ಕೃಷಿ

ಎಲೆ ಚುಕ್ಕಿ ರೋಗ ನಿಯಂತ್ರಣ ಸಾಧ್ಯ: ಸಿ.ಪಿ.ಸಿ.ಆರ್.ಐ. ವಿಜ್ಞಾನಿ

ಈ ಸುದ್ದಿಯನ್ನು ಶೇರ್ ಮಾಡಿ

ಅಡಿಕೆ ಎಲೆಚುಕ್ಕಿ ರೋಗ ಹಲವಾರು ವರ್ಷಗಳಿಂದ ಕಾಡುತ್ತಿದೆ. ಕೆಲ ವರ್ಷಗಳಿಂದ ವಾತಾವರಣದಲ್ಲಿನ ಬದಲಾವಣೆ ಸಹಿತ ನಾನಾ ಕಾರಣಗಳಿಂದ ಅದರ ತೀವ್ರತೆ ಹೆಚ್ಚಾಗಿದೆ. ರೋಗ ಹರಡಲು ಕಾರಣವಾಗಿರುವ ಶಿಲೀಂದ್ರಗಳ ಬೀಜಾಣು ನಾಶಪಡಿಸುವಿಕೆ, ಸಮಗ್ರ ರೋಗ ನಾಶಕ‌ ನಿರ್ವಹಣ ಪದ್ಧತಿ ಅಳವಡಿಕೆಯಿಂದ ಎಲೆ ಚುಕ್ಕಿ ರೋಗ ನಿಯಂತ್ರಣ  ಸಾಧ್ಯವಿದೆ ಎಂದು ವಿಟ್ಲ ಸಿಪಿಸಿಆರ್ ಐ ಹಿರಿಯ ವಿಜ್ಞಾನಿ ಡಾ|ನಾಗರಾಜ ಹೇಳಿದರು.

ಮುಕ್ಕೂರು ನೇಸರ ಯುವಕ ಮಂಡಲ ಹತ್ತನೇ ವರ್ಷಾಚರಣೆ-ದಶಪ್ರಣತಿ ಪ್ರಯುಕ್ತ ಪ್ರಗತಿಪರ ಕೃಷಿಕ ಮೋಹನ ಬೈಪಾಡಿತ್ತಾಯ ಅವರ ಕೃಷಿ ಕ್ಷೇತ್ರದಲ್ಲಿ ನಡೆದ ಕಾಳುಮೆಣಸು, ಕಾಫಿ ಗಿಡ ಕೃಷಿ ಮತ್ತು ನಿರ್ವಹಣೆ ಹಾಗೂ ಅಡಿಕೆ ಎಲೆ ಚುಕ್ಕಿ ರೋಗ ನಿಯಂತ್ರಣ , ಮಣ್ಣಿನ ಪೋಷಕಾಂಶಗಳ ಬಗ್ಗೆ ಮಾಹಿತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು. ಅಡಿಕೆ ಮರಗಳ ಬೆಳವಣಿಗೆ ಕುಂಠಿತವಾಗುವ ಮೂಲಕ ಇದರ ರೋಗ ಲಕ್ಷಣವನ್ನು ಗಮನಿಸಬಹುದು. ರೋಗದ ತೀವ್ರತೆಯಿಂದ ಎಲೆಗಳು ಒಣಗಿ ಹೋಗುತ್ತಿದ್ದರೆ ಅವುಗಳನ್ನು ಕತ್ತರಿಸಿ ಸುಟ್ಟು ರೋಗ ಹರಡದಂತೆ ಎಚ್ಚರಿಕೆ ವಹಿಸಬಹುದು ಎಂದರು.

