ಪುತ್ತೂರು: ತಾಲೂಕು ನಲಿಕೆಯವರ ಸಮಾಜ ಸೇವಾ ಸಂಘ, ತಾಲೂಕು ವಲಯ ಸಮಿತಿಗಳು ಹಾಗೂ ಕರ್ನಾಟಕ ರಾಜ್ಯ ಪಾಣಾರ, ಅಜಲ ಯಾನೆ ನಲಿಕೆಯವರ ಸಮಾಜ ಸೇವಾ ಸಂಘದ ಆಶ್ರಯದಲ್ಲಿ ಆಟಿಡೊಂಜಿ ದಿನ ಮತ್ತು ಸಾಧಕರನ್ನು ಗುರುತಿಸುವ ಕಾರ್ಯಕ್ರಮ ಆ. 10ರಂದು ಬೆಳಿಗ್ಗೆ 9ಕ್ಕೆ ಪುತ್ತೂರು ಲಯನ್ಸ್ ಸೇವಾ ಮಂದಿರದಲ್ಲಿ ನಡೆಯಲಿದೆ ಎಂದು ಪುತ್ತೂರು ನ.ಸ. ಸೇವಾ ಸಂಘದ ಸ್ಥಾಪಕಾಧ್ಯಕ್ಷ ಚಂದ್ರ ಇದ್ಪಾಡಿ ಹೇಳಿದರು.
ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳಿಗ್ಗೆ 9ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟನೆ, ಲಘು ಉಪಾಹಾರ, ಮನೋರಂಜನಾ ಕಾರ್ಯಕ್ರಮ ನಡೆಯಲಿದ್ದು, ಬಳಿಕ ವಿಜಯ್ ಪಾಂಡಿ ಇವರಿಂದ ಆಟಿ ತಿಂಗಳಿನ ವಿಶೇಷತೆ ಮತ್ತು ತುಳುನಾಡ ವೈಭವ ವಿಷಯದಲ್ಲಿ ರಸಪ್ರಶ್ನೆ ನಡೆಯಲಿದೆ. ನಂತರ ಸುಬ್ರಾಯ ಕಲ್ಮಂಜ ನೇತೃತ್ವದಲ್ಲಿ ಒಳಾಂಗಣ ಆಟ, 11.30ರಿಂದ ಸಭಾ ಕಾರ್ಯಕ್ರಮ, ಬಹುಮಾನ ವಿತರಣೆ, ಮಧ್ಯಾಹ್ನ ಭೋಜನ, ನಂತರ ನೃತ್ಯ ಕಾರ್ಯಕ್ರಮ ನಡೆಯಲಿದೆ ಎಂದರು.
ಸಂಘದ ಅಧ್ಯಕ್ಷ ರವಿ ಎಂಡಸಾಗು ಅರಿಯಡ್ಕ ಅಧ್ಯಕ್ಷತೆಯಲ್ಲಿ ನಡೆಯುವ ಸಭಾ ಕಾರ್ಯಕ್ರಮವನ್ನು ಶಾಸಕ ಅಶೋಕ್ ಕುಮಾರ್ ರೈ ಉದ್ಘಾಟಿಸುವರು. ಜಾನಪದ ಕವಿ ಮತ್ತು ಸಂಶೋಧಕ ಲಕ್ಷ್ಮಣ ಪೊನಾರಂ ಅಡೂರು ಅವರು ಆಟಿ ತಿಂಗಳ ಆಚರಣೆ ವಿಶೇಷತೆ ಬಗ್ಗೆ ಮಾತನಾಡಲಿರುವರು. ಕರಾಪಾಅ ಯಾನೆ ನಸ ಸೇವಾ ಸಂಘದ ಅಧ್ಯಕ್ಷ ದಯಾನಂದ ಸೇರಾ, ನಸ ಸೇವಾ ಸಂಘದ ಮಾಜಿ ಅಧ್ಯಕ್ಷ ಡೊಂಬಯ್ಯ ಕಾಪೆಜಾಲು, ಕುಡ್ಲ ಅಪ್ಪೆ ಕಲ್ಲುರ್ಟಿ ವರ್ತೆ ಸೇವಾ ಸಂಘದ ವಿಜಯ್ ಪಾಂಡಿ, ನಸಸೇ ಸಂಘ ಮಹಿಳಾ ಘಟಕದ ಮಾಜಿ ಅಧ್ಯಕ್ಷೆ ಚೆನ್ನಮ್ಮ ಸೇಡಿಯಾಪು, ಪಾಣಾಜೆ ಗ್ರಾಪಂ ಸದಸ್ಯೆ ಸುಲೋಚನಾ ಪಾಣಾಜೆ ಅತಿಥಿಯಾಗಿರುವರು. ಇದೇ ಸಂದರ್ಭ ವಿವಿಧ ಕ್ಷೇತ್ರದ ಸಾಧಕರನ್ನು ಹಾಗೂ ಎಸ್.ಎಸ್.ಎಲ್.ಸಿ. ಪಿಯುಸಿಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಗುರುತಿಸಿ ಗೌರವಿಸಲಾಗುವುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ಪಾಣಾರ, ಅಜಲ ಯಾಕೆ ನಲಿಕೆಯವರ ಸಮಾಜ ಸೇವಾ ಸಂಘದ ಪುತ್ತೂರು ಅಧ್ಯಕ್ಷ ದಯಾನಂದ ಸೇರಾ, ಉಪಾಧ್ಯಕ್ಷ ಶ್ರೀಧರ್ ಸೇಡಿಯಾಪು ರಾಜ್ಯ ಸಮಿತಿ ಸದಸ್ಯ ವಸಂತ್ ಸೇಡಿಯಾಪು ಉಪಸ್ಥಿತರಿದ್ದರು.




































