Gl harusha
ವಿಶೇಷಸ್ಥಳೀಯ

ಪುತ್ತೂರಿನಲ್ಲಿ ಇತಿಹಾಸ ಬರೆದ ಕಾರ್ಗಿಲ್ ವಿಜಯೋತ್ಸವದ ಅಭೂತಪೂರ್ವ ಕಾರ್ಯಕ್ರಮ

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಪಾಕಿಸ್ತಾನದ ಸೈನಿಕರು ನಮ್ಮ ಮೇಲೆರಗಿ ಒಂದೇ ಸಮನೆ ಗುಂಡಿನ ದಾಳಿಗೈದುಬಿಟ್ಟರು. ಜತೆಗಿದ್ದ ಅಷ್ಟೂ ಮಂದಿ ಸ್ಥಳದಲ್ಲೇ ಮೃತಪಟ್ಟರೆ ತಾನು ಸತ್ತಂತೆ ನಟಿಸುತ್ತಾ ಬಿದ್ದಿದ್ದೆ. ಸತ್ತವರ ಮೇಲೆ ಮತ್ತೆ ಮತ್ತೆ ಗುಂಡಿನ ಸುರಿಮಳೆಯಾಗುತ್ತಿತ್ತು. ಆ ದಾಳಿಯಲ್ಲಿ ಕಾಲುಗಳು ಛಿದ್ರವಾದವು. ಆದರೂ ತುಟಿಪಿಟಕ್ಕೆನ್ನದೆ ಸಾವನ್ನು ಹತ್ತಿರದಿಂದ ಕಂಡು ಮನಸ್ಸು ಗಟ್ಟಿ ಮಾಡಿ ಕೈಯಲ್ಲಿದ್ದ ಗ್ರೆನೇಡ್ ಎಸೆದು ಪಾಕಿಸ್ತಾನದ ಸೈನಿಕರನ್ನು ಸುಟ್ಟುಹಾಕಿದೆ. ಇದ್ದಕ್ಕಿದ್ದಂತೆ ದಾಳಿಯಾದದ್ದನ್ನು ಕಂಡ ಪಾಕಿಸ್ಥಾನಿ ಸೈನಿಕರು ಭಾರತದ ಮತ್ತೊಂದು ಸೇನಾ ತುಕಡಿ ತಮ್ಮನ್ನು ಆಕ್ರಮಿಸುತ್ತಿದೆ ಎಂದು ಭಾವಿಸಿ ಓಡತೊಡಗಿದರು. ಹಾಗೋ ಹೀಗೋ ರೈಫಲ್ ತೆಗೆದು ಮತ್ತೆ ಐದು ಜನ ಪಾಕಿಸ್ತಾನದ ಸೈನಿಕರನ್ನು ಹೊಡೆದು ಹಾಕಿದೆ…

srk ladders
Pashupathi
Muliya

ಅತಿ ಕಿರಿಯ ವಯಸ್ಸಿನಲ್ಲಿ ಭಾರತೀಯ ಸೈನ್ಯದಿಂದ ಕೊಡಮಾಡುವ ಅತ್ಯುಚ್ಚ ಪ್ರಶಸ್ತಿಯಾದ ಪರಮವೀರ ಚಕ್ರವನ್ನು ಮುಡಿಗೇರಿಸಿಕೊಂಡ ಕ್ಯಾಪ್ಟನ್ ಯೋಗೀಂದ್ರ ಸಿಂಗ್ ಯಾದವ್ ಮೇಲಿನ ಮಾತುಗಳನ್ನು ಹೇಳುತ್ತಿದ್ದರೆ ನೆರೆದಿದ್ದ ಜನಸ್ತೋಮದ ಕಣ್ಣಂಚಿನಲ್ಲಿ ನೀರು ಜಿನುಗುತ್ತಿತ್ತು.

