ಟ್ರೆಂಡಿಂಗ್ ನ್ಯೂಸ್ವಿಶೇಷ

ಯಾವ ಬುದ್ಧಿವಂತಿಕೆ ನಿಮ್ಮ ಮಕ್ಕಳದ್ದು? ಬುದ್ಧಿವಂತಿಕೆ ವಿಕಸನಕ್ಕೆ ತಜ್ಞರು ನೀಡಿದ್ದಾರೆ ಅಮೂಲ್ಯ ಟಿಪ್ಸ್

ಈ ಸುದ್ದಿಯನ್ನು ಶೇರ್ ಮಾಡಿ

ಮಕ್ಕಳ ಬುದ್ಧಿವಂತಿಕೆ. ಇಂದಿನ ಪರಿಸ್ಥಿತಿಯಲ್ಲಿ ಇದೊಂದು ದೊಡ್ಡ ಸಬ್ಜೆಕ್ಟೇ ಹೌದು. ಒಂದು ಮಗುವಿನ ಸರ್ವತೋಮುಖ ಬೆಳವಣಿಗೆಗೆ ಇಡೀಯ ಕುಟುಂಬ ಅವಿರತ ಶ್ರಮ ಪಡುತ್ತಿರುವುದನ್ನು ನಾವಿಂದು ಕಾಣುತ್ತೇವೆ. ತಾಯಿ ತನ್ನ ಕೆಲಸ ಬಿಟ್ಟು, ಮಗುವಿನ ಜೊತೆಗೇ ಇದ್ದು, ಖುದ್ದು ಆ ಮಗುವಿನ ಬೆಳವಣಿಗೆಯಲ್ಲಿ ಮಹತ್ತರ ಪಾತ್ರ ವಹಿಸುತ್ತಾರೆ.

ಹೀಗಿರುವಾಗ ಮಕ್ಕಳ ಬುದ್ಧಿವಂತಿಕೆ ಪ್ರಚಲಿತ ವಿದ್ಯಮಾನದಲ್ಲಿ ಬಹಳ ಮಹತ್ತರ ವಿಷಯ ಆಗಿರದಿದ್ದೀತೇ?

SRK Ladders

ಬುದ್ದಿವಂತಿಕೆ ಜೀವಿಗಳ ಪೈಕಿ ಮನುಷ್ಯನಿಗೆ ಮಾತ್ರ ಸಿಕ್ಕಿರುವ ಬಳುವಳಿ. ಇದು ಎಲ್ಲರೂ ಒಪ್ಪತಕ್ಕ ವಿಷಯವೇ. ಆದರೆ ವರವಾಗಿ ಸಿಕ್ಕಿರುವ ಬುದ್ಧಿವಂತಿಕೆಯನ್ನು ಸದುಪಯೋಗ ಪಡಿಸಿಕೊಳ್ಳುವುದು ಮತ್ತು ಅದನ್ನು ಇನ್ನಷ್ಟು ಉನ್ನತೀಕರಣ ಗೊಳಿಸುವುದು ಹೇಗೆ? ಇದಕ್ಕೂ ಕೆಲವು ಮಾರ್ಗೋಪಾಯಗಳಿವೆ.

ನಮ್ಮಲ್ಲಿ ಕೆಲವರು ನನ್ನ ಮಗ ದಡ್ಡ ಎಂಬ ನಿರ್ಧಾರಕ್ಕೆ ಬಂದು ಬಿಡುತ್ತಾರೆ. ಇದು ಮಕ್ಕಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿ, ಆತನನ್ನು ಜೀವನ ಪೂರ್ತಿ ದಡ್ಡನನ್ನಾಗಿಯೇ ಇರಿಸುತ್ತದೆ. ಇದಕ್ಕೊಂದು ಉದಾಹರಣೆ ಪರೀಕ್ಷೆಯ ಅಂಕ. ಕಡಿಮೆ ಅಂಕ ಪಡೆದ ಕೂಡಲೇ ದಡ್ಡನೆಂದು ಪರಿಗಣಿಸಿ ಬುದ್ದಿ ಮತ್ತೆಯ ಮಟ್ಟದ ಪರೀಕ್ಷೆಗೆ ಒಳಪಡಿಸುತ್ತಾರೆ. ಮಾತ್ರವಲ್ಲ ಅಧ್ಯಾಪಕರು ಪೋಷಕರಿಗೆ ನಿಮ್ಮ ಮಗುವಿನ ಬುದ್ಧಿ ಶಕ್ತಿ ಕಡಿಮೆ ಇದೆ. ಅವನನ್ನು / ಅವಳನ್ನು ಕೋಚಿಂಗ್ ಕ್ಲಾಸ್ಗಳಿಗೆ ಸೇರಿಸಿ ಎಂದು ಸಲಹೆ ನೀಡುತ್ತಾರೆ. ಆಗ ಪೋಷಕರು ಅಧ್ಯಾಪಕರು ಹೇಳಿದ್ದನ್ನು ಒಪ್ಪಿಕೊಂಡು ಮಕ್ಕಳ ಮೇಲೆ ಹೆಚ್ಚು ಒತ್ತಡ ಹಾಕುವುದನ್ನು ಸಾಮಾನ್ಯವಾಗಿ ನೋಡುತ್ತೇವೆ.

