ಪುತ್ತೂರು: ಕೊಳ್ತಿಗೆ ಗ್ರಾಮದಲ್ಲಿ ಕಳೆದ ಕೆಲವು ತಿಂಗಳಿಂದ ಕಾಡಟನೆ ಹಾವಳಿ ಇದೆ. ರಾತ್ರಿ ವೇಳೆ, ಕೆಲವೊಮ್ಮೆ ಹಗಲು ಹೊತ್ತಿನಲ್ಲೂ ಕೃಷಿ ತೋಟಕ್ಕೆ ಬಂದು ಕೃಷಿ ಹಾಗೂ ಇನ್ನಿತರ ಬೆಳೆಗಳನ್ನು ನಾಶ ಮಾಡುತ್ತಿದೆ. ಆನೆಗಳನ್ನು ಕಾಡಿಗೆ ಅಟ್ಟಿಸಿದ ಬಳಿಕ ಮತ್ತೆ ಬಾರದಂತೆ ಸೋಲಾರ್ ತಂತಿ ಬೇಲಿಯನ್ನು ಹಾಕುವ ಕಾರ್ಯ ಮುಂದುವರೆಯಲಿದೆ ಎಂದು ಶಾಸಕ ಅಶೋಕ್ ರೈ ಹೇಳಿದರು.
ಅವರು ಕೊಳ್ತಿಗೆ ಗ್ರಾಪಂ ಸಭಾಂಗಣದಲ್ಲಿ ಕಾಡಾನೆ ದಾಳಿಯಿಂದ ನಷ್ಟಕ್ಕೊಳಗಾದ ಕೃಷಿಕರು, ಕೊಳ್ತಿಗೆ ಗ್ರಾಮಸ್ಥರು ಹಾಗೂ ಅರಣ್ಯ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು.
ಕೃಷಿಕರ ಹಾಗೂ ಸಾರ್ವಜನಿಕರಿಂದ ಶಾಸಕರು ಸಲಹೆ ಸೂಚನೆಗಳನ್ನು ಪಡೆದುಕೊಂಡರು.
ಕರ್ನಾಟಕ ಕೇರಳ ಗಡಿಭಾಗದಲ್ಲಿ ಸೋಲಾರ್ ತಂತಿ ಬೇಲಿಗಳನ್ನು ಅಳವಡಿಸಲಾಗಿದೆ. ಕೇರಳ ಅರಣ್ಯ ಇಲಾಖೆಯವರು ಈ ಹಿಂಧೆ ಅವರಿಗೆ ಸೇರಿದ ಅರಣ್ಯ ವ್ಯಾಪ್ತಿಯಲ್ಲಿ ಸೋಲಾರ್ ತಂತಿ ಬೇಲಿ ಹಾಕಿರುವ ಕಾರಣ ನಮ್ಮ ಭಾಗಕ್ಕೆ ಬಂದ ಮೂರು ಆನೆಗಳು ಕೇರಳದ ಕಡಿಗೆ ಹೋಗಲು ಸಾದ್ಯವಾಗದೆ ಇಲ್ಲೇ ಉಳಿದುಕೊಂಡಿದೆ. ಆಹಾರವನ್ನು ಹುಡುಕಿಕೊಂಡು ಅವುಗಳು ನಾಡಿಗೆ ಬರುತ್ತಿದೆ. ಸಣ್ಣ ಅಡಿಕೆ ಸಸಿ, ತೆಂಗಿನ ಸಸಿ ಹಾಗೂ ಬಾಳೆಗಿಡಗಳನ್ನು ನಾಶ ಮಾಡುತ್ತಿದೆ. ಇಲ್ಲೇ ಉಳಿದಿರುವ ಮೂರು ಆನೆಗಳನ್ನು ಮತ್ತೆ ಕೇರಳದ ಕಾಡಿಗೆ ಅಟ್ಟುವ ಕೆಲಸ ಇಲಾಖೆಯಿಂದ ಆಗಬೇಕು ಎಂದು ಸಭೆಯಲ್ಲಿದ್ದ ಸಾರ್ವಜನಿಕರು ಆಗ್ರಹಿಸಿದರು.
