ಸ್ಥಳೀಯ

ಕಳಚಿತು ತೆಂಕುತಿಟ್ಟಿನ ಮತ್ತೊಂದು ಕೊಂಡಿ | 13ರ ಎಳೆ ಹರೆಯದಲ್ಲೇ ಕಲಾಸೇವೆಗೆ ತನ್ನನ್ನು ಸಮರ್ಪಿಸಿಕೊಂಡ ಕುಂಬ್ಳೆ ಶ್ರೀಧರ ರಾವ್ Kumble Shidhar Rao

ತೆಂಕುತಿಟ್ಟಿನ ಪ್ರಸಿದ್ಧ ಯಕ್ಷಗಾನ ಕಲಾವಿದ ಕುಂಬ್ಳೆ ಶ್ರೀಧರ ರಾವ್ (76) Kumble sridhar Rao ಹೃದಯಘಾತದಿಂದ ಇಂದು (05.07.2024) ನಿಧನರಾಗಿದ್ದಾರೆ. ತೆಂಕುತಿಟ್ಟಿನ ಮತ್ತೊಂದು ಕೊಂಡಿ ಕಳಚಿದಂತಹ ಭಾವ ನಮ್ಮೊಳಗೆ ಮೂಡುತ್ತಿದೆ.

ಈ ಸುದ್ದಿಯನ್ನು ಶೇರ್ ಮಾಡಿ

📝ದಿವಾಕರ ಆಚಾರ್ಯ ಗೇರುಕಟ್ಟೆ

ತೆಂಕುತಿಟ್ಟಿನ ಪ್ರಸಿದ್ಧ ಯಕ್ಷಗಾನ ಕಲಾವಿದ ಕುಂಬ್ಳೆ ಶ್ರೀಧರ ರಾವ್ (76) Kumble sridhar Rao ಹೃದಯಘಾತದಿಂದ ಇಂದು (05.07.2024) ನಿಧನರಾಗಿದ್ದಾರೆ. ತೆಂಕುತಿಟ್ಟಿನ ಮತ್ತೊಂದು ಕೊಂಡಿ ಕಳಚಿದಂತಹ ಭಾವ ನಮ್ಮೊಳಗೆ ಮೂಡುತ್ತಿದೆ.

SRK Ladders

ತಂದೆ ಮಹಾಲಿಂಗ ಮುಖಾರಿ, ತಾಯಿ ಕಾವೇರಿ. ಹುಟ್ಟಿದ್ದು ಕುಂಬ್ಳೆಯ ನಾಯ್ಕಾಪು. ಸೂರಂಬೈಲು ಶಾಲೆಯಲ್ಲಿ ನಾಲ್ಕನೇ ತರಗತಿ ವಿದ್ಯಾಭ್ಯಾಸ ಪೂರೈಸಿ, ಯಕ್ಷಗಾನಕ್ಕೆ ಪಾದಾರ್ಪಣೆ ಮಾಡಿದ್ದರು ಶ್ರೀಧರ ರಾಯರು.

ಕುಂಬ್ಳೆ ಕಮಲಾಕ್ಷ ನಾಯಕ್‍ರಲ್ಲಿ ನಾಟ್ಯಾಭ್ಯಾಸ ಹಾಗೂ ಶೇಣಿ ಗೋಪಾಲಕೃಷ್ಣ ಭಟ್ಟರಿಂದ ಅರ್ಥಗಾರಿಕೆಯನ್ನು ಕಲಿತು, 13ನೇ ವಯಸ್ಸಿನಲ್ಲಿಯೇ ಕಲಾ ಸೇವೆಯನ್ನು ಆರಂಭಿಸಿದ ಇವರು ಕುಂಡಾವು, ಕೂಡ್ಲು, ಮುಲ್ಕಿ, ಕರ್ನಾಟಕ ಹಾಗೂ ದೀರ್ಘ ಕಾಲ ಧರ್ಮಸ್ಥಳ ಮೇಳ ಹೀಗೆ ನಿರಂತರ ಆರು ದಶಕಗಳ ಕಾಲ ಕಲಾಸೇವೆಗೈದಿದ್ದರು.