ಪ್ರತಿಯೊಬ್ಬರೂ ಬುದ್ದಿವಂತರೇ. ಆದರೆ ಬುದ್ದಿವಂತಿಕೆಯಲ್ಲಿ ಒಂದಷ್ಟು ವ್ಯತ್ಯಾಸಗಳಿವೆ ಅಷ್ಟೇ. ಅದನ್ನು ತಪ್ಪಾಗಿ ಅರ್ಥೈಸಿಕೊಂಡು, ಇನ್ನಷ್ಟು ಒತ್ತಡ ಹಾಕಿದರೆ, ಆ ಮಗುವಿನ ನೈಜ ಪ್ರತಿಭೆ ಹೊರಬರಲು ಸಾಧ್ಯವೇ ಇಲ್ಲ. ಪ್ರತಿಯೊಬ್ಬ ವ್ಯಕ್ತಿಯು ತನ್ನದೇ ಆದ ಸಾಮರ್ಥ್ಯವನ್ನು ಹೊಂದಿರುತ್ತಾನೆ. ಸಾಮರ್ಥ್ಯಕ್ಕೆ ಅನುಗುಣವಾಗಿ ತರಬೇತಿ ನೀಡಿದರೆ ಜೀವನದಲ್ಲಿ ಸಫಲತೆ ಹೊಂದಲು ಸಾಧ್ಯ. ಹೊರತಾಗಿ ವಿಫಲತೆಯ ಮಾತೇ ಬರುವುದಿಲ್ಲ. ಬುದ್ಧಿವಂತಿಕೆಯಲ್ಲಿ ಒಬ್ಬರಿಂದ ಒಬ್ಬರಿಗೆ ವ್ಯತ್ಯಯ ಇರುವುದನ್ನು ನಾವು ಕಂಡಿರುತ್ತೇವೆ. ಬುದ್ಧಿವಂತಿಕೆಯನ್ನು ಒಟ್ಟು ಹತ್ತು ವಿಧವಾಗಿ ವಿಂಗಡಿಸಲಾಗಿದೆ.

ತಾರ್ಕಿಕ ಗಣಿತದ ಬುದ್ಧಿವಂತಿಕೆ :

ತಾರ್ಕಿಕ ಗಣಿತದ ಬುದ್ಧಿವಂತಿಕೆ ಹೆಸರೇ ಹೇಳುವಂತೆ ಗಣಿತಶಾಸ್ತ್ರಕ್ಕೆ ಸಂಬಂಧಪಟ್ಟದ್ದು. ಈ ವಿಧದ ಬುದ್ದಿವಂತಿಕೆ ಉಳ್ಳವರು ತರ್ಕ ಮತ್ತು ಗಣಿತದಲ್ಲಿ ನಿಪುಣರೇ ಆಗಿರುತ್ತಾರೆ. ಸಮಸ್ಯೆಗಳಿಗೆ ಶೀಘ್ರವಾಗಿ ಪರಿಹಾರ ಕಂಡು ಹುಡುಕುವಲ್ಲಿ, ವೈಜ್ಞಾನಿಕ ಪ್ರಯೋಗಗಳನ್ನು ಮತ್ತು ಕಷ್ಟಕರವಾದ ಗಣಿತದ ಲೆಕ್ಕಗಳನ್ನು ಸುಲಭವಾಗಿ ಇಂತಹ ಬುದ್ಧಿವಂತಿಕೆ ಉಳ್ಳವರು ಮಾಡಬಲ್ಲರು. ಅಂತವರು ವಿಜ್ಞಾನಿ, ಕಂಪ್ಯೂಟರ್ ಪ್ರೋಗ್ರಾಮರ್, ಅರ್ಥಶಾಸ್ತ್ರಜ್ಞ, ಅಕೌಂಟೆಂಟ್, ಇಂಜಿನಿಯರ್ ಮುಂತಾದ ಉದ್ಯೋಗಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ ಮತ್ತು ಅದರಲ್ಲಿ ಯಶಸ್ಸು ಕಂಡಿರುವ ಅನೇಕ ಉದಾಹರಣೆ ನಮ್ಮ ಮುಂದೆ ಜೀವಂತವಾಗಿ ಇವೆ.

