೆಸರಲ್ಲಿ 43 ವರ್ಷದ ವ್ಯಕ್ತಿಯೊಬ್ಬರು 2 ಕೋಟಿ ರೂ.ಗೂ ಹೆಚ್ಚು ಹಣವನ್ನು ಕಳೆದುಕೊಂಡಿದ್ದಾರೆ. ವಂಚಕ ತಾನು ಕಂಪನಿಯೊಂದರ ಪ್ರತಿನಿಧಿಯೆಂದು ನಂಬಿಸಿ ಮೋಸ ಮಾಡಿದ್ದು, ಸಿಟಿ ಸಿಇಎನ್ (CEN) ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದುಪ್ಪಟ್ಟು ಹಣದ ಆಮಿಷವೊಡ್ಡಿ ಮೋಸ
ನೊಂದ ವ್ಯಕ್ತಿಯ ದೂರಿನ ಪ್ರಕಾರ, 2022ರ ಮೇ 1ರಂದು ಅಂಕಿತ್ ಎಂಬ ವ್ಯಕ್ತಿಯಿಂದ ವಾಟ್ಸಾಪ್ ಸಂದೇಶವೊಂದು ಬಂದಿತ್ತು. ಆ ಸಂದೇಶದಲ್ಲಿ ತಾನು ಒಂದು ಕಂಪನಿಯ ಪ್ರತಿನಿಧಿಯಾಗಿ ಕೆಲಸ ಮಾಡತ್ತಿದ್ದೇನೆಂದು ಅಂಕಿತ್ ಹೇಳಿದ್ದ. ತನ್ನ ಮೂಲಕ ಯಾವುದೇ ಹೂಡಿಕೆ ಮಾಡಿದರೂ ದುಪ್ಪಟ್ಟು ಹಣ ಪಡೆಯಬಹುದೆಂದು ಭರವಸೆ ನೀಡಿದ್ದ ಎಂದು ತಿಳಿದುಬಂದಿದೆ. ಅಂಕಿತ್ ತನ್ನೊಂದಿಗೆ ಕಾರ್ಯ ನಿರ್ವಹಿಸುತ್ತಿದ್ದ ಸುಮಿತ್ ಜೈಸ್ವಾಲ್, ಕುಶಾಗರ್ ಜೈನ್ ಮತ್ತು ಅಖಿಲ್ ಎನ್ನುವವರನ್ನು ದೂರುದಾರರಿಗೆ ಪರಿಚಯಿಸಿ, ಈ ಮೂವರು ವಿದೇಶಿ ಹೂಡಿಕೆಗಳನ್ನು ನಿರ್ವಹಿಸುತ್ತಾರೆಂದೂ, ಇವರಲ್ಲಿ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ಪಡೆಯಬಹುದೆಂದೂ ಹೇಳಿದ್ದ.
ಸಂಬಂಧಿಕರ ಖಾತೆಯಿಂದಲೂ ಹಣ ವರ್ಗಾವಣೆ
ವಂಚಕರ ಮಾತನ್ನು ನಂಬಿದ್ದ ವ್ಯಕ್ತಿಗೆ ಅಂಕಿತ್ ವಾಟ್ಸಾಪ್ ಕರೆಯ ಮೂಲಕ ಹೂಡಿಕೆ ಸಂಪೂರ್ಣವಾಗಿ ಸುರಕ್ಷಿತವಾಗಿದೆ ಮತ್ತು ವಂಚನೆಯಿಂದ ಮುಕ್ತವಾಗಿದೆ ಎಂದು ಇನ್ನೊಮ್ಮೆ ಭರವಸೆ ನೀಡಿದ್ದ. ಈ ಜಾಲಕ್ಕೆ ಸಿಲುಕಿದ ದೂರುದಾರರು ಆರಂಭದಲ್ಲಿ ಅಂಕಿತ್ ಒದಗಿಸಿದ QR ಕೋಡ್ಗೆ 3,500 ರೂಗಳನ್ನು ವರ್ಗಾಯಿಸಿದ್ದರು. ಶೀಘ್ರದಲ್ಲೇ ಲಾಭವಾಗಿ 1,000 ರೂ.ಗಳನ್ನು ಪಡೆದಿದ್ದರು.