ಪ್ರಗತಿಪರ ಕೃಷಿಕ ಸುರೇಶ್ ಬಲ್ನಾಡು ಮಾತನಾಡಿ, ಕಾಳುಮೆಣಸಿನ ಕೃಷಿಕನಾಗಿ ಅದರಲ್ಲಿ ಸೋತು ಗೆದ್ದವನು. ಅನುಭವವೇ ಕೃಷಿ ಕ್ಷೇತ್ರದ ಸಾಧನೆಗೆ ಮೂಲ. ಕೃಷಿಯಲ್ಲಿ ಸಣ್ಣ ಕೃಷಿಕ, ದೊಡ್ಡ ಕೃಷಿಕ ಎಂಬ ಅಂತರ ಇಲ್ಲ. ಉತ್ತಮ ಕೃಷಿಯೇ ಎಲ್ಲರ ಗುರಿ ಎಂದ ಅವರು, ಸಮಗ್ರ ಕೃಷಿ ಪದ್ಧತಿಯಿಂದ ಕೃಷಿಯಲ್ಲಿ ಪ್ರಗತಿ ಸಾಧ್ಯವಿದೆ. ಅಡಿಕೆ, ಕಾಳು ಮೆಣಸಿನ ಜತೆಗೆ ಬೊಳುವಾರು ಮಾವಿನ ತಳಿಯಿಂದಲೂ ಜನರು ನನ್ನನ್ನು ಗುರುತಿಸುತ್ತಿದ್ದಾರೆ. ನಮ್ಮ ತಳಿಗಳನ್ನು ಉಳಿಸಿಕೊಳ್ಳುವುದು ನಮ್ಮ ಜವಾಬ್ದಾರಿ. ಹಾಗಾಗಿ ನಮ್ಮ ತಳಿಗಳ ಬಗ್ಗೆ ಇತರರಿಗೆ ತಿಳಿಸಿ ಎಂದರು.

ಐಸಿಎಆರ್-ಡಿಸಿಆರ್ ಪುತ್ತೂರು ಇದರ ನಿವೃತ್ತ ಪ್ರಧಾನ ವಿಜ್ಞಾನಿ ಡಾ.ಎನ್ ಯದುಕುಮಾರ್ ಮಾತನಾಡಿ, ಅಡಿಕೆ ಅಥವಾ ಇನ್ನಿತ್ತರ ಕೃಷಿಗಳಿಗೆ ಸಂಬಂಧಿಸಿ ಕೃಷಿಕರಲ್ಲಿ ಸಮರ್ಪಕ ಮಾಹಿತಿ ಇರಬೇಕು. ಅವುಗಳ ಬೆಳವಣಿಗೆಗೆ, ಉತ್ತಮ ಫಸಲಿಗೆ ಯಾವುದು ಅನುಕೂಲ ಅನ್ನುವುದನ್ನು ಅರಿತುಕೊಂಡು ಅದಕ್ಕೆ ತಕ್ಕ ಹಾಗೆ ಕೃಷಿಯನ್ನು ಮುನ್ನಡೆಸಿದರೆ ಅದರಿಂದ ಯಶಸ್ಸು ಸಿಗುತ್ತದೆ ಎಂದರು.

ಪ್ರಗತಿಪರ ಕಾಫಿ ಕೃಷಿಕ ಚಂದ್ರಶೇಖರ ತಾಳ್ತಜೆ ಮಾತನಾಡಿ, ದಕ್ಷಿಣ ಕನ್ನಡ ಜಿಲ್ಲೆಯ ವಾತಾವರಣ ಕಾಫಿ ಬೆಳೆಗೆ ಪೂರಕವಾಗಿ ಇದೆ. ಹೀಗಾಗಿ ಅಡಿಕೆಯ ಜತೆಗೆ ಉಪ ಬೆಳೆಯಾಗಿ ಇದನ್ನು ಬೆಳೆಸಬಹುದು. ಅಡಿಕೆ ತೋಟದ ನಡುವೆ ಕಾಫಿ ಬೆಳೆಯುವ ಸಂದರ್ಭದಲ್ಲಿ ಅಡಿಕೆ ಕೃಷಿಗೆ ಸ್ಪಿಂಕ್ಲರ್ ಮೂಲಕ ನೀರು ಹರಿಸುವಾಗ ಕಾಫಿ ಗಿಡದ ಹೂವುಗಳಿಗೆ ಹಾನಿ ಆಗದಂತೆ ಜಾಗರೂಕತೆ ವಹಿಸುವುದು ಸೂಕ್ತ ಎಂದ ಅವರು, ಕೃಷಿಯಲ್ಲಿ ಇರುವ ಸಂಬಂಧ, ಆತ್ಮೀಯತೆ ಬೇರೆಲ್ಲೂ ಸಿಗದು ಎಂದರು.

