ಮಂಗಳೂರು: ಒಂದೆಡೆ ಅಡಿಕೆ ಕ್ಯಾನ್ಸರ್ ಕಾರಕ ಎನ್ನುವ ಚರ್ಚೆ ನಡೆಯುತ್ತಿದ್ದರೆ, ಇದೆಲ್ಲಾ ಸುಳ್ಳು. ಅಡಿಕೆ ಕ್ಯಾನ್ಸರ್ ಪ್ರತಿಬಂಧಕ ಎನ್ನುವುದು ಸಾಬೀತಾಗಿದೆ.
ಅಡಿಕೆಯ ಸಾರಗಳು ಕ್ಯಾನ್ಸರ್ ಕೋಶಗಳ ವೃದ್ಧಿ, ಚಲನೆ ಮತ್ತು ಹರಡುವಿಕೆಯನ್ನು ಪರಿಣಾಮಕಾರಿಯಾಗಿ ತಡೆಯುತ್ತವೆ ಹಾಗೂ ಇದು ಸಾಮಾನ್ಯ ಕೋಶಗಳಿಗೆ ಹಾನಿಯನ್ನುಂಟು ಮಾಡುವುದಿಲ್ಲ ಎನ್ನುವ ಮಹತ್ವಪೂರ್ಣ ಸಂಶೋಧನೆಯನ್ನು ಯೆನೆಪೋಯ ವಿಶ್ವವಿದ್ಯಾಲಯದ ವೈಜ್ಞಾನಿಕ ಸಂಶೋಧನೆ ಹೊರಗೆಡವಿದೆ.
ಈ ವಿಷಯವನ್ನು ಪತ್ರಿಕಾ ಹೇಳಿಕೆ ನೀಡಿ ಶ್ಲಾಘಿಸಿರುವ ಬಹುರಾಜ್ಯ ಸಹಕಾರ ಸಂಸ್ಥೆ ಕ್ಯಾಂಪ್ಕೋದ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ ಅವರು ವರದಿಯನ್ನು ಸ್ವಾಗತಿಸಿ, ಅಭಿನಂದಿಸಿದ್ದಾರೆ. ಈ ಮಹತ್ವಪೂರ್ಣ ಫಲಿತಾಂಶದಿಂದ ಸಾಂಪ್ರದಾಯಿಕವಾಗಿ ಸಂಸ್ಕರಿಸಿದ ಅಡಿಕೆಯನ್ನು ಬಳಸಿದರೆ ಆರೋಗ್ಯದಾಯಕ ಲಾಭಗಳಿವೆ ಎನ್ನುವ ಜನಸಾಮಾನ್ಯರ ನಂಬಿಕೆಗೆ ಸಾಕ್ಷ್ಯಾಧಾರ ಒದಗಿಸಿದಂತಾಗಿದೆ ಎಂದು ತಿಳಿಸಿದ್ದಾರೆ.
ವಿಶ್ವ ಆರೋಗ್ಯ ಸಂಸ್ಥೆಯು ಇತ್ತೀಚೆಗೆ ಅಡಿಕೆಯನ್ನು ಕ್ಯಾನ್ಸರ್ ಕಾರಕ ಎಂದು ವರ್ಗೀಕರಿಸಿರುವುದು ಕಪೋಲ ಕಲ್ಪಿತ ಎಂದು ಕ್ಯಾಂಪ್ಕೊ ಪ್ರತಿಪಾದನೆ ಮಾಡುತ್ತಾ ಬಂದಿತ್ತು. ಕ್ಯಾಂಪ್ಕೋ ಪ್ರತಿಪಾದನೆಗೆ ಇದೀಗ ಪ್ರಬಲವಾದ ಪುರಾವೆ ಲಭಿಸಿದಂತಾಗಿದೆ. ಪ್ರತಿಷ್ಠಿತ ಸಂಸ್ಥೆಗಳ ಈ ರೀತಿಯ ಸಂಶೋಧನೆ ಆಧಾರಿತ ನಿರ್ಧಾರಗಳು ಅಡಿಕೆಯ ಕುರಿತು ಸಮತೋಲನದ ಮತ್ತು ವೈಜ್ಞಾನಿಕ ದೃಷ್ಟಿಕೋನವನ್ನು ಪುಷ್ಟಿಕರಿಸಲು ಸಹಾಯ ಮಾಡುತ್ತವೆ ಎಂದಿದ್ದಾರೆ.
ಈ ಹಿಂದೆ ನಿಟ್ಟೆ ವಿಶ್ವವಿದ್ಯಾಲಯ ಮತ್ತು ಇತರ ಹಲವಾರು ಪ್ರತಿಷ್ಟಿತ ವೈಜ್ಞಾನಿಕ ಸಂಸ್ಥೆಗಳ ಅಧ್ಯಯನಗಳು ಕೂಡ ಅಡಿಕೆಯು ಕ್ಯಾನ್ಸರ್ ಕಾರಕವಲ್ಲ ಬದಲಾಗಿ ಕ್ಯಾನ್ಸರ್ ಕೋಶಗಳ ಬೆಳವಣಿಗೆಯನ್ನು ತಡೆಯುತ್ತದೆ ಎಂಬುದನ್ನು ಸಾಬೀತು ಪಡಿಸಿವೆ. ಇದರಿಂದ ಬೆಳೆಗೆ ಇರುವ ಸಾಂಸ್ಕೃತಿಕ ಮತ್ತು ಪರಂಪರಾತ್ಮಕ ಮಹತ್ವವನ್ನು ರುಜುವಾತು ಆಗಿದೆ ಎಂದು ತಿಳಿಸಿದ್ದಾರೆ.
ಈ ರೀತಿಯ ವೈಜ್ಞಾನಿಕ ದೃಢೀಕರಣಗಳು ಲಕ್ಷಾಂತರ ಅಡಿಕೆ ಬೆಳೆಗಾರರ ಹಿತಾಸಕ್ತಿಗಳನ್ನು ರಕ್ಷಿಸಲು ಮತ್ತು ಉತ್ಪನ್ನದ ಬಗ್ಗೆ ಇರುವ ತಪ್ಪು ಕಲ್ಪನೆಗಳನ್ನು ಹೋಗಲಾಡಿಸುವಲ್ಲಿ ಬಹುಮುಖ್ಯ ಪಾತ್ರ ವಹಿಸುತ್ತವೆ ಎಂದು ಕ್ಯಾಂಪ್ಕೊ ನಂಬಿದೆ. ಸಂಶೋಧನೆ ನಡೆಸಿರುವ ಯನೆಪೋಯ ವಿಶ್ವವಿದ್ಯಾಲಯದ ವಿಜ್ಞಾನಿಗಳು ಮತ್ತು ಸಂಸ್ಥೆಯ ಆಡಳಿತಕ್ಕೆ ಕ್ಯಾಂಪ್ಕೊ ಗೌರವಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇವೆ ಎಂದು ತಿಳಿಸಿದ್ದಾರೆ.


