ಆನೆ ಬಂದರೆ ಮಾಹಿತಿ ಕೊಡಿ:
ಗ್ರಾಮಸ್ಥರಾದ ಲೋಕೇಶ್ ಪೆರ್ಲಂಪಾಡಿ ಮಾತನಾಡಿ, ಕಾಡಾನೆ ಬಂದಿದೆಯೋ ಇಲ್ಲವೋ ಎಂಬುದು ನಮಗೆ ಗೊತ್ತಾಗುತ್ತಿಲ್ಲ. ಹಠಾತ್ತನೆ ಆನೆ ಎದುರು ಸಿಕ್ಕಿದರೆ ಯಾರಿಗೂ ಏನೂ ಮಾಡುವ ಹಾಗಿಲ್ಲ . ಆನೆ ಬಂದ ವಿಚಾರ ಅರಣ್ಯ ಇಲಾಖೆಯವರ ಗಮನಕ್ಕೆ ಬಂದರೆ ತಕ್ಷಣ ಅದನ್ನು ಗ್ರಾಮಸ್ಥರಿಗೆ ತಿಳಿಸಬೇಕು. ಶಾಲೆಯ ಮಕ್ಕಳನ್ನು ಕರೆದುಕೊಂಡು ಹೋಗುವುದು, ಬರುವುದು ನಡೆಯುತ್ತಿರುವಾಗ ಆನೆಗಳು ಬಂದಲ್ಲಿ ಜನ ಭಯಗೊಳ್ಳುತ್ತಾರೆ. ಆನೆಗಳು ಬಂದರೆ ಇಲಾಖೆ ಸೈರನ್ ಮೂಲಕ ಅಥವಾ ಅನೌನ್ಸ್ ಮೂಲಕ ಜನರಿಗೆ ತಿಳಿಸುವ ಕೆಲಸವನ್ನು ಮಾಡಬೇಕು. ಆಗ ಜನರಿಗೆ ತಮ್ಮ ಬಗ್ಗೆ ಜಾಗೃತರಾಗಿರಲು ಸಾಧ್ಯವಾಗುತ್ತದೆ ಎಂದು ಸಭೆಯಲ್ಲಿ ತಿಳಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಅರಣ್ಯ ಸಂರಕ್ಷಣಾಧಿಕಾರಿ ಕಿರಣ್, ಆನೆಗಳು ಬಂದಲ್ಲಿ ನಾವು ವ್ಯಾಟ್ಸಪ್ ಮೂಲಕ ಮಡಿರುವ ಗ್ರೂಪುಗಳಲ್ಲಿ ಮೆಸೆಜ್ ಹಾಕುತ್ತೇವೆ. ಮುಂದಿನ ದಿನಗಳಲ್ಲಿ ಆನೆಗಳು ಬಂದ ವೇಳೆ ಜನರಿಗೆ ಜಾಗೃತಿ ಮೂಡಿಸುತ್ತೇವೆ ಎಂದು ಹೇಳಿದರು.
ಆನೆ ಬಂದಾಗಿನಿಂದ ನಮಗೆ ಅರಣ್ಯ ಇಲಾಖೆ ಮತ್ತು ಗ್ರಾಪಂ ಗ್ರಾಮಸ್ಥರಿಗೆ ಸ್ಪಂದನೆ ನೀಡುವ ಕೆಲಸವನ್ನು ಮಾಡುತ್ತಿದೆ. ಆನೆಯಿಂದ ಒಂದು ಅಪಘಾತವಾಗಿದೆ ಮುಂದೆ ಅದು ಮರುಕಳಿಸದಂತೆ ಎಚ್ಚರ ವಹಿಸಬೇಕು ಎಂದು ಮನವಿ ಮಾಡಿದರು.
ಅನೆ ಕೆರೆಯನ್ನೇ ನಾಶ ಮಾಡಿದೆ
ಆನೆಗಳು ಬಂದು ನಮ್ಮ ಕೆರೆಯನ್ನೇ ನಾಶ ಮಾಡಿದೆ, ಕೆರೆಯ ಬದಿಯಲ್ಲಿದ್ದ ದಾರಿಯೂ ಇಲ್ಲದಂತಾಗಿದೆ, ನಡೆದುಕೊಂಡು ಹೋಗಲೂ ಸಾದ್ಯವಿಲ್ಲದ ಸ್ಥಿತಿ ನಿರ್ಮಾಣವಾಗಿದೆ ಎಂದು ಕಂಟ್ರಮಜಲು ಕಸ್ತೂರಿಯವರು ಸಭೆಗೆ ತಿಳಿಸಿದರು. ಇದಕ್ಕೆ ಸಹಮತ ವ್ಯಕ್ತಪಡಿಸಿದ ಗ್ರಾಪಂ ಉಪಾಧ್ಯಕ್ಷ ಪ್ರಮೋದ್ ರವರು ಕೆರೆಯಲ್ಲಿ ಆನೆಗಳು ಇಳಿದ ಕಾರಣ ಕೆರೆಯೇ ಈಗ ಇಲ್ಲದಂತಾಗಿದೆ. ಹಗಲು ಹೊತ್ತಿನಲ್ಲೂ ಬಂದು ಕೆರೆಯಲ್ಲಿ ಇಳಿಯುವ ಹತ್ತುವ ಮೂಲಕ ಅದನ್ನು ನಾಶ ಮಾಡಿದೆ ಎಂದು ಹೇಳಿದರು.
