ಪುತ್ತೂರು : ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಎಸ್‌ಪಿವೈಎಸ್‌ಎಸ್ ಯೋಗ ಸಮಿತಿಯ ಸಹಕಾರದಲ್ಲಿ ರಥಸಪ್ತಮಿಯ ಪ್ರಯುಕ್ತ ವಿಶೇಷ ಸಾಮೂಹಿಕ 108 ಸೂರ್ಯ ನಮಸ್ಕಾರ ಫೆ. 4ರಂದು ನಡೆಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ದೇವಸ್ಥಾನದ ಪ್ರಧಾನ ಅರ್ಚಕ ವಿ.ಎಸ್. ಭಟ್, ಕಾರ್ಯಕ್ರಮ ಸಂಚಾಲಕ ಭಾಸ್ಕರ್, ತಾಲೂಕು ಸಂಚಾಲಕರಾದ ಕೃಷ್ಣಾನಂದ, ಸಹಸಂಚಾಲಕಿ ವೀಣಾ ಪದ್ಮನಾಭ್, ಪ್ರಮುಖರಾದ ಪುಷ್ಪರಾಜ್, ಹರಿಪ್ರಸಾದ, ಸುದೇಶ ದೀಪಬೆಳಗಿಸುವ ಮೂಲಕ ನೆರವೇರಿಸಿದರು.
ಬ್ರಾಹ್ಮೀ ಮುಹೂರ್ತದಲ್ಲಿ 4.30ಕ್ಕೆ ಭಜನೆಯೊಂದಿಗೆ ಆರಂಭವಾದ ಕಾರ್ಯಕ್ರಮ ಒಟ್ಟು 3 ಆವೃತ್ತಿಗಳಲ್ಲಿ 108 ಸುತ್ತು ಸೂರ್ಯ ನಮಸ್ಕಾರ ಸ್ತೋತ್ರ ಪಠಣದೊಂದಿಗೆ ನಡೆದು 6.30ಕ್ಕೆ ಕಾರ್ಯಕ್ರಮ ಸಮಾಪನಗೊಂಡಿತು. ಕಾರ್ಯಕ್ರಮದಲ್ಲಿ ರಥಸಪ್ತಮಿಯ ಮಹತ್ವವನ್ನು ಬನ್ನೂರು ಶಾಖೆಯ ಕಾವ್ಯ ಬೌದ್ಧಿಕ್ ನೀಡಿದರು.
ಸುಮಾರು 500ಕ್ಕೂ ಮಿಕ್ಕಿ ಸಂಖ್ಯೆಯಲ್ಲಿ ಸುಳ್ಯ, ಬೆಳಿಯೂರುಕಟ್ಟೆ ಹಾಗೂ ಪುತ್ತೂರು ತಾಲೂಕಿನ ಯೋಗಬಂಧುಗಳು ಭಾಗವಹಿಸಿದ್ದರು. ರಥಬೀದಿಯಲ್ಲಿ ನೇರಸಾಲಿನೊಂದಿಗೆ ಶಿಸ್ತುಬದ್ಧವಾಗಿ ಸೂರ್ಯನಮಸ್ಕಾರ ಮಾಡಲಾಯಿತು. ತಾಲೂಕು ಶಿಕ್ಷಣ ಪ್ರಮುಖರಾದ ವಸಂತ, ಸತೀಶ ಅವರ ನೇತೃತ್ವದಲ್ಲಿ ಸೂರ್ಯನಮಸ್ಕಾರದ ಮಾರ್ಗದರ್ಶನ ನೀಡಿದರು. ಪುತ್ತೂರಿನ ವಿವಿಧ ಶಾಖೆಯ ಸದಸ್ಯರು ವೇದಿಕೆ ಪ್ರಾತ್ಯಕ್ಷಿಕೆ ನೀಡಿದರು.
ಸಂಪ್ಯ ಶಾಖೆಯ ಶಿಲ್ಪಾ ಕಾರ್ಯಕ್ರಮ ನಿರೂಪಿಸಿದರು. ಮಹಾಲಿಂಗೇಶ್ವರ ಶಾಖೆಯ ಪ್ರಸನ್ನ ಸ್ವಾಗತಿಸಿ, ಕಾರ್ಯಕ್ರಮ ಸಂಚಾಲಕ ಭಾಸ್ಕರ್ ವಂದಿಸಿದರು.
ಪ್ರಾಂತ ಸಂಘಟನಾ ಪ್ರಮುಖರಾದ ಹರೀಶ್ ಕೋಟ್ಯಾನ್, ಜಿಲ್ಲಾ ಸಂಚಾಲಕ ನಾರಾಯಣ ಪಾವಂಜೆ, ಪ್ರಾಂತ ಪ್ರಮುಖರು ಶಿವಾನಂದ ರೈ, ಜಿಲ್ಲಾ ಪ್ರಮುಖರಾದ ಸುಬ್ರಹ್ಮಣ್ಯ ಭಟ್, ಯೋಗೀಶ್ ಪರ್ಲಡ್ಕ ಮತ್ತಿತರರು ಭಾಗವಹಿಸಿದ್ದರು. ಯೋಗ ವೀಕ್ಷಿಸಲೆಂದು ಸ್ಥಳೀಯ ಯೋಗಾಸಕ್ತರು ಸಹ ಪಾಲ್ಗೊಂಡಿದ್ದರು.