ಭಾಷಾ ಸಂವಹನ ಬುದ್ಧಿವಂತಿಕೆ :

ಸಂವಹನ ಎಂದರೆ ನನ್ನಲ್ಲಿ ಇರುವ ವಿಚಾರವನ್ನು ಯಾವುದೋ ಒಂದು ಮಾಧ್ಯಮದ ಮೂಲಕ ಎದುರಿನ ವ್ಯಕ್ತಿಗೆ ತಿಳಿಸುವುದು. ಅದು ಸಂಜ್ಞೆ ಇರಬಹುದು, ಮಾತುಗಾರಿಕೆ ಮೂಲಕ ಇರಬಹುದು, ಬರವಣಿಗೆ ಮೂಲಕವೂ ಇರಬಹುದು ಇತ್ಯಾದಿ. ಇವುಗಳಲ್ಲಿ ಒಂದು ಭಾಷಾ ಸಂವಹನ.

ಭಾಷಾ ಸಂವಹನ ಬುದ್ಧಿವಂತಿಕೆಗೆ ಒಂದು ಉತ್ತಮ ಉದಾಹರಣೆ ಎಂದರೆ ಲೇಖಕ. ಒಬ್ಬ ವ್ಯಕ್ತಿಯು ತಮ್ಮ ಭಾಷೆಯಲ್ಲಿ ಪಾಂಡಿತ್ಯ ಹೊಂದಬೇಕಾದರೆ ಭಾಷಾ ಸಂವಹನ ಬುದ್ಧಿವಂತಿಕೆ ಅವರಲ್ಲಿ ಇರಬೇಕಾಗುತ್ತದೆ. ಅಂತವರು ಬರವಣಿಗೆ, ಭಾಷಣಗಳಲ್ಲಿ ಹಿಡಿತವನ್ನು ಹೊಂದಿರುತ್ತಾರೆ. ಪತ್ರಕರ್ತರು, ವಕೀಲರು, ಶಿಕ್ಷಕರು ಹಾಗೂ ರಾಜಕಾರಣಿಗಳಲ್ಲಿ ಇಂತಹ ಬುದ್ಧಿಮತ್ತೆಯನ್ನು ನೋಡಬಹುದು.

ವ್ಯಕ್ತಿ ಸಂಬಂಧ ಬುದ್ಧಿವಂತಿಕೆ :

ಭಾವನೆಗಳಿಗೆ, ಸಂಬಂಧಗಳಿಗೆ ಇಂದಿನ ಕಾಲದಲ್ಲಿ ಬೆಲೆಯೇ ಇಲ್ಲ ಎನ್ನುವವರು ಇತ್ತ ಸ್ವಲ್ಪ ಗಮನ ಕೊಡಿ. ವ್ಯಕ್ತಿ ಸಂಬಂಧ ಬುದ್ಧಿವಂತಿಕೆ ಹೊಂದಿರುವವರೂ ಕೂಡ ತಮ್ಮದೇ ಬುದ್ಧಿವಂತಿಕೆಯ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳಬಹುದು. ಹಾಗಾದರೆ ವ್ಯಕ್ತಿ ಸಂಬಂಧ ಬುದ್ಧಿವಂತಿಕೆ ಎಂದರೇನು ಎಂಬ ಪ್ರಶ್ನೆ ನಿಮ್ಮ ಮನಸ್ಸಿನಲ್ಲಿ ಮೂಡುತ್ತದೆ. ಯಾರು ಸಮಾಜಮುಖಿ ಧೋರಣೆ ಹೊಂದಿರುವ ವ್ಯಕ್ತಿಗಳಿದ್ದಾರೋ ಅವರು ವ್ಯಕ್ತಿ ಸಂಬಂಧ ಬುದ್ಧಿವಂತಿಕೆ ಹೊಂದಿರುತ್ತಾರೆ. ಅಂದರೆ ಇವರು ವ್ಯಕ್ತಿಗಳ ನಡುವಿನ ಭಾವನೆಗಳಿಗೆ, ಸಂಬಂಧಗಳಿಗೆ ಹೆಚ್ಚು ಮಹತ್ವ ನೀಡುತ್ತಾರೆ. ಒಂದು ಗುಂಪಿನ ನಾಯಕನಾಗಿ ಕೆಲಸ ನಿರ್ವಹಿಸುವುದರಿಂದ ಹಿಡಿದು, ಮಾರಾಟಗಾರರಾಗಿ, ಪ್ರಚಾರಕರಾಗಿ, ಮನಃಶಾಸ್ತ್ರಜ್ಞರಾಗಿ ಹೀಗೆ ಅನೇಕ ಉದ್ಯೋಗಗಳನ್ನು ಮಾಡುತ್ತಾ ಇರುತ್ತಾರೆ.

