Thursday, November 21
Share News

ತೈಲ ತುಂಬಿದ್ದ ಟ್ಯಾಂಕರ್‌ (Fuel Tanker) ಸ್ಫೋಟಗೊಂಡು ನೂರು ಮಂದಿ ಸಾವನ್ನಪ್ಪಿದ್ದು, 50ಕ್ಕೂ ಅಧಿಕ ಜನರು ಗಾಯಗೊಂಡಿರುವ ಘಟನೆ ಉತ್ತರ ನೈಜೀರಿಯಾದಲ್ಲಿ ಮಂಗಳವಾರ ತಡರಾತ್ರಿ (ಅ.15) ನಡೆದಿರುವುದಾಗಿ ವರದಿಯಾಗಿದೆ.

ನೈಜೀರಿಯಾದ ಉತ್ತರ ಜಿಗಾವಾ ಪ್ರದೇಶದಲ್ಲಿ ಟ್ಯಾಂಕರ್‌ ಟ್ರಕ್‌ ವೊಂದಕ್ಕೆ ಡಿಕ್ಕಿ ಹೊಡೆದಿತ್ತು. ಈ ಸಂದರ್ಭದಲ್ಲಿ ಜನರು ತೈಲ ಸಂಗ್ರಹಿಸಲು ಪ್ರಯತ್ನಿಸುತ್ತಿದ್ದ ವೇಳೆ ಸ್ಫೋಟಗೊಂಡ ಪರಿಣಾಮ ಈ ದುರ್ಘಟನೆ ನಡೆದಿರುವುದಾಗಿ ಪೊಲೀಸ್‌ ವಕ್ತಾರ ಲವಾನ್‌ ಶಿಸು ಅದಾಂ ಎಎಫ್‌ ಪಿಗೆ ತಿಳಿಸಿದ್ದಾರೆ.

ಜಿಗಾವಾ ನಗರದಲ್ಲಿ ಟ್ಯಾಂಕರ್‌ ಚಾಲಕ ಟ್ರಕ್‌ ಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಪ್ರಯತ್ನಿಸಿದ್ದ, ಆದರೆ ನಿಯಂತ್ರಣ ತಪ್ಪಿ ಡಿಕ್ಕಿ ಹೊಡೆದಿತ್ತು. ಆಗ ವಾಹನದ ಸುತ್ತ ನಿವಾಸಿಗಳು ಸೇರಿದ್ದು, ಇಂಧನ ಸಂಗ್ರಹಿಸಲು ಮುಗಿಬಿದ್ದಿದ್ದರು. ಈ ಸಂದರ್ಭದಲ್ಲಿ ಟ್ಯಾಂಕರ್‌ ಸ್ಫೋಟಗೊಂಡಿರುವುದಾಗಿ ವರದಿ ವಿವರಿಸಿದೆ.

ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ನೀಡುವಂತೆ ನೈಜೀರಿಯನ್ ಮೆಡಿಕಲ್‌ ಅಸೋಸಿಯೇಶನ್‌ ವೈದ್ಯರಲ್ಲಿ ಮನವಿ ಮಾಡಿಕೊಂಡಿದೆ. ಆಫ್ರಿಕಾದಲ್ಲಿ ಟ್ಯಾಂಕರ್‌ ಸ್ಫೋಟ ಘಟನೆ ಸಾಮಾನ್ಯವಾಗಿದೆ. ಹೊಂಡ, ಗುಂಡಿಯ ರಸ್ತೆಯಿಂದಾಗಿ ಅಪಘಾತ ನಡೆಯುತ್ತಲೇ ಇರುತ್ತದೆ. ಈ ಸಂದರ್ಭದಲ್ಲಿ ಜನರು ತೈಲ ಸಂಗ್ರಹಿಸುವುದನ್ನೇ ಕಾಯಕ ಮಾಡಿಕೊಂಡಿರುವುದಾಗಿ ವರದಿ ತಿಳಿಸಿದೆ.


Share News

Comments are closed.

Exit mobile version