ಆನೆಯನ್ನು ಓಡಿಸದೇ ಇದ್ದರೆ ಜನ ಭಯಮುಕ್ತರಾಗುವುದಿಲ್ಲ
ಗ್ರಾಪಂ ಸದಸ್ಯರದ ಪವನ್ ಮಾತನಡಿ ಕಾಡಿನಿಂದ ನಾಡಿಗೆ ಬಂದ ಆನೆಯನ್ನು ಓಡಿಸದೇ ಇದ್ದಲ್ಲಿ ಜನ ಭಯಮುಕ್ತರಾಗಲು ಸಾಧ್ಯವಿಲ್ಲ. ಅಲ್ಲಿ ಆನೆ ಉಂಟು ಇಲ್ಲಿ ಆನೆ ಬಂತು ಎಂದು ಕೆಲವರು ಹೇಳುವಾಗ ರಾತ್ರಿ ಮನೆಯಿಂದ ಹೊರಗೆ ಬರಲು ಭಯವಾಗುತ್ತಿದೆ. ಕೆಲವೊಮ್ಮೆ ಮಧ್ಯಾಹ್ನವೂ ತೋಟಗಳಲ್ಲಿ ಆನೆ ಕಾಣಿಸುತ್ತಿದೆ. ಕೇರಳದಿಂದ ಬಂದ ಮೂರು ಆನೆಗಳು ಒಟ್ಟಾಗಿ ಅಲ್ಲಲ್ಲಿ ಸುತ್ತಾಡುತ್ತಿದೆ. ಸಣ್ಣ ಅಡಿಕೆ ಗಿಡ ಮತ್ತು ತೆಂಗಿನ ಗಿಡದ ತಿರುಳನ್ನು ತಿಂದು ಗಿಡವನ್ನೇ ನಾಶ ಮಾಡುತ್ತದೆ. ತೋಟದಲ್ಲಿನ ಮರದಲ್ಲಿದ್ದ ಹಲಸಿನ ಹಣ್ಣನ್ನೂ ತಿಂದು ಖಾಲಿ ಮಾಡುತ್ತವೆ. ದಿಕ್ಕು ತಪ್ಪಿದಾಂತಾದ ಆನೆಗಳು ಹಸಿವಿನಿಂದ ಊರಿಗೆ ಬಂದಿದೆ. ನಡಿಗೆ ಬಂದ ಕಾಡಾನೆಯನ್ನು ಹೇಗೆ ಓಡಿಸುವುದು ಎಂಬುದರ ಬಗ್ಗೆಯೇ ಇಲಾಖೆ ಮತ್ತು ಸಾರ್ವಜನಿಕರು ಆಲೋಚನೆ ಮಾಡಬೇಕಿದೆ ಎಂದು ಹೇಳಿದರು.
