ಪುತ್ತೂರು: ಜಿಲ್ಲೆಯಲ್ಲೇ ಅತೀ ಹಿರಿಯ ಗಣಪ ಎಂಬ ಖ್ಯಾತಿ ಪಡೆದುಕೊಂಡಿರುವ ಪುತ್ತೂರಿನ ಕಾರಣೀಕತೆಯ ಕಿಲ್ಲೆ ಮೈದಾನದ ಮಹಾ ಗಣೇಶ ಈ ಬಾರಿ ಸ್ವರ್ಣಾಭರಣಗಳೊಂದಿಗೆ ಕಂಗೊಳಿಸಲಿದೆ.
ಏಳು ದಿನಗಳ ಕಾಲ ನಡೆಯುವ ಪುತ್ತೂರಿನ ಕಿಲ್ಲೆ ಮೈದಾನದಲ್ಲಿ ಆಚರಿಸಲ್ಪಡುವ ಮಹಾಗಣಪತಿಗೆ ಈ ಬಾರಿ ಸ್ವರ್ಣ ಲೇಪಿತ ಸೊಂಡಿಲು ಮತ್ತು ಕರ್ಣಾದ್ಯಗಳು ಸಮರ್ಪಣೆಯಾಗಲಿದೆ. ಈ ಮೂಲಕ ಮಹಾಗಣಪ ಪರಿಪೂರ್ಣ ಬಂಗಾರ ಲೇಪಿತನಾಗಿ ಭಕ್ತರಿಗೆ ದರುಶನ ನೀಡಲಿದ್ದಾನೆ.
ಈ ಹಿಂದೆ ಸುಧಾಕರ್ ಶೆಟ್ಟಿ ಅವರು ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಶ್ರೀ ಮಹಾಗಣಪನಿಗೆ ಸೊಂಡಿಲು, ಕಿರೀಟ, ಕಿವಿ ಆಭರಣಗಳನ್ನು ನಿರ್ಮಿಸಿ, ಸಮರ್ಪಿಸಲಾಗಿತ್ತು. ಇದೀಗ ಅವರ ಪುತ್ರ ಅಭಿಜಿತ್ ಶೆಟ್ಟಿ ನೆಲ್ಲಿಕಟ್ಟೆ ಅವರು ಸಮಿತಿಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದು, ಶ್ರೀ ಮನ್ಮಹಾಮಂಗಲ ಮೂರ್ತಿ ಮಹಾಗಣೇಶ ಸಂಪೂರ್ಣವಾಗಿ ಬಂಗಾರದ ಆಭರಣಗಳನ್ನು ಧರಿಸಿ, ಭಕ್ತರ ಅಭೀಷ್ಟಗಳನ್ನು ಈಡೇರಿಸಲಿದ್ದಾನೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಅಭಿಜಿತ್ ಶೆಟ್ಟಿ ನೆಲ್ಲಿಕಟ್ಟೆ ಅವರು, ಕಿಲ್ಲೆ ಮೈದಾನದ ಮಹಾಗಣಪತಿಗೆ ಅರ್ಪಣೆಯಾಗಿರುವ ದೊಡ್ಡ ಗಾತ್ರದ ಆಭರಣಗಳನ್ನು ಯಥಾ ಪ್ರಕಾರ ಉಳಿಸಿಕೊಳ್ಳಲಾಗಿದೆ. ಸಣ್ಣ ಪುಟ್ಟ ಆಭರಣಗಳನ್ನಷ್ಟೇ ಬಳಸಿ ಸ್ವರ್ಣ ಲೇಪನ ಮಾಡಲಾಗಿದೆ ಎಂದಿದ್ದಾರೆ.