ಪುತ್ತೂರು: ಒಂದು ಬೆಳಿಗ್ಗೆ. ಸೂರ್ಯ ಆಗಷ್ಟೇ ನಸುಗೆಂಪಾಗಿದ್ದ. ಕೆಲಸದ ಲಗುಬಗೆಯಿಂದ ಪುತ್ತೂರು ಕಡೆ ಹೊರಟಿದ್ದ ಬೈಕ್ ಎದುರಿನಿಂದ ಬಂದ ಬಸ್ ಗೆ ಅಪ್ಪಳಿಸಿತು. ಅಷ್ಟೇ, ರಸ್ತೆಯಲ್ಲಿ ಚೆಲ್ಲಿದಂತಿತ್ತು ನೆತ್ತರು, ಮಾಂಸದ ಮುದ್ದೆ.
ಇದು ಮಾಣಿ – ಮೈಸೂರು ಹೆದ್ದಾರಿಯ ಆರ್ಯಾಪು ಗ್ರಾಮದ ಕಲ್ಲರ್ಪೆಯ ಅಪಾಯಕಾರಿ ತಿರುವಿನಲ್ಲಾದ ಘಟನೆ.
ಆಗಿದ್ದಿಷ್ಟು… ಎದುರಿನಿಂದ ಆಗಮಿಸಿದ ಬಸ್ ರಸ್ತೆಯ ನಡುಭಾಗಕ್ಕೆ ಬಂದಿತ್ತು. ಬಸ್ ನ ಅರಿವಿಲ್ಲದ ಬೈಕ್ ಕೂಡ ರಸ್ತೆಯ ನಡುಭಾಗಕ್ಕೆ ಬಂದಿತ್ತು. ಕಾರಣ, ಎದುರಿನಿಂದ ಬರುವ ವಾಹನಗಳ ಅರಿವು ವಾಹನ ಸವಾರರಿಗೆ ಸಿಗದೇ ಇರುವುದು. ಅಂದರೆ ಗುಡ್ಡ ಅಡ್ಡ ನಿಂತಿರುವುದು ಹಾಗೂ ರಸ್ತೆ ತಿರುವಿನಿಂದ ಕೂಡಿರುವುದೇ ಇದಕ್ಕೆ ಕಾರಣ. ಬೈಕ್ ಸವಾರನ ಜೀವ ವೃಥಾ ಬಲಿಯಾಯಿತು.
ಇಂತಹ ಒಂದಲ್ಲ ಅನೇಕ ಅಪಘಾತಗಳಿಗೆ ಇಲ್ಲಿನ ನಿವಾಸಿಗಳು ಸಾಕ್ಷಿಯಾಗಿದ್ದಾರೆ.
ಬೆಳಗ್ಗೆ ಹಾಗೂ ಸಂಜೆ ರಸ್ತೆ ದಾಟಲು ಸ್ಥಳೀಯ ವಾಹನ ಸವಾರರು ಪರದಾಡುವುದು ಇಲ್ಲಿ ಸಾಮಾನ್ಯ. ಸಾಲು ಸಾಲು ವಾಹನಗಳೆಂದಲ್ಲ. ಬರುವ ವಾಹನಗಳು ಕಣ್ಣಿಗೇ ಕಾಣುವುದಿಲ್ಲ ಎಂದು. ಗಕ್ಕೆಂದು ವಾಹನ ಹತ್ತಿರ ಬಂದು ನಿಂತಾಗಲೇ, ಕಣ್ಣು ಮಂಜಾಗುವುದು.
ಈ ಎಲ್ಲಾ ಸಮಸ್ಯೆಗಳನ್ನು ಕಣ್ಣಾರೆ ಕಂಡ ಸ್ಥಳೀಯರೋರ್ವರು ಶಾಸಕ ಅಶೋಕ್ ಕುಮಾರ್ ರೈ ಅವರ ಗಮನ ಸೆಳೆದಿದ್ದಾರೆ. ಶಾಸಕರು ತಕ್ಷಣ ಸ್ಪಂದಿಸಿದ್ದಾರೆ. ನೀತಿ ಸಂಹಿತೆ ಎಂಬ ನೆಪ ಹೇಳುತ್ತಾ, ಕಾಲಹರಣ ಮಾಡಿಲ್ಲ. ಸ್ಥಳಕ್ಕೆ ಭೇಟಿ ನೀಡಿ, ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಶನಿವಾರ ಬೆಳಿಗ್ಗೆ ಕಲ್ಲರ್ಪೆಯ ಈ ಅಪಾಯಕಾರಿ ತಿರುವನ್ನು ತೆರವು ಮಾಡುವ ಕೆಲಸ ಆರಂಭವಾಗಿದೆ. ಜೆಸಿಬಿ ಮೂಲಕ ಗುಡ್ಡವನ್ನು ಸವರಿ, ಅನಾವಶ್ಯಕವಾಗಿ ಬೆಳೆದ ಪೊದೆಗಳನ್ನು ಸವರಲಾಯಿತು. ಶಾಸಕರು ಸ್ಥಳಕ್ಕೆ ಭೇಟಿ ನೀಡಿ, ಕಾಮಗಾರಿ ವೀಕ್ಷಿಸಿದರು.
ಎಲ್ಲವೂ ಅಂದುಕೊಂಡಂತೆ ನಡೆದರೆ, ಶಾಸಕರ ಪ್ರಯತ್ನ, ಸ್ಥಳೀಯರ ಒತ್ತಾಸೆ ನಿರರ್ಥಕವಾಗದು. ವಾಹನ ಸವಾರರು ನೆಮ್ಮದಿಯಿಂದ ಸಂಚರಿಸಬಹುದು. ರಸ್ತೆ ದಾಟುವ ಸ್ಥಳೀಯ ನಿವಾಸಿಗಳು , ಸ್ಥಳೀಯ ವಾಹನ ಸವಾರರು ನಿರುಮ್ಮಳವಾಗಿ ತೆರಳಬಹುದು.