ಪುತ್ತೂರು: ಕಳೆದ ಎರಡು ದಿನಗಳಿಂದ ಪುತ್ತೂರಿನ ಬಸ್ ನಿಲ್ದಾಣ ಹಾಗೂ ವಿವಿಧ ಸಾರ್ವಜನಿಕ ಸ್ಥಳಗಳಲ್ಲಿ ರಾತ್ರಿ ಆಶ್ರಯವಿಲ್ಲದೆ ತಂಗುತ್ತಿದ್ದ ಒಂಟಿ ಮಹಿಳೆಯೊಬ್ಬರನ್ನು ರೋಟರಿ ಕ್ಲಬ್ ಪುತ್ತೂರು ಯುವದ ಮಾನವೀಯ ಕಾರ್ಯಚಟುವಟಿಕೆಯ ಮೂಲಕ ರಕ್ಷಿಸಿ, ಸೂಕ್ತ ಪುನರ್ವಸತಿ ಕಲ್ಪಿಸಲಾಗಿದೆ.
ರೋಟರಿ ಕ್ಲಬ್ ಪುತ್ತೂರು ಯುವದ ಮಾಜಿ ಅಧ್ಯಕ್ಷರು ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರೂ ಆಗಿರುವ ಪುತ್ತೂರು ಉಮೇಶ್ ನಾಯಕ್ ಅವರ ನೇತೃತ್ವದಲ್ಲಿ ಈಗಾಗಲೇ ಸುಮಾರು 150ಕ್ಕೂ ಅಧಿಕ ನಿರ್ಗತಿಕ ಅನಾಥರನ್ನು ಪುನರ್ವಸತಿ ಕಲ್ಪಿಸಲಾಗಿದೆ. ಮಹಿಳಾ ಪೊಲೀಸ್ ಠಾಣೆ ಪುತ್ತೂರು, ಶಿಶು ಅಭಿವೃದ್ಧಿ ಇಲಾಖೆ ಪುತ್ತೂರು, ಸಾಂತ್ವನ ಕೇಂದ್ರ ಪುತ್ತೂರು ಹಾಗೂ ಬಲ್ನಾಡಿನ ವಿನಾಯಕ ಫ್ರೆಂಡ್ಸ್ ಕ್ಲಬ್‌ಗಳ ಸಮನ್ವಯದೊಂದಿಗೆ ಈ ಮಾನವೀಯ ಕಾರ್ಯ ಯಶಸ್ವಿಯಾಗಿ ನೆರವೇರಿತು.
ಅನಿತಾ ಯಾನೆ ಅಮೃತ ಎಂಬ ಸುಮಾರು 45 ವರ್ಷದ ಮಹಿಳೆ ವಿವಾಹಿತೆಯಾಗಿದ್ದು, ಗಂಡನಿಂದ ಪ್ರತ್ಯೇಕವಾಗಿ ಜೀವನ ಸಾಗಿಸುತ್ತಿದ್ದವರು. ದಿನನಿತ್ಯದ ತುತ್ತು ಅನ್ನಕ್ಕೂ, ರಾತ್ರಿ ತಂಗಲು ಜಾಗಕ್ಕೂ ಪರದಾಡುತ್ತಿದ್ದ ಅವರು ಸಹಾಯಕ್ಕಾಗಿ ಪುತ್ತೂರಿನ ಮಹಿಳಾ ಪೊಲೀಸ್ ಠಾಣೆಯನ್ನು ಸಂಪರ್ಕಿಸಿ ತಮ್ಮನ್ನು ಪುನರ್ವಸತಿ ಮಾಡುವಂತೆ ಮನವಿ ಮಾಡಿಕೊಂಡರು. ಅವರ ಕರುಣಾಜನಕ ಸ್ಥಿತಿಯನ್ನು ಗಮನಿಸಿದ ಅಧಿಕಾರಿಗಳು ಮತ್ತು ಸಮಾಜಸೇವಾ ಸಂಘಟನೆಗಳು ತಕ್ಷಣ ಸ್ಪಂದಿಸಿ, ಸಹಕಾರದೊಂದಿಗೆ ಮುಡಿಪು ಪ್ರಜ್ಞಾ ಸ್ವಾಧಾರ ಕೇಂದ್ರಕ್ಕೆ ದಾಖಲಾತಿ ಮಾಡಿ ಪುನರ್ವಸತಿ ಕಲ್ಪಿಸಿದರು.
ಈ ಪುನರ್ವಸತಿ ಕಾರ್ಯದಲ್ಲಿ ಮಹಿಳಾ ಪೊಲೀಸ್ ಠಾಣೆಯ ಸಿಬ್ಬಂದಿಗಳಾದ ಮಮತಾ, ಲಕ್ಷ್ಮಿ, ಭವ್ಯಶ್ರೀ, ಮಹಿಳಾ ಸಾಂತ್ವನ ಕೇಂದ್ರದ ನಿಶಾ, ರೋಟರಿ ಕ್ಲಬ್ ಪುತ್ತೂರು ಯುವದ ಅಧ್ಯಕ್ಷ ಕುಸುಮ್ ರಾಜ, ಕಾರ್ಯದರ್ಶಿ ಅಭಿಶ್, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್ ಸಹಕರಿಸಿದರು.
ಬಲ್ನಾಡಿನ ವಿನಾಯಕ ಫ್ರೆಂಡ್ಸ್ ಕ್ಲಬ್ ವತಿಯಿಂದ ಉಚಿತ ಆಂಬುಲೆನ್ಸ್ ಸೇವೆಯನ್ನು ಒದಗಿಸಲಾಗಿದ್ದು, ಸಂಸ್ಥೆಯ ಅಧ್ಯಕ್ಷ ರವಿ ಪುಣಚ ಹಾಗೂ ವಾಹನ ಚಾಲಕ ಗಿರೀಶ್ ಸಹಕರಿಸಿದರು.


