ಸೈರನ್ ಹಾಕಿದರೆ ಒಮ್ಮೆ ಓಡ್ತದೆ
ಗ್ರಾಪಂ ಉಪಾಧ್ಯಕ್ಷರಾದ ಪ್ರಮೋದ್ ಮಾತನಾಡಿ ಇಲಾಖೆಯವರು ಸೈರನ್ ಮೊಳಗಿಸಿದರೆ ಒಮ್ಮೆ ಆನೆ ಓಡುತ್ತದೆ ಮತ್ತೆ ಎರಡು ದಿನ ಬಿಟ್ಟು ಅದೇ ಜಾಗಕ್ಕೆ ಬರುತ್ತದೆ. ಅವು ಎಲ್ಲಿಂದ ಈ ಭಾಗಕ್ಕೆ ಎಂಟ್ರಿಯಾಗಿದೆಯೋ ಆ ದಾರಿಯಲ್ಲಿ ಸೋಲಾರ್ ತಂತಿ ಬೇಲಿ ಹಾಕಿದ ಕರಣಗ ಅವುಗಳಿಗೆ ದಿಕ್ಕು ತಪ್ಪಿದಾಂತಾಗಿದೆ. ಇಲ್ಲಿರುವ ಮೂರು ಆನೆಗಳು ಗಂಡಾನೆಗಳು, ಓಡಿಸುವಲ್ಲಿ ಸರಕಾರ ಮತ್ತು ಇಲಾಖೆ ಏನೆಲ್ಲಾ ಕ್ರಮಗಳನ್ನು ಕೈಗೊಳ್ಳುತ್ತದೆಯೋ ಅದಕ್ಕೆ ನಮ್ಮೆಲ್ಲರ ಪೂರ್ಣ ಬೆಂಬಲ ಇದೆ, ಒಟ್ಟಿನಲ್ಲಿ ಇಲ್ಲಿರುವ ಆನೆಗಳು ಕಾಡು ಸೇರಬೇಕು ಅಷ್ಟೆ ನಮ್ಮೆಲ್ಲರ ಪ್ರಾರ್ಥನೆಯಾಗಿದೆ ಎಂದು ಹೇಳಿದರು.
ನಷ್ಟಕ್ಕೊಳಗಾದವರು ಇಲಾಖೆಗೆ ಅರ್ಜಿ ಸಲ್ಲಿಸಿ
ಆನೆ ದಾಳಿಯಿಂದ ನಷ್ಟಕ್ಕೊಳಗಾದ ಕೃಷಿಕರು ಇಲಾಖೆಗೆ ಅರ್ಜಿ ಸಲ್ಲಿಸಿ ಪರಿಹಾರ ಪಡೆದುಕೊಳ್ಳಬೇಕು. ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬೇಕಾಗುತ್ತದೆ., ಕೃಷಿಕರು ಇಲ್ಲಿನ ಉಪ ವಲಯ ಅರಣ್ಯಾಧಿಕಾರಿ ಮೂಲಕ ಅರ್ಜಿ ನೀಡಿದರೆ ಸಾಕು ಅದನ್ನು ಅವರೇ ಆನ್ ಲೈನ್‌ಗೆ ಹಾಕುತ್ತಾರೆ. ಅಡಿಕೆ 10 ವರ್ಷದಿಂದ ಮೇಲ್ಪಟ್ಟ ಗಿಡಕ್ಕೆ 4000, 5 ರಿಂದ 9 ವರ್ಷದವರೆಗಿನ ಗಿಡಕ್ಕೆ 1600, ಸಣ್ಣ ಗಿಡಕ್ಕೆ 800 , ಬಾಳಿಗಿಡಕ್ಕೆ 320, ಭತ್ತ ಕ್ವಿಂಟ್ವಾಳ್‌ಗೆ 246 ರೂ ಪರಿಹಾರವನ್ನು ಸರಕಾರ ನೀಡುತ್ತದೆ ಎಂದು ಶಾಸಕ ಅಶೋಕ್ ರೈ ಅವರು ಸಭೆಗೆ ತಿಳಿಸಿದರು. ಯಾರಿಗೆಲ್ಲಾ ಆನೆಯಿಂದ ನಷ್ಟವಾಗಿದೆಯೋ ಅವರೆಲ್ಲಾ ಅರ್ಜಿ ಹಾಕಲೇಬೇಕು ಅರ್ಜಿ ಹಾಕದೇ ಇದ್ದಲ್ಲಿ ಪರಿಹಾರ ಸಿಗುವುದಿಲ್ಲ ಎಂದು ಹೇಳಿದರು.