ಇಂತಹದ್ದೊಂದು ಭಾವುಕ ಕ್ಷಣಕ್ಕೆ ಸಾಕ್ಷಿಯಾದದ್ದು ಪುತ್ತೂರಿನ ಕಿಲ್ಲೆ ಮೈದಾನ. ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯಲ್ಲಿನ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳು, ಪುತ್ತೂರಿನ ಮಾಜಿ ಸೈನಿಕರ ಸಂಘ ಹಾಗೂ ಅಮರ್ ಜವಾನ್ ಜ್ಯೋತಿ ಸಂರಕ್ಷಣಾ ಸಮಿತಿಗಳು ಅನ್ಯಾನ್ಯ ಸಂಘಟನೆಗಳ ಸಹಕಾರದೊಂದಿಗೆ ಶುಕ್ರವಾರ ಕಾರ್ಗಿಲ್ ವಿಜಯೋತ್ಸವದ ಇಪ್ಪತ್ತೊಂದನೆಯ ವರ್ಷಾಚರಣೆಯನ್ನು ಇತಿಹಾಸದ ಪುಟದಲ್ಲಿ ದಾಖಲಾಗುವಂತೆ ಆಯೋಜಿಸಿದವು.

ದೇಶಕ್ಕಾಗಿ ಈ ದೇಹ ಸಮರ್ಪಣೆಯಾಗಬೇಕೆಂಬ ಒಂದೇ ಕನಸಿನೊಂದಿಗೆ ಸೇನೆಗೆ ಸೇರಿ ಸೇವೆ ಸಲ್ಲಿಸುವುದಕ್ಕೆ ಸಾಧ್ಯವಾಯಿತು. ಅಕ್ಷರಶಃ ತೆವಳಿಕೊಂಡು ಕಡಿದಾದ ಬೆಟ್ಟವನ್ನೇರುತ್ತಾ ವಿರೋಧಿಗಳೊಂದಿಗೆ ಹೋರಾಡಬೇಕಿತ್ತು. ಆದರೆ ರಾಷ್ಟ್ರ ಎಂಬ ಭಾವನೆ ಬಂದಾಗ ಎಲ್ಲವೂ ಸಾಧ್ಯವಾಗುತ್ತದೆ. ದೇಶದ ಒಳಗಿನ ವ್ಯವಸ್ಥೆ ಸದೃಢವಾಗಿ ಬೆಳೆಯಬೇಕಾದರೆ ಸೈನ್ಯ ಗಡಿ ಭಾಗದಲ್ಲಿ ಸದಾ ಸನ್ನದ್ಧವಾಗಿರಬೇಕು ಎಂದು ನುಡಿದರು.

ಇಂದು ನಾವು ಸಿನೆಮಾ ನಟರನ್ನು, ಕ್ರಿಕೆಟಿಗರನ್ನು ಹೀರೋಗಳಾಗಿ ಕಾಣುತ್ತಿದ್ದೇವೆ. ಆದರೆ ನಮಗಾಗಿ ಪ್ರಾಣತೆತ್ತ ಯೋಧರನ್ನು ನಿರ್ಲಕ್ಷಿಸುತ್ತಿದ್ದೇವೆ. ನಮ್ಮನ್ನು ಕಾಪಾಡುವ ಹಾದಿಯಲ್ಲಿ ಜೀವ ಅರ್ಪಿಸಿದ ಯೋಧರನ್ನು ನಮ್ಮ ಆದರ್ಶವಾಗಿ ಸ್ವೀಕರಿಸಬೇಕು. ಸ್ಪಷ್ಟ ಗುರಿಯೊಂದಿಗೆ ಬದುಕನ್ನು ರೂಪಿಸಿಕೊಳ್ಳಬೇಕು ಎಂದರಲ್ಲದೆ ಜೀವನ ತುಚ್ಚವಾದದ್ದಲ್ಲ, ಅದು ಅಮೂಲ್ಯವಾದದ್ದು. ಈ ಬದುಕನ್ನು ರೀಲ್ಸ್ ಮಾಡುತ್ತಾ, ರಾತ್ರಿ ನಿದ್ದೆಗೆಡುತ್ತಾ ಹಾಳು ಮಾಡಿಕೊಳ್ಳಬಾರದು ಎಂದು ವಿದ್ಯಾರ್ಥಿಗಳಿಗೆ ಕರೆಯಿತ್ತರು.