ಆರಂಭದಲ್ಲಿ ಸ್ತ್ರೀ ವೇಷ, ಪುಂಡು ವೇಷಗಳನ್ನು ಮಾಡುತ್ತಿದ್ದು, ಅನಂತರ ರಾಜ ವೇಷಗಳನ್ನೇ ಹೆಚ್ಚಾಗಿ ಮಾಡುತ್ತಿದ್ದರು. ದಮಯಂತಿ, ಚಂದ್ರಮತಿ, ಸೀತೆ, ಶ್ರೀದೇವಿ, ಅಮ್ಮು ಬಳ್ಳಾಲ್ತಿ, ಶ್ರೀರಾಮ, ಶ್ರೀಕೃಷ್ಣ, ಅರ್ಜುನ, ಕರ್ಣ, ಭೀಷ್ಮ, ಧರ್ಮರಾಯ ಮೊದಲಾದ ಪಾತ್ರಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಿದ ಖ್ಯಾತಿ ಇವರದ್ದು.

ತಾಳಮದ್ದಳೆಯಲ್ಲಿ ಕೈಕೇಯಿ, ಅಂಬೆ, ಸೀತೆ, ದ್ರೌಪದೀ, ದಾಕ್ಷಾಯಿಣಿ, ಪ್ರಭಾವತಿ ಪಾತ್ರಗಳನ್ನು ಉತ್ತಮವಾಗಿ ನಿರ್ವಹಿಸುತ್ತಿದ್ದರು.

3 ವರ್ಷಗಳ ಹಿಂದೆ ಮೇಳದ ತಿರುಗಾಟದಿಂದ ನಿವೃತ್ತಿಯಾದರೂ ಅತಿಥಿ ಕಲಾವಿದರಾಗಿ ಶ್ರೀ ಧರ್ಮಸ್ಥಳ ಮೇಳ ಮತ್ತು ಇತರ ಯಕ್ಷಗಾನ ಪ್ರದರ್ಶನಗಳಲ್ಲಿ ಪಾಲ್ಗೊಳ್ಳುತ್ತಿದ್ದರು. ಬೊಳುವಾರು ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘ, ಉಪ್ಪಿನಂಗಡಿ ಶ್ರೀ ಕಾಳಿಕಾಂಬ ಯಕ್ಷಗಾನ ಸಂಘದ ತಾಳಮದ್ದಳೆಗಳಲ್ಲಿ ಭಾಗವಹಿಸಿ ಮಾರ್ಗದರ್ಶನ ನೀಡುತ್ತಿದ್ದರು.

ದೆಹಲಿಯಲ್ಲಿ ರಾಷ್ಟ್ರಪತಿಗಳಿಂದ ಗೌರವಕ್ಕೆ ಪಾತ್ರರಾಗಿರುವ ಕುಂಬ್ಳೆ ಶ್ರೀಧರ ರಾಯರು ದುಬಾಯಿ, ಬೆಹರಿನ್‍ಗಳಲ್ಲಿಯೂ ವೇಷಗಳನ್ನು ಮಾಡಿದ್ದಾರೆ.

ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಿಂದ, ಕರ್ನಾಟಕ ಯಕ್ಷಗಾನ ಅಕಾಡೆಮಿ ಬೆಂಗಳೂರು, ಯಕ್ಷಗಾನ ಕಲಾರಂಗ ಉಡುಪಿ, ಆತ್ಮಾಲಯ ಸಂಸ್ಥೆ ಬೆಂಗಳೂರು ಸೇರಿದಂತೆ ವಿವಿಧ ಸಂಘಟನೆಗಳು ಇವರ ಪ್ರತಿಭೆಯನ್ನು ಗುರುತಿಸಿ ಪ್ರಶಸ್ತಿ ನೀಡಿ ಗೌರವಿಸಿದೆ.

ಪತ್ನಿ ನಿವೃತ್ತ ಶಿಕ್ಷಕಿ ಸುಲೋಚನಾ, ಮೂವರು ಪುತ್ರರಾದ ಗಣೇಶ್ ಪ್ರಸಾದ್, ದೇವಿ ಪ್ರಸಾದ್, ಕೃಷ್ಣ ಪ್ರಸಾದ್ ಹಾಗೂ ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ.


ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 2