ರಾತ್ರಿ ಪಾಳಿಗೆ 24 ಹೆಚ್ಚುವರಿ ಸಿಬಂದಿಗಳ ನೇಮಕ
ಕೊಳ್ತಿಗೆ ಗ್ರಾಮದಲ್ಲಿ ಆನೆ ದಾಳಿ ನಡೆದ ಬಳಿಕ ರಾತ್ರಿ ಪಾಳಿಗೆ ಹೆಚ್ಚುವರಿಯಾಗಿ ಸಿಬಂದಿಗಳನ್ನು 6 ಟೀಮ್‌ಗಳಾಗಿ ನಿಯುಕ್ತಿಗೊಳಿಸಲಾಗಿದೆ. ಒಂದು ತಂಢದಲ್ಲಿ ನಾಲ್ಕು ಜನ ಸಿಬಂದಿಗಳಿದ್ದು ಒಟ್ಟು 24 ಮಂದಿ ಸಿಬಂದಿಗಳು ರಾತ್ರಿ ಪಾಳಿಯಲ್ಲಿ ಗ್ರಾಮದಲ್ಲಿ ಸುತ್ತಾಡುತ್ತಾರೆ. ಆನೆಗಳು ಕಂಡು ಬಂದಲ್ಲಿ ಅವುಗಳನ್ನು ಸೈರನ್ ಮೂಲಕ ಓಡಿಸುವ ಕೆಲಸವನ್ನು ಮಾಡುವುದರ ಜೊತೆಗೆ ಗ್ರಾಮಸ್ಥರಿಗೂ ಎಚ್ಚರದಿಂದ ಇರುವಂತೆ ಮಾಹಿತಿ ಕೊಡುತ್ತಾರೆ. ಜನ ಈ ಬಗ್ಗೆ ಯಾವುದೇ ಆತಂಕಪಡಬೇಕಿಲ್ಲ. ಸರಕಾರ ಜನರ ರಕ್ಷಣೆಗೆ ಬೇಕಾದ ಎಲ್ಲಾ ಸಿದ್ದತೆಗಳನ್ನು ಮಾಡಿಕೊಂಡಿದೆ ಎಂದು ಶಾಸಕರು ಸಭೆಗೆ ತಿಳಿಸಿದರು.
ಆನೆ ಹಿಡಿಯಲು ಸರಕಾರದ ಅನುಮತಿ ಬೇಕು
ನಾಡಿಗೆ ಬಂದ ಆನೆಯನ್ನು ಹಿಡಿಯಲು ಸರಕಾರದ ಅನುಮತಿ ಬೇಕು. ಕಾಡುಪ್ರಾಣಿಗಳ ಹಿಂಸೆ ಮಾಡದಂತೆ ನ್ಯಾಯಾಲಯದ ಆದೇಶವೂ ಇದೆ. ಸರಕಾರ ಈ ಬಗ್ಗೆ ನಿರ್ಧಾರ ಕೈಗೊಳ್ಳಬೇಕಾಗುತ್ತದೆ. ಒಂದು ಆನೆಯನ್ನು ಹಿಡಿಯಲು ಕನಿಷ್ಟ ಎಂಟು ಆನೆಗಳು ಮತ್ತು ಮಾವುತ ಬೇಕಾಗುತ್ತದೆ. ಕಾಡು ಪ್ರದೇಶಕ್ಕೆ ಆನೆಗಳು ಓಡಿ ಹೋದರೆ ಅವುಗಳನ್ನು ಹಿಡಿಯುವುದು ತುಂಬಾ ಕಷ್ಟವಾಗುತ್ತದೆ. ಫಳಗಿದ ಆನೆಗಳನ್ನು ಕಾಡಿನಲ್ಲಿ ಕರೆದುಕೊಂಡು ಹೋಗಲು ಮಾವುತನಿಗೂ ಕಷ್ಟ ಸಾಧ್ಯ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರವಾಗಿದೆ. ಆನೆಗಳ ನಿರಂತರ ದಾಳಿಯಿದ್ದಲ್ಲಿ ಮಾತ್ರ ಸರಕಾರ ಈ ಬಗ್ಗೆ ಕ್ರಮಕೈಗೊಳ್ಳುತ್ತದೆ. ಅಲ್ಲಿಯ ತನಕ ಅರಣ್ಯ ಇಲಾಖೆ ಯ ವತಿಯಿಂದ ಆನೆಯನ್ನು ಓಡಿಸಲು ಏನೆಲ್ಲಾ ಪ್ರಯೋಗವನ್ನು ಮಾಡಬೇಕೋ ಅದೆಲ್ಲವನ್ನೂ ಮಾಡುತ್ತಿರುತ್ತದೆ. ಒಟ್ಟು ಮೂರು ಆನೆಗಳು ಕೊಳ್ತಿಗೆ ಭಾಗದಲ್ಲಿ ಸುತ್ತಾಡುತ್ತಿದೆ ಅದನ್ನು ಇಲಾಖೆಯವರು ಓಡಿಸುವ ಎಲ್ಲಾ ಕೆಲಸವನ್ನು ಮಾಡುತ್ತಿದ್ದಾರೆ ಎಂದು ಶಾಸಕರು ಸಭೆಯಲ್ಲಿ ತಿಳಿಸಿದರು.
