ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಫ್ಲೈಓವರ್‌ನಿಂದ ಕೆಳಗೆ ಬಿದ್ದಿದೆ. ಕಾರಿನಿಂದ ಬೇರ್ಪಟ್ಟು ಮೇಲಿಂದ ಬಿದ್ದ ಚಾಲಕ ರಕ್ತಕಾರಿ ಮೃತಪಟ್ಟಿದ್ದಾರೆ. ರಾಮನಗರ ತಾಲೂಕಿನ ಕೆಂಪೇಗೌಡನದೊಡ್ಡಿ ಬಳಿಯ ನೇಟಸ್ ಶಾಲೆ ಸಮೀಪ ಘಟನೆ ನಡೆದಿದೆ. ಮದ್ದೂರು ತಾಲೂಕಿನ ಕಸ್ತೂರು ಗ್ರಾಮದ ಅಭಿಷೇಕ್ ಮೃತ ದುರ್ದೈವಿ.
ಫ್ಲೈಓವರ್ ಮೇಲೆ ಅತೀವೇಗವಾಗಿ ಬಂದಾಗ ನಿಯಂತ್ರಣ ತಪ್ಪಿದ್ದು, ಈ ವೇಳೆ ಹೆದ್ದಾರಿಯಿಂದ ಅಂಡರ್ ಪಾಸ್‌ಗೆ ಕಾರು ಉರುಳಿದೆ. ಕಾರು ಬಿದ್ದಿರುವ ರಭಸಕ್ಕೆ ಸಂಪೂರ್ಣ ಛಿದ್ರಗೊಂಡಿದೆ. ಇತ್ತ ಕಾರಿನಲ್ಲಿದ್ದ ಏರ್‌ಬ್ಯಾಗ್ ಓಪನ್ ಆಗಿದ್ದು, ಸ್ಟೇರಿಂಗ್ ಹೊರಗೆ ಬಂದಿದೆ. ಅಂಡರ್ ಪಾಸ್‌ಗೆ ಕಾರು ಬಿದ್ದಾಗ ಅಲ್ಲಿ ಇತರೆ ವಾಹನ ಸವಾರರು ಇರಲಿಲ್ಲ. ಹೀಗಾಗಿ ಸಂಭವಿಸಬಹುದಾದ ಮತ್ತೊಂದು ಅವಘಡ ತಪ್ಪಿದೆ.
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ರಾಮನಗರ ಟ್ರಾಫಿಕ್ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದು, ಕಾರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಇನ್ನೂ ಅಪಘಾತದಿಂದಾಗಿ ಕೆಲಕಾಲ ಟ್ರಾಫಿಕ್ ಜಾಮ್ ಉಂಟಾಗಿತ್ತು. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ತನಿಖೆಯನ್ನು ಮುಂದುವರಿಸಿದ್ದಾರೆ.
