ಮತ್ತೋರ್ವ ಅತಿಥಿ ಕಾರ್ಗಿಲ್ ಯುದ್ಧದಲ್ಲಿ ಭಾಗಿಯಾಗಿ ತನ್ನ ಕಾಲುಗಳನ್ನು ಕಳೆದುಕೊಂಡ ಹುಬ್ಬಳ್ಳಿಯ ಯೋಧ ಕ್ಯಾಪ್ಟನ್ ನವೀನ್ ನಾಗಪ್ಪ ಮಾತನಾಡಿ, ಕಾರ್ಗಿಲ್ ಯುದ್ಧದ ಆರಂಭಿಕ ದಿನಗಳಲ್ಲಿ ಬೆಟ್ಟದ ಮೇಲೆ ಏನಾಗುತ್ತಿದೆ ಎಂಬುದೇ ಅರಿವಾಗುತ್ತಿರಲಿಲ್ಲ. ಬಂದಿದ್ದವರು ಪಾಕಿಸ್ತಾನದ ಸೈನಿಕರೇ, ಉಗ್ರಗಾಮಿಗಳೇ ಯಾರು ಎಂಬುದೇ ಅರ್ಥವಾಗಿರಲಿಲ್ಲ. ಪಾಕಿಸ್ತಾನ ಆಕ್ರಮಣ ನಡೆಸುತ್ತಿದೆ ಎಂದು ಖಾತ್ರಿಯಾಗುವ ವೇಳೆಗಾಗಲೇ ನಮ್ಮ ಇಪ್ಪತ್ತೇಳು ಸೈನಿಕರು ಪಾಕಿಸ್ಥಾನದ ಸೈನಿಕರಿಂದ ಹತ್ಯೆಗೊಳಗಾಗಿದ್ದರು. ಆದರೆ ಅನಂತರ ಭಾರತೀಯ ಸೈನ್ಯ ಪ್ರತಿ ಹಂತದಲ್ಲೂ ಗೆಲುವನ್ನು ಸಾಧಿಸುತ್ತಲೇ ಬಂದಿತು ಎಂದರು.

ಪಾಕಿಸ್ತಾನಕ್ಕೆ ಕಾರ್ಗಿಲ್ ಯುದ್ಧದಲ್ಲಿ ಭಾರತೀಯ ಸೈನ್ಯ ಕೊಟ್ಟ ಹೊಡೆತ ಎಷ್ಟು ತೀವ್ರವಾಗಿತ್ತೆಂದರೆ ಅನಂತರದ ಈ ಇಪ್ಪತ್ತೊಂದು ವರ್ಷಗಳಲ್ಲಿ ಪಾಕಿಸ್ತಾನ ಯುದ್ಧಕ್ಕೆ ಬರುವ ಧೈರ್ಯವನ್ನೇ ತೋರಿಸಿಲ್ಲ. ಭಾರತೀಯ ಸೈನಿಕರು ನೈತಿಕ ಹಾದಿಯಲ್ಲೇ ಮುಂದುವರೆಯುತ್ತಾರೆಂಬುದೇ ಬಹುದೊಡ್ಡ ಆತ್ಮಶಕ್ತಿ. ಪಾಕಿಸ್ತಾನ ತನ್ನ ಯೋಧರು ಸತ್ತಾಗ ಹೆಣವನ್ನೂ ಸ್ವೀಕರಿಸಲಿಲ್ಲ. ಆಗ ಭಾರತೀಯ ಸೈನಿಕರೇ ಆ ಸೈನಿಕರನ್ನು ಅವರ ಧರ್ಮಕ್ಕನುಗುಣವಾಗಿ, ಅವರ ರಾಷ್ಟ್ರಧ್ವಜ ಹೊದಿಸಿ ದಫನ ಮಾಡಿದ್ದು ಇಲ್ಲಿಯ ಸಂಸ್ಕಾರದ ಪ್ರತಿರೂಪ ಎಂದರು.