ಹಾಗಾಗಿ, ಎಳವೆಯಲ್ಲಿಯೇ ಮಕ್ಕಳಲ್ಲಿರುವ ಬುದ್ಧಿವಂತಿಕೆಯನ್ನು ಹಿರಿಯರು ಅರ್ಥ ಮಾಡಿಕೊಳ್ಳಬೇಕು. ತಮ್ಮ ಇಷ್ಟದ ಕ್ಷೇತ್ರವನ್ನು ಮಗುವಿನ ಮೇಲೆ ಹೇರುವ ಬದಲು, ಮಗುವಿನಲ್ಲಿರುವ ಬುದ್ಧಿವಂತಿಕೆ ಹಾಗೂ ನೆಚ್ಚಿನ ಕ್ಷೇತ್ರಕ್ಕೆ ಸಂಬಂಧಪಟ್ಟ ನೈಪುಣ್ಯತೆಯನ್ನು, ಕೌಶಲ್ಯವನ್ನು ಹೇಳಿಕೊಟ್ಟರೆ ಅಥವಾ ಕಲಿಸಿದರೆ ಆ ಮಗು ಜೀವನದಲ್ಲಿ ಯಶಸ್ಸು ಸಾಧಿಸಲು ಖಂಡಿತಾ ಸಾಧ್ಯ.

ಸ್ವ – ಸಾಮರ್ಥ್ಯದ ಬುದ್ಧಿವಂತಿಕೆ :

ಸ್ವ – ಸಾಮರ್ಥ್ಯದ ಬುದ್ಧಿವಂತಿಕೆ ಹೊಂದಿರುವವರು ತಮ್ಮ ಬುದ್ಧಿವಂತಿಕೆಗೆ ಹೆಚ್ಚಿನ ಆದ್ಯತೆ ನೀಡುತ್ತಾರೆ. ಅಂದರೆ ತಮ್ಮ ಭಾವನೆ, ತಮ್ಮ ಗುರಿಗಳಿಗೆ ಹೆಚ್ಚು ಆದ್ಯತೆ, ಒತ್ತು ನೀಡುತ್ತಾ, ತಾವು ಇಟ್ಟ ಗುರಿ, ತಮ್ಮ ಭಾವನೆಗಳಿಗೆ ಯಶಸ್ಸು ಸಿಗುವವರೆಗೆ ಹೋರಾಡುತ್ತಾರೆ. ಅದರಲ್ಲಿ ತಲ್ಲೀನರಾಗಿ ಕೆಲಸ ನಿರ್ವಹಿಸುತ್ತಾ ಯಶಸ್ಸು ಕಾಣುತ್ತಾರೆ. ಮಾತ್ರವಲ್ಲ, ತಮಗೆ ಬೇಕಾದ ವಾತಾವರಣವನ್ನು ಕೂಡ ಅವರು ನಿರ್ಮಿಸಿ ಕೊಳ್ಳಬಲ್ಲರು. ಸ್ವ – ಸಾಮರ್ಥ್ಯದ ಬುದ್ಧಿವಂತಿಕೆ ಹೊಂದಿರುವವರು ತತ್ವಜ್ಞಾನಿ, ಉದ್ಯಮಿಗಳಾಗಿ ಯಶಸ್ಸು ಕಂಡಿರುವ ದೃಷ್ಟಾಂತ ನಮ್ಮ ಸಮಾಜದ ಮುಂದಿರುವುದನ್ನು ನಾವು ಕಂಡಿದ್ದೇವೆ.

ಸ್ವರ – ಸಂಗೀತ ಬುದ್ಧಿವಂತಿಕೆ :

ಫೈನ್ ಆರ್ಟ್ಸ್ ಅಥವಾ ಲಲಿತ ಕಲೆಗಳ ಸಾಮ್ರಾಜ್ಯ ಇದು. ಸ್ವರ – ಸಂಗೀತ ಬುದ್ಧಿವಂತಿಕೆ ಹೊಂದಿರುವವರಲ್ಲಿ ಸಂಗೀತದ ಬಗ್ಗೆ ಜ್ಞಾನ ಹೊಂದಿದ, ಹುಟ್ಟಿನಿಂದಲೇ ಒಳ್ಳೆಯ ಕಂಠ ಹೊಂದಿದವರಲ್ಲಿ ಹೆಚ್ಚಾಗಿ ನೋಡಬಹುದು. ಸಂಗೀತ ಉಪಕರಣಗಳನ್ನು ನುಡಿಸುವುದರಲ್ಲಿ ಇವರು ತಮ್ಮ ಒಲವನ್ನು ತೋರಿಸುತ್ತಾರೆ. ವೃತ್ತಿ ಜೀವನದ ವಿಚಾರ ಬಂದಾಗ ಗಾಯನ, ಗೀತ ರಚನೆ, ಸಂಯೋಜನೆ, ಸಂಗೀತ ಶಿಕ್ಷಕ / ಶಿಕ್ಷಕಿ. ನಿರ್ದೇಶನದಂತ ಉದ್ಯೋಗಗಳನ್ನು ಆಯ್ಕೆ ಮಾಡುತ್ತಾರೆ.

