pashupathi
ವಿದೇಶಸ್ಥಳೀಯ

25,900 ಕೊರೊನಾ ಪ್ರಕರಣ ಪತ್ತೆ: ಸಿಂಗಾಪುರದಲ್ಲಿ ಮಾಸ್ಕ್‌ ಕಡ್ಡಾಯ

tv clinic

ಈ ಸುದ್ದಿಯನ್ನು ಶೇರ್ ಮಾಡಿ

ಸಿಂಗಾಪುರದಲ್ಲಿ ಕೋವಿಡ್-19ರ ಹೊಸ ಅಲೆ ಕಾಣಿಸಿಕೊಂಡಿದೆ. ಪರಿಣಾಮ ಒಂದೇ ವಾರದಲ್ಲಿ 25,900 ಸೋಂಕಿನ ಪ್ರಕರಣ ದಾಖಲಾಗಿದ್ದು, ಮತ್ತೆ ಮಾಸ್ಕ್ ಧರಿಸುವಂತೆ ಆರೋಗ್ಯ ಸಚಿವ ಓಂಗ್ ಯೆಕುಂಗ್ ಜನತೆಗೆ ಸಲಹೆ ನೀಡಿದ್ದಾರೆ.

akshaya college

ದೇಶದಲ್ಲಿ ಕೋವಿಡ್ ಸೋಂಕಿನ ಅಲೆ ಆರಂಭಿಕ ಹಂತದಲ್ಲಿದ್ದು ಸ್ಥಿರವಾಗಿ ಏರುತ್ತಿದೆ. ಮುಂದಿನ 2ರಿಂದ 4 ವಾರಗಳಲ್ಲಿ, ಅಂದರೆ ಜೂನ್ ಅಂತ್ಯದ ವೇಳೆಗೆ ಅಲೆ ಗರಿಷ್ಟ ಮಟ್ಟ ತಲುಪಲಿದೆ ಎಂದು ಓಂಗ್ ಎಚ್ಚರಿಕೆ ನೀಡಿದ್ದಾರೆ.

ಮೇ 5ರಿಂದ 11ರವರೆಗಿನ ವಾರದಲ್ಲಿ 25,900 ಕೋವಿಡ್-19 ಸೋಂಕಿನ ಪ್ರಕರಣ ದಾಖಲಾಗಿದ್ದರೆ ಅದಕ್ಕಿಂತ ಹಿಂದಿನ ವಾರದಲ್ಲಿ 13,700ರಷ್ಟಿತ್ತು. ಆಸ್ಪತ್ರೆಗೆ ದಾಖಲಾಗುವ ದೈನಂದಿನ ಸರಾಸರಿ 250ನ್ನು ದಾಟಿದ್ದು ತೀವ್ರ ನಿಗಾ ಘಟಕ(ಐಸಿಯು)ದಲ್ಲಿ ದಾಖಲಾಗುವ ದೈನಂದಿನ ಸರಾಸರಿ ಪ್ರಕರಣ 3 ಆಗಿದೆ. ಸರಕಾರಿ ಆಸ್ಪತ್ರೆಯಲ್ಲಿ ಸೂಕ್ತ ಹಾಸಿಗೆಗಳನ್ನು ಕಾಯ್ದಿರಿಸುವ ಉದ್ದೇಶದಿಂದ ತುರ್ತು ಅಗತ್ಯವಿಲ್ಲದ ಶಸ್ತ್ರಚಿಕಿತ್ಸೆಗಳನ್ನು ಮುಂದೂಡುವಂತೆ ಹಾಗೂ ಸೂಕ್ತ ರೋಗಿಗಳನ್ನು ಮನೆಗೆ ವಾಪಾಸು ಕಳುಹಿಸಿ ಸಂಚಾರಿ ಚಿಕಿತ್ಸಾಲಯದ ಸೇವೆ ಮುಂದುವರಿಸುವಂತೆ ಸೂಚಿಸಿರುವುದಾಗಿ ಆರೋಗ್ಯ ಸಚಿವಾಲಯ ಹೇಳಿದೆ.