ಶೀಘ್ರ ಲಾಭದಿಂದ ಉತ್ತೇಜಿತರಾದ ಇವರು ದೊಡ್ಡ ಮೊತ್ತವನ್ನು ಹೂಡಿಕೆ ಮಾಡಲು ಪ್ರಾರಂಭಿಸಿದ್ದರು. ಕೇವಲ ತಮ್ಮ ಬ್ಯಾಂಕ್ ಖಾತೆಯಿಂದಷ್ಟೇ ಅಲ್ಲದೇ ಅವರ ಚಿಕ್ಕಪ್ಪ, ಹೆಂಡತಿ ಮತ್ತು ಸೊಸೆಯ ಬ್ಯಾಂಕ್ ಖಾತೆಯಿಂದಲೂ ಹಂತ ಹಂತವಾಗಿ ಹಣವನ್ನು ವರ್ಗಾಯಿಸಿದ್ದರು. ಇದೇ ರೀತಿ ಮೇ 2022 ರಿಂದ 29 ಆಗಸ್ಟ್ 2025 ರ ನಡುವೆ UPI ಮತ್ತು IMPS ವಹಿವಾಟುಗಳ ಮೂಲಕ ಆರೋಪಿಗಳ ಬ್ಯಾಂಕ್ ಖಾತೆಗಳಿಗೆ 2 ಕೋಟಿ ರೂ.ಗೂ ಹೆಚ್ಚಿನ ಮೊತ್ತವನ್ನು ಕಳುಹಿಸಿದ್ದರೆಂದು ಹೇಳಲಾಗಿದೆ.
ಕೊಲೆ ಬೆದರಿಕೆಯೊಡ್ಡಿದ್ದ ವಂಚಕರು:
ಕಳೆದ ಕೆಲ ತಿಂಗಳುಗಳಿಂದ ಈ ನಾಲ್ವರೂ ದೂರುದಾರರನ್ನು ಸಂಪರ್ಕಿಸಿರಲಿಲ್ಲ. ದೂರುದಾರರು ನಿರಂತರವಾಗಿ ಸಂಪರ್ಕಿಸಲು ಪ್ರಯತ್ನ ಪಟ್ಟಾಗ ಕೊನೆಗೂ ಅಂಕಿತ್ನಿಂದ ಸಂದೇಶ ಬಂದಿತ್ತು. ಆತ ಉಳಿದ ಮೂವರಿಂದ ತನಗೆ ಮೋಸವಾಗಿದೆ, ತಾನು ಈಗಾಗಲೇ ಅವರೊಂದಿಗೆ ಸಂಪರ್ಕವನ್ನು ಕಡಿತಗೊಳಿಸಿದ್ದೇನೆಂದು ಹೇಳಿದ್ದ. ಇದೇ ವೇಳೆ ಸುಮಿತ್ ಜೈಸ್ವಾಲ್, ಕುಶಾಗರ್ ಜೈನ್ ಮತ್ತು ಅಖಿಲ್ ಈ ಮೂವರೂ ದೂರುದಾರರಿಗೆ ಕರೆ ಮಾಡಿ, ಪೊಲೀಸರನ್ನು ಸಂಪರ್ಕಿಸದಂತೆ ಕೊಲೆ ಬೆದರಿಕೆಯನ್ನೂ ಹಾಕಿದ್ದರು. ಇದರಿಂದ ಗಾಬರಿಗೊಂಡ ದೂರುದಾರರು ತಮ್ಮ ಕುಟುಂಬದವರಿಗೆ ವಿಷಯ ತಿಳಿಸಿ ನಂತರ ಸಿಇಎನ್ ಠಾಣೆಗೆ ದೂರು ನೀಡಿದ್ದಾರೆ.


