ಪ್ರಾದೇಶಿಕ ದೃಶ್ಯೀಕರಣದ ಬುದ್ದಿವಂತಿಕೆ :

ಪ್ರಾದೇಶಿಕ ದೃಶ್ಯೀಕರಣದ ಬುದ್ಧಿವಂತಿಕೆ ಹೊಂದಿರುವ ವರ್ಗದ ಜನರು ಚಿತ್ರ, ನಕ್ಷೆಗಳನ್ನು ಸ್ಮೃತಿ ಪಟಲದಲ್ಲಿ ನೆನಪು ಇಟ್ಟುಕೊಂಡು ಕೆಲಸ ಮಾಡುವಲ್ಲಿ ಜಾಣರಾಗಿ ಇರುತ್ತಾರೆ. ಅಧ್ಯಯನದ ವಿಚಾರ ಬಂದಾಗ ದೃಶ್ಯ ಮಾಧ್ಯಮಗಳನ್ನು ಹೆಚ್ಚು ಬಳಸಿಕೊಳ್ಳುತ್ತಾರೆ. ಮಾತ್ರವಲ್ಲದೆ ಆ ಸಂಬಂಧಿತ ಉದ್ಯೋಗಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಉದಾಹರಣೆಗೆ ವಾಸ್ತು ಶಿಲ್ಪಿ, ಕಲಾವಿದ, ವಸ್ತ್ರ ವಿನ್ಯಾಸಗಾರ ಮತ್ತು ಎಂಜಿನಿಯರ್ ಇತ್ಯಾದಿ ಕ್ಷೇತ್ರಗಳು.

ದೇಹ ಚಲನಾ ಬುದ್ಧಿವಂತಿಕೆ :

ಇಂತಹ ವ್ಯಕ್ತಿಗಳು ದೇಹದ ಭಾಗಗಳ ಚಲನೆಯ ಮೇಲೆ ನಿಯಂತ್ರಣ ಹೊಂದಿರುತ್ತಾರೆ. ಉತ್ತಮ ವಾಹನ ಚಾಲನೆ ಮಾಡುತ್ತಾರೆ. ಕ್ರೀಡಾಪಟು, ನರ್ತಕರಲ್ಲಿಯೂ ಈ ಬುದ್ಧಿಮತ್ತೆ ಹೆಚ್ಚಿರುತ್ತದೆ. ಕಟ್ಟಡ ಕಾರ್ಮಿಕರು ಇದರಿಂದ ಹೊರತಲ್ಲ. ಇದು ಕೌಶಲ್ಯಕ್ಕೆ ಸಂಬಂಧಪಟ್ಟ ಕ್ಷೇತ್ರವೂ ಹೌದು ಎಂದರೆ ತಪ್ಪಾಗದು.

ನಿಸರ್ಗ / ನೈಸರ್ಗಿಕ ಬುದ್ಧಿವಂತಿಕೆ : ಇವರು ಪ್ರಕೃತಿ ಪ್ರೇಮಿಗಳಾಗಿದ್ದು, ಪರಿಸರದ ಬಗೆಗಿನ ಅಧ್ಯಯನದಲ್ಲಿ ಆಸಕ್ತಿ ಹೊಂದಿರುತ್ತಾರೆ. ವನ್ಯಜೀವಿಗಳ ಒಡನಾಟವನ್ನು ಇವರು ಇಷ್ಟಪಡುತ್ತಾರೆ. ಪ್ರಕೃತಿಯ ನಿಕಟವರ್ತಿ ಆಗಿರುತ್ತಾರೆ. ಉದಾಹರಣೆಗೆ ರೈತ, ಭೂ ವಿಜ್ಞಾನಿ, ಸಸ್ಯ ವಿಜ್ಞಾನಿ, ಹಾವಾಡಿಗ, ಪರಿಸರವಾದಿಯಾಗಿ ಕೆಲಸ ಮಾಡುತ್ತಾ ಇರುತ್ತಾರೆ.

ಅಸ್ತಿತ್ವವಾದದ ಬುದ್ಧಿವಂತಿಕೆ :

ಈ ಬುದ್ಧಿಮತ್ತೆ ಹೊಂದಿದ ವ್ಯಕ್ತಿಯು ಆಳವಾದ ಜ್ಞಾನ ಅನ್ವೇಷಣಾಕಾರರೇ ಆಗಿರುತ್ತಾರೆ. ಮಾನವನ ಇರುವಿಕೆ, ಭೂಮಿಯ ಸೃಷ್ಟಿಯ ಬಗೆಗೆ ಇವರು ಹೆಚ್ಚು ಪ್ರಶ್ನಿಸುತ್ತಾ ಇರುತ್ತಾರೆ. ವಿಷಯಗಳ ಅಧ್ಯಯನ ಅವರಿಗೆ ಆಸಕ್ತಿದಾಯಕ ವಿಷಯ. ಉದಾಹರಣೆಗೆ ವಿದ್ವಾಂಸರು, ಸಂಶೋಧಕರು, ಅರ್ಥಶಾಸ್ತ್ರಜ್ಞರು ಇತ್ಯಾದಿ.