ಸಂಜೆಯಾಗುತ್ತಲೇ ಪೆರ್ಲಂಪಾಡಿಯಲ್ಲಿ ಜನವೇ ಇಲ್ಲ
ಆನೆಯ ಕಾಟದಿಂದಾಗಿ ಸಂಜೆಯಾಗುತ್ತಲೇ ಜನ ಮನೆ ಸೇರಿಕೊಳ್ಳುವ ಕಾರಣ ಪೇಠೆಯಲ್ಲಿ ಜನವೇ ಇರುವುದಿಲ್ಲ. ಜನರಿಗೆ ಆನೆಯ ಬಗ್ಗೆ ಭಯವಿದೆ ಎಂದು ಸಭೆಯಲ್ಲಿದ್ದ ಸಾರ್ವಜನಿಕರು ತಿಳಿಸಿದರು.
ಇದು ಗಂಭೀರ ವಿಚಾರ: ಕಾವು ಹೇಮನಾಥ ಶೆಟ್ಟಿ
ಆಹಾರ ಹುಡುಕೊಂಡೋ ಅಥವಾ ಇನ್ಯಾವುದೋ ಕಾರಣಕ್ಕೆ ಕಾಡಿನಲ್ಲಿರಬೇಕಾದ ಆನೆಗಳು ನಾಡಿಗೆ ಅಥವಾ ಮನೆ ಬಾಗಿಲಿನ ಮೂಲಕ ಓಡಾಡುವಾಗ ಸಹಜವಾಗಿ ಜನರಿಗೆ ಭಯ ಉಂಟಾಗುತ್ತದೆ. ಆನೆಗಳನ್ನು ಓಡಿಸುವಲ್ಲಿ ಶಾಸಕರ ನಿರ್ದೇಶನದಂತೆ ಇಲಾಖೆಯವರು ಆಹೋರಾತ್ರಿ ಕೆಲಸ ಮಾಡುತ್ತಿದ್ದಾರೆ. ಆದರೆ ಆನೆ ಮತ್ತೆ ಮತ್ತೆ ಕಾಣಿಸಿಕೊಂಡಾಗ ಜನರಲ್ಲಿ ಭಯ ಸಹಜವಾಗಿದ್ದು ಇದು ಗಂಭೀರವಾದ ವಿಚಾರವಾಗಿದೆ ಎಂದು ಕೆಪಿಸಿಸಿ ಸಂಯೋಜಕರಾದ ಕಾವು ಹೇಮನಾಥ ಶೆಟ್ಟಿ ಹೇಳಿದರು. ಶಾಸಕರು ಈಗಗಲೇ ಇದನ್ನು ಗಂಭೀರವಾಗಿ ಪರಿಗಣಿಸಿದ್ದಾರೆ, ಸರಕರದ ಗಮನಕ್ಕೂ ತಂದಿದ್ದಾರೆ. ಎಲ್ಲಾ ಉಪಕ್ರಮಗಳನ್ನು ಕೈಗೊಂಡು ಆನೆ ಹೋಗದೇ ಇದ್ದರೆ ಏನು ಮಾಡುವುದು ಎಂಬುದು ಇಲ್ಲಿ ಜಿಜ್ಞಾಸೆಯಾಗಿದೆ. ಶಾಸಕರ ನೇತೃತ್ವದಲ್ಲಿ ಇಲಾಖೆಯವರು ಆನೆಯನ್ನು ನಿಯಂತ್ರಣಕ್ಕೆ ತಂದೇ ತರುತ್ತಾರೆ ಎಂಬ ಭರವಸೆ ಈ ಗ್ರಾಮಸ್ಥರಲ್ಲಿದೆ. ಹೋಗದೇ ಇದ್ದರೆ ಏನು ಕ್ರಮಕೈಗೊಳ್ಳಬೇಕೋ ಅದನ್ನು ಸರಕಾರ ಮಾಡಬೇಕಾಗುತ್ತದೆ ಎಂದು ಹೇಳಿದರು.
