ಪುತ್ತೂರು: ಹಿರಿಯರ ತ್ಯಾಗ ಬಲಿದಾನ ಶೌರ್ಯದ ಸಂಕೇತವಾಗಿ ನಾವಿಂದು ಸ್ವಾತಂತ್ರ್ಯೋತ್ಸವ ಆಚರಣೆ ಮಾಡುತ್ತಿದ್ದು, ಇದು ಕೇವಲ ಆಚರಣೆಯ ದಿನವಲ್ಲ. ಸಂಕಲ್ಪದ ದಿನವಾಗಿದೆ. ಸ್ವಾತಂತ್ರ್ಯದ ಬೆಲೆಯನ್ನು ಅರಿತು ಅದನ್ನುಉಳಿಸಿಕೊಳ್ಳುವ ಪ್ರಯತ್ನ ಮಾಡಬೇಕು ಎಂದು ಪುತ್ತೂರು ಉಪವಿಭಾಗಾಧಿಕಾರಿ ಸ್ಟೆಲ್ಲಾ ವರ್ಗೀಸ್ ಹೇಳಿದರು.
ಅವರು ಶುಕ್ರವಾರ ಕಿಲ್ಲೆ ಮೈದಾನದ ಅಮರ್ ಜವಾನ್ ಸ್ಮಾರಕ ಜ್ಯೋತಿ ಬಳಿ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ನಡೆದ ತಾಲೂಕುಮಟ್ಟದ 79ನೇ ಸ್ವಾತಂತ್ರ್ಯೋತ್ಸವದ ಸಂದರ್ಭ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ವಂದನೆ ಸ್ವೀಕರಿಸಿ ಸಂದೇಶ ನೀಡಿದರು.
ಪ್ರಗತಿಯಲ್ಲಿ ಭಾರತವು ಅತ್ಯುನ್ನತ ಶಕ್ತಿಯಾಗಿ ಮೆರೆಯುತ್ತಿದೆ. ವಿದ್ಯಾರ್ಥಿಗಳೇ ದೇಶದ ಭವಿಷ್ಯ. ಅವರಲ್ಲಿ ಮಾನವೀಯ ಮೌಲ್ಯ ಬೆಳೆಸಿಕೊಳ್ಳುವುದರೊಂದಿಗೆ ಸನ್ಮಾರ್ಗದ ದಾರಿಯಲ್ಲಿ ಮುನ್ನಡೆಸಿ ಅದಕ್ಕೆ ಪೂರಕವಾದ ಅರಿವು ನೀಡಿ ಉನ್ನತ ಮೌಲ್ಯವನ್ನು ಅವರು ಬದುಕಿನಲ್ಲಿ ಅಳವಡಿಸಿಕೊಳ್ಳುವಂತೆ ಪ್ರಯತ್ನಿಸಬೇಕು. ವಿದ್ಯಾರ್ಥಿಗಳ ಇಂದಿನ ಶ್ರಮವೇ ಅವರಲ್ಲಿ ನಾಳಿನ ಭವಿಷ್ಯ ರೂಪಿಸುತ್ತದೆ ಎಂದರು.
ಪುತ್ತೂರು ಪುರಭವನದಲ್ಲಿ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಸಾಧಕರನ್ನು ಸನ್ಮಾನಿಸಿ ಮಾತನಾಡಿದ ಪುತ್ತೂರು ಶಾಸಕ ಅಶೋಕ್ ರೈ ಅವರು, ಹಿರಿಯರು ದೇಶದ ಸ್ವ-ಆಡಳಿತದ ಹಕ್ಕಿಗಾಗಿ ಹೋರಾಡಿ ತ್ಯಾಗ ಬಲಿದಾನ ಗೈದಿದ್ದು, ಅವರನ್ನು ಸ್ಮರಿಸುವ ಮತ್ತು ಗೌರವಿಸುವ ದಿನ ಇದಾಗಿದೆ.