ಭ್ಲೂಮ್ ಬಯೋಟೆಕ್ ಸಂಸ್ಥಾಪಕ ಸುಹಾಸ್ ಮೋಹನ್ ಮಣ್ಣಿನ ಪೋಷಕಾಂಶಗಳ ಬಗ್ಗೆ ಮಾಹಿತಿ ನೀಡಿ, ಕೃಷಿಯ ಬೆಳವಣಿಗೆಯಲ್ಲಿಮಣ್ಣಿನ ಪೋಷಾಕಾಂಶಗಳ ಅಗತ್ಯತೆಗಳ ಕುರಿತು ವಿವರಿಸಿದರು. ಕೃಷಿಕೆ ಶ್ವೇತಾ ಕಾನಾವು ಅವರು ತಾನು ಕಾಳುಮೆಣಸಿನಲ್ಲಿ ತಯಾರಿಸುತ್ತಿರುವ ಪಾನೀಯದ ಬಗ್ಗೆ ಮಾಹಿತಿ ನೀಡಿ ಸಹಕಾರ ಕೋರಿದರು.

ಉದ್ಘಾಟನ ಸಮಾರಂಭ

ಆರಂಭದಲ್ಲಿ ಕಾರ್ಯಕ್ರಮವನ್ನು ಪೆರುವೋಡಿ ಶ್ರೀ ವಿಷ್ಣುಮೂರ್ತಿ ದೇವಾಲಯದ ಮಾಜಿ ಆಡಳಿತ ಮೊಕ್ತೇಸರ ಬಾಲಚಂದ್ರ ರಾವ್ ಕೊಂಡೆಪ್ಪಾಡಿ ದೀಪ ಬೆಳಗಿಸಿ ಉದ್ಘಾಟಿಸಿದರು. ಸಭಾಧ್ಯಕ್ಷತೆ ವಹಿಸಿದ್ದ ನೇಸರ ದಶಪ್ರಣತಿ ಸಮಿತಿ ಅಧ್ಯಕ್ಷ ಡಾ|ನರಸಿಂಹ ಶರ್ಮ ಮಾತನಾಡಿ, ಕಳೆದ ಹತ್ತು ವರ್ಷಗಳಿಂದ ನೇಸರ ಯುವಕ ಮಂಡಲ ತನ್ನ ಸಮಾಜಮುಖಿ ಕಾರ್ಯದ ಮೂಲಕ ಗುರುತಿಸಿಕೊಂಡಿದೆ. ದಶಪ್ರಣತಿಯ ಹೊತ್ತಲ್ಲಿ ಕೃಷಿ ಸಂಬಂಧಿಸಿ ನಡೆಸುತ್ತಿರುವ ಕಾರ್ಯಕ್ರಮ ಮಾದರಿಯಾದದು ಎಂದರು.

