ಪುತ್ತೂರು: ಕೆಯ್ಯೂರು, ದೇರ್ಲದಲ್ಲಿ ಗುರುವಾರ ಮಧ್ಯಾಹ್ನವೇ ಕಾಡಾನೆಗಳು ನಾಡಿಗೆ ಬಂದಿವೆ. ಆನೆ ನಡೆದ ಸಾಕ್ಷಿಗಳು ಅಲ್ಲಲ್ಲಿ ಕಾಣಸಿಗುತ್ತವೆ. ಕಾಡಾನೆ ಫೊಟೋಗೆ ಸೆರೆ ಸಿಕ್ಕಿದೆ.
ಕಾಡಾನೆ ಹಾವಳಿ ನಾಡಿನಲ್ಲಿ ಹೆಚ್ಚಾಗಿದೆ. ಕೃಷಿಕರ ಪಾಡು ಕೇಳುವವರಿಲ್ಲ. ಇದು ಇಂದು ನಿನ್ನೆಯ ಕಥೆಯಲ್ಲ. ಕಳೆದ ಎರಡು ವರ್ಷದಿಂದ ನಿರಂತರವಾಗಿ ಅನುಭವಿಸುತ್ತಿರುವ ಯಾತನೆ. ದೂರದ ಹಾಸನ, ಸಕಲೇಶಪುರ, ಸುಳ್ಯದ ಕಾಡಂಚಿನ ಭಾಗಗಳಲ್ಲಿ ಕಾಡಾನೆಗಳ ಹಾವಳಿ ಎಂದು ಕೇಳಿದ್ದೇವು. ಇದೀಗ ನಮ್ಮೂರಿನಲ್ಲೇ ಕಾಡಾನೆಗಳ ಹಾವಳಿ ಶುರುವಾಗಿ ವರ್ಷ ಎರಡು ಸರಿದರೂ, ಎಲ್ಲೂ ಸರಿಯಾದ ಸ್ಪಂದನೆ ಸಿಕ್ಕಿಲ್ಲ ಎಂದರೆ ವಿಪರ್ಯಾಸವೇ ಸರಿ.
ಗುರುವಾರ ಮಧ್ಯಾಹ್ನ ಕಾಡಾನೆ ಕೆಯ್ಯೂರು, ದೇರ್ಲದ ಜನವಸತಿ ಪ್ರದೇಶಗಳಲ್ಲಿ ಓಡಾಡಿವೆ. ಕಾಣಲು ಸಿಕ್ಕವರು ಫೊಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಇನ್ನೂ ಕೆಲವಾರು ಪ್ರದೇಶಗಳಲ್ಲಿ ಕಾಲಿನ ಗುರುತು, ಲದ್ದಿ ಹೀಗೆ ಆನೆಯ ಗುರುತುಗಳು ಸಿಕ್ಕಿವೆ. ಕೃಷಿಕರು, ಸಾರ್ವಜನಿಕರು ಭಯಭೀತರಾಗಿದ್ದಾರೆ. ಶಾಶ್ವತ ಪರಿಹಾರ ನೀಡುವಿರಾ ಎಂದು ಮೊರೆ ಇಡುತ್ತಿದ್ದಾರೆ.
ಇದೀಗ ಆನೆ ದೇರ್ಲ ಎಟ್ಯಡ್ಕ ಪರಿಸರದಲ್ಲಿ ಇದೆ ಎಂಬ ಸಂದೇಶಗಳು ವಾಟ್ಸ್ಆ್ಯಪ್ ನಲ್ಲಿ ಹರಿದಾಡುತ್ತಿದೆ. ಜನಪ್ರತಿನಿಧಿಗಳು ಮೌನವಾಗಿದ್ದಾರೆ. ಕಾಡಿಗೆ ಅಟ್ಟಿದರೆ ಪ್ರಯೋಜನವೇನು? ನಾಳೆ ವಾಪಾಸು ಊರಿಗೆ ಬರುತ್ತದಲ್ಲವೇ? ಕೃಷಿಗೆ ಹಾನಿ, ಜನರಿಗೆ ತೊಂದರೆ ಕೊಟ್ಟರೆ ಅದಕ್ಕೆ ಯಾರು ಹೊಣೆ? ಇಲಾಖೆಯವರು ಸುಮ್ಮನೆ ಜೀಪಲ್ಲಿ ಬಂದು ಸೈರಾನ್ ಹಾಕೋದು, 4 ಗರ್ನಾಲ್ ಬಿಸಡೋದು, ಕೊನೆಗೆ ಡೀಸಲ್, ಊಟ ಬಿಲ್ ಮಾಡೋದು, ಪೇಪರಿಗೆ ಒಂದು ಸ್ಟೇಟ್ಮೆಂಟ್ ಕೊಡೋದು. ಅಲ್ಲಿಗೆ ಆನೆ ಕಥೆ ಮುಗೀತು.. ಇತ್ಯಾದಿಯಾಗಿ ಜನರಾಡಿಕೊಳ್ಳುತ್ತಿದ್ದಾರೆ.
ಕೆಲ ದಿನಗಳ ಹಿಂದಷ್ಟೇ ಕೃಷಿಕರ ತಂಡವೊಂದು ಡಿಎಫ್ಓ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿತ್ತು. ಆಗ – ಈ ವಿಚಾರ ಅಧಿಕೃತವಾಗಿ ನನ್ನ ಗಮನಕ್ಕೆ ಬಂದಿಲ್ಲ. ಎರಡು ವಾರದಲ್ಲಿ ಆನೆ ಹಿಡಿಯುವ ತಂಡ ಕಳುಹಿಸುವ ಬಗ್ಗೆ ಭರವಸೆ ನೀಡಿದ್ದರು ಎಂದು ಡಿಎಫ್ಓ ತಿಳಿಸಿದ್ದರು ಎಂದು ತಂಡ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿತ್ತು. ಇದಾಗಿ ತಿಂಗಳು ಅನೇಕ ಕಳೆಯಿತು. ಇಲ್ಲಿವರೆಗೆ ಆನೆ ಹಿಡಿಯುವ ತಂಡ ಬರಲೇ ಇಲ್ಲ. ಆನೆ ಸ್ಥಳ ಬಿಟ್ಟು ಕದಲಲೇ ಇಲ್ಲ.