ಪುತ್ತೂರು: ಇನ್ನರ್ ವ್ಹೀಲ್ ಕ್ಲಬ್ ಪುತ್ತೂರು ಇದರ 2025-26ನೇ ಸಾಲಿನ ಪದಾಧಿಕಾರಿಗಳ ಪದಸ್ವೀಕಾರ ಸಮಾರಂಭ ರೋಟರಿ ಮನೀಷಾ ಸಭಾಂಗಣದಲ್ಲಿ ಮಂಗಳವಾರ ನಡೆಯಿತು.
ಮುಖ್ಯಅತಿಥಿಯಾಗಿದ್ದ ಚಿತ್ರಾ ವಿ. ರಾವ್ ಮಾತನಾಡಿ, ಕ್ರಿಯಾಶೀಲತೆಯನ್ನು ಹೊರ ತೆಗೆಯಲು ಇನ್ನರ್ ವ್ಹೀಲ್ ಉತ್ತಮ ವೇದಿಕೆ. ಜೊತೆಗೆ ಆತ್ಮವಿಶ್ವಾಸ ಬಲಗೊಳ್ಳಲು ಕಾರಣವಾಗುತ್ತದೆ. ಮಾತ್ರವಲ್ಲ ಸಮಾಜಮುಖಿಯಾಗಿ ನಮ್ಮನ್ನು ತೆರೆದುಕೊಂಡಾಗ, ಒಂದು ರೀತಿಯ ಸಂತೃಪ್ತ ಭಾವ ಮೂಡುತ್ತದೆ. ಸಮಾಜದ ಕೆಲ ಸಮಸ್ಯೆಗಳನ್ನು ನೋಡಿದಾಗ, ಅದರ ಮುಂದೆ ನಮ್ಮ ಸಮಸ್ಯೆ ದೊಡ್ಡ ವಿಷಯವೇ ಅಲ್ಲ ಎನ್ನುವುದು ನಮ್ಮ ಅರಿವಿಗೆ ಬರುತ್ತದೆ ಎಂದರು.
ಸ್ನೇಹ ಹಾಗೂ ಸೇವೆ ನಮ್ಮ ಧ್ಯೇಯ. ಕ್ಲಬ್ಬಿನ ಚಟುವಟಿಕೆಗಳಲ್ಲಿ ಸಕ್ರೀಯವಾಗಿ ತೊಡಗಿಸಿಕೊಳ್ಳಿ. ಕ್ಲಬ್ಬಿನಲ್ಲಿ ಏನಾಗುತ್ತಿದೆ ಎನ್ನುವುದನ್ನು ತಿಳಿದುಕೊಳ್ಳಿ. ನಿಮ್ಮ ಮನಸ್ಸಿಗೆ ಬಂದ ಉತ್ತಮ ಪ್ರಾಜೆಕ್ಟ್’ಗಳನ್ನು ಮಾಡಿ. ಆ ಯೋಜನೆ ಸರಿಯಾದ ಫಲಾನುಭವಿಗಳಿಗೆ ತಲುಪುವಂತೆ ನೋಡಿಕೊಳ್ಳಿ ಎಂದು ಕಿವಿಮಾತು ಹೇಳಿದರು.
ಮಾತಿಗಿಂತ ಕೆಲಸ ಪ್ರಭಾವಶಾಲಿ: ರೂಪಲೇಖ
ಅಧ್ಯಕ್ಷೆಯಾಗಿ ಅಧಿಕಾರ ಸ್ವೀಕರಿಸಿ ಮಾತನಾಡಿದ ರೂಪಲೇಖ, ಉತ್ತಮ ತಂಡ ತನ್ನೊಂದಿಗಿದ್ದು, ಅವರ ಸಹಕಾರದಿಂದ ಖಂಡಿತವಾಗಿಯೂ ಕ್ಲಬ್ ಅನ್ನು ಸಮರ್ಥವಾಗಿ ಮುನ್ನಡೆಸುತ್ತೇನೆ ಎಂಬ ವಿಶ್ವಾಸ ನನ್ನದು. ಜಗತ್ತನ್ನು ಬದಲಾಯಿಸಲು ನಮ್ಮಿಂದ ಅಸಾಧ್ಯ. ಆದರೆ ಕೆಲವರ ಜಗತ್ತನ್ನು ಬದಲಾಯಿಸಲು ಸಾಧ್ಯ ಎಂದರು.
