ಸ್ಥಳೀಯ

ದ.ಕ. ತೆಂಗು ರೈತ ಉತ್ಪಾದಕರ ಕಂಪನಿಯಿಂದ 300 ಕೋಟಿ ರೂ. ವಿಸ್ತೃತ ಯೋಜನೆ | ಮಾರುಕಟ್ಟೆಯ ಹೊಸ ವಿಸ್ತೃತ ಯೋಜನೆಗೆ ಷೇರು ಬಳಕೆ: ಕುಸುಮಾಧರ ಎಸ್.ಕೆ.

ಈ ಸುದ್ದಿಯನ್ನು ಶೇರ್ ಮಾಡಿ

ಮಂಗಳೂರು: ತೆಂಗು ಬೆಳೆಗಾರರೇ ಸ್ಥಾಪಿಸಿ ಮುನ್ನಡೆಸುತ್ತಿರುವ ದೇಶದ ಅತೀ ದೊಡ್ಡ ಸಂಸ್ಥೆ ದಕ್ಷಿಣ ಕನ್ನಡ ತೆಂಗು ರೈತ ಉತ್ಪಾದಕರ ಕಂಪನಿಯು ತನ್ನ ಕಾರ್ಯ ವ್ಯಾಪ್ತಿ ಹಾಗೂ ಮಾರುಕಟ್ಟೆ ವಿಸ್ತರಣೆ ಉದ್ದೇಶದಿಂದ ಸಾರ್ವಜನಿಕರಿಂದ ಷೇರು ಸಂಗ್ರಹಕ್ಕೆ ಮುಂದಾಗಿದೆ.

15 ಸಾವಿರಕ್ಕೂ ಹೆಚ್ಚು ಸದಸ್ಯರನ್ನು ಹೊಂದಿರುವ ತೆಂಗು ಬೆಳೆಗಾರರ ಕಂಪನಿ ಎಂಬ ಹೆಗ್ಗಳಿಕೆ ಹೊಂದಿರುವ ಈ ಸಂಸ್ಥೆ 300 ಕೋಟಿ ರೂ. ಮೌಲ್ಯದ ವಿಸ್ತೃತ ಯೋಜನೆ ಕೈಗೆತ್ತಿಕೊಂಡಿದ್ದು, ಮೊದಲ ಹಂತದಲ್ಲಿ 50 ಕೋಟಿ ರೂ. ಷೇರು ಸಂಗ್ರಹಿಸುವ ಗುರಿ ಹೊಂದಿದೆ. ಪ್ರತಿ ಷೇರಿನ ಮೌಲ್ಯವು ಒಂದು ಸಾವಿರ ರೂ. ಇದ್ದು ಕನಿಷ್ಠ ಎಂದರೆ ಐದು ಷೇರು ಹಾಗೂ ಗರಿಷ್ಠ ಎಂದರೆ 200 ಷೇರು ಖರೀದಿಸಿ ಸಾರ್ವಜನಿಕರು ಹೂಡಿಕೆ ಮಾಡಬಹುದಾಗಿದೆ ಎಂದು ಸಂಸ್ಥೆಯ ಆಡಳಿತ ನಿರ್ದೇಶಕ ಕುಸುಮಾಧರ ಎಸ್.ಕೆ. ತಿಳಿಸಿದ್ದಾರೆ.

SRK Ladders

ಕಳೆದ ಜೂನ್ ತಿಂಗಳಲ್ಲಿ ಆರಂಭಿಸಿದ ಕಲ್ಪ ಸಮೃದ್ಧಿ ಯೋಜನೆಯಡಿ ಷೇರು ಸಂಗ್ರಹಕ್ಕೆ ಅಭೂತಪೂರ್ವ ಬೆಂಬಲ ವ್ಯಕ್ತವಾಗಿತ್ತು. ಸಂಗ್ರಹವಾದ ಠೇವಣಿಯ ಮೊತ್ತವನ್ನು ತೆಂಗು ಖರೀದಿ ಮತ್ತು ಇತರ ಚಟುವಟಿಕೆಗೆ ಬಳಸಲಾಗಿದೆ. ಈ ಮೂಲಕ ಆರು ತಿಂಗಳಲ್ಲಿ ಸಂಸ್ಥೆಯ ಒಟ್ಟು ವ್ಯವಹಾರವು ಹತ್ತು ಪಟ್ಟು ಹೆಚ್ಚಾಗಿದ್ದು, ಜನರ ವಿಶ್ವಾಸ ಗಳಿಸುತ್ತಿದೆ. ತೆಂಗಿನಕಾಯಿಯಿಂದ ತಯಾರಿಸಿದ ರಸಗೊಬ್ಬರ, ಸಾವಯವ ಗೊಬ್ಬರ ಮತ್ತು ಆಹಾರ ಉತ್ಪನ್ನಗಳು ಅನೇಕ ಪ್ರಯೋಗಗಳು ಮಾರುಕಟ್ಟೆಯಲ್ಲಿ ಬೇಡಿಕೆಯನ್ನು ಸೃಷ್ಟಿಸಿದೆ. ಇದಕ್ಕೆ ತಕ್ಕಂತೆ ಮಾರುಕಟ್ಟೆಗೆ ಹೆಚ್ಚಿನ ಉತ್ಪನ್ನ ಪೂರೈಕೆಗಾಗಿ ಹೊಸ ವಿಸ್ತೃತ ಘಟಕ ಆರಂಭಿಸಲು ಬಂಡವಾಳವಾಗಿ ಷೇರನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಲಾಗಿದೆ. ಪ್ರಥಮ ಹಂತದ ಯೋಜನೆ ಪೂರ್ಣಗೊಂಡಾಗ 300 ಮಂದಿಗೆ ನೇರ ಮತ್ತು 600ಕ್ಕೂ ಅಧಿಕ ಮಂದಿಗೆ ಪರೋಕ್ಷವಾಗಿ ಉದ್ಯೋಗ ದೊರೆಯಲಿದೆ ಎಂದವರು ತಿಳಿಸಿದರು.