ಸಾಮಾಜಿಕ ಬುದ್ಧಿವಂತಿಕೆ :

ಇತ್ತೀಚೆಗಿನ ಎಲ್ಲಾ ಕ್ಷೇತ್ರದಲ್ಲೂ ಅಭ್ಯರ್ಥಿಗಳ ಆಯ್ಕೆಯಿಂದ ಹಿಡಿದು ಬಡ್ತಿಗಳಂತ ಮಹತ್ತರವಾದ ಬೆಳವಣಿಗೆಗೆ ಸಾಮಾಜಿಕ ಬುದ್ಧಿವಂತಿಕೆ ಬಹು ಮುಖ್ಯವಾಗಿದೆ. ಪಠ್ಯ – ಪರೀಕ್ಷೆಗಳ ವಿಚಾರ ಬಂದಾಗ ಮಾತ್ರ ಸಾಮಾನ್ಯ ಬುದ್ದಿವಂತಿಕೆ ಬೇಕಾಗುತ್ತದೆ. ಉದ್ಯೋಗದ ಸಲುವಾಗಿ ಅಭ್ಯರ್ಥಿಗಳ ಆಯ್ಕೆಗೆ ಸಾಮಾಜಿಕ ಬುದ್ಧಿವಂತಿಕೆಯೇ ಮಾನದಂಡ ಆಗಿರುತ್ತದೆ.

ಸಾಮಾಜಿಕ ಬುದ್ಧಿಮತ್ತೆ ಎಂದರೆ ಸಾಮಾಜಿಕ ಅರಿವು, ವಿಕಾಸಕ್ಕೆ ಸಂಬಂಧಿಸಿದ ನಂಬಿಕೆಗಳು, ಮಾನವನ ಭಾವನೆ, ವರ್ತನೆಗಳನ್ನು ಒಳಪಟ್ಟಿದ್ದು ಹಾಗೂ ಸಾಮಾಜಿಕ ಬದಲಾವಣೆಯನ್ನು ನಿರ್ವಹಿಸಲು ಬೇಕಾದ ಚಾಕಚಕ್ಯತೆ.

ಹೃದಯದ ಬುದ್ಧಿವಂತಿಕೆ :

ಹೃದಯದ ಬುದ್ಧಿವಂತಿಕೆ ಎಂದರೆ ಮನಸ್ಸು ಮತ್ತು ಭಾವನೆಗಳನ್ನು ಹೃದಯದೊಂದಿಗೆ ಬೆಸೆದು ಅಂತಃಪ್ರಜ್ಞೆಯ ಮೂಲಕ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಹಕರಿಸುವ ಸಾಧನ. ಉದಾಹರಣೆಗೆ ನೀವು ಜೀವನದಲ್ಲಿ ಅತಿ ಮುಖ್ಯವಾದ ಆಯ್ಕೆ ಮಾಡುವಾಗ ಮನಸ್ಸಿನ ಮಾತನ್ನು ಕೇಳಿ ನಿರ್ಧಾರ ತೆಗೆದು ಕೊಳ್ಳುವುದೇ ಹೃದಯದ ಬುದ್ಧಿವಂತಿಕೆ.

ಬುದ್ಧಿವಂತಿಕೆ ಹೆಚ್ಚಿಸಿಕೊಳ್ಳಲು ಬೇಕಾದ ಸರಳ ಸೂತ್ರಗಳನ್ನು ವಿದ್ವಾಂಸರು ಕಂಡು ಹಿಡಿದಿದ್ದಾರೆ. ಅವೆಂದರೆ :

ದಿನನಿತ್ಯದ ವ್ಯಾಯಾಮ :

ಯೋಗಾಸನಗಳು, ಕಾಲ್ನಡಿಗೆ, ಚಾರಣಗಳಂತಹ ಉಲ್ಲಾಸಿತಗೊಳಿಸುವುದರ ಚಟುವಟಿಕೆಗಳು ಮನಸ್ಸನ್ನು ಜೊತೆಗೆ ಮೆದುಳನ್ನು ಸಕ್ರಿಯಗೊಳ್ಳುವಂತೆ ಮಾಡುತ್ತದೆ. ಬುದ್ಧಿಶಕ್ತಿಯ ವೃದ್ಧಿಗೆ ಸಹಾಯಕ ಆಗುತ್ತದೆ.