ಕ್ಯಾಪ್ಟನ್ ಯೋಗೀಂದ್ರ ಸಿಂಗ್ ಯಾದವ್ ಹಾಗೂ ಕ್ಯಾಪ್ಟನ್ ನವೀನ್ ನಾಗಪ್ಪ ಅವರನ್ನು ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ವತಿಯಿಂದ ಸನ್ಮಾನಿಸಿ ಅಭಿನಂದಿಸಲಾಯಿತು. ಸೇನಾ ಪದಕದ ಚಿನ್ನದ ಪ್ರತಿರೂಪಗಳನ್ನು ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಕಾರ್ಗಿಲ್ ವಿಜಯ ದಿವಸದ ಪ್ರಯುಕ್ತ ಆಯೋಜಿಸಲಾದ ಇಂಗ್ಲಿಷ್ ಭಾಷಣ, ಕನ್ನಡ ಭಾಷಣ ಹಾಗೂ ದೇಶಭಕ್ತಿಗೀತೆಗಳಲ್ಲಿ ವಿಜೇತರಾದವರಿಗೆ ಬಹುಮಾನ ನೀಡಿ ಅಭಿನಂದಿಸಲಾಯಿತು.

ಮಾಜಿ ಸೈನಿಕರ ಸಂಘದ ಅಧ್ಯಕ್ಷ ಎಂ.ಕೆ. ನಾರಾಯಣ ಭಟ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಶಾಸಕರಾದ ಸಂಜೀವ ಮಠಂದೂರು, ಶಕುಂತಲಾ ಶೆಟ್ಟಿ, ನಗರಸಭಾ ಪೌರಾಯುಕ್ತ ಮಧು ಎಸ್. ಮನೋಹರ್, ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್.ಆರ್. ಉಪಸ್ಥಿತರಿದ್ದರು.

ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಬ್ರಹ್ಮಣ್ಯ ನಟ್ಟೋಜ ಸ್ವಾಗತಿಸಿದರು. ನ್ಯಾಯವಾದಿ ಮಹೇಶ್ ಕಜೆ ವಂದಿಸಿದರು. ಉಪನ್ಯಾಸಕ ಆದರ್ಶ ಗೋಖಲೆ ಕಾರ್ಯಕ್ರಮ ನಿರೂಪಿಸಿದರು.

ಸಭಾ ಕಾರ್ಯಕ್ರಮಕ್ಕೂ ಪೂರ್ವದಲ್ಲಿ ದರ್ಬೆ ವೃತ್ತದ ಬಳಿಯಿಂದ ಕಿಲ್ಲೆ ಮೈದಾನದವರೆಗೆ ಬೃಹತ್ ಮೆರವಣಿಗೆ ನಡೆಯಿತು. ಇಬ್ಬರೂ ಕಾರ್ಗಿಲ್ ಯೋಧರನ್ನು ತೆರೆದ ವಾಹನದಲ್ಲಿ ಅಪಾರ ಹಾರಾರ್ಪಣೆಗಳ ಮೂಲಕ ಕರೆತರಲಾಯಿತು. ಮಾಜಿ ಸೈನಿಕರ ಸಂಘದಿಂದ ಗೌರವ ಕಾರ್ಗಿಲ್ ಯೋಧರಿಗೆ ಸಮರ್ಪಣೆ ನಡೆಯಿತು. ಬಳಿಕ ಅಮರ್ ಜವಾನ್ ಜ್ಯೋತಿಯಲ್ಲಿ ರೀತ್ ಸಮರ್ಪಣೆ ನೆರವೇರಿತು.


ಈ ಸುದ್ದಿಯನ್ನು ಶೇರ್ ಮಾಡಿ

Related Posts

ಸುಬ್ರಹ್ಮಣ್ಯಕ್ಕೆ ದಿನದ 3 ಹೊತ್ತು ರೈಲು ಸೇವೆ| ಮಂಗಳೂರು – ಪುತ್ತೂರು ರೈಲು ಓಡಾಟ ವಿಸ್ತರಣೆ: ಬದಲಾದ ಸಮಯ ಹೀಗಿದೆ

ಮಂಗಳೂರು-ಕಬಕ ಪ್ಯಾಸೆಂಜ‌ರ್ ರೈಲು ಸೇವೆಯನ್ನು ಇದೀಗ ಸುಬ್ರಹ್ಮಣ್ಯಕ್ಕೆ ವಿಸ್ತರಿಸಿ ಕೇಂದ್ರ