ಕೋವಿಡ್-19 ಸೋಂಕಿನ ಪ್ರಕರಣ ಒಂದು ಬಾರಿ ದ್ವಿಗುಣಗೊಂಡರೆ ಸಿಂಗಾಪುರದ ಆರೋಗ್ಯ ಕೇಂದ್ರಗಳಲ್ಲಿ 500 ರೋಗಿಗಳು ದಾಖಲಾಗಲಿದ್ದು ಇದನ್ನು ನಿರ್ವಹಿಸಬಹುದು. ಆದರೆ ಎರಡನೇ ಬಾರಿ ದ್ವಿಗುಣಗೊಂಡರೆ ಆರೋಗ್ಯ ಕೇಂದ್ರಗಳಲ್ಲಿ 1000 ರೋಗಿಗಳು ದಾಖಲಾಗಲಿದ್ದು ಇದು ದೇಶದ ಆರೋಗ್ಯ ವ್ಯವಸ್ಥೆಯ ಮೇಲೆ ತೀವ್ರ ಹೊರೆಯಾಗಲಿದೆ. ಒಂದು ಸಾವಿರ ಹಾಸಿಗೆಗಳು ಒಂದು ಪ್ರಾದೇಶಿಕ ಆಸ್ಪತ್ರೆಗೆ ಸಮವಾಗಿದೆ. ಆದ್ದರಿಂದ ಸಂಭಾವ್ಯ ಸಮಸ್ಯೆಯನ್ನು ಎದುರಿಸಲು ನಮ್ಮ ಆರೋಗ್ಯ ವ್ಯವಸ್ಥೆಯನ್ನು ಸಜ್ಜುಗೊಳಿಸಬೇಕಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಸಿಂಗಾಪುರ ಜಾಗತಿಕ ಸಾರಿಗೆ ಮತ್ತು ಸಂವಹನ ಕೇಂದ್ರವಾಗಿರುವುದರಿಂದ ಇತರ ನಗರಗಳಿಗಿಂತ ತ್ವರಿತವಾಗಿ ಕೋವಿಡ್ ಅಲೆ ಕಾಣಿಸಿಕೊಳ್ಳುತ್ತದೆ.

ಪ್ರತೀ ವರ್ಷ ಒಂದು ಅಥವಾ ಎರಡು ಕೋವಿಡ್ ಅಲೆಗಳನ್ನು ನಿರೀಕ್ಷಿಸಬಹುದು. ಜಾಗತಿಕವಾಗಿ ಜೆಎನ್. 1 ಮತ್ತದರ ಉಪತಳಿಗಳಾದ ಕೆಪಿ.1 ಮತ್ತು ಕೆಪಿ.2 ಪ್ರಧಾನ ರೂಪಾಂತರವಾಗಿದೆ. ಸಿಂಗಾಪುರದಲ್ಲಿ ಈಗ ದಾಖಲಾಗಿರುವ ಸೋಂಕಿನ ಪ್ರಕರಣಗಳಲ್ಲಿ ಮೂರನೇ ಎರಡರಷ್ಟು ಕೆಪಿ.1 ಮತ್ತು ಕೆಪಿ.2 ರೂಪಾಂತರಗಳು. ವಿಶ್ವ ಆರೋಗ್ಯಸಂಸ್ಥೆಯು ಕೆಪಿ.1 ಅನ್ನು ನಿಗಾ ವಹಿಸಬೇಕಾದ ಒಂದು ರೂಪಾಂತರವೆಂದು ವರ್ಗೀಕರಿಸಿದೆ ಎಂದು ಸಿಂಗಾಪುರ ಸರಕಾರ ತಿಳಿಸಿದೆ. 60 ವರ್ಷ ಮತ್ತು ಅದಕ್ಕಿಂತ ಹೆಚ್ಚು ವಯಸ್ಸಿನ ವ್ಯಕ್ತಿಗಳು, ವೈದ್ಯಕೀಯವಾಗಿ ದುರ್ಬಲ ವ್ಯಕ್ತಿಗಳು ಮತ್ತು ವೃದ್ಧಾಶ್ರಮದ ನಿವಾಸಿಗಳು ಸೇರಿದಂತೆ ತೀವ್ರತರವಾದ ಅನಾರೋಗ್ಯದ ಅಪಾಯದಲ್ಲಿರುವವರು ಕಳೆದ 12 ತಿಂಗಳಲ್ಲಿ ಬೂಸ್ಟರ್ ಲಸಿಕೆ ಪಡೆಯದಿದ್ದರೆ ತಕ್ಷಣ ಬೂಸ್ಟರ್ ಲಸಿಕೆ ಪಡೆಯುವಂತೆ ಆರೋಗ್ಯ ಸಚಿವಾಲಯ ಸೂಚನೆ ನೀಡಿದೆ.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts

1 of 120