ಆಸಕ್ತ ಹೂಡಿಕೆದಾರರು ನೇರವಾಗಿ ಶಾಖೆಗೆ ಭೇಟಿ ನೀಡಿ, ಖುದ್ದಾಗಿ ಖರೀದಿ ಮಾಡಬಹುದು. ಶಾಖೆಗೆ ಭೇಟಿ ನೀಡಲು ಸಾಧ್ಯವಿಲ್ಲದ ಗ್ರಾಹಕರು ಸಂಸ್ಥೆಯ ಅಧಿಕೃತ ವೆಬ್ ಸೈಟಿಗೆ ಭೇಟಿ ನೀಡಿ ಖರೀದಿ ಮಾಡಬಹುದಾಗಿದೆ. ಡಿಜಿಟಲ್ ನಲ್ಲಿ ಖರೀದಿ ಮಾಡಲು ಸಾಧ್ಯವಾಗದ ಗ್ರಾಹಕರು ಸಂಸ್ಥೆಗೆ ದೂರವಾಣಿ ಕರೆ ಮಾಡಿ, ನೋಂದಣಿ ಮಾಡಬಹುದು. ಮೊದಲ ಹಂತದಲ್ಲಿ ಒಟ್ಟು 50 ಕೋಟಿ ರೂ. ಮೌಲ್ಯದ ಐದು ಲಕ್ಷ ಷೇರುಗಳನ್ನು ಮಾತ್ರ ಬಿಡುಗಡೆ ಮಾಡಲಾಗುವುದು. ಈಗಾಗಲೇ ಕಲ್ಪವೃಕ್ಷ ಹಾಗೂ ಕಲ್ಪವೃಕ್ಷ ಯೋಜನೆಯಡಿ ಸಂಸ್ಥೆಯ ಉತ್ಪನ್ನಗಳಾದ ಐಸ್ ಕ್ರೀಂ, ತೆಂಗಿನೆಣ್ಣೆ, ವರ್ಜಿನ್ ತೆಂಗಿನೆಣ್ಣೆ, ಕೋಕೊ ಫೈಬರ್, ಕೊಬ್ಬರಿ ಚಟ್ನಿ, ಕೊಬ್ಬರಿ, ಉಪ್ಪಿನಕಾಯಿ, ತೆಂಗಿನ ಮೊಳಕೆ, ತೆಂಗಿನ ನೀರಿನಿಂದ ತಯಾರಿಸುವ ಜೈವಿಕ ರಸಗೊಬ್ಬರ, ಗೆರಟೆಯಿಂದ ಅಲಂಕಾರಿಕ ಹಾಗೂ ಗೃಹ ಬಳಕೆಯ ಉತ್ಪನ್ನ, ಹೈನುಗಾರರಿಗೆ ತೆಂಗಿನ ಹಿಂಡಿ, ತೆಂಗಿನ ಮರದ ಪೀಠೋಪಕರಣ, ಜೈವಿಕ ಕೀಟನಾಶಕ, ಎರೆಹುಳ ಗೊಬ್ಬರ ಹೀಗೆ ಹಲವಾರು ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಿದೆ.

ಇದಲ್ಲದೆ, ಉತ್ಪನ್ನಗಳನ್ನು ನೇರವಾಗಿ ಗ್ರಾಹಕರಿಗೆ ಪೂರೈಸುವ ಉದ್ದೇಶದಿಂದ ಮೊಬೈಲ್ ಅಪ್ಲಿಕೇಶನ್ ಹಾಗೂ ವೆಬ್ ಆಧಾರಿತ ಇ-ಕಾಮರ್ಸ್ ಪ್ಲಾಟ್ ಫಾರಂ ಅಭಿವೃದ್ಧಿ ಪಡಿಸಲಾಗಿದೆ. ಶೀಘ್ರದಲ್ಲೇ ಸಾರ್ವಜನಿಕರ ಉಪಯೋಗಕ್ಕೆ ಲಭಿಸಲಿದೆ. ಹೆಚ್ಚಿನ ಮಾಹಿತಿಗಾಗಿ ಸಂಸ್ಥೆಯ ವೆಬ್ ಸೈಟ್ www.coconutfarmers.in ಭೇಟಿ ನೀಡಬಹುದು. ಟೋಲ್ ಫ್ರೀ ಸಂಖ್ಯೆ 18002030129 ಗೆ ಕರೆ ಮಾಡಬಹುದು. ದೂರವಾಣಿ ಸಂಖ್ಯೆ 8105487763 ಗೆ ಸಂಪರ್ಕಿಸಿ ಮಾಹಿತಿ ಪಡೆಯಬಹುದು.

ಸುದ್ದಿಗೋಷ್ಟಿಯಲ್ಲಿ ಚೇತನ್, ಗಿರಿಧರ್ ಸ್ಕಂದ, ಕುಮಾರ್ ಪೆರ್ನಾಜೆ, ಲತಾ ಇದ್ದರು.


ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 2