Friday, November 22
Share News

ಬೆಂಗಳೂರು : ಈ ಹಿಂದೆ ವಿವಾದ ಸೃಷ್ಟಿಸಿದ್ದ ಶಾಲಾ ಪಠ್ಯಪುಸ್ತಕ ಪರಿಷ್ಕರಣೆಯ ಪರಿಷ್ಕೃತ ವರದಿಯ ಶಿಫಾರಸು ಆಧರಿಸಿ 2024-25ನೇ ಸಾಲಿನಿಂದ ಹೊಸ ಪಠ್ಯಪುಸ್ತಕಗಳನ್ನು ಸರಕಾರ ಮುದ್ರಿಸಿ ಶಾಲೆಗೆ ಹಂಚಿಕೆ ಮಾಡಲು ನಿರ್ಧರಿಸಿದೆ.
1 ರಿಂದ 10ನೇ ತರಗತಿ ಕನ್ನಡ ಪ್ರಥಮ ಮತ್ತು ದ್ವಿತೀಯ ಭಾಷೆ, 9-10ನೆ ತರಗತಿಯ ಕನ್ನಡ ತೃತೀಯ ಭಾಷೆ, 6-10ನೇ ತರಗತಿಯ ಸಮಾಜ ವಿಜ್ಞಾನ ಪಠ್ಯಪುಸ್ತಕಗಳ ಪರಿಷ್ಕರಣೆಗೆ ನಿವೃತ್ತ ಪ್ರಾಧ್ಯಾಪಕ ಡಾ ಮಂಜುನಾಥ ಜಿ ಹೆಗಡೆ ಅಧ್ಯಕ್ಷತೆಯಲ್ಲಿ ರಚಿಸಿದ್ದ ಸಮಿತಿಯು ಸರಕಾರಕ್ಕೆ ವರದಿ ಸಲ್ಲಿಸಿದೆ. ಈ ವರದಿಯನ್ನು ಒಪ್ಪಿಕೊಂಡಿರುವ ಶಿಕ್ಷಣ ಇಲಾಖೆಯು, 2024-25ನೇ ಸಾಲಿನಿಂದ ಜಾರಿಗೆ ತರಲು ನಿರ್ಧರಿಸಿದ್ದು, ಪರಿಷ್ಕೃತ ಪಠ್ಯಗಳನ್ನು ಮುದ್ರಣಕ್ಕೆ ಕಳುಹಿಸಿದೆ.
ಇದರಲ್ಲಿ’ಟಿಪ್ಪು ಸುಲ್ತಾನ್‌’ ಸುಲ್ತಾನ್‌ ಪಠ್ಯ ಸೇರಿದಂತೆ ವಿವಾದಿತ ಕೆಲವು ಪಠ್ಯಗಳನ್ನು ಪರಿಷ್ಕರಿಸುವ ಗೋಜಿಗೆ ಸರಕಾರ ಕೈ ಹಾಕಿಲ್ಲ. ಆದರೆ, ವಿದ್ಯಾರ್ಥಿಗಳ ವಯೋಮಾನಕ್ಕೆ ಅನುಗುಣವಾಗಿ ಕೆಲವು ಪಠ್ಯಗಳನ್ನು ಮುಂದಿನ ತರಗತಿಗಳಿಗೆ ಸ್ಥಳಾಂತರಿಸಿದೆ. ಅಲ್ಲದೆ, ಕೆಲ ಪಠ್ಯವನ್ನು ತೆಗೆದು ಹಾಕಿ ಹೊಸ ಪಠ್ಯವನ್ನು ಸೇರಿಸಿದೆ.
ಸಾಹಿತಿ ದೇವನೂರು ಮಹಾದೇವ ಅವರ ‘ಎದೆಗೆ ಬಿದ್ದ ಅಕ್ಷರ’ ಪಠ್ಯವನ್ನು ಸೇರ್ಪಡೆ ಮಾಡಿದೆ. ಈ ಹಿಂದೆ ಪಠ್ಯಪುಸ್ತಕ ವಿವಾದ ಸೃಷ್ಟಿಯಾಗಿದ್ದ ವೇಳೆಯಲ್ಲಿ ಮಹಾದೇವ ಅವರೇ ನೇರವಾಗಿ ಶಿಕ್ಷಣ ಸಚಿವರಿಗೆ ಪತ್ರ ಬರೆದು ತಮ್ಮ ಪಠ್ಯವನ್ನು ತೆಗೆದು ಹಾಕಬೇಕೆಂದು ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ತೆಗೆದು ಹಾಕಲಾಗಿತ್ತು. ಇದೀಗ ಈ ಹೊಸ ಸಮಿತಿ ಅವರ ಪಠ್ಯವನ್ನು ಸೇರ್ಪಡೆ ಮಾಡಿದೆ.