ಗುಂಪಿನಿಂ ಹೊರ ಹಾಕಿದ ಆನೆಗಳು: ಎಸಿಎಫ್
ಆನೆಗಳು ಸಮೂಹ ಜೀವಿಗಳು. ಆನೆಗಳ ಸಂಖ್ಯೆ ಅದರ ಕುಟುಂಬದಲ್ಲಿ ಜಾಸ್ತಿಯಾದಾಗ ಗಂಡಾನೆಗಳನ್ನು ಗುಂಪಿನಿಂದ ಹೊರ ಹಾಕುತ್ತವೆ. ಗುಂಪಿನಿಂದ ಹೊರ ಹಾಕಲ್ಪಟ್ಟ ಆನೆಗಳು ಕಾಡಿನಿಂದ ನಾಡಿಗೆ ಬಂದು ಜನರಿಗೆ ತೊಂದರೆ ಕೊಡುತ್ತದೆ.ಅವುಗಳನ್ನು ಏಕಾಏಕಿ ಓಡಿಸಲು ಸಾಧ್ಯವಿಲ್ಲ. ನಿಧಾನಕ್ಕೆ ಅವುಗಳನ್ನು ಅಟ್ಟಿಸಬೇಕಾಗುತ್ತದೆ. ಆನೆಗಳನ್ನು ಕೊಲ್ಲುವುದು ಕಾನೂನಿಗೆ ವಿರುದ್ದವಾಗಿದೆ. ಕಾಡು ಪ್ರದೇಶಕ್ಕೆ ಅವು ಓಡಿ ಹೋಗುವ ಕಾರಣ ಅವುಗಳನ್ನು ಹಿಡಿದು ಸ್ಥಳಾಂತರ ಮಾಡಲು ಸ್ವಲ್ಪ ಕಷ್ಟ. ಜನರಿಗೆ ಅವುಗಳಿಂದ ತೊಂದರೆಯಾಗದ ರೀತಿಯಲ್ಲಿ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ರಾತ್ರಿ ವೇಳೆ ಸೈರನ್ ಮೊಳಗಿಸುವ ಕೆಲಸ ನಿರಂತರ ನಡೆಯುತ್ತಿದೆ. ಸೈರನ್ ಶಬ್ದಕ್ಕೆ ಆನೆಗಳು ಭಯಗೊಂಡು ಓಡುತ್ತವೆ. ನಾಡಿಗೆ ಬಂದ ಆನೆ ಖಂಡಿತವಾಗಿಯೂ ಕಾಡಿಗೆ ಹೋಗಿಯೇ ಹೋಗುತ್ತದೆ. ಈ ವಿಚಾರದಲ್ಲಿ ಜನ ಆತಂಕ ಪಡಬೇಕಿಲ್ಲ. ಆನೆಗಳನ್ನು ಕಂಡರೆ ಇಲಾಖೆ ಗಮನಕ್ಕೆ ತನ್ನಿ, ನೀವಾಗಿಯೇ ಅವುಗಳನ್ನು ಓಡಿಸಲು ಹೋಗಬೇಡಿ, ಒಂಟಿ ಆನೆಗಳು ಅಪಾಯವಾಗಿದೆ. ಇಲಾಖೆ ಬಳಿ ಅದನ್ನು ಓಡಿಸಲು ಆಯುಧಗಳಿವೆ ಎಂದು ಎಸಿಎಫ್ ಸುಬ್ಬ ನಾಯ್ಕ್ ರವರು ಹೇಳಿದರು.
ವೇದಿಕೆಯಲ್ಲಿ ಕೊಳ್ತಿಗೆ ಗ್ರಾಪಂ ಅಧ್ಯಕ್ಷೆ ಅಕ್ಕಮ್ಮ, ಅರಣ್ಯ ಸಂರಕ್ಷಣಾಧಿಕಾರಿ ಕಿರಣ್, ಪುಡಾ ಅಧ್ಯಕ್ಷ ಅಮಲ ರಾಮಚಂದ್ರ ಮತ್ತಿತರರು ಉಪಸ್ಥಿತರಿದ್ದರು.
ಕೊಳ್ತಿಗೆ ಗ್ರಾಪಂ ಉಪಾಧ್ಯಕ್ಷ ಪ್ರಮೋದ್ ಸ್ವಾಗತಿಸಿ, ಸದಸ್ಯ ಪವನ್ ವಂದಿಸಿದರು.