ವಿಶ್ರಾಂತಿ ಮತ್ತು ನಿದ್ರೆ :

ಮಾನವನ ದೇಹದ ದಣಿವಾರಿಸಲು ಸಾಕಷ್ಟು ಪ್ರಮಾಣದ ವಿಶ್ರಾಂತಿಯ ಅವಶ್ಯಕತೆ ಇರುತ್ತದೆ. ನಿದ್ರೆ ನಮ್ಮ ಮನಸ್ಸಿನ, ಮೆದುಳಿನ ಆಯಾಸವನ್ನು ಪರಿಹರಿಸುತ್ತದೆ. ಮನುಷ್ಯನ ಮಾನಸಿಕ ಆರೋಗ್ಯದ ಜೊತೆಗೆ ಅರಿವಿನ ವಿಕಾಸಕ್ಕೂ ಎಡೆ ಮಾಡುತ್ತದೆ.

ಧ್ಯಾನ ಮಾಡುವುದು :

ಧ್ಯಾನ ಜ್ಞಾನಾರ್ಜನೆಗೆ ಮೂಲ. ಧ್ಯಾನ ಮಾಡುವುದರಿಂದ ಮನುಷ್ಯನ ಗಮನ, ಏಕಾಗ್ರತೆ ಹೆಚ್ಚುತ್ತದೆ. ಇದು ಪಠ್ಯ ವಿಚಾರವನ್ನೊಳಗೊಂಡು ಹೊಸ ವಿಷಯ ಕಲಿಯುವಲ್ಲಿ ಆಸಕ್ತಿ ಹೆಚ್ಚಿಸುತ್ತದೆ. ಈ ಕಲಿಕೆಗಳು ಆತ್ಮವಿಶ್ವಾಸವನ್ನು ಹೆಚ್ಚಿಸುವುದರ ಜೊತೆಗೆ ಯೋಚಿಸುವ ಸಾಮರ್ಥ್ಯವನ್ನು ಬೆಳೆಸುತ್ತವೆ.

ಪೋಷಕಾಂಶವುಳ್ಳ ಆಹಾರ ಸೇವನೆ :

ಬಹುತೇಕ ಮಂದಿಗೆ ಪೋಷಕಾಂಶ ಕೊರತೆಯಿಂದ ಗಮನ ಕೇಂದ್ರಿಕರಿಸಲು ಸಾಧ್ಯವಾಗದೆ ಹೋಗುತ್ತದೆ. ಬುದ್ಧಿಶಕ್ತಿ, ಜ್ಞಾಪಕ ಶಕ್ತಿ ಹೆಚ್ಚಿಸಲು ಸಾಕಷ್ಟು ಪ್ರಮಾಣದಲ್ಲಿ ದೇಹಕ್ಕೆ ಪೋಷಕಾಂಶವುಳ್ಳ ಆಹಾರದ ಅವಶ್ಯಕತೆ ಇರುತ್ತದೆ. ಜೊತೆಗೆ ಸಮ ಪ್ರಮಾಣದ ನೀರಿನ ಸೇವನೆ ಉತ್ತಮ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ದಾರಿ ಮಾಡಿ ಕೊಡುತ್ತದೆ.

ಒಳ್ಳೆಯ ಪುಸ್ತಕಗಳನ್ನು ಓದುವುದು :

‘ದೇಶ ಸುತ್ತಿ ನೋಡು ಕೋಶ ಓದಿ ನೋಡು’ ಎಂಬ ಗಾದೆ ಮಾತನ್ನು ಹಿರಿಯರು ಸುಮ್ಮನೆ ಮಾಡಿಲ್ಲ. ನಮ್ಮ ಜ್ಞಾನ ಹೆಚ್ಚಿಸಿಕೊಳ್ಳಲು ಸಾಕಷ್ಟು ಪುಸ್ತಕಗಳನ್ನು ಓದುವುದು ಸುಲಭ ಉಪಾಯ. ಪುಸ್ತಕ ಓದುವ ಅಭ್ಯಾಸ ಬೆಳೆಸಿಕೊಂಡರೆ ಬುದ್ದಿ ಮತ್ತಷ್ಟು ಚುರುಕುಗೊಳ್ಳುತ್ತಾ ಹೋಗುತ್ತದೆ.

ಒಳ್ಳೆಯ ಹವ್ಯಾಸಗಳನ್ನು ಬೆಳೆಸಿಕೊಳ್ಳುವುದು :

ಲಲಿತ ಕಲೆಗಳಲ್ಲಿ ತೊಡಗಿಕೊಳ್ಳುವುದು, ಮನಸ್ಸಿಗೆ ಮುದ ನೀಡುವ ಮತ್ತು ಬಿಡುವಿನ ಸಮಯವನ್ನು ಸದುಪಯೋಗ ಮಾಡುವಂತಹ ವಿಚಾರದಲ್ಲಿ ನಿರತರಾದರೆ ಮಾನಸಿಕ ಸ್ವಾಸ್ಥ್ಯ ಕಾಪಾಡಿ ಕೊಳ್ಳುವುದರ ಜೊತೆಗೆ ಅರಿವಿನ ವಿಕಾಸಕ್ಕೆ ಪುಷ್ಠಿ ನೀಡುತ್ತದೆ.