ವೇದಿಕೆಯಲ್ಲಿ ಜಿ.ಪಂ.ಮಾಜಿ ಸದಸ್ಯೆ ರಾಜೀವಿ ಆರ್ ರೈ, ಪೆರುವೋಡಿ ಶ್ರೀ ವಿಷ್ಣುಮೂರ್ತಿ ದೇವಾಲಯದ ಆಡಳಿತ ಮೊಕ್ತೇಸರ ಉಮೇಶ್ ರಾವ್ ಕೊಂಡೆಪ್ಪಾಡಿ, ನೇಸರ ದಶಪ್ರಣತಿ ಸಂಚಾಲಕ ಕುಂಬ್ರ ದಯಾಕರ ಆಳ್ವ, ಪ್ರಗತಿಪರ ಕೃಷಿಕ ಸುಬ್ರಾಯ ಭಟ್ ನೀರ್ಕಜೆ, ನೇಸರ ಯುವಕ ಮಂಡಲದ ಅಧ್ಯಕ್ಷ ರಮೇಶ್ ಕಾನಾವು ಉಪಸ್ಥಿತರಿದ್ದರು.

ಪ್ರಗತಿಪರ ಕೃಷಿಕ ಮೋಹನ ಬೈಪಾಡಿತ್ತಾಯ ಸ್ವಾಗತಿಸಿದರು. ನೇಸರ ದಶಪ್ರಣತಿ ಸಮಿತಿ ಸದಸ್ಯ ಜೈನುದ್ದೀನ್ ತೋಟದಮೂಲೆ ವಂದಿಸಿದರು. ಪುಣ್ಯಶ್ರೀ ಪ್ರಾರ್ಥಿಸಿದರು.

ಕೃಷಿಕರ ಜತೆಗೆ ನೇರ ಸಂವಾದ

ಕೃಷಿ ತಜ್ಞರೊಂದಿಗೆ ಕೃಷಿಕರು ಸಂವಾದ ನಡೆಸಿದರು. ಹಲವು ಪ್ರಶ್ನೆಗಳಿಗೆ ಉತ್ತರ ಕಂಡುಕೊಂಡರು. ಅಡಿಕೆ, ಕಾಫಿ, ಕಾಳುಮೆಣಸು ಜತೆಗೆ ಮಣ್ಣಿನ ಪೋಷಕಾಂಶಗಳ ಬಗ್ಗೆ ಪ್ರಶ್ನೆಗಳು ಕೇಳಿ ಬಂತು. ತಜರು ಸಮರ್ಪಕ ಉತ್ತರ ನೀಡಿದರು. ಇದೇ ಸಂದರ್ಭದಲ್ಲಿ ಶ್ವೇತಾ ಕಾನಾವು ಅವರು ತಯಾರಿಸಿದ ಕಾಳುಮೆಣಸಿನ ಪಾನೀಯ, ಭ್ಲೂಮ್ ಬಯೋಟೆಕ್ ಸಂಸ್ಥೆಯ ಉತ್ಪನ್ನಗಳ ಬಗ್ಗೆ ಪ್ರದರ್ಶನ, ಮಾರಾಟ ನಡೆಯಿತು.

ಕಾಫಿ ಗಿಡ ನೆಟ್ಟು ಸಮಾರೋಪ

ಕಾರ್ಯಕ್ರಮದ ಕೊನೆಯಲ್ಲಿಮೋಹನ ಬೈಪಡಿತ್ತಾಯ ಅವರ ತೋಟದಲ್ಲಿ ಕಾಫಿ ಗಿಡ ನೆಡಲಾಯಿತು. ಈ ಮೂಲಕ ಕಾರ್ಯಕ್ರಮದ ಸಮಾರೋಪ ನಡೆಯಿತು. 100 ಕ್ಕೂ ಅಧಿಕ ಮಂದಿ ಕೃಷಿಕರು ಪಾಲ್ಗೊಂಡಿದ್ದರು.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ | ಫಲಾನುಭವಿ ರೈತರು ಯೋಜನೆ ಪಡೆದುಕೊಳ್ಳಲು ಅಗತ್ಯ ಮಾಹಿತಿ ಇಲ್ಲಿದೆ…

ಕೇಂದ್ರ ಸರ್ಕಾರ ರೈತರಿಗಾಗಿ 2019 ರಲ್ಲಿ ಜಾರಿಗೆ ತಂದಿರುವ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್…