ನವದೆಹಲಿ: ಈ ವಾರಾಂತ್ಯದಲ್ಲಿ ನಡೆಯಲಿರುವ ಪ್ರಧಾನ ಮಂತ್ರಿ ಪ್ರಮಾಣ ವಚನ ಸ್ವೀಕಾರ ಸಮಾರಂಭದ ಸ್ಥಳದಲ್ಲಿನ ಭದ್ರತಾ ವ್ಯವಸ್ಥೆಗಳ ಕುರಿತು ದೆಹಲಿ ಪೊಲೀಸರೊಂದಿಗೆ ಭದ್ರತಾ ಏಜೆನ್ಸಿಗಳು ಚಿಂತನೆ ನಡೆಸುತ್ತಿವೆ.
ಭದ್ರತಾ ಸಿದ್ಧತೆಗಳ ಕುರಿತು ಸಭೆ ನಡೆಸಲಾಗಿದ್ದು, ಸಮಾರಂಭದ ಅಂಗವಾಗಿ ಕೇಂದ್ರ ಭದ್ರತಾ ಏಜೆನ್ಸಿಗಳು ಮತ್ತು ದೆಹಲಿ ಪೊಲೀಸರು ಬಹು ಹಂತದ ಭದ್ರತೆ ಮತ್ತು ಸಂಚಾರ ವ್ಯವಸ್ಥೆಗಳನ್ನು ಯೋಜಿಸಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಈ ಪ್ರಮಾಣವಚನ ಸ್ವೀಕಾರ ಸಮಾರಂಭವನ್ನು ರಾಷ್ಟ್ರಪತಿ ಭವನದಲ್ಲಿ ನಡೆಸಲು ನಿರ್ಧರಿಸಲಾಗಿದ್ದು, ಅದರಂತೆ ವ್ಯವಸ್ಥೆ ಮಾಡಲಾಗಿದೆ. ಒಂದು ವೇಳೆ ಕಾರ್ಯಕ್ರಮದ ಸ್ಥಳವನ್ನು ಬದಲಾಯಿಸಿದರೆ ಆ ಸ್ಥಳಕ್ಕೆ ಅನುಗುಣವಾಗಿ ಅಗತ್ಯ ವ್ಯವಸ್ಥೆಗಳನ್ನು ಮಾಡಲಾಗುವುದು ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ.
ಜೂನ್ 9 ಅಥವಾ 10ರಂದು ದೆಹಲಿಯಲ್ಲಿ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಲಿದೆ ಎಂದು ಮತ್ತೊಂದು ಮೂಲಗಳು ಖಚಿತಪಡಿಸಿವೆ. ಆರಂಭಿಕ ಮಾಹಿತಿಯ ಪ್ರಕಾರ, 12 ವಿದೇಶಿ ಗಣ್ಯರು ಸೇರಿದಂತೆ ಸುಮಾರು 10,000 ಜನರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಲೋಕಸಭೆ ಚುನಾವಣೆಯ ಮತಗಳ ಎಣಿಕೆ ಜೂನ್ 4ರಂದು ನಡೆಯಲಿದೆ. 543 ಸದಸ್ಯ ಬಲದ ಲೋಕಸಭೆಗೆ ಸಿಕ್ಕಿಂ, ಅರುಣಾಚಲ ಪ್ರದೇಶ, ಒಡಿಶಾ ಮತ್ತು ಆಂಧ್ರಪ್ರದೇಶದ ವಿಧಾನಸಭಾ ಚುನಾವಣೆಗಳ ಜೊತೆಗೆ ಏಕಕಾಲದಲ್ಲಿ ಮತದಾನ ನಡೆಯಿತು. 7 ಹಂತಗಳಲ್ಲಿ ನಡೆದ ಸುದೀರ್ಘ ಅವಧಿಯ ಮತದಾನ ಪ್ರಕ್ರಿಯೆ ಶನಿವಾರ ಮುಕ್ತಾಯಗೊಂಡಿದೆ. ಜೂನ್ 2ರಂದು ಅರುಣಾಚಲ ಪ್ರದೇಶ ಮತ್ತು ಸಿಕ್ಕಿಂ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾಗಿದೆ.
ಜೂನ್ 1ರಂದು ನಡೆದ ಎಕ್ಸಿಟ್ ಪೋಲ್‌ಗಳು ಲೋಕಸಭೆ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿ ನೇತೃತ್ವದ ಎನ್‌ಡಿಎಗೆ ಹ್ಯಾಟ್ರಿಕ್ ಗೆಲುವು ಸಾಧಿಸಲಿದೆ ಎಂದು ಭವಿಷ್ಯ ನುಡಿದಿದೆ. ಭಾರೀ ಬಹುಮತದೊಂದಿಗೆ ಎನ್ಡಿಎ 3ನೇ ಬಾರಿ ಅಧಿಕಾರಕ್ಕೆ ಬರಲಿದೆ ಎನ್ನಲಾಗುತ್ತಿದೆ. ಎಕ್ಸಿಟ್ ಪೋಲ್ ಭವಿಷ್ಯ ನಿಜವಾದರೆ, ಪ್ರಧಾನಿ ನರೇಂದ್ರ ಮೋದಿ ಅವರು ಜವಾಹರಲಾಲ್ ನೆಹರು ನಂತರ ಸತತ 3 ಬಾರಿ ಲೋಕಸಭೆ ಚುನಾವಣೆಯಲ್ಲಿ ಗೆದ್ದ ಏಕೈಕ ಪ್ರಧಾನಿಯಾಗಲಿದ್ದಾರೆ.