Step up & Lead by Example ಎನ್ನುವ ಉತ್ತಮ ಥೀಮ್ ಈ ವರ್ಷದ್ದು. ನಮ್ಮ ಕೆಲಸ ನಮ್ಮ ಮಾತಿಗಿಂತ ಹೆಚ್ಚಿನ ಪ್ರಭಾವಶಾಲಿ ಎಂಬ ಮಾತಿದೆ. ಅದರಂತೆ ಕೆಲಸ ಮಾಡುತ್ತೇನೆ ಎಂದರು.
ಸ್ವಾರ್ಥರಹಿತವಾಗಿ ಸಮಾಜಮುಖಿಯಾಗೋಣ: ಡಾ. ಶ್ರೀಪ್ರಕಾಶ್
ಬುಲೆಟಿನ್ ಬಿಡುಗಡೆ ಮಾತನಾಡಿದ ಪುತ್ತೂರು ರೋಟರಿ ಕ್ಲಬ್ ಅಧ್ಯಕ್ಷ ಡಾ. ಶ್ರೀಪ್ರಕಾಶ್ ಮಾತನಾಡಿ, ಎಲ್ಲಾ ಕ್ಲಬ್ ಗಳು ಜೊತೆಯಾಗಿ ಸಮಾಜಮುಖಿಯಾಗಿ ಕೆಲಸ ಮಾಡೋಣ. ಸ್ವಾರ್ಥರಹಿತವಾಗಿ ರೋಟರಿ ಹಾಗೂ ಇನ್ನರ್ ವ್ಹೀಲ್ ನ ಧ್ಯೇಯದಂತೆ ಮುನ್ನಡೆಯೋಣ ಎಂದರು.
ನಿರ್ಗಮನ ಅಧ್ಯಕ್ಷೆ ರಾಜೇಶ್ವರಿ ಮಾತನಾಡಿ, ರೋಟರಿ ಸಂಸ್ಥೆಯ ಸಹಕಾರದಲ್ಲಿ ಅನೇಕ ಸಮಾಜಮುಖಿ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಮುಂದೆಯೂ ನಮ್ಮ ಸಹಕಾರ ಹೀಗೆ ಮುಂದುವರಿಯುತ್ತದೆ ಎಂದ ಅವರು ಹೊಸ ತಂಡಕ್ಕೆ ಶುಭಹಾರೈಸಿದರು.
ಹೊಸ ಸದಸ್ಯರಾದ ಡಾ. ಪಲ್ಲವಿ ಅಜಿತ್, ಶ್ರುತಿ ಎಸ್. ಬಂಗೇರ, ಮಧುಮಿತಾ ರಾವ್ ಪಡುಮಲೆ, ಅರುಣಾ ದಿನಕರ್ ರೈ ಅವರನ್ನು ಕ್ಲಬ್’ಗೆ ಸೇರ್ಪಡೆಗೊಳಿಸಲಾಯಿತು. ಲಲಿತಾ ಕಾರ್ಯಕ್ರಮ ನಿರ್ವಹಿಸಿದರು. ನಿರ್ಗಮಿತ ಅಧ್ಯಕ್ಷೆ ರಾಜೇಶ್ವರಿ ಆಚಾರ್ ಹಾಗೂ ನಿರ್ಗಮಿತ ಕಾರ್ಯದರ್ಶಿ ವಚನಾ ಜಯರಾಂ ಅವರನ್ನು ಸನ್ಮಾನಿಸಲಾಯಿತು.