ಪ್ರತಿಯೊಬ್ಬ ಪೋಷಕರು ಅರ್ಥೈಸಿಕೊಳ್ಳಬೇಕಾದ ವಿಚಾರವೆಂದರೆ ಮಕ್ಕಳು ಪುಸ್ತಕವನ್ನು ಓದಿ ಪರೀಕ್ಷೆ ಬರೆಯುವುದೊಂದೆ ಬುದ್ದಿವಂತಿಕೆಯಲ್ಲ. ಬದಲಾಗಿ ಓದುವುದು, ಬರೆಯುವುದರಲ್ಲಿ ಹಿಂದೆ ಇರುವವರೂ ಬೇರೆ ವಿಷಯದಲ್ಲಿ ಜಾಣರೇ ಇರಬಹುದು. ಅಂತಹ ವಿಷಯ ಯಾವುದು ಎಂದು ಅರ್ಥ ಮಾಡಿಕೊಂಡಾಗ ಯಾವ ಮಗು ದಡ್ಡನಾಗಿರುವುದಿಲ್ಲ. ಮಕ್ಕಳು ಇಷ್ಟಪಟ್ಟು ಕಲಿಯುವ ಕ್ಷೇತ್ರಗಳನ್ನು ಗುರುತಿಸಿ, ಪ್ರತಿಭೆಗೆ ತಕ್ಕ ಆಸರೆ ನೀಡಿದರೆ ದಡ್ಡತನದ ಪದ ಪ್ರಯೋಗ ಮಾಡಬೇಕಾಗುವುದಿಲ್ಲ.

ಆದ್ದರಿಂದ ಮಕ್ಕಳನ್ನು ಹೀಯಾಳಿಸುವುದು, ಬೈಯ್ಯುವುದು, ಹೊಡೆಯುವುದನ್ನು ಮಾಡದೇ ಸದಭಿರುಚಿಯ ಚಟುವಟಿಕೆಯತ್ತ ಕೊಂಡೊಯ್ಯುವ ಪ್ರಯತ್ನ ಮಾಡಿ. ಆಗ ಮಗುವಿನಲ್ಲಿ ಸುಪ್ತವಾಗಿ ಇರುವ ಪ್ರತಿಭೆ ಹೊರಬಂದು, ಸರ್ವತೋಮುಖ ಬೆಳವಣಿಗೆಗೆ ಕಾರಣ ಆಗುತ್ತದೆ ಎನ್ನುವುದನ್ನು ಮರೆಯದಿರಿ. ಇಂದಿನ ಮಕ್ಕಳನ್ನು ನೋಡುವಾಗ ಒಂದು ವಿಷಯವಂತೂ ಸ್ಪಷ್ಟ. ಈ ಜನರೇಷನ್ ನ ವೇಗ ಬಹಳ ಇರುತ್ತದೆ. ಪೋಷಕರು ಅಥವಾ ಹಿರಿಯರು ಮಕ್ಕಳ ಮೇಲೆ ಒತ್ತಡ ಹೇರಿದಾಗ ಈ ವೇಗ ಬೇರೆಡೆಗೆ ಸೆಳೆದೊಯ್ಯುವ ಸಾಧ್ಯತೆಯೇ ಅಧಿಕ. ಹಾಗಾಗದಂತೆ ಎಚ್ಚರ ವಹಿಸುವುದು ನಮ್ಮೆಲ್ಲರ ಕರ್ತವ್ಯ. ಪ್ರತಿಯೊಂದು ಉದ್ಯೋಗ  ಕ್ಷೇತ್ರವೂ ಅಮೂಲ್ಯವೇ ಆಗಿರುತ್ತದೆ. ಹಾಗಾಗಿ ಮಗು ಆಯ್ಕೆ ಮಾಡಿಕೊಳ್ಳುವ ಕ್ಷೇತ್ರಕ್ಕೆ ಪ್ರಾಧಾನ್ಯತೆ ನೀಡಿ. ಮಗುವಿನ ಬುದ್ಧಿಶಕ್ತಿ ಸರ್ವೇ ಸಹಜವಾಗಿ ವಿಕಸಿತ ಆಗುವುದನ್ನು ನೀವು ಕಂಡುಕೊಳ್ಳಿ.


ಈ ಸುದ್ದಿಯನ್ನು ಶೇರ್ ಮಾಡಿ

Related Posts