ಪುತ್ತೂರು: ಪುತ್ತೂರಿನಲ್ಲಿ ಕೇಂದ್ರ ಕಚೇರಿ ಹೊಂದಿರುವ ಆದರ್ಶ ವಿವಿಧೋದ್ದೇಶ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ ಮತ್ತು ವಿದ್ಯಾನಿಧಿ ಸಹಾಯಧನ ವಿತರಣೆ ಸಮಾರಂಭ ಶನಿವಾರ ದರ್ಬೆ ಪ್ರಶಾಂತ್ ಮಹಲ್ ಸಭಾಂಗಣದಲ್ಲಿ ನಡೆಯಿತು.
ಮಂಗಳೂರು ರಾಮಕೃಷ್ಣ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ಕೆ. ಜೈರಾಜ್ ಬಿ. ರೈ ಕಾರ್ಯಕ್ರಮ ಉದ್ಘಾಟಿಸಿ, ಸಹಕಾರಿ ಸಂಸ್ಥೆಯೊಂದು ವ್ಯಾವಹಾರಿಕವಾಗಿ ಬೆಳೆಯುವ ಗುರಿ ಹೊಂದಿರುತ್ತದೆ. ಇದರ ನಡುವೆಯೂ ವಿದ್ಯಾನಿಧಿಯಂಥ ಸಹಾಯ ಹಸ್ತ ನೀಡುವುದು ಸಾಮಾನ್ಯ ಕೆಲಸವಲ್ಲ. ಸಂಸ್ಥೆಯನ್ನು ಕಟ್ಟಿ ಬೆಳೆಸುವುದು ಸುಲಭದ ಕಾರ್ಯವಲ್ಲ. ಲಾಭ ಎಲ್ಲರೂ ಮಾಡುತ್ತಾರೆ. ಕೆರೆಯ ನೀರನು ಕೆರೆಗೆ ಚೆಲ್ಲಿದರು ಎಂಬಂತೆ ಸಮಾಜದಿಂದ ಪಡೆದಿದ್ದನ್ನು ಸಮಾಜಕ್ಕೆ ಹಿಂದಿರುಗಿಸುವ ಧ್ಯೇಯದೊಂದಿಗೆ ಕೆಲಸ ಮಾಡುವುದು ದೊಡ್ಡ ಕಾರ್ಯ ಎಂದರು.
ಸಹಾಯನಿಧಿ ವಿತರಣಾ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟು ಮಾತನಾಡಿ, ಸಹಕಾರಿ ರಂಗ ಪವಿತ್ರ ಕ್ಷೇತ್ರವಾಗಿದೆ. ಸಹಕಾರಿ ಕ್ಷೇತ್ರದ ಕಾಶಿಯಾದ ಜಿಲ್ಲೆಯಲ್ಲಿ ಆದರ್ಶ ಸಹಕಾರಿ ಸಂಘ ಅಪಾರ ಸಾಧನೆ ಮಾಡಿದೆ. ಸಂಘದ ಅಧ್ಯಕ್ಷರಾದ ಸವಣೂರು ಸೀತಾರಾಮ ರೈ ಅವರು ಬಾಲ್ಯದಲ್ಲಿ ಸರಕಾರಿ ಶಾಲೆಯಲ್ಲಿ ಶಿಕ್ಷಣ ಕಲಿಯುತ್ತಿದ್ದಾಗ ಪಟ್ಟ ಶ್ರಮವನ್ನು ನೆನಪಿಸಿಕೊಂಡು ಇವತ್ತು ತಮ್ಮ ಸಂಸ್ಥೆಯ ವತಿಯಿಂದ ಸರಕಾರಿ ಶಾಲೆಗಳಲ್ಲಿ ಕಲಿಯುತ್ತಿರುವ ಮಕ್ಕಳಿಗೆ ವಿದ್ಯಾನಿಧಿ ನೀಡುತ್ತಿರುವುದು ಶ್ಲಾಘನೀಯ. ವಿದ್ಯಾನಿಧಿ ಪಡೆದು ಮುಂದೆ ಉದ್ಯೋಗ ಪಡೆಯುವವರೂ ಇದನ್ನು ನೆನಪಿನಲ್ಲಿಟ್ಟುಕೊಂಡು ಮುಂದುವರೆಸಬೇಕು ಕಾರ್ಯ ಎಂದರು.
ಆದರ್ಶಪ್ರಾಯ
ಕೆಯ್ಯೂರು ಶ್ರೀ ಮಹಿಷಮರ್ದಿನಿ ದುರ್ಗಾಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಎ.ಕೆ. ಜಯರಾಮ ರೈ ಮಾತನಾಡಿ, ಆದರ್ಶ ವಿವಿಧೋದ್ದೇಶ ಸಹಕಾರಿ ಸಂಘವು ಹೆಸರಿಗೆ ತಕ್ಕಂತೆ ಆದರ್ಶಪ್ರಾಯವಾಗುವ ಕೆಲಸ ಮಾಡುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸಂಘದ ಅಧ್ಯಕ್ಷ ಸವಣೂರು ಸೀತಾರಾಮ ರೈ ಮಾತನಾಡಿ, ಪ್ರತೀ ವರ್ಷ ಪುತ್ತೂರು, ಸುಳ್ಯ, ಕಡಬ, ಬಂಟ್ವಾಳ ಮತ್ತು ಬೆಳ್ತಂಗಡಿ ತಾಲೂಕುಗಳ ಆಯ್ದ ಸರಕಾರಿ ಶಾಲೆಗಳ ಬಡ ಪ್ರತಿಭಾವಂತ 250 ವಿದ್ಯಾರ್ಥಿಗಳನ್ನು ಆರಿಸಿ ರೂ. 5 ಲಕ್ಷ ವಿದ್ಯಾನಿಧಿ ನೀಡುತ್ತಾ ಬಂದಿದ್ದೇವೆ. ನನ್ನ ತಂದೆಯವರು ಸರಕಾರಿ ಶಾಲೆಯ ಶಿಕ್ಷಕರಾಗಿದ್ದರು. 7 ಮಕ್ಕಳಿದ್ದ ನಮ್ಮ ಬಾಲ್ಯದ ದಿನಗಳಲ್ಲಿ ಕಷ್ಟದಿಂದ ಸಾಕಿದ್ದರು. ಅದೇ ನೆನಪಿನಿಂದ ಸರಕಾರಿ ಶಾಲೆಯ ಮಕ್ಕಳಿಗೆ ಸಹಾಯ ಮಾಡುತ್ತಿದ್ದೇವೆ ಎಂದರು.
ಈ ಸಂದರ್ಭದಲ್ಲಿ ವಿದ್ಯಾನಿಧಿ ಸಹಾಯಧನ ವಿತರಿಸಲಾಯಿತು. ಆದರ್ಶ ವಿವಿಧೋದ್ದೇಶ ಸಹಕಾರ ಸಂಘದ ಉಪಾಧ್ಯಕ್ಷ ಸುಂದರ ರೈ ಸವಣೂರು, ನಿರ್ದೇಶಕ ಅಶ್ವಿನ್ ಎಲ್. ಶೆಟ್ಟಿ, ಮಹಾಪ್ರಬಂಧಕ ವಸಂತ ಜಾಲಾಡಿ ವೇದಿಕೆಯಲ್ಲಿದ್ದರು.
ಶ್ರಮಿತಾ ಕೆ. ಪ್ರಾರ್ಥಿಸಿದರು. ನಿರ್ದೇಶಕ ಜೈರಾಜ್ ಭಂಡಾರಿ ನೋಣಾಲು ವಂದಿಸಿದರು. ಪರಮೇಶ್ವರ ಗೌಡ ಬಿ., ಚಂದ್ರಶೇಖರ್ ಪಿ. ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯಕ್ರಮಕ್ಕೆ ಮೊದಲು ಆದರ್ಶ ಸಹಕಾರ ಸಂಘದ ಮಹಾಸಭೆ ನಡೆಯಿತು.
ಮನೆಗೇ ವಿದ್ಯಾನಿಧಿ
ಇದುವರೆಗೆ ಸರಕಾರಿ ಶಾಲೆಗಳ ಸುಮಾರು 1250 ಮಕ್ಕಳಿಗೆ ರೂ. 30 ಲಕ್ಷದಷ್ಟು ವಿದ್ಯಾನಿಧಿ ವಿತರಿಸಲಾಗಿದೆ. ಆದರ್ಶ ಸಂಘದ ಶಾಖೆಗಳ ಮೂಲಕವೇ ವಾಹನದಲ್ಲಿ ವಿದ್ಯಾರ್ಥಿಗಳನ್ನು ಕರೆತಂದು ವಿದ್ಯಾನಿಧಿಯನ್ನು ಅವರ ಮನೆಗೇ ತಲುಪಿಸಲಾಗುತ್ತಿದೆ. ದೇವರು ಕೊಟ್ಟಿದ್ದರಲ್ಲಿ ಕಿಂಚಿತ್ತು ಸಮಾಜಕ್ಕೆ ವಿನಿಯೋಗಿಸುತ್ತಿದ್ದೇವೆ.
ಸವಣೂರು ಕೆ. ಸೀತಾರಾಮ ರೈ, ಅಧ್ಯಕ್ಷರು, ಆದರ್ಶ ವಿವಿಧೋದ್ದೇಶ ಸ. ಸಂಘ