ಪುತ್ತೂರು ಕೋ ಆಪರೇಟಿವ್ ಟೌನ್ ಬ್ಯಾಂಕಿನ ವಿಟ್ಲ ಶಾಖೆಯ ಮುಖ್ಯ ಪ್ರಬಂಧಕರಾಗಿ ಪದೋನ್ನತಿ ಪಡೆದ ಜ್ಯೋತಿ ರಾಕೇಶ್ ಅವರನ್ನು ಗೌರವಿಸಲಾಯಿತು. ಪ್ರತಿಭಾವಂತ ವಿದ್ಯಾರ್ಥಿಗಳಾದ ಸೃಜನ್ ಹಾಗೂ ಸಾಯೀಶ್ವರಿ, ರಕ್ಷಾ ಪಿ., ವೈಭವ್ ಪೂಜಾರಿ, ಅವರಿಗೆ ವಿದ್ಯಾನಿಧಿ ನೀಡಲಾಯಿತು. ರಿಧಿಮಾ ಹಾಗೂ ಹಿತಾಲಿ ಶೆಟ್ಟಿ ಅವರನ್ನು ಗೌರವಿಸಲಾಯಿತು.
ಇದೇ ಸಂದರ್ಭ ಕುದ್ಮಾರು ಹಿ.ಪ್ರಾ. ಶಾಲೆಗೆ ನ್ಯಾಪ್ಕಿನ್ ಬರ್ನರ್ ಮೆಷಿನ್ ಅನ್ನು ಕೊಡುಗೆಯಾಗಿ ನೀಡಲಾಯಿತು.
ನಿಯೋಜಿತ ಕಾರ್ಯದರ್ಶಿ ಸಂಧ್ಯಾ ಸಾಯ ಅವರು ಗಣ್ಯರು ಕಳಿಸಿದ ಸಂದೇಶವನ್ನು ಕಾರ್ಯದರ್ಶಿ ವಚನಾ ಜಯರಾಂ ವರದಿ ವಾಚಿಸಿದರು. ಮುಖ್ಯ ಅತಿಥಿಯನ್ನು ರಾಜೀ ಬಲರಾಮ ಆಚಾರ್ಯ ಸಭೆಗೆ ಪರಿಚಯಿಸಿದರು.
ಮೇಘನಾ ಪಾಣಾಜೆ ಪ್ರಾರ್ಥಿಸಿ, ರಾಜೇಶ್ವರಿ ಸ್ವಾಗತಿಸಿದರು. ಮನೋರಮಾ ಸೂರ್ಯ ವಂದಿಸಿ, ದೀಪಿಕಾ ಹಾಗೂ ಸೀಮಾ ಕಾರ್ಯಕ್ರಮ ನಿರೂಪಿಸಿದರು.
ಅಧಿಕಾರ ಸ್ವೀಕರಿಸಿದ ಹೊಸ ತಂಡ:
ಅಧ್ಯಕ್ಷರಾಗಿ ರೂಪಲೇಖ ಅವರಿಗೆ ನಿಕಟಪೂರ್ವ ಅಧ್ಯಕ್ಷರಾದ ರಾಜೇಶ್ವರಿ ಆಚಾರ್ ಅವರು ಅಧಿಕಾರ ಹಸ್ತಾಂತರಿಸಿದರು.
ಉಪಾಧ್ಯಕ್ಷರಾಗಿ ಮನೋರಮ ಹೆಜಮಾಡಿ, ಕಾರ್ಯದರ್ಶಿಯಾಗಿ ಸಂಧ್ಯಾ ಸಾಯ, ಕೋಶಾಧಿಕಾರಿ ಲವ್ಲೀ ಸೂರಜ್ ನಾಯರ್, ಐ.ಎಸ್.ಓ. ಆಗಿ ವೇದ ಲಕ್ಷ್ಮೀಕಾಂತ್, ಸಂಪಾದಕರಾಗಿ ಕೃಷ್ಣವೇಣಿ ಪ್ರಸಾದ್ ಮುಳಿಯ, ನಿರ್ದೇಶಕರಾಗಿ ವೀಣಾ ಕೊಳತ್ತಾಯ, ಶಂಕರಿ ಎಂ.ಎಸ್. ಭಟ್, ಪ್ರಮೀಳಾ ರಾವ್, ಶೋಭಾ ಕೊಳತ್ತಾಯ, ಸೆನೋರಿಟಾ ಆನಂದ ಅಧಿಕಾರ ಸ್ವೀಕರಿಸಿದರು.