ಅಶೋಕ್ ರೈ ಎಜುಕೇಷನಲ್ ಮತ್ತು ಚಾರಿಟೇಬಲ್ ಟ್ರಸ್ಟ್ ವತಿಯಿಂದ ಪ್ರತಿವರ್ಷ ನಡೆಯುವ `ಅಶೋಕ – ಜನಮನ’ ದೀಪಾವಳಿ ಕಾರ್ಯಕ್ರಮ ಈ ಬಾರಿ ಅಕ್ಟೋಬರ್ 20ರಂದು ಪುತ್ತೂರಿನ ಕೊಂಬೆಟ್ಟು ತಾಲೂಕು ಕ್ರೀಡಾಂಗಣದಲ್ಲಿ ವಿಜೃಂಭಣೆಯಿಂದ ನಡೆಯಲಿದೆ. 13ನೇ ವರ್ಷದ ಈ ಕಾರ್ಯಕ್ರಮವನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಉದ್ಘಾಟಿಸಲಿದ್ದಾರೆ.
ಕಾರ್ಯಕ್ರಮದ ಕುರಿತು ಮಾತನಾಡಿದ ಶಾಸಕ ಅಶೋಕ್ ಕುಮಾರ್ ರೈ ಈ ಹಿಂದೆ ಸಾಂಪ್ರದಾಯಿಕವಾಗಿ ಸೀರೆ ಮತ್ತು ಬೆಡ್ಶೀಟ್ ವಿತರಣೆ ಮಾಡುತ್ತಿದ್ದೆವು. ಆದರೆ ಜನರ ಅಭಿಪ್ರಾಯದಂತೆ ಈ ಬಾರಿ ಮನೆಗೆ ಉಪಯೋಗವಾಗುವ ಸ್ಟೀಲ್ ತಟ್ಟೆ, ಪಿಂಗಾಣಿ, ಗ್ಲಾಸ್, ಬೌಲ್ ಹಾಗೂ ಟವೆಲ್ ನೀಡಲು ನಿರ್ಧರಿಸಿದ್ದೇವೆ. ಮಕ್ಕಳಿಗೂ ವಿತರಣೆ ನಡೆಯಲಿದೆ ಎಂದು ಹೇಳಿದರು. ಕಳೆದ ವರ್ಷ 85,650 ಮಂದಿಗೆ ಸೀರೆ ವಿತರಿಸಲಾಗಿದ್ದರೆ, ಈ ಬಾರಿ 1 ಲಕ್ಷ ಮಂದಿಯ ಭಾಗವಹಿಸುವಿಕೆ ನಿರೀಕ್ಷಿಸಲಾಗಿದೆ ಎಂದರು.
ಬೆಳಿಗ್ಗೆ 9.30ರಿಂದ ಸಂಜೆ 5 ಗಂಟೆಯವರೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳೂ ನಡೆಯಲಿವೆ. ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ವಿಧಾನಸಭಾ ಸ್ಪೀಕರ್ ಯು.ಟಿ. ಖಾದರ್ ಸೇರಿದಂತೆ ಹಲವು ಸಚಿವರು ಭಾಗವಹಿಸಲಿದ್ದಾರೆ. “ಇದು ಕಾಂಗ್ರೆಸ್ ಪಕ್ಷದ ಕಾರ್ಯಕ್ರಮವಲ್ಲ, ಪಕ್ಷಾತೀತವಾದ ದೀಪಾವಳಿ ಸಂಭ್ರಮ” ಎಂದು ಶಾಸಕರು ಸ್ಪಷ್ಟಪಡಿಸಿದರು.
ಆಕರ್ಷಣೆಗಳು:
ಅನ್ನಸಂತರ್ಪಣೆ: 1 ಲಕ್ಷ ಮಂದಿಗೆ ಅನ್ನದಾನ.
ದೋಸೆ ಮೇಳ:
50 ಮಂದಿಯ ತಂಡದಿಂದ 80 ಸಾವಿರ ದೋಸೆ ಮೇಳ ಆಯೋಜಿಸಲು ಚಿಂತಿಸಲಾಗಿದೆ. ಸಾಧಕ – ಬಾಧಕಗಳನ್ನು ವಿಮರ್ಶಿಸಿ ಬಳಿಕ ಕಾರ್ಯೋನ್ಮುಖರಾಗಲಿದ್ದೇವೆ. ಒಂದು ವೇಳೆ ದೋಸೆ ಮೇಳ ಆಯೋಜಿಸುವುದಾದರೆ ಸಂಜೆ 3 ಗಂಟೆಯ ಬಳಿಕ ನಡೆಯಲಿದೆ ಎಂದರು.
ಗೂಡುದೀಪ ಸ್ಪರ್ಧೆ:
ಈ ಬಾರಿಯೂ ಗೂಡುದೀಪ ಸ್ಪರ್ಧೆ ಆಯೋಜಿಸಿದ್ದು, ಸೀನಿಯರ್ ಹಾಗೂ ಜೂನಿಯರ್ ವಿಭಾಗದಲ್ಲಿ ಸ್ಪರ್ಧೆ ನಡೆಯಲಿದೆ. ಬಹುಮಾನವಾಗಿ ಸೀನಿಯರ್ ವಿಭಾಗಕ್ಕೆ ಪ್ರಥಮ 7500 ರೂ., ದ್ವಿತೀಯ 5000 ರೂ., ತೃತೀಯ 2500 ರೂ. ನಗದು ಬಹುಮಾನ ನೀಡಲಾಗುವುದು. ಜ್ಯೂನಿಯರ್ ವಿಭಾಗದಲ್ಲಿ ಪ್ರಥಮ 5000 ರೂ., ದ್ವಿತೀಯ 3000 ರೂ., ತೃತೀಯ 2000 ರೂ. ನೀಡಲಾಗುವುದು ಎಂದು ವಿವರಿಸಿದರು.
ಸನ್ಮಾನ:
ಸಂಕಷ್ಟದಲ್ಲೂ ಸೇವೆ ಮಾಡಿದ ಹಾಲು ಮಾರುವವರು, ಬೀಡಿ ಕಟ್ಟುವವರು ಸೇರಿದಂತೆ 20 ಮಂದಿಗೆ ಸನ್ಮಾನ ನಡೆಯಲಿದೆ ಎಂದರು.
ಆಟೋ ಉಚಿತ ಸೇವೆ, ಸ್ವಯಂಸೇವಕರು:
ಮಹಾಲಿಂಗೇಶ್ವರ ದೇವಳದ ಬಳಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದ್ದು, ಅಲ್ಲಿಂದ ಆಟೋಗಳು ಉಚಿತವಾಗಿ ಪ್ರಯಾಣಿಕರನ್ನು ಕಾರ್ಯಕ್ರಮ ಸ್ಥಳಕ್ಕೆ ಕರೆತರಲಿವೆ. ಸುಮಾರು 1,000 ಸ್ವಯಂಸೇವಕರು ಶಿಸ್ತಿನ ನಿರ್ವಹಣೆಯಲ್ಲಿ ತೊಡಗಿಸಲಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಟ್ರಸ್ಟ್ ಕಾರ್ಯಾಧ್ಯಕ್ಷ ಸುದೇಶ್ ಶೆಟ್ಟಿ, ಸದಸ್ಯರಾದ ಜಯಪ್ರಕಾಶ್ ಬದಿನಾರ್ ಹಾಗೂ ನಿಹಾಲ್ ಶೆಟ್ಟಿ ಉಪಸ್ಥಿತರಿದ್ದರು.