ಸ್ವಾತಂತ್ರ್ಯ ಸಿಕ್ಕಿದರೂ ದೇಶದೊಳಗಡೆ ಈಗಲೂ ದೌರ್ಜನ್ಯ ಕೋಮುವಾದ ಮುಂದುವರಿಯುತ್ತಿದೆ. ಅನೇಕ ಸಾಧನೆಗಳಿಗೆ ಸಾಕ್ಷಿಯಾಗಿರುವ ಭಾರತಕ್ಕೆ ಇದೊಂದು ಕಪ್ಪುಚುಕ್ಕೆಯಾಗಿದೆ. ನಮ್ಮಲ್ಲಿ ಸುಮಾರು 7 ಸಾವಿರ ಕಾನೂನುಗಳಿವೆ. ಇವು ಹಳೆಯ ಕಾಲದಲ್ಲಿ ಮಾಡಿರುವ ಕಾನೂನುಗಳಾಗಿದ್ದು, ಈ ಕಾಲಕ್ಕೆ ಕೆಲವು ಕಾನೂನುಗಳು ಅನ್ವಯವಾಗದ ಹಿನ್ನಲೆಯಲ್ಲಿ ಅಮೇರಿಕಾ ಮಾದರಿಯಂತೆ ಕಾನೂನುಗಳನ್ನು ಬದಲಾವಣೆ ಮಾಡುವುದು ಅತೀ ಅಗತ್ಯವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಪುಡಾ ಅಧ್ಯಕ್ಷ ಅಮಳ ರಾಮಚಂದ್ರ ಮಾತನಾಡಿದರು.
ಕಾರ್ಯಕ್ರಮದಲ್ಲಿ ಸಾಧಕ ವಿದ್ಯಾರ್ಥಿಗಳಾದ ಚಿನ್ಮಯಿ ಎಲ್, ಪ್ರಜ್ಞಾ ನಿಡ್ವಣ್ಣಾಯ, ಅನಘಾ ಶೆಟ್ಟಿ, ಅನುಶ್ರೀ ಯುಕ್ತಾಶ್ರೀ ಅವರನ್ನು ಪುರಸ್ಕರಿಸಲಾಯಿತು. ನಿವೃತ್ತ ಯೋಧರಾದ ತುಳಸೀದಾಸ್ ಪಿಲಿಂಜ ಮತ್ತು ಭಾಸ್ಕರ್ ನಾಯ್ಕ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಪುತ್ತೂರು ನಗರ ಠಾಣೆಯ ಸಬ್ಇನ್ಸ್ಪೆಕ್ಟರ್ ಆಂಜನೇಯ ರೆಡ್ಡಿ ಹಾಗೂ ರಝಾಕ್ ಬಪ್ಪಳಿಗೆ ನೇತೃತ್ವದಲ್ಲಿ ಸ್ವಾತಂತ್ರ್ಯೋತ್ಸವ ಅಂಗವಾಗಿ ನಡೆಸಲಾದ ರಸಪ್ರಶ್ನೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಪೊಲೀಸ್ ಇಲಾಖೆ, ಗೃಹರಕ್ಷಕದಳ, ಅಗ್ನಿಶಾಮಕದಳ, ಎನ್ಸಿಸಿ ಮತ್ತು ಎನ್ ಪಿಸಿ, ಸ್ಕೌಟ್ಸ್ & ಗೈಡ್ಸ್, ಬ್ಯಾಂಡ್ ಸೆಟ್ ಮೂಲಕ ಗೌರವರಕ್ಷೆ ಮತ್ತು ಪಥಸಂಚಲನ ನಡೆಯಿತು.
ಕಾರ್ಯಕ್ರಮದಲ್ಲಿ ನಗರಸಭಾ ಅಧ್ಯಕ್ಷೆ ಲೀಲಾವತಿ ಅಣ್ಣು ನಾಯ್ಕ್, ಡಿವೈಎಸ್ಪಿ ಅರುಣ್ ನಾಗೇಗೌಡ, ರಾಷ್ಟಿçÃಯ ಹಬ್ಬಗಳ ಆಚರಣಾ ಸಮಿತಿ ಅಧ್ಯಕ್ಷ ತಹಶೀಲ್ದಾರ್ ಎಸ್.ಬಿ ಕೂಡಲಗಿ, ನಗರಸಭೆಯ ಪೌರಾಯುಕ್ತೆ ವಿದ್ಯಾ ಎಸ್ ಕಾಳೆ ಉಪಸ್ಥಿತರಿದ್ದರು.
ತಾಪಂ ಕಾರ್ಯನಿರ್ವಹಣಾಧಿಕಾರಿ ನವೀನ್ ಕುಮಾರ್ ಭಂಡಾರಿ ಸ್ವಾಗತಿಸಿದರು. ಸಾಂಸ್ಕೃತಿಕ ಸಂಚಾಲಕರಾದ ಕ್ಷೇತ್ರಶಿಕ್ಷಣಾಧಿಕಾರಿ ಎಸ್.ಆರ್ ಲೋಕೇಶ್ ವಂದಿಸಿದರು. ಶಿಕ್ಷಕ ಬಾಲಕೃಷ್ಣ ಪೊರ್ದಾಳ್ ಕಾರ್ಯಕ್ರಮ ನಿರೂಪಿಸಿದರು.
ಬಳಿಕ ವಿವಿಧ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲಾಯಿತು.