ಪುತ್ತೂರು: ರಾಜೀ ಸಂದಾನದ ಮೂಲಕ ಬಗೆಹರಿಸಿಕೊಳ್ಳಬಹುದಾದ ವ್ಯಾಜ್ಯಗಳನ್ನು ಬಗೆಹರಿಸಿಕೊಳ್ಳಲು ಉತ್ತಮ ಅವಕಾಶವಿದೆ ಎಂದು ತಾಲೂಕು ಕಾನೂನು ಸಮಿತಿ ಚೇರ್ಮೆನ್, ಪ್ರಧಾನ ಹಿರಿಯ ವ್ಯವಹಾರಿಕ ನ್ಯಾಯಾಲಯದ ನ್ಯಾಯಾಧೀಶರಾದ ಪ್ರಕೃತಿ ಕಲ್ಯಾಣ್ ಪುರ ತಿಳಿಸಿದರು.
ಅವರು ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದಂತೆ ಜುಲೈ 12ರಂದು ರಾಷ್ಟ್ರೀಯ ಲೋಕ್ ಅದಾಲತ್ ನ್ನು ಪುತ್ತೂರು ತಾಲೂಕು ಕಾನೂನು ಸೇವಾ ಸಮಿತಿ ಆಶ್ರಯದಲ್ಲಿ ಪುತ್ತೂರು ನ್ಯಾಯಾಲಯದಲ್ಲಿ ನಡೆಯಲಿದ್ದು, ಈ ಕುರಿತು ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ಲೋಕ್ ಅದಾಲತ್ ನಲ್ಲಿ ಹೆಚ್ಚಿನ ಪ್ರಕರಣಗಳು ಇತ್ಯರ್ಥವಾಗಲು ಎಲ್ಲರ ಸಹಕಾರದ ಅಗತ್ಯವಿದೆ. ಈಗಾಗಲೇ ಪೂರ್ವಭಾವಿ ಸಭೆಗಳನ್ನು ಹಣಕಾಸು ಸಂಸ್ಥೆಗಳು, ಪೊಲೀಸ್, ಆರ್ .ಟಿ.ಓ. ಪುರಸಭೆ ಅಧಿಕಾರಿಗಳು, ತಹಶೀಲ್ದಾರ್, ವಕೀಲರು, ಇನ್ಸೂರೆನ್ಸ್ ಕಂಪೆನಿಗಳ ಅಧಿಕಾರಿಗಳೊಂದಿಗೆ ಮಾಡಲಾಗಿದೆ. ಹಣಕಾಸು ಸಂಸ್ಥೆಗಳಿಗೆ ಬಡ್ಡಿ ಹಣದಲ್ಲಿ ರಿಯಾಯಿತಿ ನೀಡಿ ಸಹಕರಿಸಬೇಕು ಎಂದು ಕೇಳಿಕೊಳ್ಳಲಾಗಿದೆ. ಸಾಲಗಾರರ ಮನವೊಲಿಸುವ ಪ್ರಯತ್ನಗಳನ್ನು ಕೂಡ ಮಾಡುವಂತೆ ಅಧಿಕಾರಿಗಳಿಗೆ ಮತ್ತು ವಕೀಲರಿಗೆ ಹೇಳಲಾಗಿದೆ. ಈ ರೀತಿ ರಾಜಿ ಸಂಧಾನ ಮಾಡಿ ಪ್ರಕರಣಗಳನ್ನು ಇತ್ಯರ್ಥ ಮಾಡುವುದರಿಂದ ಹಣ ಮತ್ತು ಸಮಯದ ಉಳಿತಾಯ ಮಾನಸಿಕ ನೆಮ್ಮದಿ ಮತ್ತು ತ್ವರಿತ ನ್ಯಾಯಾಧಾನ ಆಗುತ್ತದೆ. ಈಗ ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣಗಳಲ್ಲಿ ರಾಜೀ ಮಾಡಲು ಇಚ್ಚಿಸುವ ಎಲ್ಲರೂ ನ್ಯಾಯಾಲಯಕ್ಕೆ ಹಾಜರಾಗಿ ಲೋಕ್ ಅದಾಲತ್ ನ್ನು ಯಶಸ್ವಿಗೊಳಿಸಬೇಕೆಂದು ಅವರು ವಿನಂತಿಸಿದರು.
ಜನರಿಗೆ ಲೋಕ್ ಅದಾಲತ್ ಬಗ್ಗೆ ತಿಳಿಯುವಂತೆ ಮಾಡಲು ಕಸ ವಿಲೇವಾರಿ ವಾಹನಕ್ಕೆ ನಮ್ಮ ಲೋಕ್ ಅದಾಲತ್ ಬಗೆಗಿನ ಒಂದು ಆಡಿಯೋ ತುಣುಕನ್ನು ನಾವು ಪುರಸಭೆಗೆ ನೀಡುತ್ತಿದ್ದು, ಪ್ರತಿ ವಾರ್ಡಿಗೆ ಕಸ ಸಂಗ್ರಹಿಸಲು ಹೋಗುವಾಗ ಸದರಿ ಹಾಡನ್ನು ಹಾಕಿ ಮನೆ ಮನೆಗೆ ನಮ್ಮ ಲೋಕ್ ಅದಾಲತ್ ನ ವಿಚಾರವನ್ನು ತಿಳಿಯುವಂತೆ ಮಾಡುತ್ತಿದ್ದೇವೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಮಿತಿಯ ಸದಸ್ಯ ಕಾರ್ಯದರ್ಶಿ, ಪ್ರಧಾನ ವ್ಯವಹಾರಿಕ ನ್ಯಾಯಾಲಯದ ನ್ಯಾಯಧೀಶರಾದ ಶಿವಣ್ಣ ಎಚ್. ಆರ್., ಹೆಚ್ಚುವರಿ ವ್ಯವಹಾರಿಕ ನ್ಯಾಯಾಲಯದ ನ್ಯಾಯಧೀಶರಾದ ಯೋಗೇಂದ್ರ ಶೆಟ್ಟಿ, ಪುತ್ತೂರು ವಕೀಲರ ಸಂಘದ ಅಧ್ಯಕ್ಷ ನ್ಯಾಯವಾದಿ ಜಿ. ಜಗನ್ನಾಥ ರೈ ಉಪಸ್ಥಿತರಿದ್ದರು.