6-10ನೇ ತರಗತಿಗಳ ಸಮಾಜ ವಿಜ್ಞಾನ ವಿಷಯದ 7 ಮಾಧ್ಯಮಗಳ 70 ಪರಿಷ್ಕೃತ ಪಠ್ಯಪುಸ್ತಕ ಹಾಗೂ 1-10ನೇ ತರಗತಿಗಳ ಕನ್ನಡ ಭಾಷಾ ವಿಷಯದ 44 ಪರಿಷ್ಕೃತ ಪಠ್ಯಪುಸ್ತಕ ಸೇರಿದಂತೆ ಒಟ್ಟು 114 ಪಠ್ಯ ಪುಸ್ತಕಗಳು ಪರಿಷ್ಕೃಗೊಂಡಿದ್ದು, ಮಂದಿನ ಶೈಕ್ಷಣಿಕ ವರ್ಷದಿಂದ ಜಾರಿಗೆ ತರಲು ಸಮ್ಮತಿ ಸೂಚಿಸಲಾಗಿದೆ.
ಕನ್ನಡ ಭಾಷೆ ಮತ್ತು ಸಮಾಜ ವಿಜ್ಞಾನ ವಿಷಯದ ಪರಿಷ್ಕೃತ ಪಠ್ಯಪುಸ್ತಕಗಳಲ್ಲಿರುವ ಎಲ್ಲ ವಿಷಯಾಂಶಗಳು, ವ್ಯಾಕರಣಾಂಶಗಳು, ಲೇಖಕರು, ಕವಿಗಳು, ಚಿತ್ರಗಳು, ಭೂಪಟಗಳು, ನಕ್ಷೆಗಳು, ಅಂಕಿ-ಅಂಶಗಳು ಹಾಗೂ ಆಧಾರಗಳಿಗೆ ಸಮಿತಿಯು ಸಂಯೋಜಕರು, ಅಧ್ಯಕ್ಷರು, ಹಾಗೂ ಸದಸ್ಯರು ಜವಾಬ್ದಾರರಾಗಿದ್ದು, ವಿಷಯಗಳಿಗೆ ಮುಂದಿನ ದಿನಗಳಲ್ಲಿಆಕ್ಷೇಪಣೆ ಬಂದಲ್ಲಿ ಸಮಿತಿಯ ಸಂಯೋಕರಾದ ಮಂಜುನಾಥ ಹೆಗಡೆ ಅವರೇ ಉತ್ತರಿಸುವ ಜವಾಬ್ದಾರಿ ಹೊಂದಿರುತ್ತಾರೆಂದು ಸ್ಪಷ್ಟವಾಗಿ ಶಿಕ್ಷಣ ಇಲಾಖೆ ಹೊರಡಿಸಿರುವ ಆದೇಶದಲ್ಲಿ ತಿಳಿಸಿದೆ.

ಸಮಾಜ ವಿಜ್ಞಾನ ಪರಿಷ್ಕೃತ ಪಠ್ಯಪುಸ್ತಕಗಳು, ಸಂವಿಧಾನದ ಪ್ರಸ್ತಾವನೆ, ಲಿಂಗ ಸೂಕ್ಷ್ಮತೆ, ಮಕ್ಕಳ ಹಕ್ಕುಗಳ ಕುರಿತ ಮಾಹಿತಿ, ಪ್ರಜಾಸತ್ತಾತ್ಮಕ ಮತ್ತು ಜಾತ್ಯತೀತ ಮೌಲ್ಯಗಳು, ವೈಜ್ಞಾನಿಕ ಮನೋಭಾವನೆ ಗಮನದಲ್ಲಿಟ್ಟುಕೊಂಡು ಪರಿಷ್ಕರಣೆ ಮಾಡಿರುವುದಾಗಿ ಶಿಕ್ಷಣ ಇಲಾಖೆ ಹೊರಡಿಸಿರುವ ಪ್ರಕಟಣೆಯಲ್ಲಿ ತಿಳಿಸಿದೆ.


Share News

Comments are closed.

Exit mobile version